High Heels: ಹೈಹೀಲ್ಡ್ ಚಪ್ಪಲಿ ಧರಿಸಿದರೆ ಬೆನ್ನುನೋವು ಬರುತ್ತಾ? ವೈದ್ಯರು ಹೇಳುವುದೇನು..?
ಬೆನ್ನು ನೋವಿನಿಂದ ಬಳಲುತ್ತಿರುವ ಹೆಣ್ಣುಮಕ್ಕಳು ಏಕೆ ಬೆನ್ನು ನೋವು ಬರುತ್ತಿದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಎಲ್ಲ ರೀತಿಯ ಔಷಧಿ, ಚಿಕಿತ್ಸೆ ಪಡೆದ ಬಳಿಕವೂ ನೋವು ಕಾಡುತ್ತಿದೆ ಏನು ಮಾಡೋದು ಹಾಗೆಂದು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ನೋವಿನ ಸಮಸ್ಯೆಗೆ ಕಾರಣಗಳು ಸಿಗದಿದ್ದರೆ ಇದೊಂದು ವಿಚಾರದ ಬಗ್ಗೆ ಆಲೋಚಿಸಿ ನೋಡಿ ಅದು ಕೂಡ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಬೆನ್ನು ನೋವಿನ ಸಮಸ್ಯೆಗೆ ಕಾರಣವಾಗಿದ್ದರೂ ಅಚ್ಚರಿಯಿಲ್ಲ.
ಹಾಗಾದರೆ ಬೆನ್ನು ನೋವಿಗೆ ಕಾರಣವಾಗುವ ಅಂಶ ಅದೇನಾಗಿರಬಹುದು ಎಂದು ಆಲೋಚಿಸುತ್ತಿದ್ದೀರಾ? ಅದು ಬೇರಾವುದಲ್ಲ ನೀವೇ ಧರಿಸುವ ಹೈ ಹೀಲ್ಡ್ ಚಪ್ಪಲಿ. ಈಗ ಹೈಹೀಲ್ಡ್ ಚಪ್ಪಲಿ ಧರಿಸೋದು ಫ್ಯಾಷನ್ ಆಗಿದ್ದು, ಮಾಮೂಲಿ ಚಪ್ಪಲಿನಂತೆಯೇ ಅದನ್ನು ಧರಿಸಿಕೊಂಡು ಹೆಣ್ಮಕ್ಕಳು ಓಡಾಡುತ್ತಾರೆ. ಆದರೆ ಇದು ಕೆಲವೊಮ್ಮೆ ಕೆಲವರಿಗೆ ಬೆನ್ನು ನೋವನ್ನು ತರಬಹುದು ಎಂದು ವೈದ್ಯರು ಹೇಳುತ್ತಾರೆ.

ಹಾಗೆಂದು ಹೈಹೀಲ್ಡ್ ಚಪ್ಪಲಿ ಹಾಕಿಕೊಂಡು ನಡೆಯಬೇಡಿ, ಬಳಸಲೇ ಬೇಡಿ ಎಂದರ್ಥವಲ್ಲ. ಬದಲಿಗೆ ಹೈಹೀಲ್ಡ್ ಚಪ್ಪಲಿ ಧರಿಸುವವರಲ್ಲಿ ಬೆನ್ನು ನೋವು ಕಂಡು ಬಂದರೂ ಬರಬಹುದು ಎಚ್ಚರವಾಗಿರಿ ಎಂಬ ಸಲಹೆಯಷ್ಟೆ. ಎಲ್ಲವೂ ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ಜತೆಗೆ ಅದು ಕೆಲವೊಮ್ಮೆ ಖುಷಿಯೂ ಕೊಡುವುದಿಲ್ಲ. ಆದರೂ ಕೆಲವರು ಬಳಕೆ ಮಾಡುತ್ತಿರುತ್ತಾರೆ. ಈ ಸಂದರ್ಭ ಸಮಸ್ಯೆಗಳು ಕಾಣಿಸಿದರೆ ಅದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯಾವಾಗ ಬಹುದು.
