ಮನೆಯಲ್ಲಿ ನಾಯಿಗಳ ಜನನ ಶುಭನಾ? ಅಶುಭನಾ?
ಶ್ವಾನ ಅಂದರೆ ಪ್ರಾಣಿ ಪ್ರಿಯರ ನೆಚ್ಚಿನ ಜೀವಿ. ನಿಷ್ಠೆಯ ಪ್ರಾಣಿ ಕೂಡ ಹೌದು. ಹೀಗಾಗಿ ಇದನ್ನು ಹೆಚ್ಚಿನ ಜನ ಮನೆಯಲ್ಲಿ ಸಾಕಲು ಇಷ್ಟಪಡುತ್ತಾರೆ. ಅಲ್ಲದೆ ಇದು ಶಿವನ ರುದ್ರ ರೂಪವಾದ ಕಾಲ ಭೈರವ ದೇವನ ವಾಹನ ಕೂಡ ಆಗಿದ್ದು ಹಿಂದೂಗಳು ಪೂಜನೀಯ ಭಾವದಿಂದ ಕಾಣುತ್ತಾರೆ. ನಾಯಿ ಕೆಟ್ಟವರಿಂದ ತನ್ನ ಯಜಮಾನನನ್ನು ರಕ್ಷಿಸುತ್ತದೆ. ಜೊತೆಗೆ ತನಗಿಂತಲೂ ಹೆಚ್ಚಾಗಿ ತನ್ನ ಯಜಮಾನನನ್ನು ಕಾಪಾಡುತ್ತದೆ. ಹೀಗಾಗಿ ನಾಯಿ ಎಲ್ಲರ ನೆಚ್ಚಿನ ಸಾಕುಪ್ರಾಣಿ. ಹಾಗಾದರೆ ಮನೆಯಲ್ಲಿ ನಾಯಿ ಮರಿಗಳು ಜನಿಸುವುದು ಶುಭನಾ? ಅಶುಭನಾ? ಇದರ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ನಾಯಿಗಳನ್ನು ಸಾಕುವ ಟ್ರೆಂಡ್ ಹೆಚ್ಚಾಗಿದೆ. ಯಾವುದೇ ಬೀದಿಗೆ ಹೋದರೂ ಕೂಡ ಮನೆಗೊಂದು ವಿಭಿನ್ನ ನಾಯಿ ಕಂಡುಬರುತ್ತದೆ. ನಾಯಿ ಕಣ್ಣಿಗೆ ಕಾಣಿಸದೇ ಇದ್ದರೂ 'ನಾಯಿ ಇದೆ ಎಚ್ಚರಿಕೆ' ಎನ್ನುವ ಬೋರ್ಡ್ ಇದ್ದೇ ಇರುತ್ತದೆ. ನಾಯಿ ಕೇವಲ ತನ್ನ ಯಜಮಾನನ್ನು ಮಾತ್ರವಲ್ಲ, ಇಡೀ ಮನೆಗೆ ಕಾವಲುಗಾರನಂತೆ ಇರುತ್ತದೆ. ಮನೆಯ ಸದಸ್ಯರನ್ನು ಬಿಟ್ಟು ಮನೆಗೆ ಯಾರನ್ನೂ ಬರಲು ಬಿಡುವುದಿಲ್ಲ. ಒಂದು ವೇಳೆ ಬಂದರೆ ನಾಯಿಯಿಂದ ಕಚ್ಚಿಸಿಕೊಳ್ಳುವುದು ಗ್ಯಾರಂಟಿ.

ಹೀಗಾಗಿ ನಾಯಿ ಇರುವ ಮನೆ ಕಳ್ಳತನವಾಗುವುದು ತುಂಬಾ ವಿರಳ. ಅಷ್ಟೇ ಅಲ್ಲ ನಾಯಿ ಇರುವ ಮನೆಗೆ ಅಪರಿಚಿತರು ಯಾರೇ ಆಗಲಿ ಸುಲಭವಾಗಿ ಬರುವುದು ಬಹಳ ಕಷ್ಟ. ಹಾಲು, ತರಕಾರಿ, ಸ್ವಿಗ್ಗಿ, ಜೊಮ್ಯಾಟೊ, ಇನ್ನಿತರ ಪಾರ್ಸೆಲ್, ಕೋರಿಯರ್ ಏನೇ ಬಂದರೂ ಮನೆ ಗೇಟ್ ಬಳಿಯೇ ನಿಂತುಕೊಳ್ಳಬೇಕು. ಹೀಗಾಗಿ ಪ್ರಾಣಿ ಪ್ರಿಯರಿಗೆ ನಾಯಿಗಳೆಂದರೆ ತುಂಬಾ ಅಚ್ಚುಮೆಚ್ಚು.
ನಾಯಿಯಂತೆ ಯಾವ ಪ್ರಾಣಿ ಕೂಡ ಮನೆ ಹಾಗೂ ತನ್ನ ಯಜಮಾನನಿಗೆ ಕಾವಲಾಗಿ ಇರುವ ಇತಿಹಾಸವೇ ಇಲ್ಲ. ಸ್ವಲ್ಪ ಪ್ರೀತಿ ಕೊಟ್ಟರೆ ಸಾಕು ನೂರರಷ್ಟು ಪ್ರೀತಿ ಕೊಡುತ್ತದೆ ಸಾಕುನಾಯಿ. ಹೀಗಾಗಿ ಅದೆಷ್ಟೋ ಮನೆಗಳಲ್ಲಿ ನಾಯಿಯನ್ನು ಪ್ರಾಣಿಯಂತೆ ಕಾಣುವುದಿಲ್ಲ. ಬದಲಿಗೆ ಅವುಗಳನ್ನು ಮನೆಯ ಸದಸ್ಯರಂತೆ ಕಾಣುತ್ತಾರೆ. ನಾಯಿಗಾಗಿ ಪ್ರತ್ಯೇಕ ರೂಂ, ಆಟವಾಡಲು ಸ್ಥಳ, ಡೇ ಕೇರ್, ಬಟ್ಟೆ, ಊಟ ಎಲ್ಲವೂ ದುಬಾರಿಯಾಗೇ ಇರುತ್ತದೆ.

