ಗರ್ಭಾವಸ್ಥೆಯಲ್ಲಿ ಎಷ್ಟು ತಿಂಗಳವರೆಗೆ ಖುರ್ಚಿಯಲ್ಲಿ ಕುಳಿತೇ ಕೆಲಸ ಮಾಡಬಹುದು!ಮಹಿಳೆಯರು ತಿಳಿದುಕೊಳ್ಳಲೇಬೇಕಾದ ವಿಷಯ
ಕಚೇರಿ ಎಂದ ಮೇಲೆ ಕುಳಿತುಕೊಂಡೇ ಕಲಸ ಮಾಡಬೇಕು. ಸುಮಾರು ೮ ರಿಂದ ೯ ಗಂಟೆಯ ಅವಧಿವರೆಗೆ ಕುಳಿತೇ ಕೆಲಸ ಮಾಡುವುದು ಹೇಳಿಕೊಳ್ಳುವಷ್ಟು ಸುಲಭವಲ್ಲ. ಅದರಲ್ಲಿಯೂ ಗರ್ಭಿಣಿಯರು ಕಚೇರಿಯಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳಬಹುದೇ? ದೀರ್ಘಕಾಲದವರೆಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಏಳುತ್ತದೆ. ಸಾಮಾನ್ಯ ಮತ್ತು ಆರೋಗ್ಯಕರ ಗರ್ಭಾವಸ್ಥೆಯಲ್ಲಿ, ಹೆಚ್ಚಿನ ಮಹಿಳೆಯರು ಹೆರಿಗೆಗೆ ಕೆಲವು ವಾರಗಳಿರುವವರೆಗೂ ಕೆಲಸ ಮಾಡಬಹುದು. ಆದರೆ ಇದರರ್ಥ ಗಂಟೆಗಟ್ಟಲೆ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸುರಕ್ಷಿತ ಎಂದಲ್ಲ.
ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಕುಳಿತುಕೊಳ್ಳುವುದು ಸುರಕ್ಷಿತವೇ?:
ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ರಕ್ತಸ್ರಾವ, ದೌರ್ಬಲ್ಯ, ಅತಿಯಾದ ವಾಂತಿ ಅಥವಾ ಇನ್ನೂ ಹೆಚ್ಚಿನ ಅಪಾಯದ ಭಯ ಇರುತ್ತದೆ. ಯಾವುದೇ ಗಮನಾರ್ಹ ತೊಡಕುಗಳಿಲ್ಲದಿದ್ದರೆ, ಕಚೇರಿ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದನ್ನು ಸಾಮಾನ್ಯವಾಗಿ ಸುರಕ್ಷಿತವೆಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳಾಗುತ್ತವೆ. ಆದ್ದರಿಂದ ಆಯಾಸ ಮತ್ತು ಬೆನ್ನು ನೋವು ಹೆಚ್ಚು ವೇಗವಾಗಿ ಸಂಭವಿಸಬಹುದು.

ಎರಡನೇ ತ್ರೈಮಾಸಿಕದಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡಬಹುದೇ?:
ಎರಡನೇ ತ್ರೈಮಾಸಿಕವನ್ನು ಗರ್ಭಧಾರಣೆಯ ಅತ್ಯಂತ ಆರಾಮದಾಯಕ ಹಂತ ಎನ್ನಲಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಚೈತನ್ಯಶೀಲರಾಗಿರುತ್ತಾರೆ. ಹಾಗಾಗಿ ಕುಳಿತುಕೊಂಡು ಕೆಲಸ ಮಾಡುವುದು ಸುಲಭವಾಗುತ್ತದೆ. ಆದರೆ, ಸತತ 6-8 ಗಂಟೆಗಳ ಕಾಲ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಪ್ರತಿ 30-40 ನಿಮಿಷಗಳಿಗೊಮ್ಮೆ 5 ನಿಮಿಷಗಳ ವಿರಾಮ ತೆಗೆದುಕೊಳ್ಳಲು ಪ್ರಯತ್ನಿಸಬೇಕು. ನಡೆಯುವುದು, ಕೈ ಕಾಲುಗಳನ್ನು ಹಿಗ್ಗಿಸುವುದು ಮತ್ತು ನೀರು ಕುಡಿಯುವುದು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
