ಪ್ರತಿದಿನ ಹಾಲು-ತುಪ್ಪ ತಿನ್ನೋದು ಬೇಸರ ಆಯ್ತು! ಕುಸ್ತಿಪಟುವಿನ ಪ್ರಯೋಗದಿಂದ ಹುಟ್ಟಿದ ವಿಶ್ವಪ್ರಸಿದ್ಧ ದೋಧಾ ಬರ್ಫಿ
ಭಾರತದಲ್ಲಿ ಸಿಹಿತಿಂಡಿಗಳಿಗೆ ವಿಶೇಷ ಸ್ಥಾನವಿದೆ. ಯಾವುದೇ ಹಬ್ಬ, ಮದುವೆ ಅಥವಾ ಶುಭ ಸಮಾರಂಭವಿದ್ದರೂ ಸಿಹಿತಿಂಡಿಗಳಿಲ್ಲದೆ ಆಚರಣೆ ಪೂರ್ಣವಾಗುವುದಿಲ್ಲ. ಲಡ್ಡು, ಜಿಲೇಬಿ, ರಸಗುಲ್ಲಾ, ಕಾಜು ಬರ್ಫಿ, ಮೈಸೂರು ಪಾಕ್ ಹೀಗೆ ಅನೇಕ ಸಿಹಿತಿಂಡಿಗಳ ನಡುವೆ ಪಂಜಾಬಿನ ಒಂದು ವಿಶೇಷ ಸಿಹಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಅದೇ ದೋಧಾ ಬರ್ಫಿ.
ಗಾಢವಾದ ರುಚಿ, ಜಗಿಯುವ ಹಾಗಿರುವ ಸ್ವರೂಪ, ಮತ್ತು ವಿಶಿಷ್ಟ ಸುವಾಸನೆಯಿಂದ ಪ್ರಸಿದ್ಧವಾಗಿರುವ ಈ ಸಿಹಿಯ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಸುಮಾರು 100 ವರ್ಷಗಳ ಹಿಂದೆ ಒಬ್ಬ ಕುಸ್ತಿಪಟುವಿನ ಅಡುಗೆಮನೆಯ ಪ್ರಯೋಗದಿಂದ ಈ ಸಿಹಿ ಹುಟ್ಟಿಕೊಂಡಿತು ಎನ್ನುವುದು ವಿಶೇಷ.

ಹಾಲು ಮತ್ತು ತುಪ್ಪ ತಿನ್ನುತ್ತಾ ಬೇಸತ್ತ ಕುಸ್ತಿಪಟು!
1900ರ ದಶಕದ ಆರಂಭದಲ್ಲಿ ಪಂಜಾಬಿನಲ್ಲಿ ಹರ್ಬನ್ಸ್ ವಿಗ್ ಎಂಬ ಕುಸ್ತಿಪಟು ಇದ್ದರು. ಆ ಕಾಲದ ಕುಸ್ತಿಪಟುಗಳು ತಮ್ಮ ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ಪ್ರತಿದಿನ ಹಾಲು, ತುಪ್ಪ ಮತ್ತು ಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಹರ್ಬನ್ಸ್ ವಿಗ್ ಕೂಡ ಇದೇ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಆದರೆ ಪ್ರತಿದಿನ ಒಂದೇ ರೀತಿಯ ಆಹಾರ ಸೇವಿಸುತ್ತಾ ಅವರಿಗೆ ಬೇಸರವಾಗತೊಡಗಿತು. ಆಗ ಅವರ ಮನಸ್ಸಿನಲ್ಲಿ ಒಂದು ಹೊಸ ಆಲೋಚನೆ ಮೂಡಿತು.
"ಹಾಲು, ತುಪ್ಪ ಮತ್ತು ಇತರ ಪೌಷ್ಟಿಕ ಪದಾರ್ಥಗಳಿಂದ ಹೊಸದೊಂದು ರುಚಿಕರವಾದ ಸಿಹಿ ತಯಾರಿಸಿದರೆ ಹೇಗೆ?" ಎಂಬ ಯೋಚನೆ ಅವರಲ್ಲಿ ಹುಟ್ಟಿತು. 1912ರ ಸುಮಾರಿಗೆ ಹರ್ಬನ್ಸ್ ವಿಗ್ ತಮ್ಮ ಅಡುಗೆಮನೆಯಲ್ಲಿ ಪ್ರಯೋಗ ಆರಂಭಿಸಿದರು. ಅವರು ಹಾಲು, ಕ್ರೀಮ್, ಸಕ್ಕರೆ, ತುಪ್ಪ ಮತ್ತು ಒಣಹಣ್ಣುಗಳನ್ನು ಸೇರಿಸಿ ವಿಶೇಷ ಮಿಶ್ರಣವನ್ನು ತಯಾರಿಸಿದರು. ಹಲವು ಗಂಟೆಗಳ ಕಾಲ ಅದನ್ನು ನಿಧಾನವಾಗಿ ಕುದಿಸಿ, ನಿರಂತರವಾಗಿ ಕಲಸುತ್ತಾ ಒಂದು ಹೊಸ ಸಿಹಿಯನ್ನು ರೂಪಿಸಿದರು.
