ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು..?
ಗರ್ಭಧರಿಸಿ ಮಗುವಿಗೆ ಜನ್ಮ ನೀಡುವುದು ಹೆಣ್ಣಿನ ಜೀವನದಲ್ಲೊಂದು ಪ್ರಮುಖ ಘಟ್ಟ. ಈ ಹಂತದಲ್ಲಿ ಆಕೆಯನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಪೋಷಕರ ಜವಬ್ದಾರಿಯಾಗಿರುತ್ತದೆ. ಜತೆಗೆ ಗರ್ಭಿಣಿಯರು ಕೂಡ ತಮ್ಮ ಆರೋಗ್ಯ ಮತ್ತು ನಿತ್ಯದ ಚಟುವಟಿಕೆಯತ್ತ ನಿಗಾ ವಹಿಸಬೇಕಾಗುತ್ತದೆ. ಮೊದಲು ಇದ್ದಂತೆ ಹೇಗೇಗೋ ಇರಲು ಸಾಧ್ಯವಿಲ್ಲ. ಕಾರಣ ಮತ್ತೊಂದು ಜೀವ ಗರ್ಭದಲ್ಲಿ ಬೆಳೆಯುತ್ತಿರುವುದರಿಂದ ತಾನು ಆರೋಗ್ಯವಾಗಿದ್ದರೆ ಮಾತ್ರ ಮಗು ಆರೋಗ್ಯವಾಗಿ ಹುಟ್ಟಲು ಸಾಧ್ಯವಾಗುತ್ತದೆ ಎಂಬುದನ್ನು ಮರೆಯಬಾರದು.
ಗರ್ಭಾವಸ್ಥೆಯಲ್ಲಿ ಮನೆಯಿಂದ ಹೊರಗೆ ಹೋಗಿ ದುಡಿಯುವ ಮಹಿಳೆಯರಂತು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮನೆ ಮತ್ತು ಕಚೇರಿಯ ಕೆಲಸಗಳ ಒತ್ತಡದಲ್ಲಿ ತನ್ನ ಆರೋಗ್ಯದ ಬಗ್ಗೆ ಗಮನಹರಿಸಲು ಕಷ್ಟವಾಗಬಹುದು. ಆದರೂ ಇರುವ ಕಾಲಾವಧಿಯಲ್ಲಿ ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಒತ್ತಡ ರಹಿತವಾಗಿ ದಿನ ಕಳೆಯಲು ಪ್ರಯತ್ನಿಸಬೇಕು. ಏಕೆಂದರೆ ಗರ್ಭಾವಸ್ಥೆಯ ದಿನಗಳು ಮಾಮೂಲಿಯಾಗಿರುವುದಿಲ್ಲ. ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಸೇವನೆ ಬಗ್ಗೆಯೂ ಒಂದಷ್ಟು ತಿಳಿದುಕೊಂಡು ಅದರಂತೆ ಶಿಸ್ತನ್ನು ರೂಢಿಸಿಕೊಳ್ಳಬೇಕು.

ವೈದ್ಯರ ಸಲಹೆ ಪ್ರಕಾರ ಹೇಳುವುದಾದರೆ ಗರ್ಭಿಣಿಯರಿಗೆ ಕೆಲವೊಮ್ಮೆ ಹೊಟ್ಟೆ ತುಂಬಿದ ಅನುಭವವಾಗಿ ಊಟವೇ ಬೇಡ ಎಂದೆನಿಸಬಹುದು. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವರು ಊಟವನ್ನೇ ತ್ಯಜಿಸಿ ಬಿಡುತ್ತಾರೆ. ಈ ರೀತಿ ಮಾಡುವುದು ಒಳ್ಳೆಯ ಲಕ್ಷಣವಲ್ಲ. ಬದಲಿಗೆ ಸ್ವಲ್ಪ ಪ್ರಮಾಣದ ಆಹಾರವನ್ನು ಆಗಾಗ್ಗೆ ಸೇವಿಸುವ ಕ್ರಮವನ್ನು ರೂಢಿಸಿಕೊಳ್ಳಬೇಕು. ಪ್ರತಿನಿತ್ಯ 8ರಿಂದ12 ಲೋಟಗಳಷ್ಟು ನೀರನ್ನು ಕಡ್ಡಾಯವಾಗಿ ಸೇವಿಸಬೇಕು. ಇದರಿಂದ ಮಲವಿಸರ್ಜನೆ ಸರಾಗವಾಗಿ ಆಗಲು ಸಾಧ್ಯವಾಗುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ಹಾಲು ಸೇವಿಸಿ
