ಜೆನ್ ಜಿಯನ್ನು ಕಾಡುತ್ತಿರುವ ಹೇರ್ ಲಾಸ್: ಕಾರಣಗಳು ಹಲವು, ಪರಿಹಾರವಿದ್ಯಾ?
ತಲೆ ಮೇಲೆ ಕೂದಲು ಕಡಿಮೆಯಾಗುತ್ತಿರುವುದು (Hair Fall) ಕಾಣಿಸುವುದು, ಬಾಚುವಾಗ ಕೈಗೆ ಹೆಚ್ಚು ಕೂದಲು ಬರುವುದು, ಸ್ನಾನ ಮಾಡಿದ ನಂತರ ನೆಲದ ಮೇಲೆ ಕೂದಲು ಕಾಣಿಸುವುದೆಲ್ಲವೂ ಯುವಜನರ ಚಿಂತೆಗೆ ಕಾರಣವಾಗಿವೆ.
ಒಂದು ಕಾಲದಲ್ಲಿ ಕೂದಲು ಉದುರುವುದು ಎಂದರೆ ವಯಸ್ಸಾದ ನಂತರ ಎದುರಾಗುವ ಸಮಸ್ಯೆ ಎಂಬ ಸಾಮಾನ್ಯ ಕಲ್ಪನೆ ಇತ್ತು. 60 ವರ್ಷ ದಾಟಿದ ನಂತರ ಕೂದಲು ಬಿಳಿಯಾಗುವುದು, ತೆಳುವಾಗುವುದು ಸಹಜ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹದಿಹರೆಯದಿಂದಲೇ, 20ರ ಹರೆಯದಲ್ಲೇ ಹಾಗೂ 30ರ ಆರಂಭದಲ್ಲೇ ಅನೇಕ ಯುವಕರು ಕೂದಲು ಉದುರುವಿಕೆಯ ಸಮಸ್ಯೆ ಎದುರಿಸುತ್ತಿದ್ದಾರೆ.

'ಹದಿಹರೆಯದಿಂದ ಹಿಡಿದು 20 ಹಾಗೂ 30ರ ಆರಂಭದಲ್ಲಿರುವ ಯುವಕರಲ್ಲೇ ಇತ್ತೀಚೆಗೆ ಕೂದಲು ಉದುರುವಿಕೆ ಪ್ರಕರಣಗಳು ಹೆಚ್ಚುತ್ತಿವೆ," ಎನ್ನುವ ವಾಸವಿ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಅಭಿರಾಮ್ ಆರ್, ಆಹಾರ ಮತ್ತು ಪೌಷ್ಟಿಕಾಂಶ, ಜೀವನಶೈಲಿ, ಸಾಮಾನ್ಯ ಆರೋಗ್ಯ ಹಾಗೂ ಹಾರ್ಮೋನ್ ಏರುಪೇರು ಈ ಸಮಸ್ಯೆಗೆ ಮೂಲ ಕಾರಣವೆನ್ನುತ್ತಾರೆ.
ಜೀವನಶೇಲಿ Hair Fallಗೆ ಹೇಗೆ ಕಾರಣವಾಗುತ್ತದೆ?
ಯುವಜನರ ಜೀವನವನ್ನು ನೋಡಿದರೆ, ಬೆಳಗ್ಗೆ ಕೆಲಸ (work) ಅಥವಾ ಕಾಲೇಜಿಗೆ ಓಡಾಟ, ಸಮಯಕ್ಕೆ ಸರಿಯಾಗಿ ಊಟ ಮಾಡೋಲ್ಲ, ತೂಕ ಇಳಿಸಿಕೊಳ್ಳಲು ಡಯಟ್, ರಾತ್ರಿ ತಡವಾಗಿ ಮಲಗುವುದು, ದಿನವಿಡೀ ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಕುಳಿತುಕೊಳ್ಳುವುದು ಸಾಮಾನ್ಯ. ಇವೆಲ್ಲವೂ ನಮ್ಮ ರೂಟೀನ್ ದಿನಚರಿಯನ್ನು ಹೆಚ್ಚು ಕಡಿಮೆ ಮೇಲೆ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ.
