Ragi Uppittu Recipe: ರಾಗಿ ಹಿಟ್ಟಿನ ಉಪ್ಪಿಟ್ಟು ರೆಸಿಪಿ: ರುಚಿಯೊಂದಿಗೆ ಆರೋಗ್ಯಕರ ಉಪಾಹಾರ
ರವೆ, ಅವಲಕ್ಕಿ, ಶಾವಿಗೆ ಉಪ್ಪಿಟ್ಟು ತಿಂದು ಬೇಜಾರಾಗಿದ್ದರೆ ಒಮ್ಮೆ ರಾಗಿ ಹಿಟ್ಟಿನ ಉಪ್ಪಿಟ್ಟು ತಯಾರಿಸಿ ತಿನ್ನಿ. ಇದು ತುಂಬಾ ರುಚಿಯಾಗಿರುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಾಗಾದರೆ ತಡ ಮಾಡುವುದು ಬೇಡ, ರುಚಿಯಾದ ಆರೋಗ್ಯಕರ ರಾಗಿ ಉಪ್ಪಿಟ್ಟನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.
ಮನೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುವ ರಾಗಿ ಉಪ್ಪಿಟ್ಟು ತಯಾರಿಸುವುದು ತುಂಬಾ ಸುಲಭ. ತಯಾರಿಸುವಾಗ ಸರಿಯಾಗಿ ಅಳತೆ ಮಾಡಿಕೊಂಡರೆ ರಾಗಿ ಉಪ್ಪಿಟ್ಟು ತುಂಬಾ ಚೆನ್ನಾಗಿ ತಯಾರಿಸಬಹುದು. ಹಾಗಾದರೆ ರಾಗಿ ಉಪ್ಪಿಟ್ಟು ತಯಾರಿಸಲು ಬೇಕಾಗುವ ಪದಾರ್ಥಗಳನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
*ರಾಗಿ ಹಿಟ್ಟು ಎರಡು ಕಪ್
* ರವೆ ಒಂದು ಕಪ್
*ನೀರು ಏಳು ಕಪ್
* ತುಪ್ಪ ಎರಡು ಟೇಬಲ್ ಸ್ಪೂನ್
*ಅಡುಗೆ ಎಣ್ಣೆ ಮೂರು ಟೇಬಲ್ ಸ್ಪೂನ್
*ಸಾಸಿವೆ ಅರ್ಧ ಟೇಬಲ್ ಸ್ಪೂನ್
*ಕಡಲೆಬೇಳೆ ಒಂದು ಟೇಬಲ್ ಸ್ಪೂನ್
*ಉದ್ದಿನಬೇಳೆ ಒಂದು ಟೇಬಲ್ ಸ್ಪೂನ್
*ಗೋಡಂಬಿ ಒಂದು ಟೇಬಲ್ ಸ್ಪೂನ್
*ಈರುಳ್ಳಿ (ಮಧ್ಯಮ ಗಾತ್ರದ ಸಣ್ಣದಾಗಿ ಉದ್ದವಾಗಿ ಹೆಚ್ಚಿದ ಎರಡು ಈರುಳ್ಳಿ)
*ಹಸಿ ಮೆಣಸಿನಕಾಯಿ ನಾಲ್ಕು
*ಕರಿಬೇವಿನ ಸೊಪ್ಪು ಸ್ವಲ್ಪ
*ಕ್ಯಾರೆಟ್ (ಮೂರು ಚಿಕ್ಕದಾಗಿ ಹೆಚ್ಚಿದ)
* ಬೀನ್ಸ್ (ಐದು ಚಿಕ್ಕದಾಗಿ ಕಟ್ ಮಾಡಿದ)
*ಟೊಮ್ಯಾಟೊ (ಒಂದು ಮಧ್ಯಮ ಗಾತ್ರದ್ದು ಕಟ್ ಮಾಡಿದ್ದು)
*ಉಪ್ಪು (ರುಚಿಗೆ ತಕ್ಕಷ್ಟು)
*ಕೊತ್ತಂಬರಿ ಸೊಪ್ಪು ಸ್ವಲ್ಪ

ತಯಾರಿಸುವ ವಿಧಾನ:-
* ಮೊದಲಿಗೆ ಸರಿಯಾಗಿ ಅಳತೆ ಮಾಡಿದ ಏಳು ಕಪ್ ನೀರನ್ನು ಕುದಿಸಲು ಗ್ಯಾಸ್ ಮೇಲೆ ಇಡಿ
* ಒಂದು ಪ್ರತ್ಯೇಕ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಬಿಸಿಯಾದ ಬಳಿಕ ತುಪ್ಪ, ಅಡುಗೆ ಎಣ್ಣೆ ಹಾಕಿ
* ಬಿಸಿಯಾದ ಎಣ್ಣೆಗೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಗೋಡಂಬಿ ಹಾಕಿ ಕಡಿಮೆ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ
* ಬಳಿಕ ಇದಕ್ಕೆ ಈರುಳ್ಳಿ ಹಾಕಿ, ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿಕೊಳ್ಳಿ.
* ನಂತರ ಕ್ಯಾರೆಟ್, ಬೀನ್ಸ್, ಟೊಮ್ಯಾಟೋ, ಉಪ್ಪು ಹಾಕಿ ಪ್ರೈ ಮಾಡಿ
* ನಂತರ ಇದಕ್ಕೆ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರಾಗಿ ಹಿಟ್ಟು ಹಾಕಿ ಹುರಿಯಬೇಕು. ರಾಗಿ ಹಿಟ್ಟು ಗಟ್ಟಿಲ್ಲದಂತೆ ಮಿಕ್ಸ್ ಮಾಡುತ್ತಾ ಬಿಸಿ ಮಾಡಬೇಕು.
* ನಂತರ ಇದಕ್ಕೆ ಬಿಸಿ ಮಾಡಿದ ನೀರು ಸ್ವಲ್ಪ ಸ್ವಲ್ಪ ಹಾಕಿ ಚೆನ್ನಾಗಿ ಕಲಸಿ.
* ನಂತರ ಒಂದು ನಿಮಿಷ ಪಾತ್ರೆ ಮುಚ್ಚಿ ಬಿಟ್ಟು ಕೊತ್ತಂಬರಿ ಸೊಪ್ಪು ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಲಸಿ ಪಾತ್ರೆ ಮುಚ್ಚಿಟ್ಟರೆ ಬಿಸಿ ಬಿಸಿ ರಾಗಿ ಉಪ್ಪಿಟ್ಟು ಸವಿಯಲು ಸಿದ್ಧ












Click it and Unblock the Notifications