Chanakya Niti: ಸಾಲ ತೆಗೆದುಕೊಳ್ಳುವ ಮುನ್ನ ಚಾಣಕ್ಯನ ಈ 7 ನಿಯಮ ನೆನಪಿಟ್ಟುಕೊಳ್ಳಿ, ಇಲ್ಲದಿದ್ದರೆ ಹಣಕಾಸಿನ ಸಂಕಷ್ಟ!
ಮನೆ ಖರೀದಿಸಲು, ಮಕ್ಕಳ ಶಿಕ್ಷಣಕ್ಕೆ, ವ್ಯಾಪಾರ ಆರಂಭಿಸಲು ಅಥವಾ ತುರ್ತು ಪರಿಸ್ಥಿತಿಯಲ್ಲಿ ಹಣ ಬೇಕಾದಾಗ ಸಾಲ ಅನಿವಾರ್ಯವಾಗಬಹುದು. ಆದರೆ ಸಾಲ ತೆಗೆದುಕೊಳ್ಳುವುದು ಸುಲಭ. ಅದನ್ನು ತೀರಿಸುವುದು ಕೆಲವೊಮ್ಮೆ ದೊಡ್ಡ ಸವಾಲು. ಇಂದಿನ ದಿನಗಳಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ, ಕಾರು ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, Buy Now Pay Later ಹೀಗೆ ಹಲವು ರೀತಿಯ ಸಾಲಗಳು ನಮ್ಮ ಸುತ್ತಲಿವೆ. ಸಾಲ ಸಿಕ್ಕಿತು ಎಂಬ ಕಾರಣಕ್ಕೆ ಅದನ್ನು ತೆಗೆದುಕೊಳ್ಳುವುದು ಸರಿಯಾದ ಹಣಕಾಸಿನ ನಿರ್ಧಾರವಲ್ಲ.
ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲಗಾರ ಮತ್ತು ಸಾಲ ನೀಡುವವರ ನಡುವಿನ ವ್ಯವಹಾರ, ಬಡ್ಡಿ, ಸಾಲ ಮರುಪಾವತಿ ಮತ್ತು ಸಾಲದ ನಿಯಮಗಳ ಬಗ್ಗೆ ವಿವರವಾದ ಚರ್ಚೆಯೇ ಇದೆ. ಅಂದರೆ ಸಾವಿರಾರು ವರ್ಷಗಳ ಹಿಂದೆಯೇ ಸಾಲ ಎನ್ನುವುದು ಕೇವಲ ಹಣ ಕೊಡುವುದು-ತೆಗೆದುಕೊಳ್ಳುವುದಲ್ಲ, ಅದನ್ನು ನಿಯಮ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಆರ್ಥಿಕ ವ್ಯವಹಾರ ಎಂದು ಪರಿಗಣಿಸಲಾಗಿತ್ತು. ಇಂದಿನ ವೈಯಕ್ತಿಕ ಹಣಕಾಸಿಗೆ ಚಾಣಕ್ಯನ ಆಲೋಚನೆಗಳನ್ನು ಅನ್ವಯಿಸಿದರೆ ಸಾಲ ತೆಗೆದುಕೊಳ್ಳುವ ಮೊದಲು ಈ 7 ವಿಷಯಗಳನ್ನು ನೆನಪಿಟ್ಟುಕೊಳ್ಳಬಹುದು.

1. ಸಾಲ ತೆಗೆದುಕೊಳ್ಳುವ ಮುನ್ನ ಅದರ ಬೆಲೆ ತಿಳಿದುಕೊಳ್ಳಿ
ಸಾಲ ಎಂದರೆ ನೀವು ಪಡೆಯುವ ಮೊತ್ತ ಮಾತ್ರವಲ್ಲ. ಅದರ ಜೊತೆಗೆ ಬಡ್ಡಿಯೂ ಬರುತ್ತದೆ. "ಅರ್ಥಶಾಸ್ತ್ರʼದ ಸಾಲದ ಅಧ್ಯಾಯದಲ್ಲಿ ಬೇರೆ ಬೇರೆ ರೀತಿಯ ಸಾಲಗಳಿಗೆ ಬೇರೆ ಬಡ್ಡಿದರಗಳನ್ನು ಗುರುತಿಸಲಾಗಿದೆ. ಅಪಾಯ ಹೆಚ್ಚಾದಂತೆ ಬಡ್ಡಿಯೂ ಹೆಚ್ಚಾಗುವ ವ್ಯವಸ್ಥೆಯೂ ಅಲ್ಲಿ ಕಾಣಿಸುತ್ತದೆ.