ಹೈಹೀಲ್ಡ್ ಚಪ್ಪಲಿ ಬಗ್ಗೆ ವೈದ್ಯರು ಹೇಳುವುದೇನು?
ಈಗೀಗ ಹಲವು ಬಗೆಯ ಹೈಹೀಲ್ಡ್ ಚಪ್ಪಲಿಗಳು ಮಾರುಕಟ್ಟೆಗೆ ಬಂದಿವೆ. ಮತ್ತು ಹೆಣ್ಣುಮಕ್ಕಳು ಕೂಡ ಅವುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪಾರ್ಟಿ, ಫಂಕ್ಷನ್ ಗಳಲ್ಲಿ ಇವು ಆಕರ್ಷಣೆಯಾಗಿವೆ. ಇಂತಹ ಹೈಹೀಲ್ಡ್ ಚಪ್ಪಲಿಗಳು ಬೆನ್ನು ನೋವು ತರುವುದು ಹೇಗೆ ಎಂಬ ಪ್ರಶ್ನೆಗಳಿಗೆ ಕೆಲವೊಂದು ವಿಚಾರಗಳನ್ನು ವೈದ್ಯರು ತೆರೆದಿಡುತ್ತಾ ಹೋಗುತ್ತಾರೆ. ಅದು ಏನೆಂದರೆ ಹೈಹೀಲ್ಡ್ ಚಪ್ಪಲಿ ಧರಿಸಿದರೆ ಮಾಮೂಲಿ ಚಪ್ಪಲಿ ಧರಿಸಿ ನಡೆದಾಡಿದಂತೆ ನಡೆದಾಡಲು ಸಾಧ್ಯವಿಲ್ಲ. ನಮ್ಮ ಗಮನ ಚಪ್ಪಲಿ ಮೇಲೆಯೇ ಇರುತ್ತದೆ. ಜತೆಗೆ ಕೆಲವೊಮ್ಮೆ ಕಾಲಿನ ಸಮತೋಲನ ತಪ್ಪಿ ಕಾಲು ಉಳುಕುವ ಸಾಧ್ಯತೆಯೂ ಇರುತ್ತದೆ.
ಇನ್ನು ಹೈಹೀಲ್ಡ್ ಚಪ್ಪಲಿಯನ್ನು ಮೊದಲ ಬಾರಿಗೆ ಧರಿಸುತ್ತಿದ್ದರೆ, ಈ ಹಿಂದೆ ಧರಿಸಿ ಓಡಾಡಿದ ಅಭ್ಯಾಸ ಇಲ್ಲದವರಂತು ತುಂಬಾ ಜಾಗರೂಕರಾಗಿರ ಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಕಾಲುಗಳಿಗೆ ತೊಂದರೆಯಾಗುತ್ತದೆ. ಹೈಹೀಲ್ಡ್ ಧರಿಸಿದವರು ನಡೆಯುವಾಗ ಬೆರಳಿನ ಮೇಲೆ ಹೆಚ್ಚಿನ ಶಕ್ತಿ ಕೊಡಬೇಕಾಗುತ್ತದೆ. ಇದರಿಂದ ಸಮತೋಲನ ತಪ್ಪಲೂ ಬಹುದು. ಹೈಹೀಲ್ಡ್ ಚಪ್ಪಲಿಯಿಂದ ನಡೆಯುವಾಗ ಸಮತೋಲನ ತಪ್ಪಿ ತೊಂದರೆಗಳು ಆಗುವುದು ಕೆಲವೊಮ್ಮೆ ಸಾಮಾನ್ಯ.

ಬೆನ್ನು ನೋವು ಹೇಗೆ ಬರುತ್ತದೆ ಗೊತ್ತಾ?
