ಮನುಷ್ಯರು ತಿಂದೇ ಅಳಿಸಿ ಹೋದ ಪ್ರಾಣಿ ಸಂಕುಲವಿದು!ಈಗ ಬರೀ ಚಿತ್ರಗಳಲ್ಲಿ ಮಾತ್ರ ಲಭ್ಯ
ಮನುಷ್ಯನ ಅತಿಯಾದ ಆಸೆ ಮತ್ತು ಹಸಿವಿನಿಂದಾಗಿ ಜಗತ್ತು ಅದೆಷ್ಟೋ ಸುಂದರ ಜೀವಿಗಳನ್ನು ಕಳೆದುಕೊಂಡಿದೆ. ಭೂಮಿಯ ಮೇಲಿದ್ದ ಅನೇಕ ಪ್ರಾಣಿಗಳು ಮಾನವರ ಆಹಾರವಾದ ಕಾರಣದಿಂದಲೇ ಅಳಿಸಿ ಹೋಗಿದೆ. ಇನ್ನು ಈ ಪ್ರಾಣಿಗಳ ಅಳಿವಿಗೆ ಹಸಿವು ಒಂದೇ ಕಾರಣವಾಗಿರಲಿಲ್ಲ. ವಾಸಸ್ಥಳಕ್ಕಾಗಿ ಅರಣ್ಯಗಳ ನಾಶ, ಹಣ ಮಾಡುವ ದುರಾಸೆಗಳು ಕೂಡಾ ಕೆಲವೊಂದು ಪ್ರಾಣಿಗಳನ್ನು ಅಳಿವಿನಂಚಿಗೆ ತಳ್ಳಿದೆ. ಮಾನವರು ತಿನ್ನುತ್ತಾ ತಿನ್ನುತ್ತಾ ಅಳಿವಿನಂಚಿಗೆ ತಳ್ಳಿದ 10 ಪ್ರಾಣಿಗಳು ಯಾವುವು ಎಂದು ನೋಡುವುದಾದರೆ:
1. ಪ್ಯಾಸೆಂಜರ್ ಪಿಜನ್ (Passenger Pigeon)
ಒಮ್ಮೆ ಪ್ಯಾಸೆಂಜರ್ ಪಿಜನ್‌ಗಳು ಉತ್ತರ ಅಮೆರಿಕಾದಲ್ಲಿ ಆಕಾಶವನ್ನೇ ಕತ್ತಲುಗೊಳಿಸುವಷ್ಟು ದೊಡ್ಡ ಗುಂಪುಗಳಲ್ಲಿ ಸಂಚರಿಸುತ್ತಿದ್ದವು. ಜನರು ಈ ಪಕ್ಷಿಯನ್ನು ಮಾಂಸಕ್ಕಾಗಿ ಅಗಾಧವಾಗಿ ಬಳಸಿಕೊಳ್ಳಲು ಆರಂಭಿಸಿದರು. ಇದಕ್ಕಾಗಿ ಸಾವಿರಾರು ಪಕ್ಷಿಗಳನ್ನು ಗುಂಡಿಕ್ಕಿ, ಬಲೆ ಹಾಕಿ ಹಿಡಿದು ಕೊಂದರು. 1914ರ ವೇಳೆಗೆ, ಈ ಪ್ಯಾಸೆಂಜರ್ ಪಿಜನ್ ಸಂತತಿಯೇ ಅಳಿಸಿ ಹೋಯಿತು.
2. ಗ್ರೇಟ್ ಆಕ್ (Great Auk)
ಗ್ರೇಟ್ ಆಕ್ ದೊಡ್ಡದಾದ, ಹಾರಲಾರದ ಸಮುದ್ರಪಕ್ಷಿಯಾಗಿತ್ತು. ಅದನ್ನು ಹಿಡಿಯುವುದು ತುಂಬಾ ಸುಲಭವಾಗಿತ್ತು. ನಾವಿಕರು ಮತ್ತು ಬೇಟೆಗಾರರು ಅದರ ಮಾಂಸ, ಮೊಟ್ಟೆ, ಎಣ್ಣೆ ಮತ್ತು ರೆಕ್ಕೆಗಳಿಗಾಗಿ ಅದನ್ನು ಬೇಟೆಯಾಡುತ್ತಿದ್ದರು. 1844ರಲ್ಲಿ ಐಸ್‌ಲ್ಯಾಂಡ್‌ನಲ್ಲಿ ಕೊನೆಯ ಗ್ರೇಟ್ ಆಕ್ ಅನ್ನು ಬಲಿ ಪಡೆಯುವುದರೊಂದಿಗೆ ಇದರ ಸಂತತಿಯೇ ಇಲ್ಲವಾಯಿತು.
3. ಸ್ಟೆಲ್ಲರ್ ಸಮುದ್ರ ಹಸು (Steller's Sea Cow)
ಸ್ಟೆಲ್ಲರ್ ಸಮುದ್ರ ಹಸು ಅತಿದೊಡ್ಡದು. ನಿಧಾನಗತಿಯಲ್ಲಿ ಓಡಾಡುವ ಪ್ರಾಣಿ. ಇದರ ಮಾಂಸ ಬಲು ರುಚಿ ಎಂದು ಹೇಳಲಾಗುತ್ತಿತ್ತು. ರಷ್ಯಾದ ತುಪ್ಪಳ ವ್ಯಾಪಾರಿಗಳು ಉತ್ತರ ಪೆಸಿಫಿಕ್‌ನ ತಣ್ಣನೆಯ ನೀರಿನಲ್ಲಿ ಕೆಲಸ ಮಾಡುವಾಗ ಅದರ ಮಾಂಸ ಮತ್ತು ಕೊಬ್ಬನ್ನು ಬಳಸುತ್ತಿದ್ದರು. ಈ ಪ್ರಾಣಿಯ ಪ್ರಯೋಜನವನ್ನು ಯುರೋಪಿಯನ್ನರು ವರ್ಣಿಸಿದ 30 ವರ್ಷಗಳೊಳಗೆ ಅದು ಸಂಪೂರ್ಣವಾಗಿ ಕಣ್ಮರೆಯಾಯಿತು.

4. ಮೊವಾ (Moa)
ಮೊವಾ ನ್ಯೂಜಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ ದೈತ್ಯ ಹಾರಲಾರದ ಪಕ್ಷಿಗಳಾಗಿದ್ದವು. ಮಾನವರ ಆಗಮನವೇ ಈ ಪಕ್ಷಿಗಳಿಗೆ ಮುಳ್ಳಾಯಿತು. ಜನರು ಎಷ್ಟು ವೇಗವಾಗಿ ಒಂದು ಪ್ರದೇಶವನ್ನು ಖಾಲಿ ಮಾಡಬಲ್ಲರು ಎಂಬ ಊಹೆ ಕೂಡಾ ಈ ಹಕ್ಕಿಗಳಿಗೆ ಇರಲಿಕ್ಕಿಲ್ಲ. ಕೆಲವೇ ತಲೆಮಾರುಗಳೊಳಗೆ ಈ ಎತ್ತರದ ಪಕ್ಷಿಗಳು ಅಳಿದುಹೋದವು.
5.ಹಸಿರು ಸಮುದ್ರ ಆಮೆ (Green Sea Turtle)
ಹಸಿರು ಸಮುದ್ರ ಆಮೆಗಳನ್ನು ಮಾಂಸ ಮತ್ತು ಮೊಟ್ಟೆಗಳಿಗಾಗಿ ಬೇಟೆಯಾಡಲಾಗುತ್ತಿತ್ತು. ವಿಶೇಷವಾಗಿ ಕಡಲತೀರಗಳ ಬಳಿ ಇದನ್ನು ಬೇಟೆಯಾಡಲಾಗುತ್ತಿತ್ತು. ಸಮಸ್ಯೆ ಏನೆಂದರೆ ಗೂಡು ಕಟ್ಟುವ ಆಮೆ ಅತಿ ನಿಧಾನವಾಗಿ ಚಲಿಸುತ್ತದೆ ಮಾತ್ರವಲ್ಲ ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಇದು ಬೇಟೆಗಾರರು ನಿರೀಕ್ಷಿಸುವ ಸ್ಥಳದಲ್ಲೇ ಇರುತ್ತದೆ. ಹಾಗಾಗಿ ಇವುಗಳನ್ನು ಹಿಡಿದು ತಿನ್ನುವುದು, ಮೊಟ್ಟೆಗಳನ್ನು ಸೇವಿಸುವುದು ಜನರಿಗೆ ಬಹಳ ಸುಲಭವಾಗಿತ್ತು.
6. ರೊಡ್ರಿಗ್ಸ್ ಸಾಲಿಟೇರ್ (Rodrigues Solitaire)
ರೊಡ್ರಿಗ್ಸ್ ಸಾಲಿಟೇರ್ ಇದೊಂದು ದೊಡ್ಡ ದ್ವೀಪ ಪಕ್ಷಿ. ಇದಕ್ಕೆ ತನ್ನ ಸ್ಥಳ ಬಿಟ್ಟು ಬೇರೆಡೆಗೆ ಹೋಗಲು ತಿಳಿದಿರಲಿಲ್ಲ. ರೊಡ್ರಿಗ್ಸ್ ದ್ವೀಪದಲ್ಲಿ ಅದನ್ನು ನಿರಂತರವಾಗಿ ಬೇಟೆಯಾಡಲಾಯಿತು. 18ನೇ ಶತಮಾನದ ವೇಳೆಗೆ ಅದು ಕೇವಲ ಚಿತ್ರಗಳಲ್ಲಿ ಮಾತ್ರ ಉಳಿದುಕೊಳ್ಳುವ ಹಾಗಾಯಿತು.