ಕೊನೆಗೆ ಸಿದ್ಧವಾದ ಆ ಸಿಹಿಯ ರುಚಿ ಅವರನ್ನು ಚಕಿತರನ್ನಾಗಿಸಿತು. ಅದೇ ಇಂದಿನ ದೋಧಾ ಬರ್ಫಿ. ಮೊದಲು ಕುಟುಂಬದವರು, ಸ್ನೇಹಿತರು ಅದನ್ನು ಸವಿದರು. ನಂತರ ಅದರ ರುಚಿ ಸುತ್ತಮುತ್ತಲಿನ ಜನರಿಗೂ ತಲುಪಿತು. ಹೀಗೆ ಒಂದು ಸಣ್ಣ ಪ್ರಯೋಗ ಪಂಜಾಬಿನ ಪ್ರಸಿದ್ಧ ಸಿಹಿಯಾಗಿ ಬೆಳೆದಿತು.
ದೋಧಾ ಬರ್ಫಿಯ ವಿಶೇಷತೆ ಏನು?
ಸಾಮಾನ್ಯ ಬರ್ಫಿಗಳಿಗಿಂತ ದೋಧಾ ಬರ್ಫಿ ವಿಭಿನ್ನವಾಗಿದೆ. ಇದರಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳು ಎಮ್ಮೆ ಹಾಲು, ಸಕ್ಕರೆ, ಗೋಧಿ ಹಿಟ್ಟು, ತುಪ್ಪ, ಬಾದಾಮಿ, ಗೋಡಂಬಿ ಸೇರಿದಂತೆ ಒಣಹಣ್ಣುಗಳು. ಈ ಮಿಶ್ರಣವನ್ನು ನಿಧಾನವಾದ ಉರಿಯಲ್ಲಿ ಹಲವು ಗಂಟೆಗಳ ಕಾಲ ಬೇಯಿಸಲಾಗುತ್ತದೆ. ಸರಿಯಾದ ಗಟ್ಟಿತನ ಬಂದ ನಂತರ ಟ್ರೇಗಳಲ್ಲಿ ಸುರಿದು ತಣ್ಣಗಾಗಲು ಬಿಡಲಾಗುತ್ತದೆ. ನಂತರ ಚೌಕಾಕಾರದ ತುಂಡುಗಳಾಗಿ ಕತ್ತರಿಸಲಾಗುತ್ತದೆ. ಇದರ ಚ್ಯೂಯಿ ವಿನ್ಯಾಸ ಮತ್ತು ಗಾಢವಾದ ರುಚಿಯೇ ಇದನ್ನು ಇತರ ಬರ್ಫಿಗಳಿಗಿಂತ ಭಿನ್ನವಾಗಿಸುತ್ತದೆ.
ಪಂಜಾಬಿಗಳು ರುಚಿಕರ ಹಾಗೂ ಪೌಷ್ಟಿಕ ಆಹಾರಗಳನ್ನು ಇಷ್ಟಪಡುವ ಜನರು. ದೋಧಾ ಬರ್ಫಿಗೆ ಬೇಕಾಗುವ ಪದಾರ್ಥಗಳು ಸುಲಭವಾಗಿ ದೊರೆಯುತ್ತಿದ್ದವು. ಜೊತೆಗೆ ಇದರ ಶ್ರೀಮಂತ ರುಚಿ ಹಬ್ಬಗಳು, ಕುಟುಂಬ ಸಮಾರಂಭಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಜನರನ್ನು ಸೆಳೆಯಿತು. ಕ್ರಮೇಣ ಪಂಜಾಬಿನ ಅನೇಕ ಸಿಹಿತಿಂಡಿ ಅಂಗಡಿಗಳು ತಮ್ಮದೇ ಶೈಲಿಯಲ್ಲಿ ದೋಧಾ ಬರ್ಫಿ ತಯಾರಿಸಲು ಆರಂಭಿಸಿದವು. ಹೀಗೆ ಈ ಸಿಹಿಯ ಖ್ಯಾತಿ ಪಂಜಾಬಿನಾದ್ಯಂತ ಹರಡಿತು.
