ಮುಂಜಾನೆ 4 ಗಂಟೆಯಿಂದಲೇ 75 ವರ್ಷದ ಮಹಿಳೆಯ ವ್ಯಾಯಾಮ : ಎಲ್ಲರಿಗೂ ಸ್ಫೂರ್ತಿ ಇಳಿ ವಯಸ್ಸಿನ ಫಿಟ್‌ನೆಸ್ ಮಂತ್ರ
ಅಮೃತ್ ಕೌರ್ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಹೆಸರು. ಇವರಿಗೆ 75 ವರ್ಷ. ತಮ್ಮ ಫಿಟ್ನೆಸ್ ವೀಡಿಯೊಗಳಿಂದ ಸೋಶಿಯಲ್ ಮಿಡಿಯಾದಲ್ಲಿ ಸಂಚಲ ಮೂಡಿಸ್ತಾ ಇದ್ದಾರೆ. ಅವರ ಇನ್‌ಸ್ಟಾಗ್ರಾಮ್ ಪೇಜ್ @getfitwithdadi ನಲ್ಲಿ, ಅವರು ವಜ್ರಾಸನ, ವಾಕಿಂಗ್, ಪುಷ್-ಅಪ್, ಯೋಗ ಭಂಗಿಗಳನ್ನು ಕಾಣಬಹುದು.
75 ವರ್ಷವಾದರೂ ನಿತ್ಯ ಮಾಡ್ತಾರೆ ವ್ಯಾಯಾಮ
ಅಂದ ಹಾಗೆ 75 ವರ್ಷ ಈ ಮಹಿಳೆ ಬೆಳಿಗ್ಗೆ 4 ಗಂಟೆಗೆ ಎದ್ದು ವ್ಯಾಯಾಮ ಶುರು ಮಾಡುತ್ತಾರೆ. ಅದಕ್ಕಾಗಿ ಅವರು ಯಾವುದೋ ಜಿಮ್ ಅಥವಾ ಫಿಟ್‌ನೆಸ್, ವೆಲ್‌ನೆಸ್ ಸೆಂಟರ್‌ಗೆ ಹೋಗುವುದಿಲ್ಲ. ಇವರ ವ್ಯಾಯಾಮ ಮನೆಯಲ್ಲಿಯೇ. ಬೆಳಗ್ಗೆ ಬೇಗ ಏಳುವುದು, ಮನೆಯೊಳಗೆ ವಾಕ್ ಮಾಡುವುದು, ಪಾದಗಳನ್ನು ಪರಸ್ಪರ ಹತ್ತಿರ ಇಟ್ಟುಕೊಂಡು ಹಿಂದಕ್ಕೆ ನಡೆಯುವುದು, ಸ್ರ್ಟೆಚಿಂಗ್ ಹೀಗೆ ಅನೇಕ ರೀತಿಯ ವ್ಯಾಯಾಮಗಳನ್ನು ಅಭ್ಯಾಸ ಮಾಡ್ತಾರೆ. ಇವರ ಈ ಮುಂಜಾನೆಯ ರೂಟಿನ್ ಬಗ್ಗೆ ಅವರ ಮಗಳು ವಿಡಿಯೋವೊಂದನ್ನು ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Fitness Routine: ದೇಹ ಫಿಟ್ ಆಗಿಡಲು ಎರಡು ಸರಳ ವ್ಯಾಯಾಮ
ತಜ್ಞರ ಪ್ರಕಾರ, 70 ವರ್ಷದ ನಂತರ ಫಿಟ್‌ನೆಸ್‌ಗಾಗಿ ಕಠಿಣ ವ್ಯಾಯಾಮ ಪದ್ದತಿಯನ್ನು ಅನುಸರಿಸುವ ಅಗತ್ಯವಿಲ್ಲ. ಜಿಮ್ ವರ್ಕೌಟ್‌ಗಳನ್ನು ಮಾಡುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ. ಈ ಮಹಿಳೆ ದಿನಾಲೂ ಎರಡು ಸರಳ ವ್ಯಾಯಾಮಗಳನ್ನು ತಪ್ಪದೇ ಮಾಡುತ್ತಾರೆ. ಅದೆಂದರೆ ವಜ್ರಾಸನ ಮತ್ತು ವಾಕಿಂಗ್. ಇವೆರಡು ಮಾಡುವುದಕ್ಕೆ ಬಹಳ ಸಿಂಪಲ್, ಯಾರು ಬೇಕಾದರೂ ಮಾಡಬಹುದು. ಇದನ್ನು ನಿತ್ಯ ಅಭ್ಯಾಸ ಮಾಡುತ್ತಾ ಬಂದರೆ ಚಲನಶೀಲತೆ, ಕೆಳ ದೇಹದ ಕಾರ್ಯ ಉತ್ತಮವಾಗುತ್ತದೆ. ದೇಹ ತುಂಬಾ ಫ್ರಿಯಾಗಿ ಬಿಡುತ್ತದೆ.
Fitness Routine: ವಜ್ರಾಸನದ ಪ್ರಯೋಜನ
ವಜ್ರಾಸನದಲ್ಲಿ ಮಂಡಿಯೂರಿ ಹಿಮ್ಮಡಿಯ ಮೇಲೆ ಕುಳಿತು ದೇಹವನ್ನು ನೇರವಾಗಿರಿಸಬೇಕು. ಇದನ್ನು ಅಭ್ಯಾಸ ಮಾಡುವುದರಿಂದ ಮೊಣಕಾಲುಗಳು, ಕಣಕಾಲುಗಳು ಮತ್ತು ಕೆಳಗಿನ ಅಂಗಗಳ ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಮತ್ತು ನೇರವಾದ ಭಂಗಿಯನ್ನು ಕಾಪಾಡಿಕೊಳ್ಳಲು ಅಂದರೆ ವಯಸ್ಸಾದ ನಂತರವೂ ದೇಹ ಬಾಗದಂತೆ ಇರಲು ಸಹಾಯ ಮಾಡುತ್ತದೆ.
Fitness Routine: ಯಾರು ವಜ್ರಾಸನ ಮಾಡಬಾರದು ?
ವಯಸ್ಸಾಗುತ್ತಿದ್ದ ಹಾಗೆಯೇ ಅನೇಕ ಸಮಸ್ಯೆಗಳು ಕಾಡತೊಡಗುತ್ತವೆ. ಕುಳಿತುಕೊಳ್ಳುವುದು, ಎದ್ದೇಳುವುದು ಮತ್ತು ನೆಲದಲ್ಲಿ ಕುಳಿತಿದ್ದರೆ ಆರಾಮಾಗಿ ಮೇಲೇಳುವುದು ಕಷ್ಟಕರವಾಗುತ್ತದೆ. ವಜ್ರಾಸನ ಈ ಎಲ್ಲಾ ಕಾರ್ಯಗಳನ್ನು ಸುಲಭವಾಗಿಸುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶ ಒಂದಿದೆ. ಅದೇನೆಂದರೆ ವಜ್ರಾಸನ ಎಲ್ಲರಿಗೂ ಸೂಕ್ತವಲ್ಲ, ವಿಶೇಷವಾಗಿ ಮೊಣಕಾಲು ನೋವು, ಸಂಧಿವಾತ ಇರುವವರು, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದವರು, ಕಣಕಾಲು ಸಮಸ್ಯೆ ಇರುವವರು ನೆಲದ ಮೇಲೆ ಕುಳಿತರೆ ಎದ್ದೇಳಲು ತೊಂದರೆ ಅನುಭವಿಸುವವರಿಗೆ ವಜ್ರಾಸನ ಹೇಳಿದ್ದಲ್ಲ. ಇವರು ವಜ್ರಾಸನದಿಂದ ದೂರ ಇರುವುದೇ ಒಳ್ಳೆಯದು.
ವಜ್ರಾಸನವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ.ವಿಶೇಷವಾಗಿ ಊಟದ ನಂತರ ಇದನ್ನು ಅಭ್ಯಾಸ ಮಾಡಿದಾಗ ಹೆಚ್ಚು ಪರಿಣಾಮಕಾರಿಯಾಗಿರುವುದು. ಕೆಲವರಿಗೆ ನೇರವಾಗಿ ಕುಳಿತುಕೊಳ್ಳುವುದು ಆರಾಮ ದಾಯಕವಾಗಿದ್ದರೂ, ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿ ಇದನ್ನು ಅಭ್ಯಾಸ ಮಾಡಬಹುದು.
ನಿತ್ಯ ವಾಕಿಂಗ್
ಅಮೃತ್ ಕೌರ್ ಅವರ ದಿನಚರಿಯ ಇನ್ನೊಂದು ಮುಖ್ಯ ಭಾಗ ಎಂದರೆ ವಾಕಿಂಗ್. ದಿನಾಲೂ ವಾಕಿಂಗ್ ಮಾಡುವುದರಿಂದ ವಯಸ್ಸಾದವರು ಆಕ್ಟಿವ್ ಆಗಿರಲು ಸಹಾಯ ಮಾಡುವುದು. ಕಾಲಿನ ಶಕ್ತಿ, ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತ ವಾಕಿಂಗ್ ಮಾಡುವುದರಿಂದ ಶಾಪಿಂಗ್ ಮಾಡುವುದು, ಮೆಟ್ಟಿಲುಗಳನ್ನು ಹತ್ತುವುದು ಮತ್ತು ದೈಹಿಕವಾಗಿ ಸ್ವತಂತ್ರವಾಗಿರುವುದು ಮುಂತಾದ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ವಾಕಿಂಗ್ ಎಂದರೆ ಯಾವುದೋ ಪಾರ್ಕ್‌ನಲ್ಲಿಯೇ ಹೋಗಿ ವಾಕ್ ಮಾಡಬೇಕು, ವಾಕಿಂಗ್ ಟ್ರಾಕ್‌ನಲ್ಲಿಯೇ ವಾಕ್ ಮಾಡಬೇಕು ಎಂದೇನಿಲ್ಲ. ಮನೆಯೊಳಗೆ ಇರುವ ಜಾಗದಲ್ಲಿಯೇ ದಿನಾಲೂ ವಾಕ್ ಮಾಡಿದರೂ ಆಗುತ್ತದೆ. 70 ವರ್ಷ ದಾಟಿದ ನಂತರ ವಾಕ್ ಮಾಡುವವರು ಮೊದಲು ನಿಧಾನವಾಗಿ ಹೆಜ್ಜೆ ಇಡಬಹುದು. ಕ್ರಮೇಣ ಅವರ ಫಿಟ್‌ನೆಸ್ ಆಧಾರದ ಮೇಲೆ ಅವರ ಅವಧಿಯನ್ನು ಹೆಚ್ಚಿಸಬಹುದು ಅಥವಾ ದಿನಕ್ಕೆ ಇಂತಿಷ್ಟು ನಿಮಿಷ ಅಥವಾ ಗಂಟೆ ವಾಕ್ ಮಾಡಲು ಇಟ್ಟುಕೊಳ್ಳಬಹುದು.
ಇನ್ನು ಯೋಗ ಕಲಿಸುವವರು ಅಥವಾ ಫಿಜಿಯೋಥೆರಪಿಸ್ಟ್‌ಗಳು ಕುಶನ್ ಬಳಸುವುದು ಅಥವಾ ಕುರ್ಚಿ ಆಧಾರಿತ ಕೆಲವು ವ್ಯಾಯಾಮಗಳನ್ ಸೂಚಿಸಬಹುದು. ಅಥವಾ ನಾವು ಮಾಡುವ ವ್ಯಾಯಾಮಗಳಿಗೆ ಸ್ವಲ್ಪ ಮಾರ್ಪಾಡುಗಳನ್ನು ಕೂಡಾ ಸೂಚಿಸಬಹುದು.


Click it and Unblock the Notifications
