Instagram: 17.5 ಮಿಲಿಯನ್ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ಸಂಕಷ್ಟ: ಈ ತಪ್ಪು ಮಾಡಬೇಡಿ
ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಬಳಸುತ್ತಿರುವ ಕೋಟ್ಯಾಂತರ ಜನರಿಗೆ ಶಾಕಿಂಗ್ ನ್ಯೂಸ್‌ವೊಂದು ಎದುರಾಗಿದೆ. ಸೈಬರ್ ಭದ್ರತಾ ಸಂಸ್ಥೆ ಮಾಲ್ವೇರ್ ಬೈಟ್ (Malwarebytes) ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಬಳಸುತ್ತಿರುವವರ ಡೇಟಾ ಕಳ್ಳತನವಾಗಿದೆ ಎನ್ನುವ ಗಂಭೀರ ವಿಚಾರವೊಂದು ಇದೀಗ ಬಹಿರಂಗವಾಗಿದೆ.
ವಿಶ್ವದಾದ್ಯಂತ ಅಂದಾಜು 17.5 ಮಿಲಿಯನ್ ಇನ್‌ಸ್ಟಾಗ್ರಾಮ್ ಖಾತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಷ್ಟು ದೊಡ್ಡ ಡೇಟಾ ಉಲ್ಲಂಘನೆ ಇದಾಗಿದೆ ಎಂದು ಹೇಳಲಾಗಿದೆ. ಸೋರಿಕೆಯಾದ ಡೇಟಾವನ್ನು (ಮಾಹಿತಿ ಹಾಗೂ ವಿವರಗಳನ್ನು) ಈಗಾಗಲೇ ಹ್ಯಾಕರ್ ಫೋರಮ್‌ಗಳು ಮತ್ತು ಡಾರ್ಕ್ ವೆಬ್‌ನಲ್ಲಿ ಮುಕ್ತವಾಗಿ ಹಂಚಿಕೊಳ್ಳಲಾಗುತ್ತಿದ್ದು, ಲಕ್ಷಾಂತರ ಬಳಕೆದಾರರ ಮಾಹಿತಿ ಅಪಾಯಕ್ಕೆ ಸಿಲುಕಿದೆ.

ಮಾಲ್ವೇರ್ ಬೈಟ್ ಪ್ರಕಾರ, ಡಾರ್ಕ್ ವೆಬ್ ಪರಿಶೀಲನೆ ಸಮಯದಲ್ಲಿ ಡೇಟಾವನ್ನು ಪಡೆದುಕೊಂಡಿದೆ ಎಂದು ಹೇಳಿದೆ. ಸೋರಿಕೆಯಾದ ಮಾಹಿತಿಯು ಬಳಕೆದಾರ ಪೂರ್ಣ ಹೆಸರುಗಳು, ಇಮೇಲ್ ವಿಳಾಸಗಳು, ಫೋನ್ ಸಂಖ್ಯೆಗಳು, ಭಾಗಶಃ ವಿಳಾಸಗಳು ಮತ್ತು ಇತರ ಸಂಪರ್ಕ ವಿವರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
ಸೈಬರ್ ವಂಚನೆ ಹೆಚ್ಚಾಗುವ ಸಾಧ್ಯತೆ
ಇನ್ನು ಇನ್‌ಸ್ಟಾಗ್ರಾಮ್‌ನ ಬೃಹತ್ ಪ್ರಮಾಣದ ಮಾಹಿತಿ ಸೋರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸೋರಿಕೆಯಾಗಿರುವ ಡೇಟಾದ ಪ್ರಮಾಣವು ದುರುಪಯೋಗದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಫಿಶಿಂಗ್ ಹೆಚ್ಚಾಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ಬಳಕೆದಾರ ಖಾತೆಗಳಿಗೆ ಪ್ರವೇಶವನ್ನು ಪಡೆಯಲು Instagram ನ ಪಾಸ್‌ವರ್ಡ್ ಮರುಹೊಂದಿಸುವ ಕಾರ್ಯವಿಧಾನವನ್ನು ಬಳಸಿಕೊಳ್ಳುವ ಮೂಲಕ ಪ್ರಯತ್ನ ನಡೆದಿದೆ. ನಿಮ್ಮ ಮೇಲ್‌ಗಳಿಗೆ ಇನ್‌ಸ್ಟಾಗ್ರಾಮ್ ಪಾಸ್‌ವರ್ಡ್ ಸೆಟ್ ಮಾಡುವ ಮೇಲ್ ಬಂದರೆ ಎಚ್ಚರಿಕೆ ವಹಿಸುವಂತೆ ಹೇಳಲಾಗಿದೆ.
ಡೇಟಾವು 2024ರಲ್ಲಿ ಇನ್‌ಸ್ಟಾಗ್ರಾಮ್ ಎಪಿಎ ಸೋರಿಕೆಯಿಂದ ಬಂದಿದೆ ಎಂದು ಹೇಳಲಾಗಿದೆ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಮಾದರಿ ಡೇಟಾವು ಬಳಕೆದಾರ ಹೆಸರುಗಳು, ಇಮೇಲ್‌ಗಳು, ಫೋನ್ ಸಂಖ್ಯೆಗಳು, ಬಳಕೆದಾರ IDಗಳು ಮತ್ತು ಪ್ರೊಫೈಲ್ ಮೆಟಾ ಡೇಟಾವನ್ನು ಒಳಗೊಂಡಿದೆ.
ಸೋರಿಕೆಯಾದ ದಾಖಲೆಗಳು API (Application programming interface) ಪ್ರತಿಕ್ರಿಯೆಗಳಂತೆ ರಚನೆಯಾಗಿರುವ ಸಾಧ್ಯತೆ ಇದೆ.
ಡೇಟಾ ಸೋರಿಕೆ ಮೆಟಾ ಹೇಳಿದ್ದೇನು
ಇನ್‌ಸ್ಟಾಗ್ರಾಮ್‌ನ ಒಡೆತನದ ಮೆಟಾ ಉಲ್ಲಂಘನೆಯನ್ನು ದೃಢೀಕರಿಸಿಲ್ಲ ಅಥವಾ ಈ ಬಗ್ಗೆ ಇಲ್ಲಿಯ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅನೇಕ ಬಳಕೆದಾರರು ಅನಿರೀಕ್ಷಿತ Instagram ಪಾಸ್‌ವರ್ಡ್ ಮರುಹೊಂದಿಸುವ ಇಮೇಲ್‌ಗಳನ್ನು ಸ್ವೀಕರಿಸಿರುವುದಾಗಿ ವರದಿ ಮಾಡಿದ್ದಾರೆ. ಇವುಗಳಲ್ಲಿ ಕೆಲವು ಕಾನೂನುಬದ್ಧವಾಗಿರಬಹುದು, ಆದರೆ ಬಹುತೇಕ ದುರುದ್ದೇಶಪೂರಿತ ವ್ಯಕ್ತಿಗಳಿಂದ ನಡೆಯುತ್ತಿರುವ ದುರುಪಯೋಗದ ಭಾಗವಾಗಿರಬಹುದು ಎಂದು ಮಾಲ್‌ವೇರ್‌ಬೈಟ್ಸ್ ಎಚ್ಚರಿಸಿದೆ. ಈ ಮೆಗಾ ಡೇಟಾ ಸೋರಿಕೆಯಿಂದಾಗಿ ಭಾರೀ ಪ್ರಮಾಣದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುವ ಆತಂಕ ಶುರುವಾಗಿದೆ.
ಸೋಷಿಯಲ್ ಮೀಡಿಯಾ ಚರ್ಚೆ
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಇನ್‌ಸ್ಟಾಗ್ರಾಮ್ ಡೇಟಾ ಸೋರಿಕೆಯಾಗಿರುವ ವಿಚಾರವು ಗಂಭೀರ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದ ಮಾಹಿತಿ ಸೋರಿಕೆಯು ಸಂಕಷ್ಟವನ್ನು ತಂದೊಡ್ಡುವ ಆತಂಕ ಹೆಚ್ಚಾಗಿದೆ.












Click it and Unblock the Notifications