Expense: ನಿಮ್ಮ ಮನೆಯಲ್ಲೂ ಈ 'ಕಾಣದ ಖರ್ಚು' ಇದೆಯೇ? ವರ್ಷಕ್ಕೆ ಲಕ್ಷಾಂತರ ರೂಪಾಯಿ ಸದ್ದಿಲ್ಲದೆ ಖಾಲಿ ಆದೀತು ಹುಷಾರ್!

Expense: ನಾವು ಯಾವಾಗಲೂ ದೊಡ್ಡ ಖರ್ಚುಗಳ ಬಗ್ಗೆಯೇ ಗಮನ ಕೊಡುತ್ತಿರುತ್ತೇವೆ. ಆದರೆ ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಸಣ್ಣ ಸಣ್ಣ ಖರ್ಚುಗಳು ಸಹ ದೊಡ್ಡ ಮೊತ್ತವನ್ನು ಕಸಿಯಬಹುದು. ತಿಂಗಳಿಗೆ ದೊಡ್ಡ ಖರ್ಚುಗಳಿಗಿಂತ ಪ್ರತಿದಿನ ಗೊತ್ತಾಗದಂತೆ ಆಗುವ ಸಣ್ಣ ಸಣ್ಣ ವೆಚ್ಚಗಳೇ ನಿಮ್ಮ ಉಳಿತಾಯಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯೂ ಇದೆ. ಸಬ್‌ಸ್ಕ್ರಿಪ್ಷನ್, ಆನ್‌ಲೈನ್ ಮೂಲಕ ಮಾಡುವ ಫುಡ್ ಆರ್ಡರ್, ದುಬಾರಿ ವೆಚ್ಚದ ಶಾಪಿಂಗ್, UPI ಮೂಲಕ ಆಗಾಗ ಮಾಡುವ ಪಾವತಿಗಳು ಮತ್ತು ಬಳಸದ ಸೇವೆಗಳಿಗಾಗಿ ಕಟ್ಟುವ ಹಣ ವರ್ಷಾಂತ್ಯಕ್ಕೆ ಲಕ್ಷಾಂತರ ರೂಪಾಯಿಗಳ ವೆಚ್ಚವಾಗಬಹುದು. ಇಂತಹ 'ಕಾಣದ ಖರ್ಚು'ಗಳನ್ನು ಸಮಯಕ್ಕೆ ಗುರುತಿಸಿದರೆ ನಿಮ್ಮ ಹಣವನ್ನು ಸುಲಭವಾಗಿ ಉಳಿಸಬಹುದು.

ಮನೆ ಬಾಡಿಗೆ, ವಿದ್ಯುತ್ ಬಿಲ್, ಮಕ್ಕಳ ಶಿಕ್ಷಣ, ದಿನಸಿ, ಇಂಧನ... ಇವೇ ನಮ್ಮ ದೊಡ್ಡ ಖರ್ಚುಗಳು ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಕುಟುಂಬದ ಹಣಕಾಸನ್ನು ನಿಧಾನವಾಗಿ ದುರ್ಬಲಗೊಳಿಸುವ ಕೆಲವು 'ಅದೃಶ್ಯ ಖರ್ಚುಗಳು' ಇವೆ. ಇವು ದೊಡ್ಡ ಮೊತ್ತದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಸಣ್ಣ ಸಣ್ಣ ಮೊತ್ತಗಳಲ್ಲಿ ದಿನವೂ, ವಾರವೂ, ತಿಂಗಳೂ ಆಗುತ್ತಾ ವರ್ಷಗಳ ನಂತರ ಲಕ್ಷಾಂತರ ರೂಪಾಯಿಗಳನ್ನು ನಮ್ಮ ಕೈಯಿಂದ ಜಾರುವಂತೆ ಮಾಡುತ್ತವೆ. ಹಣಕಾಸು ತಜ್ಞರ ಪ್ರಕಾರ, ಉತ್ತಮ ಸಂಬಳ ಇದ್ದರೂ ಉಳಿತಾಯ ಕಡಿಮೆಯಾಗಲು ಪ್ರಮುಖ ಕಾರಣಗಳಲ್ಲಿ ಒಂದು ಈ ಕಾಣದ ಖರ್ಚುಗಳು. ನೀವು ಯಾವ ಥರದ ಖರ್ಚುಗಳನ್ನು ಮಾಡ್ತೀರಿ ಅಂತ ಇಲ್ಲಿ ನೋಡಿ.