ಇನ್ನು ಹೈಹೀಲ್ಡ್ ಚಪ್ಪಲಿ ಧರಿಸುವುದಕ್ಕೂ ಬೆನ್ನು ನೋವು ಬರುವುದಕ್ಕೂ ಎಲ್ಲಿಯ ಸಂಬಂಧ ಎಂಬ ಪ್ರಶ್ನೆಗಳು ಮೂಡುವುದು ಸಹಜವೇ.. ಈ ಬಗ್ಗೆ ತಜ್ಞರು ಒಂದಷ್ಟು ಮಾಹಿತಿಯನ್ನು ನೀಡುತ್ತಾರೆ. ಅವರು ಹೇಳುವ ಪ್ರಕಾರ ಹೈಹೀಲ್ಡ್ ಚಪ್ಪಲಿಗಳು ದೇಹದ ಸಮತೋಲನವನ್ನು ಪಲ್ಲಟಗೊಳಿಸಿ ಭಾರ ಬೀಳುವ ಅಕ್ಷರೇಖೆಯನ್ನು ಬದಲಿಸುತ್ತವೆಯಂತೆ. ಈ ಅಕ್ಷರೇಖೆಯು ತನ್ಮೂಲಕ ದೇಹದ ಭಾರವನ್ನು ಭೂಮಿಗೆ ಸ್ಥಳಾಂತರಿಸುವ ಒಂದು ಕಾಲ್ಪನಿಕ ರೇಖೆಯಂತೆ.
ಇದು ಬೆನ್ನು ಹುರಿಯ ಸ್ಯಾಕ್ರಲ್ ಭಾಗದ ಎದುರುಗಡೆ ಹಾದು ಹೋಗುತ್ತದೆಯಂತೆ. ಹೀಗಾಗಿ ಹೈಹೀಲ್ಡ್ ಧರಿಸಿದಾಗ ಆ ರೇಖೆಯು ಅಸ್ತವ್ಯಸ್ತಗೊಂಡು ಹೆಚ್ಚಿನ ಭಾರವು ಬೆನ್ನು ಹುರಿಯ ಲಂಬಾರ್ ಭಾಗದ ಮೇಲೆ ಬಿದ್ದು ಬೆನ್ನು ನೋವು ಕಾಣಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು ಗರ್ಭಿಣಿ ಮಹಿಳೆಯರು ಹೈಹೀಲ್ಡ್ ಚಪ್ಪಲಿ ಧರಿಸುವುದು ಸೂಕ್ತವಲ್ಲ. ಹಾಕಿದ್ದೇ ಆದರೆ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳಬಹುದಾಗಿದೆ. ಆದ್ದರಿಂದ ಈ ಸಮಯದಲ್ಲಿ ಅದನ್ನು ಧರಿಸುವ ಪ್ರಯತ್ನವನ್ನು ಮಾಡಬಾರದಂತೆ.
ಬೆನ್ನು ನೋವಿಗೆ ಸ್ವಯಂ ಚಿಕಿತ್ಸೆ ಒಳ್ಳೆಯದಲ್ಲ
ಹಾಗೆನೋಡಿದರೆ ಬೆನ್ನುನೋವು ಕೇವಲ ಹೈಹೀಲ್ಡ್ ಚಪ್ಪಲಿ ಧರಿಸುವುದರಿಂದಲೇ ಬರುತ್ತದೆ ಎಂದರ್ಥವಲ್ಲ ಬೇರೆ, ಬೇರೆ ಕಾರಣಗಳಿಂದಲೂ ಬರುತ್ತದೆ. ಅದರಲ್ಲಿ ಇದು ಒಂದು ಆಗಿದೆಯಷ್ಟೆ. ಉಳಿದಂತೆ ನಾವು ಕುಳಿತು ಮಾಡುವ ಕೆಲಸದಲ್ಲಿನ ಭಂಗಿಯ ಬಗ್ಗೆ ನಿರ್ಲಕ್ಷ್ಯ, ಅಶಿಸ್ತು ಮತ್ತು ಕೆಲಸಕ್ಕೆ ತಕ್ಕಂತೆ ಪೀಠೋಪಕರಣಗಳನ್ನು ಬಳಸಿಕೊಳ್ಳದಿರುವುದು ಹೀಗೆ ಹಲವು ವಿಷಯಗಳು ನಮಗೆ ಬೆನ್ನು ನೋವನ್ನು ತರಬಹುದು. ಕೆಲವೊಮ್ಮೆ ವಯಸ್ಸಿನ ಕಾರಣಗಳು, ಹೊಟ್ಟೆಯ ಮಾಂಸಖಂಡಗಳ ಶಕ್ತಿ ಕುಗ್ಗುವಿಕೆ ಮತ್ತು ಮೂಳೆಯ ಸವೆತವೂ ಬೆನ್ನು ನೋವನ್ನು ಸೃಷ್ಟಿಸಬಹುದು.

