Menstruation: ಮುಟ್ಟಿನ ಸಮಯದಲ್ಲಿ ಅಮ್ಮನಿಗೆ ಆಸರೆಯಾಗಲು ಈ ಸಲಹೆಗಳನ್ನು ಎಂದೂ ಮರೆಯದಿರಿ
ಮುಟ್ಟಿನ ಸಮಯ ಹೆಣ್ಣು ಮಕ್ಕಳಿಗೆ ಸವಾಲಿನ ಕ್ಷಣಗಳು. ಅದು ನಿಮ್ಮ ತಾಯಿಯಾಗಿರಲಿ, ತಂಗಿಯಾಗಿರಲಿ ಅಥವಾ ಮಡದಿಯಾಗಿರಲಿ. ಯಾರೇ ಆಗಿದ್ದರೂ ಸಹ ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಈ ಸಮಯದಲ್ಲಿ ಆಕೆ ಕುಗ್ಗುತ್ತಾಳೆ. ಹೀಗಾಗಿ ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳನ್ನು ನೋಡಿಕೊಳ್ಳವುದು ಹೇಗೆ..? ಮುಖ್ಯವಾಗಿ ನಿಮ್ಮ ತಾಯಿಯನ್ನು ನೋಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ತಾಯಿ ಹಾಗೂ ಮಗಳಾಗಿದ್ದರೆ, ಮಗಳಿಗೂ ಈ ಮುಟ್ಟಿನ ಅನುಭವ ನೋವು ಅನುಭವಿಸಿರುವುದರಿಂದ ತಾಯಿಯ ಸಮಯ ಹಾಗೂ ಆಕೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಅದೇ ಮಗನಾದರೆ ತಾಯಿಗೆ ಈ ಬಗ್ಗೆ ಆತನ ಬಳಿ ಹೇಳಿಕೊಳ್ಳಲು ಮುಜುಗರವಿರುತ್ತದೆ. ಹೀಗಾಗಿ ನೀವಾಗಿಯೇ ಆಕೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಹಾಗೂ ಆಕೆಗೆ ನೆರವಾಗಿ.

ನಿಮ್ಮ ತಾಯಿಯ ಮೇಲಿಯ ಮೇಲಿನ ಗೌರವ ಹಾಗೂ ಪ್ರೀತಿ ತೋರಿಸಲು ಇದೊಂದು ಸೂಕ್ತ ಸಮಯವಾಗಿದೆ. ಯಾಕೆಂದರೆ ಮುಟ್ಟಿನ ಸಮಯದಲ್ಲಿ ಆಕೆ ಮಾನಸಿಕವಾಗಿ ಕುಗ್ಗಿರುತ್ತಾಳೆ ಹಾಗೂ ಈ ಸಮಯದಲ್ಲಿ ತನಗೆ ನೆರವಾಗುವವರನ್ನು ಇನ್ನಷ್ಟು ಹೆಚ್ಚು ಪ್ರೀತಿಸುತ್ತಾಳೆ. ಮುಟ್ಟಿನ ಸಮಯದಲ್ಲಿ ನಿಮ್ಮ ತಾಯಿಗೆ ಒಂದು ಬೆಚ್ಚಗಿನ ಅಪ್ಪುಗೆ, ಆಕೆಗಾಗಿ ಒಂದಿಷ್ಟು ಸಮಯ ಮೀಸಲಿಡುವುದು, ಆಕೆಗೆ ಅಗತ್ಯವಿರುವ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ಕೊಡುವುದು ಹೀಗೆ ಆಕೆಗೆ ನೀವು ನಿಮ್ಮ ಪ್ರೀತಿಯನ್ನು ತೋರಿಸಬಹುದು.
ನಿಮ್ಮ ತಾಯಿಗೆ ಮುಟ್ಟಾದಾಗ ಹೇಗೆ ಸಹಾಯ ಮಾಡಬಹುದು..? ಇಲ್ಲಿದೆ ಕೆಲವು ಸಲಹೆಗಳು
ನಿಮ್ಮ ತಾಯಿಯ ಮುಟ್ಟಿನ ಸಮಯದಲ್ಲಿ ಆಕೆಯನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.
ಮುಟ್ಟಿನ ಸಮಯದಲ್ಲಿ ತಾಯಿಗೆ ಸಹಾಯದ ಅಗತ್ಯ ಇದ್ದೇ ಇರುತ್ತದೆ. ನಿಮಗೆ ತೊಂದರೆಯಾಗುತ್ತದೆ ಎಂದು ಆಕೆ ಹೇಳಿಕೊಳ್ಳುವುದಿಲ್ಲ. ಹೀಗಾಗಿ ನಾವಾಗೆಯೇ ಆಗಾಗ ಆಕೆಯನ್ನು ಮಾತನಾಡಿಸಿ, ಮನೆ ಕೆಲಸ ಅಥವಾ ಅಗತ್ಯವಿರುವ ಸಹಾಯ ಮಾಡಿ.