Expense

1. ಕಾಫಿ, ಟೀ, ಸ್ನ್ಯಾಕ್ಸ್...

ಸಣ್ಣ ಖರ್ಚುಗಳು, ಆದರೆ ದೊಡ್ಡ ಮೊತ್ತವಾಗುತ್ತದೆ. ಕಚೇರಿಗೆ ಹೋಗುವಾಗ ಪ್ರತಿದಿನ ₹150ಕ್ಕೆ ಕಾಫಿ ಮತ್ತು ತಿಂಡಿ ತೆಗೆದುಕೊಳ್ಳುವುದು ಸಾಮಾನ್ಯ ಅಭ್ಯಾಸವಾಗಿದೆ. ಕೇವಲ ₹150 ಅಷ್ಟೇ ಎಂದು ನಾವು ಯೋಚಿಸುತ್ತೇವೆ. ಆದರೆ ತಿಂಗಳಿಗೆ ಸುಮಾರು ₹4,500. ವರ್ಷಕ್ಕೆ ₹54,000. ಐದು ವರ್ಷಗಳಲ್ಲಿ ಇದು ₹2.7 ಲಕ್ಷವಾಗುತ್ತದೆ. ಇದೇ ಹಣವನ್ನು ಹೂಡಿಕೆ ಮಾಡಿದ್ದರೆ ಅದರ ಮೌಲ್ಯ ಇನ್ನೂ ಹೆಚ್ಚಿರುತ್ತಿತ್ತು.

2. ಆನ್‌ಲೈನ್ ಚಂದಾದಾರಿಕೆಗಳು

ಇಂದು ಬಹುತೇಕ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಒಟಿಟಿ ಸೇವೆಗಳಿವೆ. ಜೊತೆಗೆ ಮ್ಯೂಸಿಕ್ ಆ್ಯಪ್, ಕ್ಲೌಡ್ ಸ್ಟೋರೇಜ್, ಪ್ರೀಮಿಯಂ ಮೊಬೈಲ್ ಆ್ಯಪ್‌ಗಳು, ಜಿಮ್ ಸದಸ್ಯತ್ವ, ಆನ್‌ಲೈನ್ ಕೋರ್ಸ್‌ಗಳು... ಅವುಗಳಲ್ಲಿ ಕೆಲವು ಬಳಸುವುದೇ ಇಲ್ಲ. ತಿಂಗಳಿಗೆ ₹299, ₹499, ₹999 ಎಂದು ಹಣ ಕಡಿತವಾಗುತ್ತಲೇ ಇರುತ್ತದೆ. ಒಟ್ಟಿನಲ್ಲಿ ವರ್ಷಕ್ಕೆ ₹15,000 ರಿಂದ ₹40,000ರವರೆಗೆ ವ್ಯರ್ಥವಾಗಿ ಹೋಗಬಹುದು.

