ಸೌತೆಕಾಯಿ ಕಹಿಯಾಗಿದೆಯೇ? ಈ 3 ವಿಧಾನಗಳನ್ನು ಅನುಸರಿಸಿದರೆ ನಿಮಿಷಗಳಲ್ಲಿ ಕಹಿ ತೆಗೆದುಹಾಕಬಹುದು
ಬೇಸಿಗೆಯಲ್ಲಿ ಎಲ್ಲರೂ ದೇಹ ತಂಪಾಗಿಸುವ ಪರಿಣಾಮವನ್ನು ನೀಡುವ ಆಹಾರಗಳನ್ನೇ ಸೇವಿಸುತ್ತಾರೆ. ಸುಡು ಬಿಸಿಲು, ಹೆಚ್ಚುತ್ತಿರುವ ಸೂರ್ಯನ ತಾಪಮಾನದಿಂದ ಪರಿಹಾರ ಪಡೆಯಲು ಸೌತೆಕಾಯಿ ಅತ್ಯುತ್ತಮ ಮಾರ್ಗವಾಗಿದೆ. ಆಯುರ್ವೇದದಿಂದ ಆಧುನಿಕ ವಿಜ್ಞಾನದವರೆಗೂ ಬೇಸಿಗೆಯಲ್ಲಿ ಸೌತೆಕಾಯಿ ಸೇವನೆಯನ್ನು ಶಿಫಾರಸ್ಸು ಮಾಡುತ್ತಾರೆ. ಸೌತೆಕಾಯಿ ಸರಿಸುಮಾರು 95% ರಿಂದ 96% ದಷ್ಟು ನೀರನ್ನು ಹೊಂದಿರುತ್ತದೆ. ಇದು ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಬೇಸಿಗೆ ಕಾರಣದಿಂದ ಕಾಡಬಹುದಾದ ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಅನೇಕ ಪ್ರಯೋಜನಗಳಾಗುವುದು.
ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುವುದರಿಂದ ಇದರ ನಿಯಮಿತ ಸೇವನೆಯು ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಾಖದ ಹೊಡೆತದಿಂದಲೂ ಇದು ರಕ್ಷಣೆ ನೀಡುತ್ತದೆ.ಇದು ನೈಸರ್ಗಿಕವಾಗಿ ದೇಹವನ್ನು ತಂಪಾಗಿರಿಸುವ ಕೆಲಸ ಮಾಡುತ್ತದೆ. ದೇಹದ ಆಂತರಿಕ ತಾಪಮಾನವನ್ನು ನಿಯಂತ್ರಿಸುತ್ತದೆ.

ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಲಬದ್ಧತೆ, ಆಸಿಡಿಟಿ, ಎದೆಯುರಿ ಸೇರಿದಂತೆ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಆದರೆ ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸುವುದರಿಂದ ಈ ಸಮಸ್ಯೆಗಳು ಪರಿಹಾರವಾಗುವುದು. ಸೌತೆಕಾಯಿಯಲ್ಲಿರುವ ಎರೆಪ್ಸಿನ್ ಎಂಬ ಕಿಣ್ವವು ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶ ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಸೌತೆಕಾಯಿಯನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅಥವಾ ಸಲಾಡ್‌ಗಳಲ್ಲಿ ತಿನ್ನುವುದರಿಂದ ಉದರದ ಕಾಯಿಲೆಗಳನ್ನು ನಿವಾರಿಸಬಹುದು. ಆದರೆ ಕೆಲವೊಮ್ಮೆ ಅದರಲ್ಲಿಯೂ ಬೇಸಿಗೆಯಲ್ಲಿ ಸೌತೆಕಾಯಿಯಲ್ಲಿ ಕಹಿ ಕಾಣಿಸಿಕೊಳ್ಳುತ್ತದೆ. ಹಾಗಂತ ಈ ಬಗ್ಗೆ ಚಿಂತಿಸಬೇಕಿಲ್ಲ. ಸೌತೆಕಾಯಿಯ ಕಹಿಯನ್ನು ತೆಗೆದುಹಾಕುವ ಸುಲಭ ಮಾರ್ಗವಿದೆ.
ಬೇಸಿಗೆಯಲ್ಲಿ ಸೌತೆಕಾಯಿ ಕಹಿಯಾಗಲು ಕಾರಣ:
ಬೇಸಿಗೆಯಲ್ಲಿ ನೀರಿನ ಕೊರತೆ ಅಥವಾ ಕಳಪೆ ಮಣ್ಣಿನಿಂದಾಗಿ ಸೌತೆಕಾಯಿ ಕಹಿಯಾಗುತ್ತವೆ. ಸೌತೆಕಾಯಿ ವಿಶೇಷವಾಗಿ ಅದರ ಕಾಂಡದ ಭಾಗದಲ್ಲಿ ಕಹಿಯಾಗಿರುತ್ತವೆ. ನೀವು ಕೂಡಾ ಖರೀದಿಸಿ ತಂದಿರುವ ಸೌತೆಕಾಯಿ ಕಹಿಯಾಗಿದ್ದರೆ ಕೆಲವು ಅಡುಗೆಮನೆಯ ವಸ್ತುಗಳನ್ನು ಬಳಸುವ ಮೂಲಕವೇ ಈ ಕಹಿಯನ್ನು ನಿಮಿಷಗಳಲ್ಲಿ ತೊಡೆದು ಹಾಕಬಹುದು.
ಸೌತೆಕಾಯಿಯಲ್ಲಿರುವ ಕಹಿ "ಕುಕುರ್ಬಿಟಾಸಿನ್" ಎಂಬ ಸಂಯುಕ್ತದಿಂದ ಉಂಟಾಗುತ್ತದೆ. ಇದು ಮುಖ್ಯವಾಗಿ ಸೌತೆಕಾಯಿಯ ಕಾಂಡ ಮತ್ತು ಸಿಪ್ಪೆಯಲ್ಲಿ ಕಂಡುಬರುತ್ತದೆ. ಬೇಸಿಗೆಯ ಉಷ್ಣತೆ, ನೀರಿನ ಕೊರತೆ ಅಥವಾ ಕಳಪೆ ಮಣ್ಣು ಸೌತೆಕಾಯಿಯಲ್ಲಿ ಕಹಿ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.
ಸೌತೆಕಾಯಿಯಿಂದ ಕಹಿಯನ್ನು ತೆಗೆದುಹಾಕುವ ಸಲಹೆಗಳು:
೧. ಸೌತೆಕಾಯಿಯ ಎರಡೂ ತುದಿಗಳನ್ನು ಕತ್ತರಿಸಬೇಕು. ಅದರಲ್ಲಿಯೂ ಮುಖ್ಯವಾಗಿ ಸೌತೆಕಾಯಿಯ ಮೇಲಿನ ಭಾಗ ಅಂದರೆ ಕಾಂಡ ಇರುವಲ್ಲಿ ತುಂಬಾ ಕಹಿಯಾಗಿರುವುದರಿಂದ ಆ ಭಾಗವನ್ನು ಸ್ವಲ್ಪ ಹೆಚ್ಚು ಕತ್ತರಿಸಬೇಕು. ನಂತರ ಕತ್ತರಿಸಿದ ಭಾಗವನ್ನು ಸೌತೆಕಾಯಿಯ ಮೇಲೆ ವೃತ್ತಾಕಾರದ ಚಲನೆಯಲ್ಲಿ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ, ಬಿಳಿ ಗೆರೆ ಕಾಣಿಸಿಕೊಳ್ಳುತ್ತದೆ. ಈ ಬಿಳಿ ಗೆರೆ ಕಾಣಿಸಿಕೊಂಡಾಗ ಸೌತೆಕಾಯಿಯಲ್ಲಿರುವ ಕಹಿ ಹೋಗಿದೆ ಎಂದರ್ಥ.
ಇನ್ನೊಂದು ಸುಲಭ ವಿಧಾನವೆಂದರೆ, ಸೌತೆಕಾಯಿಯ ಸಿಪ್ಪೆಯನ್ನು ತೆಗೆಯುವುದು. ಸೌತೆಕಾಯಿಯ ಹೆಚ್ಚಿನ ಕಹಿ ಸಿಪ್ಪೆಯ ಕೆಳಗೆ ಇರುತ್ತದೆ. ಆದ್ದರಿಂದ ಇದರ ಸಿಪ್ಪೆಯನ್ನು ತೆಗೆದು ತಿನ್ನುವುದರಿಂದ ಕಹಿ ಮಾಯವಾಗುವುದು, ಸೌತೆಕಾಯಿಯ ರುಚಿ ಹಾಗೆಯೇ ಉಳಿಯುವುದು. ಇಷ್ಟು ಮಾಡಿಯೂ ಸೌತೆಕಾಯಿಯ ರುಚಿ ಇಷ್ಟವಾಗದೇ ಹೋದರೆ ತುದಿಗೆ ಉಪ್ಪನ್ನು ಸಿಂಪಡಿಸಬೇಕು.
ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ 10-15 ನಿಮಿಷಗಳ ಕಾಲ ಬಿಡಬೇಕು. ಉಪ್ಪು ನೀರಿನಲ್ಲಿ ಸೌತೆಕಾಯಿಯ ಕಹಿ ಬಿಡುತ್ತದೆ. ಇದು ರುಚಿಯನ್ನು ಸಮತೋಲನಗೊಳಿಸುತ್ತದೆ. ಸೌತೆಕಾಯಿಯಲ್ಲಿರುವ ಕಹಿ ಕಡಿಮೆಯಾಗುತ್ತದೆ.
ಇನ್ನು ಕೆಲವರಿಗೆ ಸೌತೆಕಾಯಿಯನ್ನು ತಣ್ಣೀರಿನಲ್ಲಿ ನೆನೆಸಿಡುವ ಅಭ್ಯಾಸ ಇರುತ್ತದೆ. ಇದು ಅದರ ರುಚಿಯನ್ನು ಸೌಮ್ಯ ಮತ್ತು ತಾಜಾವಾಗಿಸುತ್ತದೆ. ಆದರೆ ನೆನಪಿರಲಿ, ಇಷ್ಟು ಮಾಡಿದ ಮೇಲೆಯೂ ಸೌತೆಕಾಯಿ ಕಹಿ ಬಿಡುತ್ತಿಲ್ಲ ಎಂದಾದರೆ ಆ ಸೌತೆಕಾಯಿಯನ್ನು ತಿನ್ನದಿರುವುದೇ ಲೇಸು. ಹೆಚ್ಚು ಕಹಿ ಹೊಂದಿರುವ ಸೌತೆಕಾಯಿ ಆರೋಗ್ಯಕ್ಕೂ ಮಾರಕವಾಗಿರುತ್ತದೆ ಎನ್ನುತ್ತಾರೆ ಆಹಾರ ತಜ್ಞರು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications