ಎದೆ ನೋವು, ಉಸಿರಾಟದ ತೊಂದರೆ ಹೃದಯಾಘಾತವೇ ಆಗಿರಬೇಕೆಂದಿಲ್ಲ: ಹ್ಯಾಪಿ ಹಾರ್ಟ್ ಸಿಂಡ್ರೋಮ್‌ನಲ್ಲೂ ಹೀಗಾಗುತ್ತೆ! ಏನಿದು?

ಕೇವಲ ದುಃಖ ಮಾನಸಿಕ ಒತ್ತಡ ಹೆಚ್ಚಾದಾಗ ಮಾತ್ರ ವ್ಯಕ್ತಿ ಆಸ್ಪತ್ರೆ ಸೇರುವುದಲ್ಲ, ಅತಿಯಾದ ಸಂತೋಷದಿಂದಲೂ ಆಸ್ಪತ್ರೆಗೆ ದಾಖಲಾಗಬಹುದು. ಹೌದು, ಇದು ಅಕ್ಷರಶಃ ಸತ್ಯ. ಇತ್ತೀಚೆಗೆ ನಡೆದ ಫಟನೆಯೇ ಇದಕ್ಕೆ ಸಾಕ್ಷಿ. ಮದುವೆ, ಸಂಬಂಧಿಕರು, ಸಂಗೀತ, ನಗು ಮತ್ತು ಮಗಳ ವಿದಾಯ... ಪ್ರತಿಯೊಬ್ಬ ತಾಯಿಯ ಜೀವನದ ಅತ್ಯಂತ ಭಾವನಾತ್ಮಕ ಮತ್ತು ಸ್ಮರಣೀಯ ಕ್ಷಣಗಳು ಇವು. ಆದರೆ ಇಲ್ಲೊಬ್ಬ ಮಹಿಳೆಗೆ, ಈ ಸಂತೋಷವೇ ಇದ್ದಕ್ಕಿದ್ದಂತೆ ಮೆಡಿಕಲ್‌ ಎಮರ್ಜೆನ್ಸಿಯಾಗಿ ಬದಲಾಗಿದೆ.

ಮಗಳ ಮದುವೆಯ ನಂತರ ಹದಗೆಟ್ಟ ಆರೋಗ್ಯ

ಆಕ್ಸ್‌ಫರ್ಡ್ ಮೆಡಿಕಲ್ ಕೇಸ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 65 ವರ್ಷದ ಮಹಿಳೆಯೊಬ್ಬರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ನಂತರ ಮುಂದಿನ ಮೂರು ದಿನಗಳವರೆಗೆ ಅವರಿಗೆ ಎದೆ ನೋವು ಮತ್ತು ಉಸಿರಾಟದ ತೊಂದರೆಯ ಸಮಸ್ಯೆ ಉಂಟಾಗಿದೆ. ಆರೋಗ್ಯ ತೀರಾ ಹದಗೆಟ್ಟಾಗ, ಅವರ ಕುಟುಂಬವು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದೆ. ವೈದ್ಯರು ಆರಂಭದಲ್ಲಿ ಇದು ಹೃದಯಾಘಾತವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Happy Hart Syndrome

ಎಲ್ಲಾ ಪರೀಕ್ಷೆಗಳನ್ನು ನಡೆಸಿದ ವೈದ್ಯರು

ಆಸ್ಪತ್ರೆಗೆ ಬಂದ ನಂತರ, ವೈದ್ಯರು ಮಹಿಳೆಗೆ ಹಲವಾರು ಅಗತ್ಯ ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಹೃದಯಾಘಾತವಾಗಿರಬಹುದು ಎನ್ನುವ ಸಂದೇಹದ ಮೇಲೆ ಆಂಜಿಯೋಗ್ರಫಿ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದಾರೆ. ದರು. ಹೀಗೆ ವೈದ್ಯರು ತಪಾಸಣೆ ನಡೆಸಿದಾಗ ಹೃದಯದ ರಕ್ತನಾಳಗಳಲ್ಲಿ ಯಾವುದೇ ರೀತಿಯ ಬ್ಲಾಕೇಜ್‌ ಇಲ್ಲ ಎನ್ನುವುದು ಕಂಡು ಬಂದಿದೆ. ಇದರ ಹೊರತಾಗಿಯೂ, ಮಹಿಳೆಯ ಹೃದಯದ ಎಡಭಾಗವು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹೃದಯದ ಒಂದು ಭಾಗವು ಊದಿಕೊಂಡಿತ್ತು. ಇದರಿಂದಾಗಿ ಹೃದಯವು ರಕ್ತವನ್ನು ಪಂಪ್ ಮಾಡುವುದು ಕಷ್ಟವಾಗುತ್ತಿತ್ತು. ಆಗ ವೈದ್ಯರು ಇದು ಹೃದಯಾಘಾತವಲ್ಲ, ಬದಲಿಗೆ "ಹ್ಯಾಪಿ ಹಾರ್ಟ್ ಸಿಂಡ್ರೋಮ್ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

'ಹ್ಯಾಪಿ ಹಾರ್ಟ್ ಸಿಂಡ್ರೋಮ್' ಎಂದರೇನು?