ತಾಯಿ ಪೂರ್ಣಗೊಳಿಸಬೇಕು ಎಂದುಕೊಂಡ ಕೆಲಸ ಆಗದೇ ಇದ್ದಾಗ ಆಕೆಯ ಸಹಾಯಕ್ಕೆ ನಿಂತು ಪೂರ್ಣಗೊಳಿಸಿ. ಇದರಿಂದ ಆಕೆಗೆ ಖುಷಿಯಾಗುತ್ತದೆ.
ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವಿನ ನಿವಾರಣೆಗಾಗಿ ಆಕೆ ಅಗತ್ಯವಿರುವ ಪಾನೀಯಗಳನ್ನು ತಯಾರಿಸಿಕೊಡಿ. ಬಿಸಿ ನೀರಿನ ಬಾಟೆಲ್‌ಗಳು ಹಾಗೂ ಬಿಸಿ ನೀರಿನ ಚೀಲಗಳನ್ನು ಆಕೆಗೆ ನೀಡಿ.
ನಿಮ್ಮ ತಾಯಿಗೆ ಇಷ್ಟವಾದ ಆಹಾರವನ್ನು ಆಕೆಯ ಮುಟ್ಟಿನ ಸಮಯದಲ್ಲಿ ತಯಾರಿಸಿ ಕೊಡಿ. ಇದರಿಂದ ಆಕೆಯ ಒತ್ತಡ ಕಡಿಮೆಯಾಗಿರುತ್ತದೆ.

ವರ್ಷದ ಎಲ್ಲಾ ದಿನದಲ್ಲೂ ಮನೆ ಕೆಲಸ ಹಾಗೂ ನಿಮ್ಮ ಆರೈಕೆ ಮಾಡುವ ನಿಮ್ಮ ತಾಯಿಗೆ ಆಕೆಯ ಮುಟ್ಟಿನ ಸಮಯದಲ್ಲಿ ವಿಶ್ರಾಂತಿ ಕೊಡಿ. ಮನೆಯ ಕೆಲಸಗಳನ್ನು ಹಾಗೂ ಆಕೆಯ ಕೆಲಸಗಳನ್ನು ಮಾಡಿಕೊಡಿ.
ಮುಟ್ಟಿನ ಸಮಯದಲ್ಲಿ ಬೇಕಾಗುವ ಸ್ಯಾನಿಟರಿ ಪ್ಯಾಡ್ ಸೇರಿದಂತೆ ಆಕೆಗೆ ಬೇಕಾಗಿರುವ ಅಗತ್ಯವಾದ ವಸ್ತುಗಳನ್ನು ತಂದುಕೊಡಿ.
ಮುಖ್ಯವಾಗಿ ನಿಮ್ಮ ತಾಯಿಗಾಗಿ ಸಮಯ ಕೊಡಿ. ಆಕೆ ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಿ. ಉತ್ತಮ ವಿಚಾರದ ಬಗ್ಗೆ ಆಕೆಯೊಂದಿಗೆ ಚರ್ಚಿಸಿ.
ನಿಮ್ಮ ತಾಯಿಗೆ ಹೊರಗಡೆ ಸುತ್ತಾಡುವುದು ಇಷ್ಟವೆಂದರೆ ಆಕೆಯನ್ನು ಕರೆದುಕೊಂಡು ಹೋಗಿ. ಒಂದಿಷ್ಟು ಸಮಯವನ್ನು ಆಕೆಯೊಂದಿಗೆ ಕಳೆಯಿರಿ. ಆಕೆಗೆ ಅಗತ್ಯವಿರು ಸಾಂತ್ವನ ನೀಡಿ, ಬೆಚ್ಚಿಗಿನ ಅಪ್ಪುಗೆ ನೀಡಿ ಇದರಿಂದ ಆಕೆಯ ಮನಸ್ಸಿಗೆ ಖುಷಿಯಾಗುತ್ತದೆ. ಒಟ್ಟಾರೆ ಮುಟ್ಟಿನ ಸಮಯದಲ್ಲಿ ಕುಗ್ಗಿರುವ ಹೆಣ್ಣು ಮಕ್ಕಳಿಗೆ ಒಬ್ಬರು ಜೊತೆಗಿದ್ದು, ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ.












Click it and Unblock the Notifications