ಮೂರನೇ ತ್ರೈಮಾಸಿಕದಲ್ಲಿ ಹೇಗೆ ಕುಳಿತುಕೊಳ್ಳುವುದು ಸುರಕ್ಷಿತ?:
ಮೂರನೇ ತ್ರೈಮಾಸಿಕದಲ್ಲಿ, ಬೆಳೆಯುತ್ತಿರುವ ಹೊಟ್ಟೆಯು ದೀರ್ಘಕಾಲದವರೆಗೆ ಕುಳಿತುಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ. ಏಳನೇ ತಿಂಗಳ ನಂತರ, ಬೆನ್ನು ನೋವು, ಕಾಲುಗಳಲ್ಲಿ ಊತ, ಉಸಿರಾಟದ ತೊಂದರೆ ಮತ್ತು ಶ್ರೋಣಿಯ ಒತ್ತಡದಂತಹ ಸಮಸ್ಯೆಗಳು ಹೆಚ್ಚಾಗಬಹುದು. ಈ ಸಮಯದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗುವುದಿಲ್ಲ, ಆದರೆ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಕಚೇರಿಯಲ್ಲಿ ಕುಳಿತುಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
* ಯಾವಾಗಲೂ ಬೆನ್ನಿಗೆ ಉತ್ತಮ ಆಧಾರವಿರುವ ಕುರ್ಚಿಯನ್ನು ಆಯ್ಕೆ ಮಾಡಿಕೊಳ್ಳಿ.
* ಬೆನ್ನಿನ ಹಿಂದೆ ಒಂದು ಸಣ್ಣ ಕುಶನ್ ಇರಿಸಿ, ಇದು ಕೆಳ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.
* ನಿಮ್ಮ ಪಾದಗಳನ್ನು ನೆಲದ ಮೇಲೆ ಇರಿಸಿ, ಅಗತ್ಯವಿದ್ದರೆ ಪಾದರಕ್ಷೆಯನ್ನು ಬಳಸಿ.
* ಕುಳಿತಿರುವಾಗ ನಿಮ್ಮ ಕಾಲುಗಳನ್ನು ಕ್ರಾಸ್ ಮಾಡಿ ಕುಳಿತುಕೊಳ್ಳಬಾರದು. ಇದು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.
* ಕುತ್ತಿಗೆ ಮತ್ತು ಭುಜಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸ್ಕ್ರೀನ್ ಅನ್ನು ಕಣ್ಣಿನ ಮಟ್ಟದಲ್ಲಿ ಇರಿಸಿ.
ಕುಳಿತುಕೊಂಡು ಕೆಲಸ ಮಾಡುವಾಗ ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ-
* ಪಾದಗಳು ಅಥವಾ ಕೈಗಳಲ್ಲಿ ಅತಿಯಾದ ಊತ
* ಹೊಟ್ಟೆ ನೋವು ಅಥವಾ ಸೆಳೆತ
* ರಕ್ತಸ್ರಾವ
* ತಲೆ ಸುತ್ತುವುದು ಅಥವಾ ದೃಷ್ಟಿ ಮಂದವಾಗುವುದು
* ಮಗುವಿನ ಚಲನೆ ಕಡಿಮೆಯಾಗುವುದು
ಇದಲ್ಲದೆ, 8 ನೇ ತಿಂಗಳ ನಂತರ ಮನೆಯಿಂದ ಕೆಲಸ ಮಾಡಲು ಅಥವಾ ಕಡಿಮೆ ಗಂಟೆಗಳ ಕಾಲ ಕೆಲಸ ಮಾಡುವ ಅವಕಾಶವಿದ್ದರೆ, ಆ ಆಯ್ಕೆಯನ್ನು ಪ್ರಯತ್ನಿಸಿ. ದೀರ್ಘ ಸಮಯ ಕುಳಿತುಕೊಂಡು ಕೆಲಸ ಮಾಡುವುದನ್ನು ತಪ್ಪಿಸಿ.ಅದರಲ್ಲೂ ನೀವು ಮಾಡುವ ಕೆಲಸ ಹೆಚ್ಚು ಒತ್ತಡವನ್ನು ಒಳಗೊಂಡಿದ್ದರೆ ಆ ಕೆಲಸ ಮಾಡದಿರುವುದೇ ಒಳ್ಳೆಯದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications