ಬೇಸಿಗೆಯಲ್ಲಿ ಮೊಟ್ಟೆ ತಿಂದರೆ ದೇಹಕ್ಕೆ ಉಷ್ಣವೇ? ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು? ಇಲ್ಲಿದೆ ತಜ್ಞರ ಉತ್ತರ
ಮೊಟ್ಟೆಯು ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಇದು ಜಿಮ್‌ಗೆ ಹೋಗುವವರ ಮತ್ತು ಫಿಟ್‌ನೆಸ್ ಪ್ರಿಯರ ಮೊದಲ ಆಯ್ಕೆಯಾಗಿದೆ. ಚಳಿಗಾಲದಲ್ಲಿ ಮೊಟ್ಟೆಯನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಲಾಗುತ್ತದೆ, ಆದರೆ ಬೇಸಿಗೆಯಲ್ಲಿ ಅನೇಕರು ವಿವಿಧ ಕಾರಣಗಳಿಗಾಗಿ ಇದನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಬೇಸಿಗೆಯಲ್ಲಿ ಮೊಟ್ಟೆ ತಿಂದರೆ ಚರ್ಮ ಮತ್ತು ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ದೇಹಕ್ಕೆ ಹೆಚ್ಚು ಉಷ್ಣವಾಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ.
ಹಾಗಾದರೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಹುದೇ? ಬಿಸಿಲಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನಬಹುದು? ಬೇಸಿಗೆಯಲ್ಲಿ ಆಮ್ಲೆಟ್‌ಗಿಂತ ಬೇಯಿಸಿದ ಮೊಟ್ಟೆ ಉತ್ತಮವೇ? ಯಾರು ಮೊಟ್ಟೆ ತಿನ್ನುವುದನ್ನು ಮಿತಿಗೊಳಿಸಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಭೋಪಾಲ್‌ನ ಖ್ಯಾತ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಡಾ. ನಿಧಿ ಶುಕ್ಲಾ ಪಾಂಡೆ ಅವರು ಭಾಸ್ಕರ್ ಇಂಗ್ಲೀಷ್ ಜೊತೆಗಿನ ಸಂದರ್ಶನದಲ್ಲಿ ವಿವರವಾಗಿ ಉತ್ತರಿಸಿದ್ದಾರೆ.

ಮೊಟ್ಟೆ: ಪ್ರೋಟೀನ್‌ನ ಸಂಪೂರ್ಣ ಮೂಲ
ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ 9 ಪ್ರಮುಖ ಅಮೈನೋ ಆಮ್ಲಗಳಿರುವುದರಿಂದ ಇದನ್ನು ಸಂಪೂರ್ಣ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ. ಈ ಅಮೈನೋ ಆಮ್ಲಗಳನ್ನು 'ದೇಹದ ಬಿಲ್ಡಿಂಗ್ ಬ್ಲಾಕ್ಸ್' ಎಂದು ಕರೆಯಲಾಗುತ್ತದೆ. ಮೊಟ್ಟೆಯು ಪ್ರೋಟೀನ್ ಮಾತ್ರವಲ್ಲದೆ, ಕಬ್ಬಿಣ, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ, ಫೋಲೇಟ್ ಮತ್ತು ಕೋಲೀನ್‌ನಂತಹ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.
ಒಂದೇ ಒಂದು ಮೊಟ್ಟೆಯಲ್ಲಿ 6 ಗ್ರಾಂ ಪ್ರೋಟೀನ್ ಮತ್ತು ಕೇವಲ 70 ಕ್ಯಾಲೊರಿಗಳಿರುತ್ತವೆ. ಇದು ಸ್ನಾಯುಗಳ ಬಲವರ್ಧನೆ, ಮೆದುಳಿನ ಕಾರ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಬ್‌ಮೆಡ್ ಸೆಂಟ್ರಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮೊಟ್ಟೆಯು ಪೌಷ್ಟಿಕಾಂಶಯುಕ್ತ ಆಹಾರವಾಗಿದ್ದು, ಇದು ಹೃದ್ರೋಗಕ್ಕೆ ಪ್ರಮುಖ ಕಾರಣ ಎಂದು ಪರಿಗಣಿಸಲಾಗುವುದಿಲ್ಲ.
ಬೇಸಿಗೆಯಲ್ಲಿ ಆಮ್ಲೆಟ್‌ಗಿಂತ ಬೇಯಿಸಿದ ಮೊಟ್ಟೆ ಉತ್ತಮವೇ?
ಬೇಸಿಗೆಯಲ್ಲಿ ಕರಿದ ಅಥವಾ ಫ್ರೈ ಮಾಡಿದ ಮೊಟ್ಟೆಗಳಿಗಿಂತ (ಆಮ್ಲೆಟ್) ಬೇಯಿಸಿದ ಮೊಟ್ಟೆಗಳು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅವು ಹಗುರವಾಗಿರುತ್ತವೆ, ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ಯಾವುದೇ ಎಣ್ಣೆ ಅಥವಾ ಕೊಬ್ಬನ್ನು ಹೊಂದಿರುವುದಿಲ್ಲ.
ತಜ್ಞರ ಪ್ರಕಾರ, ಬಿಸಿಗಾಲದಲ್ಲಿ ದೇಹವು ಜೀರ್ಣಿಸಿಕೊಳ್ಳಲು ಸುಲಭವಾದ, ಹಗುರವಾದ ಆಹಾರವನ್ನು ಬಯಸುತ್ತದೆ. ಎಣ್ಣೆಯಲ್ಲಿ ಕರಿದ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ಬೇಸಿಗೆಯಲ್ಲಿ ಹೊಟ್ಟೆಯುಬ್ಬರ, ಅಸ್ವಸ್ಥತೆಗೆ ಕಾರಣವಾಗಬಹುದು. ಎಣ್ಣೆಯಿಲ್ಲದೆ ಬಿಸಿ ನೀರಿನಲ್ಲಿ ಬೇಯಿಸುವ ಪೋಚ್ಡ್ ಎಗ್ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ನಿಮಗೆ ಆಮ್ಲೆಟ್ ಇಷ್ಟವಿದ್ದರೆ, ಸಮತೋಲಿತ ಆಹಾರಕ್ಕಾಗಿ ಸಾಕಷ್ಟು ತರಕಾರಿಗಳನ್ನು ಸೇರಿಸಿ ತಯಾರಿಸುವುದು ಒಳಿತು ಎಂದು ಡಾ. ನಿಧಿ ಸಲಹೆ ನೀಡುತ್ತಾರೆ. ತಿಂದ ತಕ್ಷಣ ಭಾರಿ ಆಹಾರಗಳನ್ನು ಸೇವಿಸಬಾರದು.
ಮೊಟ್ಟೆ ತಿನ್ನಲು ಸರಿಯಾದ ಸಮಯ ಮತ್ತು ಪ್ರಮಾಣ ಎಷ್ಟು?
ಬೆಳಗಿನ ಉಪಾಹಾರದ ಸಮಯದಲ್ಲಿ ಅಥವಾ ಸಂಜೆ 4-7 ಗಂಟೆಯ ನಡುವೆ ಸ್ನ್ಯಾಕ್ ಆಗಿ ಮೊಟ್ಟೆ ತಿನ್ನುವುದು ಅತ್ಯುತ್ತಮ ಸಮಯ ಎಂದು ತಜ್ಞರು ಸೂಚಿಸುತ್ತಾರೆ. ವಯಸ್ಸಿಗನುಗುಣವಾಗಿ ತಜ್ಞರ ಮಾರ್ಗಸೂಚಿ ಇಲ್ಲಿದೆ:
1 ರಿಂದ 14 ವರ್ಷ: ದಿನಕ್ಕೆ 1 ರಿಂದ 2 ಇಡೀ ಮೊಟ್ಟೆಗಳು (ಹಳದಿ ಭಾಗ ಸೇರಿ).
14 ರಿಂದ 20 ವರ್ಷ: ದಿನಕ್ಕೆ 2 ರಿಂದ 3 ಇಡೀ ಮೊಟ್ಟೆಗಳು.
20 ರಿಂದ 40 ವರ್ಷ: ದಿನಕ್ಕೆ 3 ರಿಂದ 4 ಮೊಟ್ಟೆಯ ಬಿಳಿ ಭಾಗ ಮಾತ್ರ.
40 ರಿಂದ 60 ವರ್ಷ: ದಿನಕ್ಕೆ 2 ಮೊಟ್ಟೆಯ ಬಿಳಿ ಭಾಗ ಮಾತ್ರ.