3. ಆಹಾರ ಡೆಲಿವರಿ ಮತ್ತು ಅನುಕೂಲ ಶುಲ್ಕ

ಹೊರಗೆ ಊಟ ಮಾಡುವುದಕ್ಕಿಂತ ಈಗ ಮೊಬೈಲ್‌ನಲ್ಲಿ ಆರ್ಡರ್ ಮಾಡುವುದು ಸುಲಭವಾಗಿದೆ. ಆದರೆ ಒಂದು ಆರ್ಡರ್‌ನಲ್ಲಿ ಆಹಾರದ ಬೆಲೆ ಮಾತ್ರವಲ್ಲ. ಡೆಲಿವರಿ ಶುಲ್ಕ, ಪ್ಲಾಟ್‌ಫಾರ್ಮ್ ಶುಲ್ಕ, ಪ್ಯಾಕಿಂಗ್ ಶುಲ್ಕ, ತೆರಿಗೆಗಳು, ಟಿಪ್ - ಎಲ್ಲ ಸೇರಿ ₹80ರಿಂದ ₹200ವರೆಗೆ ಹೆಚ್ಚುವರಿ ವೆಚ್ಚವಾಗುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಆರ್ಡರ್ ಮಾಡಿದರೂ ವರ್ಷಕ್ಕೆ ಸಾವಿರಾರು ರೂಪಾಯಿ ಹೆಚ್ಚುವರಿಯಾಗಿ ಖರ್ಚಾಗುತ್ತದೆ.

4. ಆನ್‌ಲೈನ್ ಆಫರ್‌ಗಳ ಬಲೆ

50% ರಿಯಾಯಿತಿ, ಇಂದು ಮಾತ್ರ, ಒಂದು ಕೊಳ್ಳಿ, ಇನ್ನೊಂದು ಉಚಿತ ಎಂಬ ಸಂದೇಶಗಳು ಖರೀದಿಸಲು ಪ್ರೇರೇಪಿಸುತ್ತವೆ. ಆದರೆ ನಮಗೆ ಅಗತ್ಯವಿಲ್ಲದ ವಸ್ತುವನ್ನು ಕಡಿಮೆ ಬೆಲೆಗೆ ಖರೀದಿಸಿದರೂ ಅದು ಉಳಿತಾಯವಲ್ಲ. ಅದು ಕೂಡ ಒಂದು ಖರ್ಚೇ.

5. ಡಿಜಿಟಲ್ ಪಾವತಿಯ ಪರಿಣಾಮ

ಯುಪಿಐ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ಹಣ ಪಾವತಿಸುವುದು ತುಂಬಾ ಸುಲಭವಾಗಿದೆ. ಹಣ ಕೈಯಿಂದ ಹೋಗುತ್ತಿರುವ ಅನುಭವ ಕಡಿಮೆಯಾಗುವುದರಿಂದ ಸಣ್ಣ ಖರ್ಚುಗಳು ಹೆಚ್ಚಾಗುತ್ತವೆ. ₹99, ₹199, ₹349 ಎಂದು ಅನೇಕ ಬಾರಿ ಪಾವತಿಸಿದರೂ ಅದರ ಒಟ್ಟು ಮೊತ್ತದ ಬಗ್ಗೆ ತಿಂಗಳ ಕೊನೆಯಲ್ಲಿ ಮಾತ್ರ ಅರಿವಾಗುತ್ತದೆ.

6. ಮರೆತುಹೋಗುವ ಸದಸ್ಯತ್ವಗಳು

ಕೆಲವರು ಜಿಮ್ ಸದಸ್ಯತ್ವ ಪಡೆಯುತ್ತಾರೆ. ಕೆಲವರು ಆರೋಗ್ಯ ಆ್ಯಪ್‌ಗಳಿಗೆ ವಾರ್ಷಿಕ ಶುಲ್ಕ ಪಾವತಿಸುತ್ತಾರೆ. ಆದರೆ ಕೆಲವು ವಾರಗಳ ಬಳಿಕ ಅವನ್ನು ಬಳಸುವುದೇ ಇಲ್ಲ. ಹಣ ಮಾತ್ರ ಈಗಾಗಲೇ ಪಾವತಿಯಾಗಿರುತ್ತದೆ. ಇದು ಅನೇಕ ಕುಟುಂಬಗಳಲ್ಲಿ ಸಾಮಾನ್ಯವಾಗಿ ನಡೆಯುವ ಅದೃಶ್ಯ ಖರ್ಚು.

