Badam Milk Powder Recipe: ಹೀಗೆ ಸುಲಭ ಮತ್ತು ಆರೋಗ್ಯಕರ ಬಾದಾಮ್ ಮಿಲ್ಕ್ ಪೌಡರ್ ಮನೆಯಲ್ಲಿಯೇ ಮಾಡಿ ಹಣ ಉಳಿಸಿ!
ಬಾದಾಮಿ ಆರೋಗ್ಯದ ಖನಿಜ. ಪ್ರತಿ ದಿನ ನೆನೆಸಿದ ಬಾದಾಮಿ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಮಕ್ಕಳು ಸೇರಿದಂತೆ ದೊಡ್ಡವರು ಕೂಡ ಬಾದಾಮ್ ಪುಡಿಯನ್ನು ಹಾಲಿನ್ಲಿ ಬೆರೆಸಿ ಕುಡಿಯುತ್ತಾರೆ. ಕಾಫಿ- ಟೀ ಕುಡಿಯದವರು ಕುಡ ಆರಾಮವಾಗಿ ಇದನ್ನು ಕುಡಿಯಬಹುದು.
ಮನೆಯಲ್ಲಿ ಈ ಬಾದಾಮ್ ಹಾಲಿನ ಪುಡಿಯನ್ನು ತಯಾರಿಸುವುದು ತುಂಬಾ ಸುಲಭ. ಬಾದಾಮ್ ಹಾಲಿನ ಪುಡಿಯನ್ನು ಬಾದಾಮಿ, ಸಕ್ಕರೆ, ಹಾಲಿನ ಪೌಡರ್, ಏಲಕ್ಕಿ, ಕೇಸರಿ ಮತ್ತು ಸ್ವಲ್ಪ ಅರಿಶಿನವನ್ನು ಬಳಸಿ ತಯಾರಿಸಲಾಗುತ್ತದೆ. ಪದಾರ್ಥಗಳು ಕಡಿಮೆ, ಮಾಡುವ ವಿಧಾನ ಕೂಡ ಸುಲಭವಾದ ಈ ಆರೋಗ್ಯಕರ ಬಾದಾಮ್ ಪೌಡರ್ ರೆಸಿಪಿ ಇಲ್ಲಿದೆ ನೀವು ಪ್ರಯತ್ನಿಸಿ.

ಬಾದಾಮ್ ಮಿಲ್ಕ್ ಪೌಡರ್ ಮಾಡಲು ಬೇಕಾದ ಪದಾರ್ಥಗಳು
* ಅರ್ಧ ಕಪ್ ಬಾದಾಮಿ
* ಅರ್ಧ ಕಪ್ ಸಕ್ಕರೆ
* ಅರ್ಧ ಕಪ್ ಹಾಲಿನ ಪುಡಿ
* 5 ರಿಂದ 6 ಏಲಕ್ಕಿ
* ಒಂದು ದೊಡ್ಡ ಚಿಟಿಕೆ ಕೇಸರಿ
* ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
ಬಾದಾಮ್ ಹಾಲಿನ ಪುಡಿಯನ್ನು ತಯಾರಿಸುವುದು ಹೇಗೆ?
ಬಟ್ಟಲಿನಲ್ಲಿ ಬಾದಾಮಿ ತೆಗೆದುಕೊಳ್ಳಿ. ಬಿಸಿ ಕುದಿಯುವ ನೀರಿನಲ್ಲಿ ಹಾಕಿ ಬಾದಾಮಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ. 30 ನಿಮಿಷಗಳ ನಂತರ ಬಾದಾಮಿ ಸಿಪ್ಪೆ ತೆಗೆಯಿರಿ. ಸಿಪ್ಪೆ ಸುಲಿದ ಬಾದಾಮಿಯನ್ನು ಬಾಣಲೆಯಲ್ಲಿ ಹಾಕಿಕೊಂಡು ಸಣ್ಣ ಉರಿಯಲ್ಲಿಯೇ 5 ನಿಮಿಷಗಳ ಕಾಲ ಗರಿಗರಿಯಾಗುವವರೆಗೆ ಹುರಿಯಿರಿ. ನೀರಿನ ಅಂಶ ಹೋದ ಬಳಿಕ ಸ್ಟೌವ್ ಆಪ್ ಮಾಡಿ.

ಹುರಿದ ಬಾದಾಮಿ ತಣ್ಣಗಾಗುವವರೆಗೆ ಕಾಯಿರಿ. ತದನಂತರ ಅವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ. ನಿಮಗೆ ಬಾದಾಮಿ ಸಿಪ್ಪೆ ತೆಗೆಯುವುದು ಬೇಡ ಎನಿಸಿದರೇ ಹಾಗೆ ಬಳಸಬಹುದು. ಬಾದಾಮಿ ಪುಡಿ ಮಾಡುವಾಗ ಅದಕ್ಕೆ ಅರ್ಧ ಕಪ್ ಸಕ್ಕರೆ , ಅರ್ಧ ಕಪ್ ಹಾಲಿನ ಪುಡಿಯನ್ನು ಸೇರಿಸಿ. ಜೊತೆಗೆ ಏಲಕ್ಕಿ, ಕೇಸರಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ.
ಎಲ್ಲಾ ಪದಾರ್ಥಗಳನ್ನು ನುಣ್ಣಗೆ ಪುಡಿಯಾಗಿ ಪುಡಿಮಾಡಿ. ಇದನ್ನು ಗಾಳಿಯಾಡದ ಬಾಕ್ಸ್‌ನಲ್ಲಿ ಹಾಕಿಟ್ಟುಕೊಳ್ಳಿ. ಬಳಿಕ ಬಾದಾಮ್ ಹಾಲು ಮಾಡಲು ಒಂದು ಕಪ್ 1 ಚಮಚ ಬಾದಾಮ್ ಪುಡಿಯನ್ನು ಹಾಕಿಕೊಳ್ಳಿ. ಅದಕ್ಕೆ ಬಿಸಿ ಮಾಡಿದ ಹಾಲನ್ನು ಹಾಕಿ ಬೇಗನೆ ಮಿಕ್ಸ್ ಮಾಡಿ ಸವಿಯಿರಿ.
ಈ ಬಾದಾಮ್ ಪೌಡರ್ ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಬಾದಾಮ್ ಪೌಡರ್‌ಗಳಿಗಿಂತ ರುಚಿಯಾಗಿರುತ್ತದೆ. ಅಷ್ಟೇ ಅಲ್ಲದೆ ಕಡಿಮೆ ಖರ್ಚಿನಲ್ಲಿ ಇದನ್ನು ತಯಾರಿಸಬಹುದು. ಸಕ್ಕರೆ ಆರೋಗ್ಯಕ್ಕೆ ಹಾನಿ ಎನ್ನುವವರು ಸಕ್ಕರೆ ಬದಲಿಗೆ ಬ್ರೌನ್ ಶುಗರ್ ಕೂಡ ಬಳಸಿ ರೆಸಿಪಿ ಮಾಡಿಕೊಳ್ಳಬಹುದು.











Click it and Unblock the Notifications