ಹೊತ್ತಿಗೊತ್ತಿಗೆ ಊಟ ಮಾಡದಿರುವುದು
ಈಗಿನ ಯುವಕರಿಗೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸೋಮಾರಿತನ. ಹೊರಗಿನ ಫುಡ್ ತರಿಸಿಕೊಂಡು ತಿನ್ನುವಷ್ಟು ಪುರುಸೊತ್ತಿರೋಲ್ಲ. ಇಲ್ಲವೇ ಬೇಕಾ ಬಿಟ್ಟಿ ಬೆಳೆದ ದೇಹದ ಬೊಜ್ಜು ಕರಗಿಸಲು ಡಯಟ್ ಮೊರೆ ಹೋಗೋದೂ ಕಾಮನ್. ಹಾಗಾಗಿ ಹೊತ್ತಿಗೊತ್ತಿಗೆ ಊಟ ಮಿಸ್ ಆಗುತ್ತದೆ. ಜೊತೆಗೆ ಕೆಲಸದ ಒತ್ತಡವೂ ಟೈಮಿಗೆ ಸರಿಯಾಗಿ ಊಟ ಮಾಡುವುದನ್ನು ತಪ್ಪಿಸುತ್ತದೆ. ಅಗತ್ಯ ಪೋಷಕಾಂಶಗಳು ದೇಹಕ್ಕೆ ಸೇರದೇ ಹೇರ್ ಫಾಲ್ ಪ್ರಮಾಣ ಹೆಚ್ಚುತ್ತಿದೆ.
ಕೂದಲಿನ ಅಂಗಾಂಶದ ಬಗ್ಗೆ ನಿಮಗೆಷ್ಟು ಗೊತ್ತು?
ಕೂದಲಿನ (hair) ಕಿರುಚೀಲಗಳು ನಿರಂತರವಾಗಿ ಸಕ್ರಿಯವಾಗಿರುವ ಅಂಗಾಂಶ. ಹೀಗಾಗಿ ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದಿದ್ದರೆ ಕೂದಲಿನ ಮೇಲೆ ನೇರವಾಗಿ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಸಮತೋಲಿತ ಆಹಾರದಲ್ಲಿ ಪ್ರೋಟೀನ್ ಮತ್ತು ಕಬ್ಬಿಣಾಂಶ ಪ್ರಮುಖ ಪಾತ್ರ ವಹಿಸುತ್ತವೆ. ಕಬ್ಬಿಣದ ಕೊರತೆಯಿಂದಲೂ ಕೂದಲು ಉದರೋದು ಹೆಚ್ಚಬಹುದು. ಅದೇ ರೀತಿ, ತೀವ್ರವಾಗಿ ಡಯಟ್ ಮಾಡುವುದು ಅಥವಾ ಅಲ್ಪ ಸಮಯದಲ್ಲಿ ಹೆಚ್ಚಿನ ತೂಕ ಕಳೆದುಕೊಳ್ಳುವುದರಿಂದ 'ಟೆಲೋಜನ್ ಎಫ್ಲುವಿಯಂ' ಎಂಬ ಸಮಸ್ಯೆ ಉಂಟಾಗಬಹುದು. ಈ ಸ್ಥಿತಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬೇಗನೆ ಉದರುತ್ತದೆ.
ಆದರೆ ಕೂದಲು ಉದುರುತ್ತಿದೆ ಎಂದ ಮಾತ್ರಕ್ಕೆ ದೇಹದಲ್ಲಿ ವಿಟಮಿನ್ ಅಥವಾ ಖನಿಜಾಂಶಗಳ ಕೊರತೆಯಿದೆ ಎಂದು ಸ್ವತಃ ನಿರ್ಧರಿಸಿಕೊಳ್ಳಬಾರದು. ವೈದ್ಯಕೀಯ ಪರೀಕ್ಷೆಯಲ್ಲಿ ಕೊರತೆ ಕಂಡು ಬಂದಾಗ ಅಥವಾ ವೈದ್ಯರು ಸಲಹೆ ಮೇರೆಗೆ ಅಗತ್ಯ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದು ಒಳಿತು.