"ಹ್ಯಾಪಿ ಹಾರ್ಟ್ ಸಿಂಡ್ರೋಮ್" ಎಂದೂ ಕರೆಯಲ್ಪಡುವ ಟಕೋಟ್ಸುಬೊ ಕಾರ್ಡಿಯೊಮಯೋಪತಿಯಲ್ಲಿ ಹೃದಯವು ಇದ್ದಕ್ಕಿದ್ದಂತೆ ವೀಕ್‌ ಆಗಿ ತಾತ್ಕಾಲಿಕವಾಗಿ ಅದರ ಕಾರ್ಯವನ್ನು ದುರ್ಬಲಗೊಳಿಸುವ ಸ್ಥಿತಿಯಾಗಿದೆ. ಇದರ ಲಕ್ಷಣಗಳು ಹೃದಯಾಘಾತದ ಲಕ್ಷಣಗಳನ್ನು ಹೋಲುತ್ತವೆ. ರೋಗಿಗಳಲ್ಲಿ ಎದೆ ನೋವು, ಉಸಿರಾಟದ ತೊಂದರೆ ಮತ್ತು ಆತಂಕ ಹೆಚ್ಚಾಗುತ್ತದೆ. ಆದರೆ ಹೃದಯಾಘಾತ ಮತ್ತು ಹ್ಯಾಪಿ ಹಾರ್ಟ್ ಸಿಂಡ್ರೋಮ್ ನಡುವೆ ಇರುವ ದೊಡ್ಡ ವ್ಯತ್ಯಾಸವೆಂದರೆ ಹೃದಯಾಘಾತದಲ್ಲಿ, ಹೃದಯದ ಅಪಧಮನಿಗಳು ಬ್ಲಾಕ್‌ ಆಗಿರುತ್ತವೆ, ಹ್ಯಾಪಿ ಹಾರ್ಟ್ ಸಿಂಡ್ರೋಮ್‌ನಲ್ಲಿ ಹೀಗಾಗುವುದಿಲ್ಲ.

ಕೇವಲ ದುಃಖವಲ್ಲ, ಅತಿ ಸಂತೋಷವೂ ಕಾರಣವಾಗಬಹುದು

ಸಾಮಾನ್ಯವಾಗಿ ಆಘಾತ, ಅತಿಯಾದ ದುಃಖ, ಒತ್ತಡ ಅಥವಾ ಭಾವನಾತ್ಮಕ ಆಘಾತದ ನಂತರ ಇಂತಹ ಕೇಸ್‌ಗಳು ಬೆಳಕಿಗೆ ಬರುತ್ತವೆ. ಹಾಗಾಗಿ ಇದನ್ನು ಕೆಲವೊಮ್ಮೆ "ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್" ಎಂದು ಕೂಡಾ ಕರೆಯಲಾಗುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ, ಅತಿಯಾದ ಸಂತೋಷವು ದೇಹದಲ್ಲಿ ಅಂತಹ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಮಗಳ ಮದುವೆ, ಬಹಳ ಸಮಯದ ನಂತರ ಪ್ರೀತಿಪಾತ್ರರನ್ನು ಭೇಟಿಯಾಗುವುದು, ದೊಡ್ಡ ಲಾಟರಿ ಗೆಲ್ಲುವುದು ಅಥವಾ ಗಮನಾರ್ಹ ಯಶಸ್ಸನ್ನು ಸಾಧಿಸುವಂತಹ ಘಟನೆಗಳು ಸಹ ಈ ಸ್ಥಿತಿಗೆ ಕಾರಣವಾಗಬಹುದು.

ಈ ರೋಗ ಎಷ್ಟು ಅಪರೂಪ?

ವೈದ್ಯರ ಪ್ರಕಾರ, ಹೃದಯಾಘಾತದ ಅಪಾಯದಲ್ಲಿರುವ ಜನರಲ್ಲಿ ಕೇವಲ 1 ರಿಂದ 3 ಪ್ರತಿಶತದಷ್ಟು ಜನರು ಮಾತ್ರ ಟಕೋಟ್ಸುಬೊ ಕಾರ್ಡಿಯೊಮಯೋಪತಿಯಿಂದ ಬಳಲುತ್ತಾರೆ. ಇವರಲ್ಲಿ, ಕೇವಲ 4 ಪ್ರತಿಶತದಷ್ಟು ಜನರು ಮಾತ್ರ ದುಃಖದಿಂದಲ್ಲ, ಅತಿಯಾದ ಸಂತೋಷದಿಂದ ಪ್ರಚೋದಿಸಲ್ಪಡುತ್ತಾರೆ. ಇದರರ್ಥ ಈ ಸ್ಥಿತಿ ಅಪರೂಪ.

ಹೃದಯದ ಮೇಲೆ ಏಕೆ ಪರಿಣಾಮ ಬೀರುತ್ತದೆ?

ಒಬ್ಬ ವ್ಯಕ್ತಿಯು ತುಂಬಾ ಭಾವನಾತ್ಮಕವಾದಾಗ, ಅದು ಸಂತೋಷವೂ ಆಗಿರಬಹುದು ಅಥವಾ ದುಃಖದಿಂದಾಗಿರಬಹುದು, ದೇಹದಲ್ಲಿನ ಒತ್ತಡದ ಹಾರ್ಮೋನುಗಳು ವೇಗವಾಗಿ ಹೆಚ್ಚಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಈ ಹಾರ್ಮೋನುಗಳು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ತಜ್ಞರ ಪ್ರಕಾರ, ಎರಡೂ ಸಂದರ್ಭಗಳಲ್ಲಿ, ದೇಹದ ಸಹಾನುಭೂತಿಯ ನರಮಂಡಲವು ಸಕ್ರಿಯಗೊಳ್ಳುತ್ತದೆ ಮತ್ತು ಕ್ಯಾಟೆಕೊಲಮೈನ್‌ಗಳು ಎಂಬ ಹಾರ್ಮೋನುಗಳ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಸಂತೋಷ ಮತ್ತು ದುಃಖಕ್ಕೆ ದೇಹದ ಪ್ರತಿಕ್ರಿಯೆ ಸ್ವಲ್ಪ ಭಿನ್ನವಾಗಿರಬಹುದು, ಆದರೆ ಎರಡೂ ಸಂದರ್ಭಗಳು ಹೃದಯದ ಮೇಲೆ ತಾತ್ಕಾಲಿಕ ಒತ್ತಡವನ್ನುಂಟುಮಾಡಬಹುದು.

ಸಕಾಲಿಕ ಚಿಕಿತ್ಸೆಯಿಂದ ಸಂಪೂರ್ಣ ಚೇತರಿಕೆ

ಒಳ್ಳೆಯ ಸುದ್ದಿ ಏನೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ, ಈ ಸ್ಥಿತಿ ಶಾಶ್ವತವಲ್ಲ. ಸರಿಯಾದ ಚಿಕಿತ್ಸೆಯು ಸಮಯಕ್ಕೆ ಸರಿಯಾಗಿ ದೊರೆತರೆ, ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು. ಈ ಪ್ರಕರಣದ ಮಹಿಳೆಗೆ ಕೂಡಾ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಲಾಯಿತು. ಸ್ವಲ್ಪ ಸಮಯದ ನಂತರ, ಆಕೆಯ ಹೃದಯವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಈಗ, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆಂದು ಹೇಳಲಾಗುತ್ತದೆ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

ಒಂದು ಪ್ರಮುಖ ಭಾವನಾತ್ಮಕ ಕ್ಷಣದ ನಂತರ ನಿಮಗೆ ಎದೆ ನೋವು, ಉಸಿರಾಟದ ತೊಂದರೆ, ದೌರ್ಬಲ್ಯ ಅಥವಾ ಚಡಪಡಿಕೆ ಅನುಭವವಾದರೆ, ಅದನ್ನು ಹಗುರವಾಗಿ ಪರಿಗಣಿಸಬಾರದು ಎಂದು ತಜ್ಞರು ಹೇಳುತ್ತಾರೆ. ಸಂತೋಷವೇ ಕಾರಣವಾಗಿದ್ದರೂ ಸಹ, ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಜನರು ಈ ಸ್ಥಿತಿಯ ಬಗ್ಗೆ ಜಾಗೃತರಾಗಬೇಕು ಎನ್ನುವುದು ವೈದ್ಯರ ಆಶಯ. ಇದು ಅಪರೂಪದ ಸ್ಥಿತಿಯಾಗಿದ್ದರೂ, ಮಾನವ ದೇಹವು ದುಃಖಕ್ಕೆ ಮಾತ್ರವಲ್ಲದೆ ಅತಿಯಾದ ಸಂತೋಷಕ್ಕೂ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು ಎಂಬುದನ್ನು ವಿವರಿಸುತ್ತದೆ. ಒಂದು ಪ್ರಮುಖ ಆಚರಣೆ ಅಥವಾ ಭಾವನಾತ್ಮಕ ಕ್ಷಣದ ನಂತರ ದೇಹವು ಅಸಾಮಾನ್ಯ ಸಂಕೇತಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರೆ, ಅವುಗಳನ್ನು ನಿರ್ಲಕ್ಷಿಸಬಾರದು. ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯು ಅನೇಕ ಗಂಭೀರ ತೊಡಕುಗಳನ್ನು ತಡೆಯಬಹುದು.

(ಬರಹ : ರಂಜಿತಾ ಆರ್.ಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+