Inspiring Woman Story: ರೈಲು ನಿಲ್ದಾಣದಲ್ಲಿ ಮಲಗುತ್ತಿದ್ದ ಪೂಜಾ, ಇಂದು ಸ್ವಂತ ಇ-ಬೈಕ್‌ನಲ್ಲಿ ಡೆಲಿವರಿ ಗರ್ಲ್!
ಕೆಂಪು ಬಣ್ಣದ ಜೋಮ್ಯಾಟೊ ಸಮವಸ್ತ್ರ ಧರಿಸಿದ ಮಹಿಳೆಯೊಬ್ಬರು ಡೆಲಿವರಿ ಮಾಡಲು ಬಂದರೆ, ಈಗಲೂ ಕೆಲವರು ಆಶ್ಚರ್ಯದಿಂದ ನೋಡುವವರಿದ್ದಾರೆ. "ಹೆಣ್ಣು ಮಗಳು ಫುಡ್ ಡೆಲಿವರಿ ಮಾಡ್ತಿದ್ದಾಳಾ?" ಎಂದು ಅಚ್ಚರಿ ಪಡುತ್ತಾರೆ. ಕೆಲವರು, "ನಿಮ್ಮನ್ನು ನೋಡಿ ಹೆಮ್ಮೆ ಆಗುತ್ತೆ" ಎಂದೂ ಹೇಳುತ್ತಾರೆ. "ಏನು ಕಾಲ ಬಂತಪ್ಪ" ಎಂದು ಮೂಗು ಮುರಿಯುವ ಹಿರಿಯರೂ ಇರಬಹುದು.
ಆದರೆ ದೆಹಲಿಯ ಪೂಜಾಗೆ ಬರೀ ಜನರನ್ನು ಅಚ್ಚರಿಗೊಳಿಸುವ ಕೆಲಸ ಅಲ್ಲ. ಇದು ಆಕೆ ಬದುಕನ್ನು ಕಟ್ಟಿಕೊಂಡ ದಾರಿ. ಒಂದು ಕಾಲದಲ್ಲಿ ರೈಲು ನಿಲ್ದಾಣದ ನೆಲದ ಮೇಲೆ ಮಲಗಿದ್ದ ಈಕೆ, ಇಂದು ಸ್ವಂತವಾಗಿ ಬಾಡಿಗೆ ಮನೆ ಮಾಡಿಕೊಂಡು ಬದುಕುತ್ತಿದ್ದಾರೆ. ತನ್ನ ತಾಯಿಗೂ ಹಣ ಕಳುಹಿಸುತ್ತಿದ್ದಾರೆ. ಇದು ಪೂಜಾ ಎಂಬ ಯುವತಿಯ ಬದುಕಿನ ಹೋರಾಟದ ಕಥೆ.

13ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು
ಪೂಜಾ ಜಾರ್ಖಂಡ್‌ನವರು. ಆಕೆ ಕೇವಲ 13 ವರ್ಷದವಳಿದ್ದಾಗ ತಂದೆಯನ್ನು ಕಳೆದುಕೊಂಡರು. ಅದಾದ ಬಳಿಕ ಕುಟುಂಬದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಮನೆಯಲ್ಲಿದ್ದ ಬಡತನ ಎಷ್ಟರ ಮಟ್ಟಿಗೆ ಇತ್ತೆಂದರೆ, ಇಡೀ ದಿನ ಕಷ್ಟಪಟ್ಟು ದುಡಿದರೂ ಕೆಲವೊಮ್ಮೆ ಸಿಗುತ್ತಿದ್ದದ್ದು ಎರಡು ರೊಟ್ಟಿ ಮತ್ತು ಒಂದು ಕಪ್ ಚಹಾ ಮಾತ್ರ.