ಇದನ್ನು ಇಂದಿನ ಕಾಲಕ್ಕೆ ಅನ್ವಯಿಸಿದರೆ ಸರಳ ಪಾಠ, ಸಾಲದ ಮೊತ್ತ ಎಷ್ಟು ಎನ್ನುವುದಕ್ಕಿಂತ, ಕೊನೆಗೆ ನೀವು ಒಟ್ಟು ಎಷ್ಟು ಹಣ ಹಿಂದಿರುಗಿಸುತ್ತೀರಿ ಎನ್ನುವುದನ್ನು ನೋಡಿ. ಉದಾಹರಣೆಗೆ ₹5 ಲಕ್ಷ ಸಾಲ ಸಿಗುತ್ತದೆ ಎಂಬುದನ್ನು ಮಾತ್ರ ನೋಡಬೇಡಿ. ಬಡ್ಡಿ, ಪ್ರೊಸೆಸಿಂಗ್ ಶುಲ್ಕ, ಇತರ ಶುಲ್ಕಗಳು ಸೇರಿ ಒಟ್ಟು ಮರುಪಾವತಿ ಎಷ್ಟು ಎನ್ನುವುದನ್ನು ತಿಳಿದುಕೊಳ್ಳಿ.
2. ಬಡ್ಡಿದರವನ್ನು ಅರ್ಥಮಾಡಿಕೊಳ್ಳದೆ ಸಾಲಕ್ಕೆ ಸಹಿ ಹಾಕಬೇಡಿ
ಚಾಣಕ್ಯನ ಕಾಲದಲ್ಲಿಯೇ ಸಾಲದ ಬಡ್ಡಿಗೆ ನಿಯಮಗಳಿದ್ದವು. ಒಪ್ಪಂದದಲ್ಲಿ ನಿಗದಿಯಾಗದ ಬಡ್ಡಿಯನ್ನು ನಂತರ ಹೆಚ್ಚಿಸಿ ವಸೂಲಿ ಮಾಡುವುದಕ್ಕೂ ನಿಯಮಗಳಿದ್ದವು. ಇಂದಿನ ಸಾಲಗಾರರು ಕೂಡ ಇದೇ ಶಿಸ್ತನ್ನು ಅನುಸರಿಸಬಹುದು.
ಸಾಲ ತೆಗೆದುಕೊಳ್ಳುವಾಗ ಈ ಪ್ರಶ್ನೆಗಳನ್ನು ಕೇಳಿ: ಬಡ್ಡಿದರ ಎಷ್ಟು? ಇದು ಸ್ಥಿರ ಬಡ್ಡಿದರವೇ ಅಥವಾ ಬದಲಾಗುವ ಬಡ್ಡಿದರವೇ? ಒಟ್ಟು ಬಡ್ಡಿ ಎಷ್ಟು ಪಾವತಿಸಬೇಕು? ಯಾವುದೇ ಹೆಚ್ಚುವರಿ ಶುಲ್ಕಗಳಿವೆಯೇ? ಮುಂಚಿತವಾಗಿ ಸಾಲ ತೀರಿಸಿದರೆ ಶುಲ್ಕವಿದೆಯೇ? EMI ಕಡಿಮೆ ಇದೆ ಎನ್ನುವುದೊಂದೇ ಕಾರಣಕ್ಕೆ ಸಾಲ ಒಳ್ಳೆಯದು ಎಂದುಕೊಳ್ಳಬೇಡಿ.
3. ಸಾಲದ ಕಂತು ನಿಮ್ಮ ಆದಾಯವನ್ನು ಉಸಿರುಗಟ್ಟಿಸಬಾರದು
ಚಾಣಕ್ಯನ ಆರ್ಥಿಕ ಚಿಂತನೆಯಲ್ಲಿರುವ ಪ್ರಮುಖ ಅಂಶವೆಂದರೆ ಹಣಕಾಸಿನ ಸ್ಥಿರತೆ. ʼಅರ್ಥಶಾಸ್ತ್ರʼದಲ್ಲಿ ಹಣಕಾಸಿನ ವ್ಯವಹಾರಗಳನ್ನು ರಾಜ್ಯದ ಆರ್ಥಿಕ ಕ್ಷೇಮದೊಂದಿಗೆ ಜೋಡಿಸಲಾಗಿದೆ. ಇಂದು ಇದರ ಅರ್ಥವೆಂದರೆ, ಸಾಲದ EMI ಕಟ್ಟಿದ ನಂತರ ಜೀವನ ನಡೆಸಲು ಹಣ ಉಳಿಯಬೇಕು.
ಉದಾಹರಣೆಗೆ ತಿಂಗಳಿಗೆ ₹60,000 ಆದಾಯವಿದ್ದರೆ, ಹಲವು ಸಾಲಗಳ EMI ಸೇರಿ ₹40,000 ಆಗಿದ್ದರೆ ಕಾಗದದ ಮೇಲೆ ಸಾಲವನ್ನು ನಿರ್ವಹಿಸುತ್ತಿರುವಂತೆ ಕಾಣಬಹುದು. ಆದರೆ ಆಹಾರ, ಬಾಡಿಗೆ, ವಿದ್ಯುತ್, ಮಕ್ಕಳ ಶಿಕ್ಷಣ, ತುರ್ತು ಖರ್ಚುಗಳಿಗೆ ಹಣ ಸಾಲದಿದ್ದರೆ ನಿಮ್ಮ ಹಣಕಾಸು ಒತ್ತಡಕ್ಕೆ ಸಿಲುಕುತ್ತದೆ. ಹೀಗಾಗಿ ಸಾಲ ತೆಗೆದುಕೊಳ್ಳುವ ಮುನ್ನ ನಿಮ್ಮ ಮಾಸಿಕ ಬಜೆಟ್ ಪರಿಶೀಲಿಸಿ.
4. ಒಂದು ಸಾಲ ತೀರಿಸಲು ಮತ್ತೊಂದು ಸಾಲ ತೆಗೆದುಕೊಳ್ಳುವ ಅಭ್ಯಾಸ ಬೇಡ
ಒಂದು ಸಾಲದ EMI ಕಟ್ಟಲು ಮತ್ತೊಂದು ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಅಥವಾ ಬೇರೆ ಸಾಲ ಬಳಸುವುದು ಅಪಾಯಕಾರಿ ಚಕ್ರವಾಗಬಹುದು. ಚಾಣಕ್ಯನ ʼಅರ್ಥಶಾಸ್ತ್ರʼದಲ್ಲಿ ಸಾಲದ ಬಡ್ಡಿ ಮತ್ತು ಮರುಪಾವತಿಗೆ ಸ್ಪಷ್ಟ ನಿಯಮಗಳಿರುವುದು ಸಾಲವನ್ನು ನಿಯಂತ್ರಣವಿಲ್ಲದೆ ಬೆಳೆಯಲು ಬಿಡಬಾರದು ಎಂಬ ಆರ್ಥಿಕ ಶಿಸ್ತಿನ ಮಹತ್ವವನ್ನು ತೋರಿಸುತ್ತದೆ. ಸಾಲದ ಸಮಸ್ಯೆಯನ್ನು ಹೊಸ ಸಾಲದಿಂದ ಮುಚ್ಚುವುದಕ್ಕಿಂತ, ಮೂಲ ಸಮಸ್ಯೆಯನ್ನು ಗುರುತಿಸಿ ಖರ್ಚು ಕಡಿಮೆ ಮಾಡಿ ಸಾಲ ತೀರಿಸುವ ಯೋಜನೆ ರೂಪಿಸಿ. ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಬಾಕಿಯನ್ನು ತಿಂಗಳುಗಟ್ಟಲೆ ಮುಂದಕ್ಕೆ ಸಾಗಿಸುವುದು ದುಬಾರಿಯಾಗಬಹುದು.
5. ಸಾಲದ ಉದ್ದೇಶ ಮುಖ್ಯ
ಎಲ್ಲ ಸಾಲಗಳೂ ಒಂದೇ ರೀತಿಯಲ್ಲ. ಮನೆ ಖರೀದಿಸಲು ತೆಗೆದುಕೊಳ್ಳುವ ಗೃಹ ಸಾಲ, ಶಿಕ್ಷಣಕ್ಕಾಗಿ ತೆಗೆದುಕೊಳ್ಳುವ ಸಾಲ ಮತ್ತು ಕೇವಲ ದುಬಾರಿ ವಸ್ತು ಖರೀದಿಸಲು ತೆಗೆದುಕೊಳ್ಳುವ ಸಾಲವನ್ನು ಒಂದೇ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ಚಾಣಕ್ಯನ ಆರ್ಥಿಕ ಚಿಂತನೆಯಲ್ಲಿಯೂ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ಮುಖ್ಯ. ʼಅರ್ಥಶಾಸ್ತ್ರ;ದಲ್ಲಿ ಸಾಲ ಮತ್ತು ಹಣವನ್ನು ವ್ಯಾಪಾರ, ಹೂಡಿಕೆ ಮುಂತಾದ ಚಟುವಟಿಕೆಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ.
ಹೀಗಾಗಿ ಸಾಲ ತೆಗೆದುಕೊಳ್ಳುವ ಮುನ್ನ, ಈ ಸಾಲ ನನ್ನ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆಯೇ, ಅಥವಾ ನನ್ನ ಖರ್ಚನ್ನು ಮಾತ್ರ ಹೆಚ್ಚಿಸುತ್ತದೆಯೇ? ಎಂಬ ಪ್ರಶ್ನೆ ಕೇಳಿಕೊಳ್ಳಿ. ಈ ಒಂದು ಪ್ರಶ್ನೆ ಅನಗತ್ಯ ಸಾಲಗಳಿಂದ ನಿಮ್ಮನ್ನು ದೂರವಿಡಬಹುದು.
6. ಸಾಲದ ಒಪ್ಪಂದವನ್ನು ಸಂಪೂರ್ಣವಾಗಿ ಓದಿ
ಚಾಣಕ್ಯನ ʼಅರ್ಥಶಾಸ್ತ್ರʼದಲ್ಲಿ ಸಾಲದ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳು, ಬಡ್ಡಿ ಮತ್ತು ಮರುಪಾವತಿ ಕುರಿತ ವಿವರವಾದ ಕಾನೂನು ವ್ಯವಸ್ಥೆ ಇದೆ. ಮುಖ್ಯವಾಗಿ ಸಾಲದ ದಾಖಲೆ ಓದದೆ ಸಹಿ ಮಾಡಬೇಡಿ. ಬಡ್ಡಿದರ, ಇಎಂಐ, ಸಾಲದ ಅವಧಿ, ಒಟ್ಟು ಮರುಪಾವತಿ, ಪ್ರೊಸೆಸಿಂಗ್ ಶುಲ್ಕ, ತಡವಾದರೆ ದಂಡ, ಮುಂಚಿತವಾಗಿ ಸಾಲ ಮುಗಿಸಿದರೆ ಶುಲ್ಕ, ವಿಮೆ ಅಥವಾ ಇತರ ಸೇರಿಸಲಾದ ಶುಲ್ಕಗಳು ಎಲ್ಲವನ್ನೂ ಸರಿಯಾಗಿ ಗಮನಿಸಿ. ಬ್ಯಾಂಕ್ ಅಥವಾ ಸಾಲದಾತ ಹೇಳಿದ ಮಾತಿನ ಮೇಲೆ ಮಾತ್ರ ಅವಲಂಬಿಸದೆ, ದಾಖಲೆಗಳಲ್ಲಿ ಏನಿದೆ ಎನ್ನುವುದನ್ನು ಪರಿಶೀಲಿಸಿ.
7. ತೀರಿಸುವ ಸಾಮರ್ಥ್ಯವಿದ್ದಾಗ ಮಾತ್ರ ಸಾಲ ತೆಗೆದುಕೊಳ್ಳಿ
ಚಾಣಕ್ಯನ ಸಾಲದ ನಿಯಮಗಳಲ್ಲಿ ಸಾಲಗಾರನ ಪರಿಸ್ಥಿತಿಯನ್ನೂ ಪರಿಗಣಿಸಲಾಗಿದೆ. ಉದಾಹರಣೆಗೆ ಅನಾರೋಗ್ಯ, ಅಪ್ರಾಪ್ತ ವಯಸ್ಸು ಅಥವಾ ತೀವ್ರ ಬಡತನದಂತಹ ಸಂದರ್ಭಗಳಲ್ಲಿ ಬಡ್ಡಿ ಸಂಗ್ರಹದ ಬಗ್ಗೆ ವಿಶೇಷ ನಿಯಮಗಳಿದ್ದವು. ಸಾಲ ತೆಗೆದುಕೊಳ್ಳುವಾಗ ನಿಮ್ಮ ಇಂದಿನ ಆದಾಯ ಮಾತ್ರವಲ್ಲ, ನಾಳೆಯ ಪರಿಸ್ಥಿತಿಯನ್ನೂ ಯೋಚಿಸಿ. ಉದ್ಯೋಗದಲ್ಲಿ ಬದಲಾವಣೆ ಬಂದರೆ? ಕೆಲವು ತಿಂಗಳು ಆದಾಯ ಕಡಿಮೆಯಾದರೆ? ಕುಟುಂಬದಲ್ಲಿ ತುರ್ತು ವೈದ್ಯಕೀಯ ಅಥವಾ ಇತರ ದೊಡ್ಡ ಖರ್ಚು ಬಂದರೆ? ಈ ಸಂದರ್ಭಗಳಲ್ಲೂ EMI ಕಟ್ಟಲು ಸಾಧ್ಯವಾಗುತ್ತದೆಯೇ? ಉತ್ತರ ಸ್ಪಷ್ಟವಾಗಿಲ್ಲದಿದ್ದರೆ ಸಾಲದ ಮೊತ್ತವನ್ನು ಮರುಪರಿಶೀಲಿಸುವುದು ಉತ್ತಮ.


Click it and Unblock the Notifications
