Laugh: ನಾವೇಕೆ ನಗಬೇಕು? ನಗುವುದರಿಂದ ಏನು ಪ್ರಯೋಜನ?
ಒಂದೇ ಒಂದು ಮುಗುಳು ನಗು ನಮ್ಮ ನಡುವಿನ ಪರಿಚಯವನ್ನು ಜೀವಂತವಾಗಿರಿಸುತ್ತದೆ. ಅದರಾಚೆಗಿನ ನಗು ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಅದೆಲ್ಲವನ್ನು ಮೀರಿ ನಗುತಾ ಬದುಕುವುದು ನಮ್ಮನ್ನು ಆರೋಗ್ಯವಾಗಿಡುತ್ತದೆ. ಅದು ಬಿಟ್ಟು ಆಕಾಶವೇ ತಲೆ ಮೇಲೆ ಬಿದ್ದಂತೆ ಮುಖ ಗಂಟಿಕ್ಕಿಕೊಂಡು ಇದ್ದರೆ ಅದರಿಂದ ನಾವಾಗಲೀ ನಮ್ಮ ಸುತ್ತಮುತ್ತ ಇರುವವರಾಗಲೀ ಖುಷಿಯಾಗಿ ಇರಲು ಸಾಧ್ಯವಿಲ್ಲ.
ಕಷ್ಟಗಳು ಯಾರಿಗಿಲ್ಲ ಹೇಳಿ? ಕಷ್ಟವನ್ನೇ ನೆನೆಯುತ್ತಾ ನಗುವನ್ನು ಮುಖದಿಂದ ಮರೆ ಮಾಡಿಕೊಂಡರೆ ಅದರಿಂದ ಏನು ಪ್ರಯೋಜನ? ಇಷ್ಟಕ್ಕೂ ನಗುತ್ತಾ ಖುಷಿಯಾಗಿರುವವರು ಕಷ್ಟದಲ್ಲಿ ಇಲ್ವಾ? ಎಲ್ಲರಿಗೂ ಕಷ್ಟವಿದೆ, ನೋವಿದೆ. ನಿಜಹೇಳಬೇಕೆಂದರೆ ನಮ್ಮಲ್ಲೊಂದು ತಪ್ಪು ಕಲ್ಪನೆಯಿದೆ. ಅದು ಏನೆಂದರೆ ನಗುತಾ ಇರುವವರೆಲ್ಲರೂ ಸುಖವಾಗಿದ್ದಾರೆ ಎಂದು ಭಾವಿಸುತ್ತೇವೆ.

ಇದೆಲ್ಲದ ನಡುವೆ ನಾವೆಲ್ಲರೂ ನಗುನಗುತ್ತಾ ದಿನಕಳೆಯಬೇಕೆಂದು ಬಯಸುತ್ತೇವೆ. ಜತೆಗೆ ಬೇರೆಯವರು ನಗುನಗುತ್ತಾ ಇರುವುದನ್ನು ಕಂಡು ಹೊಟ್ಟೆ ಕಿಚ್ಚು ಪಡುತ್ತೇವೆ. ಆದರೆ ನಗು ಎನ್ನುವುದು ಹಣ ನೀಡಿ ಪಡೆಯುವಂತಹದ್ದಲ್ಲ. ಅದು ನಾವು ನಮ್ಮಿಂದಲೇ ಪಡೆಯುವಂತಹದ್ದಾಗಿದೆ. ಆದರೆ ದುರಂತವೆಂದರೆ ಇವತ್ತು ನಗುವನ್ನು ಬಲತ್ಕಾರವಾಗಿ ಪಡೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಅದಕ್ಕಾಗಿಯೇ ನಗರ ಪ್ರದೇಶಗಳಲ್ಲಿ ಕ್ಲಬ್ ಹುಟ್ಟಿಕೊಂಡಿವೆ. ಸದಾ ದುಡಿಮೆಯಲ್ಲಿಯೇ ಇರುವವರು ಕ್ಲಬ್ಗೆ ಹೋಗಿ ನಕ್ಕು ಬರುವ ಮಟ್ಟಿಗೆ ಬಂದು ನಿಂತಿದೆ.
ನಕ್ಕು ಮಾತನಾಡಿಸುವ ಸಂಪ್ರದಾಯ ಮಾಯ
ಇವತ್ತಿನ ಯಾಂತ್ರಿಕ ಬದುಕು ದೈವದತ್ತವಾಗಿ ಬಂದ ನಗುವನ್ನು ನುಂಗಿ ಹಾಕುತ್ತಿದೆ. ಹಣದ ವ್ಯಾಮೋಹದಲ್ಲಿ ತೊಡಗಿರುವರು ಸದಾ ದುಡಿಮೆಯಲ್ಲಿಯೇ ತೊಡಗಿರುತ್ತಾರೆ. ಕೆಲಸ ಕಾರ್ಯಗಳಲ್ಲಿ ಲೀನವಾಗಿರುವ ಕಾರಣ ಅವರಿಗೆ ನಗುವುದಕ್ಕೂ ಸಮಯ ಇಲ್ಲದಾಗಿದೆ. ಒತ್ತಡ, ಆತಂಕ, ಕಳವಳ, ಪೈಪೋಟಿಗಳ ನಡುವೆ ನಗು ತನ್ನಿಂದ ತಾನೇ ದೂರ ಸರಿದು ಬಿಟ್ಟಿದೆ. ಹಣದಿಂದಲೇ ಎಲ್ಲವನ್ನೂ ಅಳೆಯುವ ಕೆಟ್ಟ ಸಂಸ್ಕೃತಿಯಿಂದಾಗಿ ನಕ್ಕು ಮಾತನಾಡಿಸುವ ಸಂಪ್ರದಾಯ ದೂರವಾಗಿದೆ.

ಈಗ ನಗು ಸಹ ವ್ಯವಹಾರಿಕ ಎಂಬಂತೆ ಭಾಸವಾಗ ತೊಡಗಿದೆ. ಅದರಲ್ಲಿ ಕೃತಕತೆ ಎದ್ದು ಕಾಣಿಸಲಾರಂಭಿಸಿದೆ. ಬಹಳಷ್ಟು ಮಂದಿ ನಗುವಿನಿಂದ ನಮಗಿರುವ ಉಪಯೋಗದ ಬಗ್ಗೆ ಬಹಳಷ್ಟು ಮಂದಿ ತಿಳಿದೇ ಇಲ್ಲ. ಹಾಗಾಗಿ ಅವರು ಒಂದಲ್ಲಾ ಒಂದು ರೀತಿಯಲ್ಲಿ ಸೊಲುತ್ತಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ತೊಡಗಿರುವವರಿಗೆ ನಗುವೂ ಒಂದು ಬಂಡವಾಳವೇ.
ನಗುವಿನಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿದ್ದೀರಿ ಅಂದುಕೊಳ್ಳಿ. ನಿಮ್ಮಲ್ಲಿಗೆ ಬರುವ ಗ್ರಾಹಕರೊಂದಿಗೆ ನಗು ಮುಖದಿಂದ ವರ್ತಿಸದೇ ಹೋದರೆ ಗ್ರಾಹಕರು ಖಂಡಿತಾ ಮತ್ತೊಮ್ಮೆ ನಿಮ್ಮ ಬಳಿಗೆ ಬರಲಾರರು. ಹೀಗಾದರೆ ನಷ್ಟ ಹೊಂದುವುದು ಗ್ಯಾರಂಟಿ ಅಲ್ಲವೇ? ನಗು ನಮ್ಮ ಆರೋಗ್ಯದಲ್ಲಿಯೂ ಸಾಕಷ್ಟು ಉಪಯೋಗಕ್ಕ ಬರುತ್ತದೆ.
ಶರೀರದಲ್ಲಿರುವ ಎಂಡಾರ್ಫಿನ್ಸ್ ಎಂಬ ರಾಸಾಯನಿಕ ಕಣಗಳು ನಗುವುದರಿಂದ ಅಧಿಕವಾಗಿ ಬಿಡುಗಡೆ ಹೊಂದುತ್ತದೆ. ಈ ರಾಸಾಯನಿಕ ಶರೀರದಲ್ಲಿರುವ ನೋವುಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಎಂಡಾರ್ಫಿನ್ಸ್ ರಾಸಾಯನಿಕಕ್ಕೆ ಮಾಂಸ ಖಂಡಗಳ, ಕೀಲು, ತಲೆ ನೋವನ್ನು ಕಡಿಮೆ ಮಾಡುವ ಶಕ್ತಿಯಿದೆ.
ಇನ್ನಾದರೂ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ
ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆಗೆ ಮಾರು ಹೋಗದೆ, ನಗುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇ ಆದರೆ ನಿದ್ದೆ ತನ್ನಿಂದ ತಾನಾಗಿಯೇ ಬರುತ್ತದೆ. ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಒತ್ತಡದಿಂದ ಬರುತ್ತವೆ. ನಗುವುದರಿಂದ ದೇಹದಲ್ಲಿನ ರಕ್ತನಾಳಗಳಲ್ಲಿ ರಕ್ತ ಸಂಚಾರ ಅಧಿಕವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಖಿನ್ನತೆ, ಒತ್ತಡ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತದೆಂದು 'ಸೈಕೋನ್ಯೂರೋ ಇಮ್ಯೂನಾಲಜಿಸ್ಟ್'ಗಳ ಪರಿಶೋಧನೆಗಳಲ್ಲಿ ಬೆಳಕಿಗೆ ಬಂದಿದ್ದು, ನಗುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ನಮ್ಮ ಶರೀರದೊಳಗೆ ಪ್ರವೇಶಿಸಿ ರೋಗ ಹರಡುವ ಬ್ಯಾಕ್ಟಿರಿಯಾಗಳನ್ನು ಸಮರ್ಥವಾಗಿ ನಾಶಮಾಡುತ್ತದೆ.
ನಗು ನಮ್ಮ ಅಂತರ್ಗತ ಅವಯವಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸಿ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಅಸ್ತಮಾ, ಬ್ರಾಂಕೈಟಿಸ್ ರೋಗಿಗಳಿಗೆ ಒಳ್ಳೆಯ ವ್ಯಾಯಾಮವಾಗಿದ್ದು, ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ನಗು ಹೆಚ್ಚಿಸುತ್ತದೆ. ಜ್ಞಾಪಕ ಶಕ್ತಿ ವೃದ್ದಿಸುವಲ್ಲಿಯೂ ಸಹಕಾರಿ. ನಗು ಮುಖಕ್ಕೊಂದು ವ್ಯಾಯಾಮವೂ ಹೌದು. ಇಷ್ಟೆಲ್ಲವನ್ನು ತಿಳಿದ ಮೇಲೂ ನಗುವುದನ್ನು ಅಭ್ಯಾಸ ಮಾಡಿಕೊಳ್ಳದಿದ್ದರೆ ಹೇಗೆ?












Click it and Unblock the Notifications