Dengue Fever: ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದು, ಸೊಳ್ಳೆಗಳ ನಿಯಂತ್ರಣ ಮಾಡುವ ಸುಲಭ ವಿಧಾನಗಳು ಇಲ್ಲಿವೆ
ದೇಶದ ಹಲವೆಡೆ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದು, ಇದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಬದಲಾಗುತ್ತಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,000ದ ಗಡಿ ದಾಡಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ದಿನದ ಹಿಂದೆ ಎರಡನೇ ಶಂಕಿತ ಡೆಂಗ್ಯೂ ಸಾವು ವರದಿಯಾಗಿದೆ.
ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರವು ಉಷ್ಣವಲಯದ ಕಾಯಿಲೆಯಾಗಿದ್ದು, ಸೋಂಕು ಪ್ರಾರಂಭವಾದ ಮೂರರಿಂದ ಹದಿನಾಲ್ಕು ದಿನಗಳ ನಂತರ ಡೆಂಗ್ಯೂ ಪ್ರಾರಂಭವಾಗುತ್ತದೆ. ಡೆಂಗ್ಯೂ ಜ್ವರದ ಸಾಮಾನ್ಯ ಲಕ್ಷಣಗಳೆಂದರೆ ವಾಂತಿ, ಅಧಿಕ ಜ್ವರ, ಸ್ನಾಯು ಮತ್ತು ಕೀಲು ನೋವು, ದೇಹದಲ್ಲಿ ದದ್ದುಗಳು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಡೆಂಗ್ಯೂ ಜ್ವರ ಮಾರಣಾಂತಿಕವಾಗಬಹುದು. ಡೆಂಗ್ಯೂ ಜ್ವರವು ಈಡಿಸ್ ಕುಲದ ಅನೇಕ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಸೊಳ್ಳೆಗಳು ನಿಂತ ಮತ್ತು ಕೊಳಕು ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ನಾವು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಡೆಂಗ್ಯೂ ಜ್ವರ ಹರಡುವುದನ್ನು ತಡೆಯಬಹುದು. ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಳ್ಳಬಹುದು. ನಾವು ತೆಗೆದುಕೊಳ್ಳಬಹುದಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ.
ಸೊಳ್ಳೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳು
* ನಿಂತ ನೀರನ್ನು ಸ್ವಚ್ಛಗೊಳಿಸಿ:
ಹಲವು ದಿನಗಳಿಂದ ಒಂದೇ ಕಡೆ ನಿಂತಿರುವ ನೀರು ಸೊಳ್ಳೆಗಳಿಗೆ ಪರಿಪೂರ್ಣ ಸಂತಾನೋತ್ಪತ್ತಿ ಸ್ಥಳವಾಗಿದೆ. ಇದು ಡೆಂಗ್ಯೂ ವೈರಸ್ ಅನ್ನು ಮತ್ತಷ್ಟು ಹರಡಿಸುತ್ತದೆ ಮತ್ತು ಸುತ್ತಮುತ್ತಲಿನ ಜನರಿಗೆ ಸೋಂಕು ತರುತ್ತದೆ. ನಮ್ಮ ಹತ್ತಿರ ಯಾವುದೇ ರೀತಿಯ ನೀರು ನಿಂತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಆಗ್ಗಾಗೆ ಇದನ್ನು ಪರೀಕ್ಷಿಸುವುದು ಮುಖ್ಯವಾಗಿದೆ. ಅದನ್ನು ಸ್ವಚ್ಛ ಮಾಡಬೇಕಾಗುತ್ತದೆ.

* ಬಳಕೆಯಾಗದ ನೀರಿನ ಪಾತ್ರೆಗಳನ್ನು ಖಾಲಿ ಮಾಡಿ:
ತೆರೆದ ಜಾಗದಲ್ಲಿ ನೀರಿನ ಪಾತ್ರೆಗಳನ್ನು ತೆರೆದರೆ, ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಡುತ್ತದೆ. ನಮ್ಮ ಸುತ್ತಲಿನ ಬಳಕೆಯಾಗದ ನೀರಿನ ಪಾತ್ರೆಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಅವುಗಳನ್ನು ನಿಯಮಿತವಾಗಿ ಖಾಲಿ ಮಾಡಬೇಕು ಮತ್ತು ಸ್ವಚ್ಛವಾಗಿ ಇಡಬೇಕು. ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
* ಚರಂಡಿಗಳನ್ನು ಸ್ವಚ್ಛವಾಗಿಡಿ:
ನಮ್ಮ ಮನೆಯ ಸುತ್ತಲಿನ ಒಳಚರಂಡಿಯನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅವುಗಳ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು . ಚರಂಡಿಗಳಲ್ಲಿ ತುಂಬಿರುವ ನೀರು ಮತ್ತು ತ್ಯಾಜ್ಯ ಸ್ವಚ್ಛವಾಗುವಂತೆ ನೋಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ನಮ್ಮ ಸುತ್ತಮುತ್ತಲಿನ ಚರಂಡಿಗಳನ್ನು ಸ್ವಚ್ಛಗೊಳಿಸಬಹುದು. ವಿಶೇಷವಾಗಿ ಮಳೆಗಾಲದಲ್ಲಿ, ಚರಂಡಿಗಳು ತುಂಬಿ ಹರಿಯುತ್ತವೆ ಕಸ ಅಲ್ಲಿ ಸಂಗ್ರಹಣೆಯಾದರೆ ಸೊಳ್ಳೆಗಳು ಹೆಚ್ಚಾಗಲಿವೆ.
* ಸೊಳ್ಳೆ ನಿವಾರಕಗಳನ್ನು ಬಳಸಿ:
ನಮ್ಮ ಮನೆಯ ಸುತ್ತಲೂ ಸೊಳ್ಳೆಗಳ ಉಲ್ಬಣ ಹೆಚ್ಚಾಗಿ ಕಂಡುಬಂದರೆ, ನಾವು ಸರಿಯಾದ ಸೊಳ್ಳೆ ನಿವಾರಕಗಳನ್ನು ಬಳಸಬೇಕು. ನಮ್ಮನ್ನು ಸೊಳ್ಳೆಗಳಿಂದ ಸುರಕ್ಷಿತವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಸೊಳ್ಳೆ ಕಾಯಿಲ್, ಸೊಳ್ಳೆ ಪರದೆಗಳನ್ನು ಬಳಸಬೇಕು.












Click it and Unblock the Notifications