ಭಾವಜೀವಿಗಳಿವು!ಸಂತೋಷವಾದಾಗ ಮನುಷ್ಯರಂತೆಯೇ ಬಾಯಿ ಬಿಟ್ಟು ನಗುತ್ತವೆ
ನಮ್ಮ ನೆಚ್ಚಿನ ಪ್ರಾಣಿಯ ಪಾತ್ರಗಳು ಸಿನಿಮಾಗಳಲ್ಲಿ, ಕಾರ್ಟೂನ್‌ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿ ನಗುವುದನ್ನು ನೋಡಿದ್ದೇವೆ. ಅಲ್ಲಿ ಎಲ್ಲವನ್ನೂ ಆನಿಮೇಟೆಡ್ ಆಗಿ ತೋರಿಸಲಾಗುತ್ತದೆ. ಇದ್ಯಾವುದನ್ನೂ ನಿಜ ಎಂದು ಹೇಳಲು ಬರುವುದಿಲ್ಲ. ಆದರೆ ಕೆಲವೊಂದು ಪ್ರಾಣಿಗಳು ನಿಜಕ್ಕೂ ಬಾಯಿಬಿಟ್ಟು, ಮನುಷ್ಯರಂತೆ ಜೋರು ಸದ್ದು ಮಾಡಿಕೊಂಡು ನಗುತ್ತವೆ. ಈ ಪ್ರಾಣಿಗಳ ನಗು ಮನುಷ್ಯರ ನಗುವನ್ನು ಹೋಲುತ್ತದೆ ಎನ್ನಲಾಗುತ್ತದೆ. ಈ ಮಾತು ಕೇಳುವುದಕ್ಕೆ ಆಶ್ಚರ್ಯಕರವಾಗಿರಬಹುದು. ಆದರೆ ಇದು ಸತ್ಯ. ವಿಜ್ಞಾನದ ಪ್ರಕಾರ, ಈ ನಗು ಹೆಚ್ಚಾಗಿ ಸ್ನೇಹಪರತೆಯನ್ನು ಸೂಚಿಸುತ್ತವೆ. ಒತ್ತಡವನ್ನು ಕಡಿಮೆ ಮಾಡುತ್ತವೆ. ಪ್ರಾಣಿಗಳು ಸಾಮಾಜಿಕ ಸಾಮರಸ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತವೆ, ಅವುಗಳ ಜೀವನ ಎಷ್ಟು ಸಂಕೀರ್ಣ ಮತ್ತು ಭಾವನಾತ್ಮಕವಾಗಿರುತ್ತದೆ ಎಂಬುದನ್ನು ಬಹಿರಂಗಪಡಿಸಲು ಅವುಗಳ ನಗುವಿನ ಧ್ವನಿಯನ್ನು ಅಧ್ಯಯನ ಮಾಡಲಾಗಿದೆ. ಈ ಪ್ರಕಾರ ಮನುಷ್ಯರಂತೆಯೇ ನಗುವ ಅಥವಾ ನಗುವ ಶಬ್ದ ಮಾಡುವ ಆರು ಪ್ರಾಣಿಗಳಿವೆ.

1. ಚಿಂಪಾಂಜಿಗಳು:
ಚಿಂಪಾಂಜಿಗಳು ಆಟವಾಡುವಾಗ, ಜಗಳವಾಡುವಾಗ ಮಾನವ ನಗೆಯನ್ನು ಹೋಲುವ ಸದ್ದು ಮಾಡುತ್ತದೆ. ಈ ಸದ್ದು ಕೇಳುವಾಘ ಉಸಿರುಗಟ್ಟುವ ರೀತಿಯಲ್ಲಿ ಭಾಸವಾಗುತ್ತದೆ. ಈ ರೀತಿಯ ಶಬ್ದಗಳು ಆಟವು ಆಕ್ರಮಣಕಾರಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅವುಗಳು ಆಟದಲ್ಲಿ ಅನುಭವಿಸುತ್ತಿರುವ ಆನಂದವನ್ನು ಸೂಚಿಸುತ್ತವೆ. ಚಿಂಪಾಂಜಿಗಳು ಆಟವಾಡುವಾಗ ಹೊರಡಿಸುವ ಆ 'ಪ್ಯಾಂಟಿಂಗ್'ಧ್ವನಿಗಳು ಮಾನವನ ನಗುವಿನ ಆರಂಭಿಕ ರೂಪಗಳೇ ಆಗಿವೆ. ಇದು ಪ್ರಾಣಿಗಳಲ್ಲಿ ಪರಸ್ಪರ ನಂಬಿಕೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
2. ಬೊನೊಬೊ:
ಬೊನೊಬೊ ಇದು ಮಂಗನ ಜಾತಿಗೆ ಸೇರಿದ ಪ್ರಾಣಿ. ಇವು ಪರಸ್ಪರ ಸಹಕಾರ ಮಾಡುವುದಕ್ಕೆ ಮತ್ತು ಶಾಂತಿಯುತ ನಡವಳಿಕೆಗೆ ಹೆಸರುವಾಸಿಯಾಗಿದೆ. ಆಟವಾಡುವ ವೇಳೆ ಅವು ಮೃದುವಾದ ದನಿಯಲ್ಲಿ ನಗುತ್ತದೆ. ಕೆಲವೊಮ್ಮೆ ಈ ನಗುವಿನ ಸದ್ದು ತುಂಬಾ ಜೋರಾಗಿರುತ್ತದೆ.ಈ ಪ್ರಾಣಿ ಪರಸ್ಪರ ನಗುವಿನ ಮೂಲಕ ಗುಂಪಿನ ಸದಸ್ಯರ ನಡುವಿನ ಬಾಂಧವ್ಯ ಗಟ್ಟಿಯಾಗಿಸಿಕೊಳ್ಳುತ್ತದೆ. ಆಟವಾಡುವಾಗ ಈ ರೀತಿ ನಗುವಿನ ಧ್ವನಿಗಳನ್ನು ಹೊರಡಿಸಿ, ತಾವು ಸ್ನೇಹಪರವಾಗಿದ್ದೇವೆ ಎಂಬುದನ್ನು ನೆರೆಯ ಕೋತಿಗಳಿಗೆ ತಿಳಿಸುತ್ತವೆ.ಈ ವಿಶಿಷ್ಟ ನಗುವು ಗುಂಪಿನಲ್ಲಿ ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು ಮತ್ತು ತಮ್ಮ ಸಂತೋಷವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

3. ಗೊರಿಲ್ಲಾಗಳು:
ಗೊರಿಲ್ಲಾಗಳ ನಗು ಅವುಗಳ ಸಂವಹನದ ಬಗ್ಗೆ ಕೆಲವು ಪ್ರಮುಖ ಸಂಗತಿಯನ್ನು ತೆರೆದಿಡುತ್ತದೆ. ಕಿಂಗ್ ಕಾಂಗ್ ಸಿನಿಮಾದಲ್ಲಿ , ನವೋಮಿ ವ್ಯಾಟ್ಸ್ ಪಾತ್ರವನ್ನು ಎಸೆಯುವಾಗ ಗೊರಿಲ್ಲಾ ನಕ್ಕಿದ್ದು ನಿಮಗೂ ನೆನಪಿರಬಹುದು. ಆ ದೃಶ್ಯವು ನಿಜ ಜೀವನದಿಂದ ಸ್ಫೂರ್ತಿ ಪಡೆದಿರಬಹುದು. ಏಕೆಂದರೆ ಗೊರಿಲ್ಲಾಗಳು ಕುಸ್ತಿ, ಬೆನ್ನಟ್ಟುವುದು ಅಥವಾ ಹೋರಾಟದ ಸಮಯದಲ್ಲಿ ಲಯಬದ್ಧವಾಗಿ ಉಸಿರುಗಟ್ಟಿಸುವ ಶಬ್ದಗಳನ್ನು ಮಾಡುತ್ತವೆ . ಈ ರೀತಿಯ "ನಗು" ಗುಂಪಿನ ಇತರ ಸದಸ್ಯರಿಗೆ ತಾವು ಕೇವಲ ತಮಾಷೆ ಮಾಡುತ್ತಿದ್ದೇವೆ, ಆಕ್ರಮಣ ಮಾಡುತ್ತಿಲ್ಲ ಎನ್ನುವ ಸಂದೇಶವನ್ನು ರವಾನಿಸುತ್ತದೆ.