ಹೆಚ್ಚಿನ ಜನ ಬೆನ್ನು ನೋವು ಶಮನಕ್ಕಾಗಿ ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಬಿಗಿಪಟ್ಟಿಕಟ್ಟಿಕೊಳ್ಳುತ್ತಾರೆ. ತೈಲ, ನೋವು ನಿವಾರಕ ಕ್ರೀಮ್ ಹಚ್ಚಿಕೊಳ್ಳುವುದು, ನೋವು ಶಮನಕಾರಿ ಮಾತ್ರೆ ಸೇವಿಸುವುದು ಮೊದಲಾದ ಸ್ವಯಂ ಚಿಕಿತ್ಸೆಗಳನ್ನು ಹೆಚ್ಚಿನವರು ಮಾಡುತ್ತಾರೆ. ಆದರೆ ನಮಗೆ ಬೆನ್ನುನೋವು ಕಾಣಿಸಿಕೊಂಡಾಗ ಮೊದಲಿಗೆ ವೈದ್ಯರನ್ನು ಕಂಡು ಬೆನ್ನು ನೋವು ಏಕೆ ಬಂದಿದೆ ಎಂಬುದನ್ನು ಕಂಡು ಹಿಡಿದು ಬಳಿಕ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.
ಬೆನ್ನು ನೋವಿನತ್ತ ಎಚ್ಚರಿಕೆ ಇರಲಿ
ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಆಗಾಗ್ಗೆ ಎದ್ದು ನಿಲ್ಲುವುದು, ನಡೆದಾಡುವುದು ಮಾಡಬೇಕು. ಜತೆಗೆ ಒಂದೇ ಭಂಗಿಯಲ್ಲಿ ಕೂರದೆ ಆಗಾಗ್ಗೆ ಬದಲಿಸುತ್ತಿರಬೇಕು. ಎತ್ತರಕ್ಕೆ ತಕ್ಕಂತೆ ತೂಕವನ್ನು ಸರಿದೂಗಿಸಿಕೊಳ್ಳಬೇಕು. ಅದಕ್ಕಾಗಿ ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಒಂದೇ ಕೈನಿಂದ ಹೆಚ್ಚಿನ ಭಾರ ಎತ್ತುವುದನ್ನು ಮಾಡಬಾರದು. ಜತೆಗೆ ವಿಶ್ರಾಂತಿಗೂ ಹೆಚ್ಚು ಗಮನಕೊಡಬೇಕು. ಮಲಗುವಾಗಲೂ ಕೂಡ ಎಚ್ಚರಿಕೆ ವಹಿಸಬೇಕು. ತುಂಬಾ ಸಲ ಮಲಗುವಾಗ ಆಗುವ ಚಿಕ್ಕಪುಟ್ಟ ಎಡವಟ್ಟು ಬೆನ್ನು ಮತ್ತು ಕತ್ತು ನೋವನ್ನು ತರಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಒಂದಷ್ಟು ಎಚ್ಚರದಿಂದ ಇರುವುದು ಒಳ್ಳೆಯದು.












Click it and Unblock the Notifications