ಗರ್ಭಿಣಿಯರ ಆರೋಗ್ಯಕ್ಕೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಗತ್ಯ ಇರುವ ಕಾರಣ ಅದು ದೊರೆಯಲು ದಿನಕ್ಕೆ ಕನಿಷ್ಟ 600ಮಿ.ಲೀ.ನಷ್ಟಾದರೂ ಹಾಲು ಕುಡಿಯಬೇಕು. ಗರ್ಭಾವಸ್ಥೆಯಲ್ಲಿದ್ದಾಗ ಮಲಬದ್ಧತೆ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಸುಲಭವಾಗಿ ಜೀರ್ಣವಾಗುವ ಆಹಾರಗಳಿಗೆ ಆದ್ಯತೆ ನೀಡಬೇಕು. ಮಸಾಲೆಯುಕ್ತ ಆಹಾರವನ್ನು ದೂರ ಇಡಬೇಕು. ಇದು ಜೀರ್ಣಕ್ರಿಯೆಗೆ ತೊಂದರೆ ನೀಡುವುದಲ್ಲದೆ, ಎದೆಯುರಿಗೂ ಕಾರಣವಾಗಿಬಿಡುತ್ತದೆ. ಆದ್ದರಿಂದ ಉಂಡೆಕಾಳುಗಳು, ಬೇಳೆ, ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳು, ನಾರಿನಂಶ ಇರುವ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
ಕೆಲವೊಮ್ಮೆ ವಾಂತಿ ಮತ್ತು ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಇಂಥ ಸಂದರ್ಭ ಕೆಲವು ಆರೋಗ್ಯಕ್ಕೆ ಹಿಡಿಸದ ಪದಾರ್ಥಗಳನ್ನು ದೂರ ಇಡಬೇಕು. ಅದರಲ್ಲೂ ಕರಿದ ತಿಂಡಿ, ಸಂಸ್ಕರಿಸಿಟ್ಟ ಪದಾರ್ಥಗಳನ್ನು ಸೇವಿಸದಿರುವುದು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ಕಾಫಿ, ಟೀ, ಕೋಲ ಕುಡಿಯುವುದು, ಚಾಕೋಲೆಟ್ ತಿನ್ನುವುದು ಅಪಾಯಕಾರಿ. ಇವುಗಳಲ್ಲಿರುವ ಕೆಫಿನ್ ದೇಹಕ್ಕೆ ಅಗತ್ಯವಿರುವ ಕಬ್ಬಿಣಾಂಶವನ್ನು ತಡೆದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆರೋಗ್ಯದತ್ತ ಕಾಳಜಿ ಸದಾ ಇರಲಿ
ಸಾಕಷ್ಟು ಕ್ಯಾಲೋರಿಯ ಆಹಾರವನ್ನು ಸೇವಿಸಬೇಕು. ಇದರಿಂದ ಗರ್ಭಧಾರಣೆಯ ಅವಧಿಯಲ್ಲಿ ಸಾಕಷ್ಟು ಕೊಬ್ಬಿನಾಂಶ ಸಂಗ್ರಹವಾಗಿ ಹೆರಿಗೆ ಬಳಿಕ ಮಗುವಿಗೆ ಹಾಲುಣಿಸುವ ಸಂದರ್ಭ ಉಪಯೋಗಕ್ಕೆ ಬರುತ್ತದೆ. ಊತ ಅಥವಾ ಬಾವು ಸಮಸ್ಯೆ, ಅಧಿಕ ರಕ್ತದೊತ್ತಡ ಇರುವವರು ಹೊರತು ಪಡಿಸಿ ಉಳಿದವರು ಸಾಕಷ್ಟು ಸೋಡಿಯಂ ಅಂಶವುಳ್ಳ ಆಹಾರವನ್ನು ಸೇವಿಸಬೇಕು. ಇದರಿಂದ ಆರೋಗ್ಯ ಹೆಚ್ಚುತ್ತದೆ.
ಇನ್ನು ವಾಕಿಂಗ್, ವ್ಯಾಯಾಮ ಮಾಡುವರು ಅದನ್ನು ಅಡ್ಡಿಯಿಲ್ಲದೆ ಮುಂದುವರೆಸಬಹುದು. ಆದರೆ ಅತಿಯಾಗಿ ಮಾಡಬಾರದು. ದೈಹಿಕ ಶ್ರಮದ ಕೆಲಸ ಮಾಡುವ ಮಹಿಳೆಯರು ತಮಗೆ ಸಿಕ್ಕ ಅವಧಿಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಗರ್ಭಾವಸ್ಥೆ ಸಮಯದಲ್ಲಿ ದೂರದ ಪ್ರಯಾಣ, ಪ್ರವಾಸ ಅಷ್ಟೊಂದು ಒಳ್ಳೆಯದಲ್ಲ. ಆಸ್ಪತ್ರೆಗೆ ಸಮೀಪದಲ್ಲೇ ಇರುವುದು, ಆಗಾಗ್ಗೆ ವೈದ್ಯರ ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಗರ್ಭಿಣಿಯರು ಆರೋಗ್ಯದ ವಿಚಾರದಲ್ಲಿ ಎಷ್ಟು ಕಾಳಜಿ ವಹಿಸುತ್ತೀರೋ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಒಳ್ಳೆಯದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.












Click it and Unblock the Notifications