ನಿದ್ರೆ ಕಡಿಮೆ, ಒತ್ತಡ ಹೆಚ್ಚು
"ಇನ್ನೊಂದು ದಿನ ನೋಡೋಣ" ಎಂದು ಕೆಲಸವನ್ನು ಮುಂದೂಡುತ್ತಾ ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗುವುದು, ನಿರಂತರವಾಗಿ ಕೆಲಸದ ಒತ್ತಡದಲ್ಲಿರುವುದು-ಇದು ಇಂದಿನ ಯುವಜನರ ಸಾಮಾನ್ಯ ಜೀವನಶೈಲಿಯಾಗಿದೆ. ಆಹಾರದ ಜೊತೆಗೆ ನಿದ್ರೆಯ ಕೊರತೆ, ದೀರ್ಘಕಾಲದ ಮಾನಸಿಕ ಒತ್ತಡ ಹಾಗೂ ದೈಹಿಕ ಚಟುವಟಿಕೆಯ ಕೊರತೆ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಸಾಕಷ್ಟು ನಿದ್ರೆ, ನಿಯಮಿತ ವ್ಯಾಯಾಮ ಹಾಗೂ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ನಿರ್ವಹಿಸುವುದು ಕೂದಲಿನ ಆರೋಗ್ಯಕ್ಕೂ ಮುಖ್ಯ ಎನ್ನುತ್ತಾರೆ ಡಾ. ಅಭಿರಾಮ್ .
ಮಾನಸಿಕ ಒತ್ತಡದಿಂದಲೂ 'ಟೆಲೋಜನ್ ಎಫ್ಲುವಿಯಂ' ಉಂಟಾಗಬಹುದು. ಆದರೆ ಇಲ್ಲಿ ಒಂದು ಪ್ರಮುಖ ವಿಷಯವಿದೆ. ಒತ್ತಡಕ್ಕೆ ಒಳಗಾದ ತಕ್ಷಣವೇ ಕೂದಲು ಉದುರುವುದಿಲ್ಲ. ಹಲವು ವಾರಗಳು ಅಥವಾ ತಿಂಗಳ ನಂತರ ಕೂದಲು ಉದುರಲು ಆರಂಭವಾಗಬಹುದು. ಹೀಗಾಗಿ "ನಾನು ಈಗ ಒತ್ತಡದಲ್ಲಿದ್ದೇನೆ, ಅದಕ್ಕೇ ಕೂದಲು ಉದುರುತ್ತಿದೆ" ಎಂದು ತಕ್ಷಣ ಕಾರಣ ಗುರುತಿಸುವುದು ಕಷ್ಟ. ನಿರ್ದಿಷ್ಟ ಸಮಯಕ್ಕೆ ಮಲಗುವುದು ಅಥವಾ ದಿನಕ್ಕೆ 10,000 ಹೆಜ್ಜೆ ನಡೆಯುವುದು ಕೂದಲಿನ ಆರೋಗ್ಯಕ್ಕೆ ನೇರವಾಗಿ ಒಳ್ಳೆಯದು ಎಂಬುದಕ್ಕೆ ಯಾವುದೇ ವೈದ್ಯಕೀಯ ಸಾಕ್ಷ್ಯಗಳಿಲ್ಲ. ಆದರೆ ಒಟ್ಟಾರೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮುಖ್ಯ.
ದೈಹಿಕ ಸಮಸ್ಯೆಯ ಸೂಚಕವೂ ಹೌದು:
ಕೆಲವೊಮ್ಮೆ ಕೂದಲು ಉದುರುವುದು ಕೇವಲ ಕೂದಲಿನ ಸಮಸ್ಯೆಯಾಗಿರುವುದಿಲ್ಲ. ದೇಹದೊಳಗೆ ನಡೆಯುತ್ತಿರುವ ಮತ್ತೊಂದು ಆರೋಗ್ಯ ಸಮಸ್ಯೆಯ ಮೊದಲ ಲಕ್ಷಣವೂ ಆಗಿರಬಹುದು. ಪದೇಪದೇ ಅನಾರೋಗ್ಯಕ್ಕೆ ಒಳಗಾಗುವುದು, ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು ಅಥವಾ ಕಬ್ಬಿಣಾಂಶದ ಕೊರತೆ ಇದ್ದರೂ ಕೂದಲು ಉದುರುವಿಕೆ ಹೆಚ್ಚಾಗಬಹುದು.
ಥೈರಾಯ್ಡ್ ಸಮಸ್ಯೆ ಮತ್ತೊಂದು ಕಾರಣ
ಆದ್ದರಿಂದ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ಅದರ ಹಿಂದೆ ಆರೋಗ್ಯದ ಮತ್ತೊಂದು ಕಾರಣವಿದೆಯೇ ಎಂಬುದನ್ನೂ ಪರಿಶೀಲಿಸುವ ಅಗತ್ಯವಿದೆ. ರೋಗಿಯ ಲಕ್ಷಣಗಳನ್ನು ಆಧರಿಸಿ ವೈದ್ಯರು ಪೌಷ್ಟಿಕಾಂಶ ಮತ್ತು ಥೈರಾಯ್ಡ್ ತಪಾಸಣೆಗಳನ್ನು ಸೂಚಿಸಬಹುದು. ಅಗತ್ಯವಿದ್ದರೆ ರಕ್ತದ ಪ್ರಮಾಣ, ಫೆರಿಟಿನ್ (ಕಬ್ಬಿಣದ ಸಂಗ್ರಹ) ಹಾಗೂ ಥೈರಾಯ್ಡ್ ಪರೀಕ್ಷೆಗಳನ್ನು ಮಾಡಿಸಬಹುದು. ಆದರೆ ಎಲ್ಲರಿಗೂ ಒಂದೇ ರೀತಿಯ ವಿಟಮಿನ್ ಅಥವಾ ಹಾರ್ಮೋನ್ ಪರೀಕ್ಷೆಗಳ ಅಗತ್ಯವಿರುವುದಿಲ್ಲ. ರೋಗಿಯ ವೈದ್ಯಕೀಯ ಇತಿಹಾಸ ಮತ್ತು ಲಕ್ಷಣಗಳನ್ನು ಆಧರಿಸಿ ಯಾವ ಪರೀಕ್ಷೆ ಅಗತ್ಯ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ.
ಮಹಿಳೆಯರಲ್ಲಿ ಹಾರ್ಮೋನ್‌ಗಳ ಪಾತ್ರವೂ ಮುಖ್ಯ
ಯುವತಿಯರಲ್ಲಿ ಕೂದಲು ತೆಳುವಾಗಲು ಹಾರ್ಮೋನ್ ವೈಪರೀತ್ಯವೂ ಕಾರಣವಾಗಬಹುದು.ವಿಶೇಷವಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಇರುವ ಮಹಿಳೆಯರಲ್ಲಿ ಆಂಡ್ರೋಜೆನ್ ಹಾರ್ಮೋನ್ ಮಟ್ಟ ಹೆಚ್ಚಾಗುವುದರಿಂದ ಹೆಚ್ಚು Hair Fall ಆಗುತ್ತದೆ. ಇಲ್ಲಿ ಕೂದಲು ಉದುರುವುದರ ಜೊತೆಗೆ ಇನ್ನೂ ಕೆಲವು ಲಕ್ಷಣಗಳಿವೆಯೇ ಎಂಬುದನ್ನು ಗಮನಿಸುವುದು ಮುಖ್ಯ.
ಉದಾಹರಣೆಗೆ: ಅನಿಯಮಿತ ಮುಟ್ಟು, ಮೊಡವೆ ಹೆಚ್ಚಳ, ಮುಖ ಅಥವಾ ದೇಹದ ಮೇಲೆ ಅನಗತ್ಯ ಕೂದಲು ಬೆಳೆಯುತ್ತಿದ್ದರೆ ಹಾರ್ಮೋನ್ ತಪಾಸಣೆಯ ಅಗತ್ಯವಿದೆಯೇ ಎಂಬುದನ್ನು ವೈದ್ಯರನ್ನು ಸಂಪರ್ಕಿಸಿ ತಿಳಿದುಕೊಳ್ಳಬೇಕು. PCOS ಕೇವಲ ಜೀವನಶೈಲಿಯ ಸಮಸ್ಯೆಯಲ್ಲ. ಇದು ಹಾರ್ಮೋನ್ ಮತ್ತು ಮೆಟಬಾಲಿಕ್ ಸಿಸ್ಟಮ್‌ಗೆ ಸಂಬಂಧಿಸಿದ ಸಂಕೀರ್ಣ ಸ್ಥಿತಿ.
ಸರಿಯಾದ ಆಹಾರ, ವ್ಯಾಯಾಮ ಮತ್ತು ತೂಕ ನಿರ್ವಹಣೆ ಇದರ ನಿಯಂತ್ರಣಕ್ಕೆ ಸಹಕರಿಸಬಹುದು. ಆದರೆ ಇವುಗಳಷ್ಟೇ ಎಲ್ಲ ಪ್ರಕರಣಗಳಿಗೂ ಸಂಪೂರ್ಣ ಪರಿಹಾರವಾಗುವುದಿಲ್ಲ.