ಪೂಜಾ ಮತ್ತು ಆಕೆಯ ತಾಯಿ ಮನೆ ಮನೆಗೆ ತೆರಳಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಸಿಕ್ಕ ಕೆಲಸ ಮಾಡುವುದು, ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುವುದು ಅವರ ಬದುಕಾಗಿತ್ತು. ಪೂಜಾ ಅಲ್ಲೇ ಇದ್ದರೆ ಹಾಗೇ ಬದುಕಬೇಕಾಗುತ್ತಿತ್ತೋ ಏನೋ. ಆದರೆ ಆಕೆ ಭವಿಷ್ಯ ಬದಲಾಯಿಸುವ ಸಂಕಲ್ಪ ಮಾಡಿದಳು.
15ನೇ ವಯಸ್ಸಿನಲ್ಲಿ ದೆಹಲಿಗೆ ಒಬ್ಬರೇ ಪ್ರಯಾಣ
ಆಗ ಆಕೆಗೆ ಕೇವಲ 15 ವರ್ಷ. ಆ ವಯಸ್ಸಿನಲ್ಲಿ ಅನೇಕ ಮಕ್ಕಳು ಶಾಲೆ, ಸ್ನೇಹಿತರು ಮತ್ತು ಕುಟುಂಬದ ನಡುವೆ ಬದುಕುತ್ತಿದ್ದರೆ, ಪೂಜಾ ತನ್ನ ಗ್ರಾಮವನ್ನು ಬಿಟ್ಟು ದೆಹಲಿಗೆ ತೆರಳಿದರು. ಜೊತೆಯಲ್ಲಿ ದೊಡ್ಡ ಮೊತ್ತದ ಹಣವೇನೂ ಇರಲಿಲ್ಲ. ದೆಹಲಿಯಲ್ಲಿ ಪರಿಚಯದವರಿರಲಿಲ್ಲ. ಮುಂದೆ ಏನು ಮಾಡಬೇಕು ಎಂಬ ಸ್ಪಷ್ಟ ಯೋಜನೆಯೂ ಇರಲಿಲ್ಲ. ಆದರೂ ದೆಹಲಿಗೆ ಹೋಗುವ ನಿರ್ಧಾರ ಮಾಡಿದರು.
ದೆಹಲಿಗೆ ಬಂದ ಮೊದಲ ದಿನಗಳು ಸುಲಭವಾಗಿರಲಿಲ್ಲ. ಕೆಲವು ರಾತ್ರಿಗಳಲ್ಲಿ ಆಕೆ ರೈಲು ನಿಲ್ದಾಣದ ತಣ್ಣನೆಯ ನೆಲದ ಮೇಲೆಯೇ ಮಲಗಬೇಕಾಯಿತು. ರಾತ್ರಿ ಸೆಕ್ಯುರಿಟಿ, ಪೊಲೀಸರು ಬಂದು ಎಬ್ಬಿಸಿದರೆ ರೈಲಿಗೆ ಕಾಯುತ್ತಿರುವವರಂತೆ ಬೆಂಚ್ ಮೇಲೆ ಕೂತು ಕಾಲ ಕಳೆಯುತ್ತಿದ್ದರು. ಬದುಕು ಆಕೆಗೆ ಯಾವುದೇ ಸುಲಭವಾದ ದಾರಿಯನ್ನು ತೋರಿಸಲಿಲ್ಲ.
ಮನೆ ಕೆಲಸದಿಂದ ಹೋಟೆಲ್‌ವರೆಗೆ
ನಂತರ ಹೊಟ್ಟೆಪಾಡಿಗಾಗಿ ಪೂಜಾ ಸಿಕ್ಕ ಕೆಲಸವನ್ನೆಲ್ಲ ಮಾಡಿದರು. ಮನೆಗಳಲ್ಲಿ ಕ್ಲೀನಿಂಗ್ ಕೆಲಸ ಮಾಡಿದರು. ಅಂಗಡಿಗಳಲ್ಲಿ ಸಾಮಾನು ಕಟ್ಟಿಕೊಡುವ ಕೆಲಸ ಮಾಡಿದರು. ಹೋಟೆಲ್‌ಗಳಲ್ಲೂ ಸಪ್ಲೈ, ಕ್ಲೀನಿಂಗ್ ಕೆಲಸ ಮಾಡಿದರು. ಕೆಲಸ ಯಾವುದು ಎಂಬುದಕ್ಕಿಂತ, ಕೆಲಸ ಸಿಗುತ್ತದೆಯೇ ಎಂಬುದೇ ಮುಖ್ಯವಾಗಿತ್ತು.
ಹೀಗೆ ಬದುಕು ನಿಧಾನವಾಗಿ ಸಾಗುತ್ತಿದ್ದಾಗ ಮತ್ತೊಂದು ದೊಡ್ಡ ಆಘಾತ ಎದುರಾಯಿತು. ಕೊರೊನಾ ಸಾಂಕ್ರಾಮಿಕ ಬಂತು. ಕೊರೊನಾ ಕಾಲದಲ್ಲಿ ಕೆಲಸ ಕಳೆದುಕೊಂಡ ಪೂಜಾ ಮತ್ತೆ ಅತಂತ್ರರಾದರು. ಆದಾಯವಿಲ್ಲದೆ ರಸ್ತೆಯ ಬದಿಯಲ್ಲಿ ಕುಳಿತು ಮುಂದೇನು ಮಾಡಬೇಕು ಎಂದು ಯೋಚಿಸುವ ದಿನಗಳೂ ಬಂದವು.
ಅದೇ ಸಂದರ್ಭದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಆಕೆಗೆ ಒಂದು ಸಲಹೆ ನೀಡಿದರು. "ಡೆಲಿವರಿ ಪಾರ್ಟ್ನರ್ ಆಗಿ ಏಕೆ ಕೆಲಸ ಮಾಡಬಾರದು?" ಆ ಮಾತು ಪೂಜಾ ಜೀವನದ ದಿಕ್ಕನ್ನೇ ಬದಲಿಸಿತು. "ಬೇರೆ ಎಲ್ಲ ಕೆಲಸ ಮಾಡಿದ್ದೇನೆ, ಇದನ್ನೂ ಏಕೆ ಮಾಡಬಾರದು?" ಎಂದುಕೊಂಡರು. ಆ ಸಮಯದಲ್ಲಿ ಮಹಿಳಾ ಡೆಲಿವರಿ ಪಾರ್ಟ್ನರ್‌ಗಳು ಬಹಳ ಕಡಿಮೆ ಇದ್ದರು. ಪೂಜಾ ಕೂಡ ಅದಕ್ಕೂ ಮೊದಲು ಮಹಿಳೆಯೊಬ್ಬರು ಡೆಲಿವರಿ ಮಾಡುವುದನ್ನು ನೋಡಿರಲಿಲ್ಲ.
ಹೀಗೆ ಪೂಜಾ ಜೋಮ್ಯಾಟೊ ಡೆಲಿವರಿ ಪಾರ್ಟ್ನರ್ ಆದರು. ಆರಂಭದಲ್ಲಿ ಕಾರು, ಬೈಕ್ ಯಾವುದೂ ಇರಲಿಲ್ಲ. ಸೈಕಲ್‌ನಲ್ಲೇ ಕೆಲಸ ಆರಂಭಿಸಿದರು. ಒಂದೆರಡಲ್ಲ, ನಾಲ್ಕು ವರ್ಷ ಸೈಕಲ್‌ನಲ್ಲೇ ದೆಹಲಿ ಸುತ್ತಿದರು. ದೆಹಲಿಯ ಟ್ರಾಫಿಕ್, ಬಿಸಿಲು, ಮಳೆ, ದೂರದ ರಸ್ತೆಗಳು- ಯಾವುದೂ ಪೂಜಾ ಪ್ರಯಾಣವನ್ನು ನಿಲ್ಲಿಸಲಿಲ್ಲ.
ಕೆಲವೊಮ್ಮೆ ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದರು. ಅದು ಕೇವಲ ದಿನದ ಖರ್ಚಿಗಾಗಿ ಮಾಡಿದ ಕೆಲಸವಾಗಿರಲಿಲ್ಲ. ತನ್ನ ಜೀವನವನ್ನು ತನ್ನ ಕಾಲ ಮೇಲೆ ನಿಲ್ಲಿಸಿಕೊಳ್ಳಬೇಕೆಂಬ ಅಚಲ ಗುರಿ ಆಕೆಯ ಮುಂದಿತ್ತು. ಪ್ರತಿ ದಿನ ಸೈಕಲ್ ತುಳಿಯುತ್ತಾ ಆಕೆ ತನ್ನ ಭವಿಷ್ಯವನ್ನೇ ನಿಧಾನವಾಗಿ ಕಟ್ಟಿಕೊಳ್ಳುತ್ತಿದ್ದರು.
ಸೈಕಲ್‌ನಿಂದ ಸ್ವಂತ ಇ-ಬೈಕ್‌ಗೆ
ಪೂಜಾ ಕಷ್ಟಪಟ್ಟು ದುಡಿಯುತ್ತಿರುವುದನ್ನು ಗಮನಿಸಿದ ಜೋಮ್ಯಾಟೊದ ವಾರ್ಷಿಕ ಕಾರ್ಯಕ್ರಮವೊಂದರಲ್ಲಿ ಆಕೆಗೆ ವಿಶೇಷ ಗೌರವ ದೊರೆಯಿತು. ಡೆಲಿವರಿ ಪಾರ್ಟ್ನರ್‌ಗಳಿಗೆ ಎಲೆಕ್ಟ್ರಿಕ್ ವಾಹನ ನೀಡುವ ಕಾರ್ಯಕ್ರಮದಲ್ಲಿ ಪೂಜಾ ಅವರ ಪರಿಶ್ರಮವನ್ನು ಗುರುತಿಸಲಾಯಿತು. ಆಕೆಗೆ ಸ್ವಂತ ಇ-ಬೈಕ್ ದೊರೆಯಿತು.
ಇಷ್ಟು ವರ್ಷ ಸೈಕಲ್‌ನಲ್ಲಿ ದೆಹಲಿ ಸುತ್ತಾಡಿದ್ದ ಪೂಜಾ, ಇದೀಗ ಇ-ಬೈಕ್‌ನಲ್ಲಿ ತನ್ನ ಕೆಲಸ ಮುಂದುವರಿಸುತ್ತಿದ್ದಾರೆ. ಇದು ಆಕೆಯ ಪಾಲಿಗೆ ಕೇವಲ ವಾಹನ ಬದಲಾವಣೆಯಲ್ಲ. ಆಕೆಯ ಪರಿಶ್ರಮಕ್ಕೆ ಸಿಕ್ಕ ಒಂದು ಗುರುತಾಗಿತ್ತು. ಇಂದು ಆಕೆ ಯಾರ ಮೇಲೂ ಅವಲಂಬಿತರಾಗಿಲ್ಲ.
ಒಂದು ಕಾಲದಲ್ಲಿ ರೈಲು ನಿಲ್ದಾಣದ ನೆಲದ ಮೇಲೆ ಮಲಗಿದ್ದ ಪೂಜಾ, ಇಂದು ದೆಹಲಿಯಲ್ಲಿ ಸ್ವಂತವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಖರ್ಚುಗಳನ್ನು ತಾನೇ ನೋಡಿಕೊಳ್ಳುತ್ತಾರೆ. ಜಾರ್ಖಂಡ್‌ನಲ್ಲಿರುವ ತಾಯಿಗೂ ಹಣ ಕಳುಹಿಸುತ್ತಾರೆ.


Click it and Unblock the Notifications