ವಾರದಲ್ಲಿ ಕನಿಷ್ಠ 4 ದಿನ ವ್ಯಾಯಾಮ ಮಾಡುವವರು ಮಾತ್ರ ಹಳದಿ ಭಾಗದೊಂದಿಗೆ ಇಡೀ ಮೊಟ್ಟೆಗಳನ್ನು ತಿನ್ನಬಹುದು. ಆಹಾರದ ಸಮತೋಲನ, ಬೇಯಿಸುವ ವಿಧಾನ ಬಹಳ ಮುಖ್ಯ. ಅತಿಯಾದ ಎಣ್ಣೆ ಬಳಸಿ ಬೇಯಿಸಬೇಡಿ ಹಾಗೂ ಮಲಗುವ ಮುನ್ನ ಮೊಟ್ಟೆ ತಿನ್ನುವುದನ್ನು ತಪ್ಪಿಸಿ.
ಬೇಸಿಗೆಯಲ್ಲಿ ಯಾರು ಮೊಟ್ಟೆ ತಿನ್ನುವುದನ್ನು ಮಿತಿಗೊಳಿಸಬೇಕು?
1. ಮೊಟ್ಟೆಯ ಅಲರ್ಜಿ ಇರುವವರು: ರೇಷಸ್, ತುರಿಕೆ, ಊತ ಅಥವಾ ಉಸಿರಾಟದ ತೊಂದರೆ ಇರುವವರು ಮೊಟ್ಟೆಯಿಂದ ಸಂಪೂರ್ಣವಾಗಿ ದೂರವಿರಬೇಕು.
2. ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದ್ರೋಗ: ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ಹೃದ್ರೋಗಿಗಳು ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಎಚ್ಚರ ವಹಿಸಬೇಕು.
3. ಯಕೃತ್ತಿನ (Liver) ಸಮಸ್ಯೆ ಇರುವವರು: ಅತಿಯಾದ ಮೊಟ್ಟೆ ಸೇವನೆಯು ದುರ್ಬಲ ಯಕೃತ್ತಿನ ಮೇಲೆ ಒತ್ತಡ ಹೇರುತ್ತದೆ.
4. ದುರ್ಬಲ ಜೀರ್ಣಕ್ರಿಯೆ: ಹೊಟ್ಟೆ ಸಮಸ್ಯೆ ಇರುವವರು, ಅಸಿಡಿಟಿ ಸಮಸ್ಯೆ ಉಳ್ಳವರು ಬಿಳಿ ಭಾಗವನ್ನು ಮಾತ್ರ (ದಿನಕ್ಕೆ 2) ತಿನ್ನಬೇಕು ಮತ್ತು ಇಡೀ ಮೊಟ್ಟೆಯನ್ನು ತಪ್ಪಿಸಬೇಕು.
5. ಸಾಲ್ಮೊನೆಲ್ಲಾ ಅಥವಾ ಫುಡ್ ಪಾಯಿಸನಿಂಗ್‌ನಿಂದ ಚೇತರಿಸಿಕೊಳ್ಳುತ್ತಿರುವವರು: ಸರಿಯಾಗಿ ಬೇಯಿಸದ ಮೊಟ್ಟೆ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ಚೇತರಿಕೆಯನ್ನು ವಿಳಂಬಗೊಳಿಸುತ್ತದೆ.
6. ಶಿಶುಗಳು: ವೈದ್ಯರ ಸಲಹೆಯಿಲ್ಲದೆ ಚಿಕ್ಕ ಮಕ್ಕಳಿಗೆ ಮೊಟ್ಟೆ ನೀಡಬಾರದು.
7. ಅಧಿಕ ರಕ್ತದೊತ್ತಡ (High BP): ನಿರಂತರವಾಗಿ ಬಿಪಿ ಸಮಸ್ಯೆ ಇರುವವರು ಮೊಟ್ಟೆ ಸೇವನೆಯನ್ನು ಮಿತಿಗೊಳಿಸಬೇಕು.
ಒಟ್ಟಾರೆಯಾಗಿ, ಆಮ್ಲೆಟ್ ಮತ್ತು ಬೇಯಿಸಿದ ಮೊಟ್ಟೆಗಳೆರಡೂ ಪೌಷ್ಟಿಕಾಂಶಗಳನ್ನು ನೀಡಿದರೂ, ಕಡಿಮೆ ಕ್ಯಾಲೊರಿ ಇರುವ ಕಾರಣ ಬೇಯಿಸಿದ ಮೊಟ್ಟೆ ಆರೋಗ್ಯಕರ ಆಯ್ಕೆಯಾಗಿದೆ. ಬೇಸಿಗೆಯಲ್ಲಿ ಮಿತವಾಗಿ ತಿಂದರೆ ಮೊಟ್ಟೆಯು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.














Click it and Unblock the Notifications