ಕೆಲವರಂತೂ ನಾಯಿಯನ್ನು ಸಾಕುವುದು ಮಾತ್ರವಲ್ಲ ಬಗೆ ಬಗೆಯ ತಳಿಯ ನಾಯಿಗಳನ್ನು ಸಾಕುವ ಆಸಕ್ತಿ ಹೊಂದಿರುತ್ತಾರೆ. ಇನ್ನೂ ಕೆಲವರು ತಮ್ಮ ಬಳಿ ಇರುವ ನಾಯಿಗಳಿಗೆ ಮರಿ ನಾಯಿಗಳು ಜನನವಾದ ಬಳಿಕ ಅವುಗಳನ್ನು ಮತ್ತೋರ್ವರಿಗೆ ಮಾರಾಟ ಮಾಡುತ್ತಾರೆ. ಈ ರೀತಿಯ ನಾಯಿಗೆ ಸಂಬಂಧಿಸಿದ ಅನೇಕ ವಾಟ್ಸಾಪ್, ಫೇಸ್fಬುಕ್, ಇನ್‌ಸ್ಟಾಗ್ರಾಮ್ ಗ್ರೂಪ್‌ಗಳನ್ನು ನಾವು ಕಾಣಬಹುದು. ಆದರೆ ಹೀಗೆ ನಾಯಿ ಸಾಕುವ ಅದೆಷ್ಟೋ ಜನರಿಗೆ ಮನೆಯಲ್ಲಿ ನಾಯಿ ಮರಿಗಳು ಜನಿಸುವುದು ಶುಭನಾ? ಅಶುಭನಾ? ಎನ್ನುವ ಪ್ರಶ್ನೆ ಇದ್ದೇ ಇರುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ನಾಯಿ ಕಾಲ ಭೈರವ ದೇವನ ವಾಹನವಾಗಿದ್ದರಿಂದ ಮನೆಯಲ್ಲಿ ಇದರ ಜನನವಾಗುವುದು ತುಂಬಾ ಶುಭವಾಗಿದೆ. ನಾಯಿಗಳು ಹುಟ್ಟಿದ ಮನೆಯಲ್ಲಿ ಸಮೃದ್ಧಿ, ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗಲಿದೆ. ಮನೆಯಲ್ಲಿ ಸದಾ ಸಂತೋಷ ಮಾತ್ರವಲ್ಲದೆ ಮನೆಯಲ್ಲಿನ ನಕರಾತ್ಮಕ ಶಕ್ತಿ ದೂರವಾಗಲಿದೆ.
ಮತ್ತೊಂದು ವಿಶೇಷ ಅಂದರೆ ಜಾತಕದಲ್ಲಿ ಶನಿಯ ಪರಿಣಾಮವನ್ನು ಶುಭವಾಗಿಸಲು ಮನೆಯಲ್ಲಿ ಜನಿಸಿದ ನಾಯಿಗಳಿಗೆ ಸೇವೆ ಮಾಡಬೇಕು. ಇದನ್ನು ಮಾಡುವುದರಿಂದ ಶನಿ ದೇವ ಸಂತೋಷಪಡುತ್ತಾನೆ. ಜೊತೆಗೆ ಅಂತವರನ್ನು ಆಶೀರ್ವದಿಸುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಹೀಗಾಗಿ ಮನೆಯಲ್ಲಿ ನಾಯಿಗಳ ಜನನ ಶುಭ ಸೂಚನೆಯಾಗಿದೆ. ನಾಯಿ ಜನಿಸಿದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಶುಭ ಸುದ್ದಿಗಳು ಕೇಳಿಬರುತ್ತವೆ. ಆ ಮನೆಯು ಸಂತೋಷದ ವಾಸಸ್ಥಾನವಾಗಿರುತ್ತದೆ. ಅಲ್ಲದೆ ಆ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ.












Click it and Unblock the Notifications