Godhi Bonda Recipe: 1 ಕಪ್ ಗೋಧಿ ಸಾಕು... 5 ನಿಮಿಷಗಳಲ್ಲಿ ಸೂಪರ್ ತಿಂಡಿ ರೆಡಿ
ಸಂಜೆ ಆದರೆ ಸಾಕು ಏನಾದ್ರು ಕರಿದ ತಿಂಡಿ ತಿನ್ನಲು ಮನಸ್ಸು ಹಾತೊರಿಯುತ್ತೆ. ಅದೇ ಬಜ್ಜಿ, ವಡಾ, ಪಕೋಡ ತಿಂದು ಬೇಜಾರಾಗಿದ್ದರೆ, ಕೊಂಚ ವಿಭಿನ್ನವಾಗಿ ಬೊಂಡಾ ತಯಾರಿಸಿ. ಇದು ರುಚಿಕರವಾಗಿ, ಗರಿಗರಿಯಾಗಿ ಇರುವುದು ಮಾತ್ರವಲ್ಲದೆ ಮನೆಯ ಎಲ್ಲಾ ಸದಸ್ಯರಿಗೂ ಕೂಡ ಇಷ್ಟವಾಗುತ್ತೆ. ಅಲ್ಲದೆ ಇದನ್ನು ಹೆಚ್ಚು ಸಮಯ ವ್ಯಯಿಸದೆ ತುಂಬಾ ಸುಲಭವಾಗಿ ಹಾಗೂ ತ್ವರಿತವಾಗಿ ತಯಾರಿಸಬಹುದು. ಅದುವೇ ಗೋದಿ ಹಿಟ್ಟಿನ ಬೊಂಡಾ. ಇದು ಸಂಜೆ ಚಹಾ ಅಥವಾ ಕಾಫಿಯೊಂದಿಗೆ ತಿನ್ನಲು ಅದ್ಭುತವಾಗಿರುತ್ತದೆ.
ಹಾಗಾದರೆ ತಡ ಮಾಡುವುದು ಬೇಡ 5 ನಿಮಿಷಗಳಲ್ಲಿ ಗರಿಗರಿಯಾದ ಗೋಧಿ ಬೋಂಡಾವನ್ನು ಹೇಗೆ ತಯಾರಿಸಬಹುದು ಎಂದು ತಿಳಿಯೋಣ. ನೀವು ಒಮ್ಮೆ ಇದನ್ನು ಮನೆಯಲ್ಲಿ ತಯಾರಿಸಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗಾದರೆ ಗೋಧಿ ಬೊಂಡಾ ತಯಾರಿಸುವುದು ಹೇಗೆ? ಇದರ ಪಾಕ ವಿಧಾನ ತಿಳಿಯುವ ಮುನ್ನ ತಯಾರಿಸಲು ಬೇಕಾಗುವ ಪದಾರ್ಥಗಳು ಯಾವುವು ಎಂದು ತಿಳಿಯೋಣ.

ಬೇಕಾಗುವ ಸಾಮಗ್ರಿಗಳು: -
*ಗೋಧಿ ಹಿಟ್ಟು - 1 ಕಪ್
* ದೋಸೆ ಹಿಟ್ಟು - ಅರ್ಧ ಕಪ್
* ಕತ್ತರಿಸಿದ ದೊಡ್ಡ ಈರುಳ್ಳಿ - 2
*ಮೆಣಸಿನ ಪುಡಿ - 2 ಚಮಚ
*ಕೊತ್ತಂಬರಿ ಸೊಪ್ಪು - ಸ್ವಲ್ಪ
*ಕರಿಬೇವು - ಸ್ವಲ್ಪ
*ಅಡುಗೆ ಸೋಡಾ - ಅರ್ಧ ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಇಂಗು - 1 ಚಿಟಿಕೆ
*ನೀರು - ಅಗತ್ಯಕ್ಕೆ ತಕ್ಕಷ್ಟು
*ಒಣ ಕೊಬ್ಬರಿ ತುಂಡು ಸ್ವಲ್ಪ
*ಹುರಿಯಲು ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
ಪಾಕವಿಧಾನ:
*ಮೊದಲಿಗೆ ಗೋಧಿ ಹಿಟ್ಟನ್ನು ತೆಗೆದುಕೊಂಡು ನೀರು ಹಾಕಿ ಗಂಟಾಗದಂತೆ ಕಲಸಿಕೊಳ್ಳಿ. ಈ ಹಿಟ್ಟು ಬೊಂಡಾ ಮಾಡುವ ಹದಕ್ಕೆ ಇರಬೇಕು.
* ನಂತರ ಇದಕ್ಕೆ ದೋಸೆ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರಿಂದ ಅದು ಗಟ್ಟಿಯಾಗುವುದಿಲ್ಲ.
*ನಂತರ ಇದಕ್ಕೆ ಒಂದು ಚಮಚ ಬಿಸಿ ಮಾಡಿದ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಮೆಣಸಿನ ಪುಡಿ, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು ಹಾಕಿ ಮಿಕ್ಸ್ ಮಾಡಿ.
* ಬಳಿಕ ಅಡುಗೆ ಸೋಡಾ, ಇಂಗು, ಒಣ ಕೊಬ್ಬರಿ ತುಂಡು ಹಾಕಿ ಕಲಸಿ, ಸ್ವಲ್ಪ ಹೊತ್ತು ಪಾತ್ರೆ ಮುಚ್ಚಿ ಇಡಿ.
* ಇದಕ್ಕೆ ಮೆಣಸಿನ ಪುಡಿಯ ಬದಲು ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿದರೆ ಬೊಂಡಾ ಬೇರೆಯದೇ ರುಚಿಯನ್ನು ನೀಡುತ್ತದೆ. ನಿಮಗಿಷ್ಟವಾದಲ್ಲಿ ಮೆಣಸಿನಕಾಯಿ ಹಾಕಬಹುದು.
* ಅಲ್ಲದೆ ನೀವು ಅದಕ್ಕೆ ನಿಮ್ಮ ನೆಚ್ಚಿನ ತರಕಾರಿಗಳು ಮತ್ತು ತುರಿದ ಶುಂಠಿಯನ್ನು ಸೇರಿಸಬಹುದು.
* ಗ್ಯಾಸ್ ಮೇಲೆ ಪಾತ್ರೆ ಇಟ್ಟು ಕರಿಯಲು ಬೇಕಾಗುವಷ್ಟು ಅಡುಗೆ ಎಣ್ಣೆ ಹಾಕಿ ಬಿಸಿ ಆಗಲು ಬಿಡಿ.
* ನಂತರ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಬೊಂಡಾ ಆಕಾರದಲ್ಲಿ ಉಂಡೆಗಳನ್ನು ಎಣ್ಣೆಯಲ್ಲಿ ಬಿಡಿ, ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
* ನಂತರ ಒಂದು ತಟ್ಟೆಗೆ ಹಾಕಿ ಸವಿಯಲು ನೀಡಿ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿಯಂತಹ ನಿಮ್ಮ ನೆಚ್ಚಿನ ಚಟ್ನಿಯೊಂದಿಗೆ ಬಡಿಸಬಹುದು.












Click it and Unblock the Notifications