ಈರುಳ್ಳಿ ಬೇಡವೇ ಬೇಡ ಮನೆಯಲ್ಲೇ ಮಾಡಿ ಎಲೆಕೋಸಿನ ಪಕೋಡ
ಎಲೆಕೋಸು ಬಳಕೆ ಮಾಡಿಕೊಂಡು ಗೋಬಿ ಮಂಚೂರಿ ಮಾಡುತ್ತಾರೆ. ಆದರೆ ಮನೆಯಲ್ಲಿ ಇದರಿಂದ ರುಚಿ ರುಚಿಯಾದ ಗರಿ ಗರಿಯಾದ ಪಕೋಡವನ್ನು ಮಾಡಬಹುದು. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಈರುಳ್ಳಿ ಬಳಕೆ ಮಾಡದ ಮನೆಗಳಲ್ಲಿ ಎಲೆಕೋಸು ಬಳಕೆ ಮಾಡಿಕೊಂಡು ರುಚಿಯಾದ ಪಕೋಡ ತಯಾರು ಮಾಡಬಹುದು. ಸುಲಭವಾಗಿ ಲಭ್ಯವಿರುವ ಕಡಿಮೆ ದಿನಸಿ ಸಾಮಾಗ್ರಿಗಳನ್ನು ಬಳಕೆ ಮಾಡಿಕೊಂಡು ಎಲೆಕೋಸಿನ ಪಕೋಡ ಮಾಡುವುದು ಹೇಗೆ? ಎಂದು ಇಲ್ಲಿದೆ ಮಾಹಿತಿ.
ಮೊದಲು ಎಲೆಕೋಸನ್ನು ಚೆನ್ನಾಗಿ ತೊಳೆದುಕೊಂಡು ಅಗತ್ಯಕ್ಕೆ ತಕ್ಕಷ್ಟು ತೆಗೆದುಕೊಳ್ಳಿ. ಅದನ್ನು ಸಣ್ಣಗೆ ಆದರೆ ಬಾಯಿಗೆ ಸಿಗುವ ಹಾಗೆ ಹೆಚ್ಚಿಕೊಂಡು ಹಿಟ್ಟು ಸಿದ್ಧಮಾಡಿಕೊಳ್ಳಲು ಬಾಣಲೆಗೆ ಹಾಕಿಕೊಳ್ಳಿ.

ಈ ಸಣ್ಣಗೆ ಹೆಚ್ಚಿದ ಎಲೆಕೋಸಿಗೆ ರುಚಿಗೆ ತಕ್ಕಷ್ಟು ಉಪ್ಪು (ಪುಡಿ), ಒಂದು ಚಮಚ ಓಮಿನ ಕಾಳು (ಅಜ್ವಾನ), ಒಂದು ಚಮಚ ಜೀರಿಗೆ, ಖಾರಕ್ಕೆ ಅಗತ್ಯವಾಗಿ ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಸೇರಿಸಿಕೊಳ್ಳಿ. ಖಾರಕ್ಕಾಗಿ ಮೆಣಸಿನಕಾಯಿ ಪುಡಿಯನ್ನು ಬಳಕೆ ಮಾಡಿಕೊಳ್ಳಬಹುದು.
ಹೆಚ್ಚಿನ ರುಚಿಗಾಗಿ ಕರಿಬೇವಿನ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು ಸೇರಿಸಿ. ಹಿಟ್ಟು ರೆಡಿ ಮಾಡಲು ಒಂದು ಸೌಟು ಬಿಸಿ ಎಣ್ಣೆ ಹಾಕಿ. ಚೆನ್ನಾಗಿ ತಿಕ್ಕಿ ಎಲೆಕೋಸು ನೀರು ಬಿಡುವವರೆಗೂ ಕಲೆಸಿಕೊಳ್ಳಿ.
ಎಷ್ಟು ಪಕೋಡ ಮಾಡಬೇಕು? ಎಂದು ಅಂದಾಜಿಸಿಕೊಂಡು ಬಾಣಲೆಗೆ ಕಡಲೆಹಿಟ್ಟು ಸೇರಿಸಿಕೊಳ್ಳಿ. ಪಕೋಡ ಗರಿ ಗರಿಯಾಗಿ ಬರಲು ಅಕ್ಕಿ ಹಿಟ್ಟು ಸೇರಿಸಿ, ಹಿಟ್ಟು ಗಟ್ಟಿಯಾಗದಂತೆ ಚೆನ್ನಾಗಿ ಕಲೆಸಿಕೊಳ್ಳಿ. ಹದವಾಗಿ ನೀರು ಹಾಕಿ ಕಲಸಿದಾಗ ಎಲೆಕೋಸಿನ ಪಕೋಡ ಹಿಟ್ಟು ಸಿದ್ಧ.
ಒಲೆ ಮೇಲೆ ಬಾಣಲೆ ಇಟ್ಟು, ಕರಿಯಲು ಎಣ್ಣೆ ಹಾಕಿ. ಎಣ್ಣೆ ಚೆನ್ನಾಗಿ ಕಾದ ಮೇಲೆ ಪಕೋಡ ಮಾಡಲು ಆರಂಭಿಸಿ. ಒಲೆಯ ಕಾವು ಮೀಡಿಯಂ ಉರಿಯಲ್ಲಿಯೇ ಇರಲಿ, ಆಗ ಪಕೋಡ ಹೆಚ್ಚು ಬೆಂದು ಕಪ್ಪಾಗುವುದಿಲ್ಲ. ಗೋಲ್ಡನ್ ಬ್ರೌನ್ ಬಣ್ಣ ಬರುವ ತನಕ ಕರಿಯಿರಿ.
ಬಿಸಿ ಬಿಸಿಯಾದ ಪಕೋಡವನ್ನು ಈಗ ಸವಿಯಲು ಸಿದ್ದವಾಗಿದೆ. ತೆಂಗಿನಕಾಯಿ ಚಟ್ನಿ ಜೊತೆಗೆ ಈ ಎಲೆಕೋಸಿನ ಪಕೋಡ ಸವಿಯಬಹುದು, ಇಲ್ಲವಾದಲ್ಲಿ ಹಸಿಮೆಣಸಿನಕಾಯಿ ಚಟ್ನಿ ಜೊತೆಯೂ ಸವಿಯಬಹುದು.
ಹಬ್ಬದ ಸಂದರ್ಭದಲ್ಲಿ ಹಲವು ಮನೆಗಳಲ್ಲಿ ಈರುಳ್ಳಿ ಬಳಕೆ ಮಾಡುವುದಿಲ್ಲ. ಆದರೆ ಸಿಹಿಯ ಜೊತೆ ಸವಿಯಲು ಪಕೋಡ ಅಗತ್ಯವಾಗಿದೆ. ಆಗ ಈರುಳ್ಳಿ ಬಳಕೆ ಮಾಡದೇ ಎಲೆಕೋಸಿನ ಪಕೋಡ ತಯಾರು ಮಾಡಬಹುದು.
ಮನೆಗಳಲ್ಲಿ ಆಗಾಗ ಈರುಳ್ಳಿ ಪಕೋಡ ಮಾಡುತ್ತಾರೆ. ಆದರೆ ಹಬ್ಬದ ಸಂದರ್ಭದಲ್ಲಿ ಈರುಳ್ಳಿ ಬಳಕೆ ಮಾಡದ ಸಂದರ್ಭದಲ್ಲಿ ಸುಲಭವಾಗಿ, ಮನೆಯಲ್ಲಿ ಲಭ್ಯವಿರುವ ಕೆಲವೇ ವಸ್ತುಗಳನ್ನು ಬಳಕೆ ಮಾಡಿಕೊಂಡು ಎಲೆಕೋಸಿನ ಪಕೋಡ ಸಿದ್ಧಗೊಳಿಸಬಹುದು. ಇದು ಮನೆಮಂದಿಗೆಲ್ಲ ಇಷ್ಟವಾಗುತ್ತದೆ. ಗರಿ ಗರಿ ಇದ್ದಾಗ ಸವಿಯಲು ಸಹ ರುಚಿಯಾಗಿರುತ್ತದೆ.
ಈರುಳ್ಳಿ ಬಳಕೆ ಮಾಡಿಕೊಂಡು ಪಕೋಡ ಮಾಡಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಆದರೆ ಅನಿವಾರ್ಯ ಸಂದರ್ಭದಲ್ಲಿ ಈರುಳ್ಳಿ ಬಳಕೆ ಮಾಡಲು ಆಗದಿದ್ದಾಗ ಈ ಮಾದರಿಯಲ್ಲಿ ಎಲೆಕೋಸು ಬಳಕೆ ಮಾಡಿಕೊಂಡು ಸುಲಭವಾಗಿ ಮನೆಯಲ್ಲಿ ಪಕೋಡ ತಯಾರು ಮಾಡಬಹುದು.












Click it and Unblock the Notifications