7. ತಡ ಶುಲ್ಕ ಮತ್ತು ದಂಡ

ಕ್ರೆಡಿಟ್ ಕಾರ್ಡ್ ಬಿಲ್, ವಿದ್ಯುತ್ ಬಿಲ್, ಮೊಬೈಲ್ ಬಿಲ್ ಅಥವಾ ವಾಹನ ವಿಮೆ ಸಮಯಕ್ಕೆ ಪಾವತಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಒಂದು ಬಾರಿ ₹300 ಅಥವಾ ₹500 ಎಂದು ಕಾಣಬಹುದು. ಆದರೆ ವರ್ಷಪೂರ್ತಿ ಇಂತಹ ತಪ್ಪುಗಳು ಮರುಕಳಿಸಿದರೆ ಸಾವಿರಾರು ರೂಪಾಯಿಗಳು ಅನಗತ್ಯವಾಗಿ ವ್ಯಯವಾಗುತ್ತವೆ.

8. ಸಣ್ಣ ಇಎಂಐಗಳ ಬಲೆ

ತಿಂಗಳಿಗೆ ಕೇವಲ ₹799. ಈ ಒಂದು ವಾಕ್ಯ ಅನೇಕ ಖರೀದಿಗಳಿಗೆ ಕಾರಣವಾಗುತ್ತದೆ. ಮೊಬೈಲ್, ಸ್ಮಾರ್ಟ್ ವಾಚ್, ಹೆಡ್‌ಫೋನ್, ಗೃಹೋಪಯೋಗಿ ವಸ್ತುಗಳು... ಪ್ರತಿಯೊಂದಕ್ಕೂ ಪ್ರತ್ಯೇಕ ಇಎಂಐ ಇದ್ದರೆ ತಿಂಗಳ ಆದಾಯದ ದೊಡ್ಡ ಭಾಗ ಇದೇ ರೀತಿಯ ಸಣ್ಣ ಪಾವತಿಗಳಲ್ಲಿ ಕರಗುತ್ತದೆ.

ಇವುಗಳನ್ನು ಹೇಗೆ ನಿಯಂತ್ರಿಸಬಹುದು?

ತಜ್ಞರ ಸಲಹೆಯಂತೆ ತಿಂಗಳಿಗೆ ಒಮ್ಮೆ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಯುಪಿಐ ಖರ್ಚುಗಳನ್ನು ಪರಿಶೀಲಿಸಿ.

ಬಳಸದ ಚಂದಾದಾರಿಕೆಗಳನ್ನು ರದ್ದುಪಡಿಸಿ.

ಆನ್‌ಲೈನ್ ಖರೀದಿಗೆ ತಿಂಗಳ ಮಿತಿಯನ್ನು ನಿಗದಿಪಡಿಸಿ.

ಪ್ರತಿ ಸಣ್ಣ ಖರ್ಚನ್ನೂ ದಾಖಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ದೊಡ್ಡ ಖರೀದಿಗೆ ಮುನ್ನ "ಇದು ನನಗೆ ನಿಜವಾಗಿಯೂ ಅಗತ್ಯವೇ?" ಎಂದು ಒಮ್ಮೆ ಪ್ರಶ್ನಿಸಿಕೊಳ್ಳಿ.

ಪ್ರತಿದಿನ ಗಮನಿಸದ ₹100, ₹200, ₹300ಗಳೇ ವರ್ಷಗಳ ನಂತರ ಲಕ್ಷಾಂತರ ರೂಪಾಯಿಗಳಾಗುತ್ತವೆ. ಉತ್ತಮ ಆದಾಯ ಗಳಿಸುವುದಕ್ಕಿಂತ, ಕಾಣದ ಖರ್ಚುಗಳನ್ನು ಗುರುತಿಸಿ ನಿಯಂತ್ರಿಸುವುದು ಹಣಕಾಸಿನ ಯಶಸ್ಸಿನ ಮೊದಲ ಹೆಜ್ಜೆ. ಹಣವನ್ನು ಸಂಪಾದಿಸುವುದು ಸಂಪತ್ತಿನ ಆರಂಭ ಮಾತ್ರ. ಸೋರಿಕೆಯಾಗದಂತೆ ಕಾಪಾಡಿಕೊಳ್ಳುವುದೇ ನಿಜವಾದ ಸಂಪತ್ತಿನ ರಹಸ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+