ದೇಶ ವಿಭಜನೆಯೊಂದಿಗೂ ಬೆಸೆದಿದೆ ಇದರ ಇತಿಹಾಸ
ದೋಧಾ ಬರ್ಫಿಯ ಕಥೆ ಕೇವಲ ಸಿಹಿತಿಂಡಿಯ ಕಥೆಯಲ್ಲ. ಅದು ಭಾರತದ ಇತಿಹಾಸದ ಮಹತ್ವದ ಘಟನೆಯೊಂದಿಗೂ ಸಂಬಂಧಿಸಿದೆ. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆ ನಡೆದಾಗ, ಹರ್ಬನ್ಸ್ ವಿಗ್ ಕುಟುಂಬ ಪಾಕಿಸ್ತಾನದ ಭಾಗವಾಗಿರುವ ಸರ್ಗೋಧಾದಲ್ಲಿ ವಾಸಿಸುತ್ತಿತ್ತು. ವಿಭಜನೆಯ ನಂತರ ಲಕ್ಷಾಂತರ ಜನರಂತೆ ಇವರ ಕುಟುಂಬವೂ ಸ್ಥಳಾಂತರಗೊಳ್ಳಬೇಕಾಯಿತು. ನಂತರ ಅವರು ಪಂಜಾಬಿನ ಕೋಟ್‌ಕಾಪುರಾ ಎಂಬ ಪ್ರದೇಶದಲ್ಲಿ ನೆಲೆಸಿದರು. ಆದರೂ ಅವರು ತಮ್ಮ ಕುಟುಂಬದ ಪರಂಪರೆಯ ದೋಧಾ ಬರ್ಫಿ ರೆಸಿಪಿಯನ್ನು ಕೈಬಿಡಲಿಲ್ಲ. ಹೊಸ ಊರಿನಲ್ಲೂ ಅದೇ ರುಚಿಯಲ್ಲಿ ಸಿಹಿ ತಯಾರಿಸಿ ಜನರಿಗೆ ಪರಿಚಯಿಸಿದರು.
ರಾಯಲ್ ಡೋಧಾ ಹೌಸ್‌ನ ಯಶೋಗಾಥೆ
ನಂತರ ವಿಗ್ ಕುಟುಂಬ ರಾಯಲ್ ದೋಧಾ ಹೌಸ್ ಎಂಬ ಸಂಸ್ಥೆಯನ್ನು ಆರಂಭಿಸಿತು. ಅವರು ತಯಾರಿಸುತ್ತಿದ್ದ ದೋಧಾ ಬರ್ಫಿ ಬೇಗನೆ ಪ್ರಸಿದ್ಧಿಯಾಯಿತು. ಪೀಳಿಗೆಯಿಂದ ಪೀಳಿಗೆಗೆ ಸಾಗಿದ ಈ ರೆಸಿಪಿ ಇಂದಿಗೂ ಜನರನ್ನು ಆಕರ್ಷಿಸುತ್ತಿದೆ.
ಕಾಲಕ್ರಮೇಣ ಪಂಜಾಬಿ ಸಮುದಾಯದ ಜನರು ಅಮೆರಿಕ, ಕೆನಡಾ, ಬ್ರಿಟನ್ ಸೇರಿದಂತೆ ಅನೇಕ ದೇಶಗಳಿಗೆ ವಲಸೆ ಹೋದರು. ಅವರೊಂದಿಗೆ ದೋಧಾ ಬರ್ಫಿಯೂ ವಿಶ್ವದ ವಿವಿಧ ಭಾಗಗಳಿಗೆ ತಲುಪಿತು. ಭಾರತೀಯ ಸಿಹಿತಿಂಡಿಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿದ್ದಂತೆ ದೋಧಾ ಬರ್ಫಿಗೂ ಹೊಸ ಅಭಿಮಾನಿಗಳು ಸಿಕ್ಕರು. ಒಂದು ಹಂತದಲ್ಲಿ ಇದರ 100ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಈ ಸಿಹಿ ಅಮೆರಿಕದ ವೈಟ್ ಹೌಸ್‌ಗೂ ತಲುಪಿತ್ತು ಎನ್ನಲಾಗುತ್ತದೆ.