7. ಕ್ಯಾರಿಬಿಯನ್ ಮಾಂಕ್ ಸೀಲ್ (Caribbean Monk Seal)
ಕ್ಯಾರಿಬಿಯನ್ ಮಾಂಕ್ ಸೀಲ್ ಒಂದು ಕಾಲದಲ್ಲಿ ಕ್ಯಾರಿಬಿಯನ್ ಮತ್ತು ಮೆಕ್ಸಿಕೋ ಕೊಲ್ಲಿಯ ಬಿಸಿಯಾದ ಕಡಲತೀರಗಳಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಇದರಿಂದ ಬೇಟೆಗಾರರಿಗೆ ಮಾಂಸ, ಎಣ್ಣೆ ಮತ್ತು ಕೊಬ್ಬಿಗಾಗಿ ಅವುಗಳನ್ನು ಕೊಲ್ಲುವುದು ಸುಲಭವಾಯಿತು. ಅವು ಗುಂಪುಗಳಾಗಿ ತೀರದಲ್ಲಿದ್ದಾಗ ಬೇಟೆಗಾರರು ಸುಲಭವಾಗಿ ಅವುಗಳನ್ನು ಬೇಟೆಯಾಡಿ ಬಿಡುತ್ತಿದ್ದರು. ದಶಕಗಳ ಕಾಲ ಯಾವುದೇ ದೃಢೀಕೃತ ದೃಶ್ಯಾವಳಿ ಸಿಗದ ನಂತರ ಅದನ್ನು ಅಳಿದುಹೋದ ಪ್ರಾಣಿ ಸಂಕುಲದ ಸಾಲಿಗೆ ಸೇರಿಸಲಾಯಿತು.
8. ಹೀತ್ ಹೆನ್ (Heath Hen)
ಹೀತ್ ಹೆನ್ ಒಮ್ಮೆ ಅಟ್ಲಾಂಟಿಕ್ ಕರಾವಳಿಯಲ್ಲಿ ಸಾಮಾನ್ಯ ಆಹಾರವೆಂದು ಪರಿಗಣಿಸಲ್ಪಡುವಷ್ಟು ಸಾಮಾನ್ಯವಾಗಿತ್ತು. ವಸಾಹತುಗಾರರು ಅದನ್ನು ತೀವ್ರವಾಗಿ ಬೇಟೆಯಾಡಿದರು. ಪರಿಣಾಮವಾಗಿ 1932ರಲ್ಲಿ ಮಾರ್ತಾಸ್ ವೈನ್‌ಯಾರ್ಡ್‌ನಲ್ಲಿ ಹೀತ್ ಹೆನ್ ಸಂತತಿ ಕೊನೆಯಾಯಿತು.
9. ಪಿಂಟಾ ದ್ವೀಪ ಆಮೆ (Pinta Island Tortoise)
ಪಿಂಟಾ ದ್ವೀಪದ ಆಮೆಗಳು ದೀರ್ಘಕಾಲ ತಾಳ್ಮೆಯಿಂದ ಬದುಕಲು ರೂಪುಗೊಂಡಿದ್ದವು. ಇದರಿಂದ ದೀರ್ಘ ಸಮುದ್ರಯಾನಗಳಲ್ಲಿ ತಾಜಾ ಮಾಂಸ ಬಯಸುತ್ತಿದ್ದ ನಾವಿಕರಿಗೆ ಅವು ಉಪಯುಕ್ತವಾಗಿದ್ದವು. ಅವು ಕಡಿಮೆ ಆಹಾರ ಮತ್ತು ನೀರಿನಿಂದಲೂ ತಿಂಗಳುಗಳ ಕಾಲ ಬದುಕಬಲ್ಲವು. ಹಾಗಾಗಿ ದೂರದ ಪ್ರದೇಶಗಳಿಗೆ ಸಂಚರಿಸುವಾಗ ಅವುಗಳನ್ನು ಆಹಾರವಾಗಿ ತಮ್ಮೊಂದಿಗೆ ಸಾಗಿಸುತ್ತಿದ್ದರು. ಕೊನೆಯದಾಗಿ ಉಳಿದಿದ್ದ "ಲೋನ್ಸಮ್ ಜಾರ್ಜ್" ಸತ್ತ ಬಳಿಕ ಈ ಆಮೆಯ ವಂಶದ ಅಂತ್ಯವಾಯಿತು.
10. ಔರಾಕ್ಸ್ (Aurochs)
ಇದು ಒಂದಾನೊಂದು ಕಾಲದಲ್ಲಿ ಯುರೋಪ್, ಏಷ್ಯಾ ಮತ್ತು ಉತ್ತರ ಆಫ್ರಿಕಾದಾದ್ಯಂತ ಸಂಚರಿಸುತ್ತಿದ್ದ ದೈತ್ಯ ಪ್ರಾಣಿ. ಬೇಟೆ ಮತ್ತು ಕುಗ್ಗುತ್ತಿರುವ ವಾಸಸ್ಥಳ ಅದನ್ನು ಸಣ್ಣಸಣ್ಣ ಪ್ರದೇಶಗಳಿಗೆ ತೆರಳುವಂತೆ ಮಾಡಿತು. ಕೊನೆಯ ಔರಾಕ್ಸ್ 1627ರಲ್ಲಿ ಪೋಲ್ಯಾಂಡ್‌ನಲ್ಲಿ ಸತ್ತುಹೋಯಿತು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications