Aging: ದೇಹಕ್ಕೆ ಸ್ಪೀಡಾಗಿ ವಯಸ್ಸಾಗೋದು ಯಾವಾಗ? ವಯಸ್ಸಾಗುವುದನ್ನು ನಿಧಾನಗೊಳಿಸಲು 5 ಸರಳ ಸೂತ್ರಗಳು

ಒಂದು ಮುಂಜಾನೆ ಎದ್ದು ಕನ್ನಡಿಯಲ್ಲಿ ನೋಡಿಕೊಂಡಾಗ ತಲೆಕೂದಲಲ್ಲಿ ಒಂದು ಬಿಳಿ ಕೂದಲು ಕಾಣಿಸಿಕೊಳ್ಳುತ್ತೆ. ಮುಖದಲ್ಲಿ ಒಂದು ಸುಕ್ಕಿನ ಗೆರೆ ಪ್ರತ್ಯಕ್ಷ ಆಗುತ್ತೆ. ಕಣ್ಣಿನ ಕೆಳಗೆ ಸ್ವಲ್ಪ ಸರ್ಕಲ್‌ ಮೂಡಿದಂತಿದೆಯಲ್ಲ ಅಂದುಕೊಳ್ತೀರಿ. ಓಹೋ ನನಗೂ ವಯಸ್ಸಾಗ್ತಾ ಇದೆ ಅಂದುಕೋತೀರಿ. ಅಲ್ವೇ?

ಆದ್ರೆ ವಯಸ್ಸಾಗುವುದು ಎಂದರೆ ಪ್ರತಿದಿನವೂ ಒಂದೇ ವೇಗದಲ್ಲಿ ದೇಹ ದುರ್ಬಲವಾಗುತ್ತಾ ಹೋಗುತ್ತದೆ ಎಂದೇನಲ್ಲ. ನಮ್ಮ ದೇಹದೊಳಗಿನ ಬದಲಾವಣೆಗಳು ಕೆಲವು ವಯಸ್ಸಿನ ಹಂತಗಳಲ್ಲಿ ಏಕಾಏಕಿ ವೇಗ ಪಡೆದುಕೊಳ್ಳಬಹುದು. ಇತ್ತೀಚಿನ ಸಂಶೋಧನೆಗಳು ದೇಹದಲ್ಲಿ ಇಂತಹ ಪ್ರಮುಖ ಬದಲಾವಣೆಗಳು 40ರ ಮಧ್ಯಭಾಗದಲ್ಲಿ ಮತ್ತು ಮತ್ತೆ 60ರ ಆಸುಪಾಸಿನಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು ಎಂದು ಸೂಚಿಸಿವೆ.

Aging When Does the Body Age Faster Does the Body Age Faster at 44 and 60 5 Simple Ways to Slow Down

ಅಂದರೆ 44 ಅಥವಾ 60 ವರ್ಷಕ್ಕೆ ಕಾಲಿಟ್ಟ ತಕ್ಷಣ ದೇಹಕ್ಕೆ ವಯಸ್ಸಾಗುತ್ತದೆ ಎಂದರ್ಥವಲ್ಲ. ಬದಲಾಗಿ, ಈ ವಯಸ್ಸಿನಲ್ಲಿ ದೇಹದಲ್ಲಿನ ಸಾವಿರಾರು ಅಣುಗಳು, ಪ್ರೋಟೀನ್‌ಗಳು ಮತ್ತು ಸೂಕ್ಷ್ಮಜೀವಿಗಳಲ್ಲಿನ ಬದಲಾವಣೆಗಳ ವೇಗ ಹೆಚ್ಚಾಗಬಹುದು ಎಂಬುದು ಸಂಶೋಧನೆಯ ಪ್ರಮುಖ ಅಂಶ. ಹಾಗಾದರೆ ಈ ಎರಡು ಹಂತಗಳಲ್ಲಿ ದೇಹದಲ್ಲಿ ಏನಾಗುತ್ತದೆ? ವಯಸ್ಸಾಗುವ ವೇಗವನ್ನು ನಿಧಾನಗೊಳಿಸಲು ನಾವು ಏನು ಮಾಡಬಹುದು?

44ರ ಆಸುಪಾಸಿನಲ್ಲಿ ದೇಹದಲ್ಲಿ ದೊಡ್ಡ ಬದಲಾವಣೆ

ಸ್ಟ್ಯಾನ್‌ಫೋರ್ಡ್ ಮೆಡಿಸಿನ್‌ ನಡೆಸಿದ ಅಧ್ಯಯನದಲ್ಲಿ 25ರಿಂದ 75 ವರ್ಷದೊಳಗಿನ 108 ಜನರ ದೇಹದಲ್ಲಿನ ಸಾವಿರಾರು ಅಣುಗಳು ಮತ್ತು ಮೈಕ್ರೋಬಯೋಮ್‌ ಬದಲಾವಣೆಗಳನ್ನು ಹಲವು ವರ್ಷಗಳ ಕಾಲ ಗಮನಿಸಲಾಯಿತು. ಅಧ್ಯಯನದಲ್ಲಿ ಪರೀಕ್ಷಿಸಲಾದ ಸುಮಾರು 1.35 ಲಕ್ಷ ಅಣುಗಳು ಮತ್ತು ಸೂಕ್ಷ್ಮಜೀವಿಗಳ ಪೈಕಿ ಸುಮಾರು 81%ರಲ್ಲಿ ಬದಲಾವಣೆಗಳು ಸರಳ ರೇಖೆಯಂತೆ ನಿಧಾನವಾಗಿ ನಡೆಯಲಿಲ್ಲ. ಬದಲಾಗಿ ಕೆಲವು ನಿರ್ದಿಷ್ಟ ವಯಸ್ಸಿನ ಹಂತಗಳಲ್ಲಿ ಅವುಗಳಲ್ಲಿ ಹೆಚ್ಚು ತೀವ್ರವಾದ ಬದಲಾವಣೆ ಕಂಡುಬಂದಿತು.

ಅವುಗಳಲ್ಲಿ ಪ್ರಮುಖವಾಗಿ 44ರ ಆಸುಪಾಸು ಮತ್ತು 60ರ ಆಸುಪಾಸು ಎರಡು ಅವಧಿಗಳಲ್ಲಿ ಹೆಚ್ಚಿನ ಬದಲಾವಣೆಗಳು ಗುಂಪುಗೂಡಿರುವುದು ಕಂಡುಬಂದಿದೆ. 40ರ ಮಧ್ಯಭಾಗದಲ್ಲಿ ಕೊಬ್ಬಿನ ಚಯಾಪಚಯ, ಆಲ್ಕೋಹಾಲ್ ಮತ್ತು ಕೆಫೀನ್‌ ಚಯಾಪಚಯ, ಹೃದಯರಕ್ತನಾಳದ ಆರೋಗ್ಯ, ಚರ್ಮ ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಅಣುಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ.

60ರ ಆಸುಪಾಸಿನಲ್ಲಿ ಕಾರ್ಬೋಹೈಡ್ರೇಟ್‌ ಚಯಾಪಚಯ, ರೋಗನಿರೋಧಕ ವ್ಯವಸ್ಥೆ, ಮೂತ್ರಪಿಂಡದ ಕಾರ್ಯ, ಹೃದಯರಕ್ತನಾಳದ ಆರೋಗ್ಯ, ಚರ್ಮ ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಬದಲಾವಣೆಗಳು ಹೆಚ್ಚು ಗಮನ ಸೆಳೆದಿವೆ.

60ರ ಆಸುಪಾಸಿನಲ್ಲಿ ಮತ್ತೊಂದು ಬದಲಾವಣೆಯ ಅಲೆ

60ರ ಆಸುಪಾಸಿನ ಹಂತದಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆ ಮತ್ತು ಚಯಾಪಚಯಕ್ಕೆ ಸಂಬಂಧಿಸಿದ ಬದಲಾವಣೆಗಳ ಜೊತೆಗೆ ರಕ್ತನಾಳಗಳು ಮತ್ತು ವಿವಿಧ ಅಂಗಗಳ ಕಾರ್ಯಕ್ಷಮತೆಯ ಮೇಲೂ ವಯಸ್ಸಿನ ಪರಿಣಾಮ ಹೆಚ್ಚು ಗೋಚರಿಸಬಹುದು.

2025ರಲ್ಲಿ ಚೀನಾದ ಸಂಶೋಧಕರು ನಡೆಸಿದ ಮತ್ತೊಂದು ದೊಡ್ಡ ಪ್ರೋಟಿಯೋಮಿಕ್ ಅಧ್ಯಯನವು 13 ಬಗೆಯ ಮಾನವ ಅಂಗಾಂಶಗಳ 516 ಮಾದರಿಗಳನ್ನು ವಿಶ್ಲೇಷಿಸಿದೆ. ಈ ಅಧ್ಯಯನದಲ್ಲಿ ಸುಮಾರು 50ರ ಆಸುಪಾಸಿನಲ್ಲಿ ಅನೇಕ ಅಂಗಾಂಶಗಳಲ್ಲಿ ಪ್ರೋಟೀನ್ ಮಟ್ಟದಲ್ಲಿ ದೊಡ್ಡ ಬದಲಾವಣೆಗಳು ಕಾಣಿಸಿಕೊಂಡವು. ವಿಶೇಷವಾಗಿ ರಕ್ತನಾಳಗಳು ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳಿಗೆ ಆರಂಭದಲ್ಲೇ ಒಳಗಾಗುವ ಅಂಗಾಂಶಗಳಲ್ಲಿ ಒಂದಾಗಿರುವುದು ಕಂಡುಬಂದಿದೆ.

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ವಯಸ್ಸಾಗುವುದು ಕೇವಲ ಮುಖದಲ್ಲಿ ಸುಕ್ಕುಗಳು ಮೂಡುವುದು ಅಥವಾ ಕೂದಲು ಬಿಳಿಯಾಗುವುದು ಮಾತ್ರವಲ್ಲ. ದೇಹದೊಳಗೆ ನಡೆಯುವ ಜೈವಿಕ ಬದಲಾವಣೆಗಳೂ ಅದರ ಪ್ರಮುಖ ಭಾಗ.

ಆದರೆ ವಯಸ್ಸಾಗುವ ವೇಗವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ ದೀರ್ಘಕಾಲ ಆರೋಗ್ಯವಾಗಿರುವ ಅವಧಿಯನ್ನು ಹೆಚ್ಚಿಸಲು ಸಹಾಯ ಮಾಡಬಹುದು.

ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು 5 ಅಭ್ಯಾಸಗಳು

1. ಊಟದ ಬಟ್ಟಲಲ್ಲಿ ಪೌಷ್ಟಿಕ ಆಹಾರ ಇರಲಿ

ವಯಸ್ಸಾಗುವಾಗ ದೇಹಕ್ಕೆ ಬೇಕಾಗುವ ಪೋಷಕಾಂಶಗಳ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ತರಕಾರಿಗಳು, ಹಣ್ಣುಗಳು, ಸೊಪ್ಪು, ಬೇಳೆ-ಕಾಳುಗಳು, ಸಂಪೂರ್ಣ ಧಾನ್ಯಗಳು, ಬೀಜಗಳು, ಬಾದಾಮಿ-ವಾಲ್‌ನಟ್‌ಗಳಂತಹ ನಟ್ಸ್‌, ಮೀನು ಅಥವಾ ಕಡಿಮೆ ಕೊಬ್ಬಿನ ಪ್ರೋಟೀನ್‌ ಮೂಲಗಳು ಮತ್ತು ಉತ್ತಮ ಕೊಬ್ಬುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಇಂತಹ ಆಹಾರ ಪದ್ಧತಿ ಹೃದಯರೋಗ, ಮಧುಮೇಹ ಸೇರಿದಂತೆ ಹಲವು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಬಹುದು. ಇದಕ್ಕೆ ವಿರುದ್ಧವಾಗಿ ಅತಿಯಾಗಿ ಸಂಸ್ಕರಿಸಿದ ಆಹಾರ, ಹೆಚ್ಚುವರಿ ಸಕ್ಕರೆ ಮತ್ತು ಅತಿಯಾದ ಸ್ಯಾಚುರೇಟೆಡ್‌ ಕೊಬ್ಬನ್ನು ಕಡಿಮೆ ಮಾಡುವುದು ಉತ್ತಮ.

2. ಪ್ರತಿದಿನ ದೈಹಿಕ ಚಟುವಟಿಕೆ ಇರಲಿ

ವಯಸ್ಸಾಗುತ್ತಿದ್ದಂತೆ ಸ್ನಾಯು ಮತ್ತು ಮೂಳೆಗಳ ಬಲವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ನಿಯಮಿತ ವ್ಯಾಯಾಮ ಸಹಾಯಕ. ವೇಗವಾಗಿ ನಡೆಯುವುದು, ಸೈಕ್ಲಿಂಗ್‌, ಈಜು, ನೃತ್ಯ, ತೋಟಗಾರಿಕೆ ಮುಂತಾದ ಚಟುವಟಿಕೆಗಳ ಜೊತೆಗೆ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮವನ್ನೂ ಸೇರಿಸಬಹುದು.