ಹೇರ್ ಲಾಸ್‌ನಲ್ಲಿ ತರಹೇವಾರಿ
"ನನ್ನ ಕೂದಲು ಉದುರುತ್ತಿದೆ, ಸ್ನೇಹಿತನಿಗೂ ಕೂದಲು ಉದುರುತ್ತಿದೆ. ಇಬ್ಬರಿಗೂ ಒಂದೇ ಚಿಕಿತ್ಸೆ ಸಾಕು" ಎನ್ನುವುದು ಸರಿಯಲ್ಲ. ಕೂದಲು ಉದುರುವಿಕೆಯ ಹಲವು ವಿಧಗಳಿವೆ. ಅದರಲ್ಲೂ ಪುರುಷರಲ್ಲಿ ಕಂಡುಬರುವ ಪ್ಯಾಟರ್ನ್ ಹೇರ್ ಲಾಸ್, ಮಹಿಳೆಯರಲ್ಲಿ ಕಂಡುಬರುವ ಪ್ಯಾಟರ್ನ್ ಹೇರ್ ಲಾಸ್ ಮತ್ತು ದೀರ್ಘಕಾಲದ ಟೆಲೋಜನ್ ಎಫ್ಲುವಿಯಂ ಮುಂತಾದ ಸಮಸ್ಯೆಗಳು ಸಾಮಾನ್ಯ
ಟೆಲೋಜನ್ ಎಫ್ಲುವಿಯಂ
ಅನಾರೋಗ್ಯ, ತೀವ್ರ ಒತ್ತಡ, ಗಮನಾರ್ಹ ತೂಕ ಇಳಿಕೆ ಅಥವಾ ಪೌಷ್ಟಿಕಾಂಶದ ಕೊರತೆಯ ನಂತರ ಟೆಲೋಜನ್ ಎಫ್ಲುವಿಯಂ ಕಾಣಿಸಿಕೊಳ್ಳಬಹುದು.ಇದರಲ್ಲಿ ಮೂಲ ಕಾರಣವನ್ನು ಸರಿಪಡಿಸಿದ ನಂತರ ಕೂದಲು ಉದುರುವಿಕೆ ಸುಧಾರಿಸಬಹುದು.
ಪ್ಯಾಟರ್ನ್ ಹೇರ್ ಲಾಸ್
ಇದಕ್ಕೆ ವಿರುದ್ಧವಾಗಿ, ಪ್ಯಾಟರ್ನ್ ಹೇರ್ ಲಾಸ್ ಸಾಮಾನ್ಯವಾಗಿ ನಿಧಾನವಾಗಿ ಹೆಚ್ಚಾಗುವ ಕೂದಲು ತೆಳುವಾಗುವಿಕೆಯ ಸಮಸ್ಯೆ. ಇದರಲ್ಲಿ ವಂಶವಾಹಿ ಮತ್ತು ಹಾರ್ಮೋನ್‌ಗಳ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಮಸ್ಯೆಗೆ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರಬಹುದು.
ಶಾಂಪೂ ಬದಲಾಯಿಸುವುದಷ್ಟೇ ಪರಿಹಾರವಲ್ಲ
ಕೂದಲು ಉದುರಲು ಆರಂಭವಾದಾಗ ಮೊದಲು ಮಾಡುವ ಕೆಲಸ ಹೊಸ ಶಾಂಪೂ ಖರೀದಿಸುವುದು. ಆನ್‌ಲೈನ್‌ನಲ್ಲಿ ಹೇರ್ ಸಪ್ಲಿಮೆಂಟ್‌ಗಳನ್ನು ಹುಡುಕುವುದು. ಸ್ನೇಹಿತರು ಹೇಳಿದ ಮಾತ್ರೆ ಅಥವಾ ಎಣ್ಣೆ ಬಳಸುವುದು. ಆದರೆ ಕೂದಲು ಉದುರುವಿಕೆಯ ನಿಜವಾದ ಕಾರಣ ಗೊತ್ತಿಲ್ಲದೆ ಕೇವಲ ಆ್ಯಂಟಿ-ಹೇರ್‌ಫಾಲ್ ಶಾಂಪೂ ಬಳಸುವುದು ಅಥವಾ ಪೌಷ್ಟಿಕಾಂಶಗಳ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಮೂಲ ಸಮಸ್ಯೆ ಪರಿಹಾರವಾಗದೇ ಇರಬಹುದು. ಆದ್ದರಿಂದ ಮೊದಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ದಿನಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕೂದಲು ಉದುರುವುದು ಸಹಜ. ಆದರೆ ಕೆಲವು ಬದಲಾವಣೆಗಳನ್ನು ನಿರ್ಲಕ್ಷಿಸಬಾರದು. ಉದಾಹರಣೆಗೆ: ಥಟ್ಟನೆ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುವುದು,
ನಿರಂತರವಾಗಿ ಕೂದಲು ಉದುರುತ್ತಿರುವುದು, ಕೂದಲು ತೆಳುವಾಗುತ್ತಿರುವುದು, ಬೈತಲೆ ಸೀಳು ಅಗಲವಾಗುತ್ತಿರುವುದು, ಮುಂಭಾಗದ ಕೂದಲು ಹಿಂದೆ ಸರಿಯುತ್ತಿರುವುದು, ತಲೆ ಮೇಲೆ ಬೋಳು ತೇಪೆ ಕಾಣಿಸಿಕೊಳ್ಳುವಂಥ ಲಕ್ಷಣಗಳು ಕಂಡುಬಂದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.
ಕೊನೆಗೆ ನೆನಪಿಡಬೇಕಾದ ನಾಲ್ಕು ವಿಷಯಗಳು
ಯುವಜನರಲ್ಲಿ ಕೂದಲು ಉದುರುವಿಕೆಯನ್ನು ಅರ್ಥಮಾಡಿಕೊಳ್ಳುವಾಗ ಮುಖ್ಯವಾಗಿ ಆಹಾರ, ಜೀವನಶೈಲಿ, ಸಾಮಾನ್ಯ ಆರೋಗ್ಯ ಮತ್ತು ಹಾರ್ಮೋನ್‌ಗಳು ಎಂಬ ನಾಲ್ಕು ಅಂಶಗಳನ್ನು ಗಮನಿಸಬೇಕು.
ಕೂದಲು ಉದುರುತ್ತಿದೆ ಎಂದು ಭಯಪಡುವುದಕ್ಕಿಂತ, ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ. ಇದು ಕೇವಲ "ಸ್ಟ್ರೆಸ್ ಇದೆ", "ಕೆಲಸ ಜಾಸ್ತಿ", "ಶಾಂಪೂ ಸರಿಯಿಲ್ಲ" ಎಂದು ನಿರ್ಲಕ್ಷಿಸುವ ಸಮಸ್ಯೆಯಾಗಿರಬೇಕಿಲ್ಲ. ಒಬ್ಬರಿಗೆ ಕೆಲಸದ ಒತ್ತಡ ಕಾರಣವಾಗಿರಬಹುದು. ಮತ್ತೊಬ್ಬರಿಗೆ ತೀವ್ರ ಡಯಟ್ ಕಾರಣವಾಗಿರಬಹುದು. ಇನ್ನೊಬ್ಬರಿಗೆ ಥೈರಾಯ್ಡ್ ಅಥವಾ ಕಬ್ಬಿಣಾಂಶದ ಕೊರತೆ ಕಾರಣವಾಗಿರಬಹುದು. ಯುವತಿಯರಲ್ಲಿ ಹಾರ್ಮೋನ್ ವೈಪರೀತ್ಯವೂ ಕಾರಣವಾಗಬಹುದು. ಮತ್ತೆ ಕೆಲವರಲ್ಲಿ ವಂಶವಾಹಿ ಮತ್ತು ಹಾರ್ಮೋನ್‌ಗಳಿಗೆ ಸಂಬಂಧಿಸಿದ ಪ್ಯಾಟರ್ನ್ ಹೇರ್ ಲಾಸ್ ಇರಬಹುದು.
ಹೀಗಾಗಿ ಚಿಕಿತ್ಸೆ ಆರಂಭಿಸುವ ಮೊದಲು ಕಾರಣವನ್ನು ಗುರುತಿಸುವುದು ಅತ್ಯಂತ ಮುಖ್ಯ.


Click it and Unblock the Notifications