ಆರೋಗ್ಯಕ್ಕೂ ಕೆಲವು ಲಾಭಗಳಿವೆ
ದೋಧಾ ಬರ್ಫಿ ಸಿಹಿತಿಂಡಿಯಾದರೂ ಅದರಲ್ಲಿರುವ ಕೆಲವು ಪದಾರ್ಥಗಳು ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಹಾಲಿನಿಂದ ಕ್ಯಾಲ್ಸಿಯಂ, ಪ್ರೋಟೀನ್, ಒಣಹಣ್ಣುಗಳಿಂದ ಉತ್ತಮ ಕೊಬ್ಬು, ಫೈಬರ್, ವಿಟಮಿನ್‌ಗಳು, ಖನಿಜಾಂಶಗಳು ಸಿಗುತ್ತವೆ. ಆದರೆ ಇದರಲ್ಲಿ ಸಕ್ಕರೆ ಮತ್ತು ತುಪ್ಪ ಕೂಡ ಇರುವುದರಿಂದ ಮಿತವಾಗಿ ಸೇವಿಸುವುದು ಉತ್ತಮ.
ಬರ್ಫಿಯ ಇತಿಹಾಸವೂ ರೋಚಕ
"ಬರ್ಫಿ" ಎಂಬ ಪದವು ಪರ್ಷಿಯನ್ ಭಾಷೆಯ "ಬರ್ಫ್" ಎಂಬ ಪದದಿಂದ ಬಂದಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. "ಬರ್ಫ್" ಎಂದರೆ ಹಿಮ. ಆರಂಭಿಕ ಬರ್ಫಿಗಳು ಬಿಳಿ ಬಣ್ಣದಲ್ಲಿದ್ದ ಕಾರಣ ಈ ಹೆಸರು ಬಂದಿರಬಹುದು. ಭಾರತದಲ್ಲಿ ಶತಮಾನಗಳಿಂದ ಬರ್ಫಿ ತಯಾರಿಸಲಾಗುತ್ತಿದೆ. ಪ್ರತಿ ಪ್ರದೇಶವೂ ತನ್ನದೇ ಆದ ಪದಾರ್ಥಗಳನ್ನು ಬಳಸಿ ವಿಭಿನ್ನ ಬರ್ಫಿಗಳನ್ನು ಅಭಿವೃದ್ಧಿಪಡಿಸಿದೆ. ಇಂದು ಭಾರತದಲ್ಲಿ ಕಾಜು ಬರ್ಫಿ, ಪಿಸ್ತಾ ಬರ್ಫಿ, ತೆಂಗಿನಕಾಯಿ ಬರ್ಫಿ, ಬೇಸನ್ ಬರ್ಫಿ, ಚಾಕೊಲೇಟ್ ಬರ್ಫಿ ಇವೆಲ್ಲ ಜನಪ್ರಿಯ.
ಬರ್ಫಿಯ ಇತಿಹಾಸದಲ್ಲಿ ಮತ್ತೊಂದು ವಿಶೇಷ ಅಧ್ಯಾಯವೆಂದರೆ ತಿರಂಗಾ ಬರ್ಫಿ. ಉತ್ತರ ಪ್ರದೇಶದ ವಾರಣಾಸಿಯ ಸಿಹಿತಿಂಡಿ ತಯಾರಕರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗೌರವ ಸಲ್ಲಿಸಲು ಮೂರು ಬಣ್ಣಗಳ ಬರ್ಫಿಯನ್ನು ತಯಾರಿಸಿದ್ದರು ಎನ್ನಲಾಗುತ್ತದೆ. ಭಾರತದ ಧ್ವಜದ ಬಣ್ಣಗಳಿಂದ ಪ್ರೇರಿತವಾದ ಈ ಸಿಹಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ಜನಪ್ರಿಯವಾಯಿತು.
ಫಾಸ್ಟ್ ಫುಡ್ ಮತ್ತು ಹೊಸ ಹೊಸ ಡೆಸರ್ಟ್‌ಗಳು ಬಂದರೂ ಬರ್ಫಿಯ ಜನಪ್ರಿಯತೆ ಕಡಿಮೆಯಾಗಿಲ್ಲ. ಇಂದಿಗೂ ಹಬ್ಬಗಳಲ್ಲಿ, ಮದುವೆಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ, ಕುಟುಂಬ ಸಮಾರಂಭಗಳಲ್ಲಿ ಬರ್ಫಿ ಪ್ರಮುಖ ಸ್ಥಾನದಲ್ಲಿದೆ. ಅನೇಕ ದೇವಾಲಯಗಳಲ್ಲೂ ಬರ್ಫಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ.
(ಬರಹ: ಭವಾನಿ ಭಟ್)














Click it and Unblock the Notifications