ವಯಸ್ಕರಿಗೆ ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ಪ್ರಮಾಣದ ದೈಹಿಕ ಚಟುವಟಿಕೆ ಒಂದು ಸಾಮಾನ್ಯ ಆರೋಗ್ಯ ಮಾರ್ಗಸೂಚಿಯಾಗಿದೆ. ಜೊತೆಗೆ ವಾರದಲ್ಲಿ ಕನಿಷ್ಠ ಎರಡು ದಿನ ಸ್ನಾಯು ಬಲಪಡಿಸುವ ಚಟುವಟಿಕೆಗಳನ್ನು ಮಾಡುವುದೂ ಉಪಯುಕ್ತ. ಮುಖ್ಯವಾದುದು ಹೆಚ್ಚು ಕಷ್ಟದ ವ್ಯಾಯಾಮವಲ್ಲ, ನಿಯಮಿತವಾದ ವ್ಯಾಯಾಮ.

3. ನಿದ್ರೆಯನ್ನು ನಿರ್ಲಕ್ಷಿಸಬೇಡಿ

ನಿದ್ರೆ ಎಂದರೆ ಕೇವಲ ವಿಶ್ರಾಂತಿ ಅಲ್ಲ. ದೇಹದ ಪುನಶ್ಚೇತನ ಪ್ರಕ್ರಿಯೆಯಲ್ಲೂ ಅದು ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರೆ ಸರಿಯಾಗಿ ಆಗದಿದ್ದರೆ ದೇಹದ ಚಯಾಪಚಯ, ಹೃದಯದ ಆರೋಗ್ಯ ಮತ್ತು ಮೆದುಳಿನ ಕಾರ್ಯ ಸೇರಿದಂತೆ ಹಲವು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು.

ಆದ್ದರಿಂದ ಪ್ರತಿದಿನ ಒಂದೇ ಸಮಯದಲ್ಲಿ ಮಲಗುವ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಮಲಗುವ ಮುನ್ನ ಮೊಬೈಲ್‌ ಅಥವಾ ಇತರ ಸ್ಕ್ರೀನ್‌ ಬಳಕೆಯನ್ನು ಕಡಿಮೆ ಮಾಡುವುದು, ರಾತ್ರಿ ಹೊಟ್ಟೆ ತುಂಬಾ ಊಟ ತಪ್ಪಿಸುವುದು ಮತ್ತು ಮಲಗುವ ಕೋಣೆಯನ್ನು ಶಾಂತವಾಗಿಡುವುದು ಸಹಾಯ ಮಾಡಬಹುದು. ಬಹುತೇಕ ವಯಸ್ಕರಿಗೆ ರಾತ್ರಿ 7ರಿಂದ 9 ಗಂಟೆಗಳ ನಿದ್ರೆ ಬೇಕು.

4. ಒತ್ತಡ ಕಡಿಮೆ ಮಾಡಿ, ಹಾನಿಕಾರಕ ಅಭ್ಯಾಸಗಳಿಂದ ದೂರವಿರಿ

ದೀರ್ಘಕಾಲದ ಒತ್ತಡ ದೇಹದ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನ ಮತ್ತು ಅತಿಯಾದ ಮದ್ಯಪಾನವೂ ಹಲವು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ಧೂಮಪಾನ ಮಾಡುತ್ತಿದ್ದರೆ ಅದನ್ನು ನಿಲ್ಲಿಸುವುದು ಮತ್ತು ಮದ್ಯಪಾನವನ್ನು ತಪ್ಪಿಸುವುದು ಅಥವಾ ಮಿತಿಗೊಳಿಸುವುದು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು.

ಒತ್ತಡ ಕಡಿಮೆ ಮಾಡಲು ಧ್ಯಾನ, ಯೋಗ, ಪ್ರಕೃತಿಯಲ್ಲಿ ಸಮಯ ಕಳೆಯುವುದು, ಸಂಗೀತ, ಓದು, ಹವ್ಯಾಸಗಳು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯುವಂತಹ ಚಟುವಟಿಕೆಗಳನ್ನು ಬಳಸಬಹುದು. ಮನಸ್ಸಿನ ಆರೈಕೆಯೂ ದೇಹದ ಆರೈಕೆಯಷ್ಟೇ ಮುಖ್ಯ.

5. ಜನರೊಂದಿಗೆ ಸಂಪರ್ಕದಲ್ಲಿರಿ, ಮೆದುಳನ್ನು ಸಕ್ರಿಯವಾಗಿಡಿ

ವಯಸ್ಸಾದಂತೆ ಸಾಮಾಜಿಕ ಸಂಪರ್ಕ ಕಡಿಮೆಯಾಗುವುದು ಕೆಲವರಿಗೆ ಒಂಟಿತನವನ್ನು ಹೆಚ್ಚಿಸಬಹುದು. ಆದರೆ ಕುಟುಂಬ, ಸ್ನೇಹಿತರು ಮತ್ತು ಸಮಾಜದೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮಾನಸಿಕ ಆರೋಗ್ಯಕ್ಕೆ ಸಹಾಯಕ. ಹೊಸ ವಿಷಯ ಕಲಿಯುವುದು, ಪುಸ್ತಕ ಓದುವುದು, ಸಂಗೀತ ಅಥವಾ ಕಲೆಯಲ್ಲಿ ತೊಡಗಿಸಿಕೊಳ್ಳುವುದು, ಹವ್ಯಾಸಗಳನ್ನು ಮುಂದುವರಿಸುವುದು, ಇತರರಿಗೆ ಸಹಾಯ ಮಾಡುವುದು ಅಥವಾ ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮೆದುಳನ್ನು ಸಕ್ರಿಯವಾಗಿಡಲು ಸಹಾಯಕ.

ಹಾರ್ವರ್ಡ್‌ನ ದೀರ್ಘಕಾಲೀನ ಅಧ್ಯಯನಗಳಲ್ಲಿಯೂ ಉತ್ತಮ ಸಾಮಾಜಿಕ ಸಂಬಂಧಗಳು ಮತ್ತು ಅರ್ಥಪೂರ್ಣ ಸಂಬಂಧಗಳು ಆರೋಗ್ಯಕರ ಜೀವನಕ್ಕೆ ಸಂಬಂಧಿಸಿವೆ ಎಂಬುದು ಕಂಡುಬಂದಿದೆ.

44 ಮತ್ತು 60 ವರ್ಷ ಎಂದರೆ 'ಅಪಾಯದ ಗಡುವು' ಅಲ್ಲ

44 ಅಥವಾ 60ನೇ ಹುಟ್ಟುಹಬ್ಬದ ನಂತರ ದೇಹ ಏಕಾಏಕಿ ವೃದ್ಧವಾಗುತ್ತದೆ ಎಂದು ಈ ಸಂಶೋಧನೆಗಳ ಅರ್ಥವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ವಯಸ್ಸಾಗುವ ವೇಗ ಬದಲಾಗುತ್ತದೆ. ಆಹಾರ, ವ್ಯಾಯಾಮ, ನಿದ್ರೆ, ಒತ್ತಡ, ಧೂಮಪಾನ, ಮದ್ಯಪಾನ, ವಂಶವಾಹಿ ಅಂಶಗಳು ಮತ್ತು ಈಗಾಗಲೇ ಇರುವ ಆರೋಗ್ಯ ಪರಿಸ್ಥಿತಿಗಳು ಕೂಡ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಸ್ಟ್ಯಾನ್‌ಫೋರ್ಡ್ ಅಧ್ಯಯನದ ಸಂಶೋಧಕರೂ ಈ ರೀತಿಯ ಅಣುಮಟ್ಟದ ಬದಲಾವಣೆಗಳಿಗೆ ಜೀವನಶೈಲಿ ಅಥವಾ ವರ್ತನೆಯ ಅಂಶಗಳು ಕೆಲವು ಸಂದರ್ಭಗಳಲ್ಲಿ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಆದ್ದರಿಂದ ಈ ವಯಸ್ಸಿನ ಹಂತಗಳ ಕುರಿತು ಭಯಪಡುವುದಕ್ಕಿಂತ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗುವ ಸೂಚನೆಯಾಗಿ ನೋಡುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+