4. ಡಾಲ್ಫಿನ್‌ಗಳು:
ಡಾಲ್ಫಿನ್‌ಗಳು ಅತ್ಯಂತ ಬುದ್ಧಿವಂತ ಮತ್ತು ಸಾಮಾಜಿಕ ಜೀವಿಗಳು. ಡಾಲ್ಫಿನ್‌ಗಳೊಂದಿಗೆ ಆಟವಾಡಿದವರು ಅವುಗಳು ಯಾವ ರೀತಿ ಸಂವಾದಾತ್ಮಕವಾಗಿ ಇರಬಲ್ಲದು ಎಂದು ಹೇಳಬಹುದು. ಇವು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಆಟಗಳ ಸಮಯದಲ್ಲಿ ವೇಗವಾಗಿ ಕೀರಲು ಧ್ವನಿಯ ಶಬ್ದಗಳು, ಶಿಳ್ಳೆಗಳು ಹೀಗೆ ಬೇರೆ ಬೇರೆ ರೀತಿಯ ಸದ್ದುಗಳನ್ನು ಹೊರ ಸೂಸುತ್ತವೆ. ಆಟವಾಡುವಾಗ ಮಾನವರ ನಗುವಿನಂತಹ ಧ್ವನಿಗಳನ್ನು ಹೊರಡಿಸುತ್ತವೆ.ಗುಂಪಿನಲ್ಲಿ ಪರಸ್ಪರ ಆಪ್ತವಾಗಿ ಸಂವಹನ ನಡೆಸುತ್ತವೆ.
5. ಕಿಯಾ ಗಿಳಿಗಳು:
ನ್ಯೂಜಿಲೆಂಡ್‌ನ ಕಿಯಾ ಗಿಳಿಗಳು ಅತ್ಯಂತ ಕುತೂಹಲಕಾರಿ ಮತ್ತು ಬುದ್ಧಿವಂತ ಪಕ್ಷಿಗಳಾಗಿವೆ. ಅವುಗಳ ಬುದ್ಧಿವಂತಿಕೆಯನ್ನು 4 ವರ್ಷದ ಮಾನವ ಮಗುವಿನ ಬುದ್ಧಿವಂತಿಕೆಗೆ ಹೋಲಿಸಲಾಗುತ್ತದೆ. ಅವು ತಮ್ಮ ಕೊಕ್ಕು ಮತ್ತು ಪಾದಗಳನ್ನು ಕೈಗಳಂತೆಯೇ ಬಳಸಬಹುದು. ಅವುಗಳು ಮುನುಷ್ಯರ ನಗುವಿಗೆ ಹೋಲುವ ವಿಶಿಷ್ಟವಾದ ಸದ್ದು ಮಾಡಬಹುದು. ಗಿಳಿ ಈ ರೀತಿ ಸದ್ದು ಮಾಡುವ ಮೂಲಕ ಸಾಮಾನ್ಯವಾಗಿ ಇತರ ಕಿಯಾಗಳನ್ನು ಸೇರಲು ಪ್ರಚೋದಿಸುತ್ತದೆ.

6. ಇಲಿಗಳು:
ನಿಜ ಜೀವನದಲ್ಲಿ ಇಲಿಗಳು ಕೂಡಾ ಮನುಷ್ಯರಂತೆ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತವೆ. ವಿಜ್ಞಾನಿಗಳ ಪ್ರಕಾರ, ಇಲಿಗಳು ನಗುವಾಗ ಅಥವಾ ಆಟವಾಡುವಾಗ ಸುಮಾರು 50 ಕಿಲೋಹರ್ಟ್ಸ್ ಆವರ್ತನದ ಅಲ್ಟ್ರಾಸಾನಿಕ್ ಧ್ವನಿಯನ್ನು ಹೊರಡಿಸುತ್ತವೆ. ಮನುಷ್ಯರ ಕಿವಿಗಳಿಗೆ ಕೇವಲ 20 kHz ವರೆಗಿನ ಧ್ವನಿ ಮಾತ್ರ ಕೇಳಿಸುವುದರಿಂದ, ವಿಶೇಷ ಬ್ಯಾಟ್ ಡಿಟೆಕ್ಟರ್‌ಗಳಿಲ್ಲದೆ ನಮಗೆ ಈ 'ನಗು' ಕೇಳಿಸುವುದಿಲ್ಲ. ಈ ಸಂಶೋಧನೆಯು ಪ್ರಾಣಿಗಳಲ್ಲಿನ ಸಕಾರಾತ್ಮಕ ಭಾವನೆಗಳು ಮತ್ತು ಸಾಮಾಜಿಕ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಪ್ರಮುಖ ಸುಳಿವುಗಳನ್ನು ನೀಡಿದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications