ಚೆನ್ನಾಗಿ ಕಾಣಲ್ಲ ಸಾರ್, ಕುದುರೆ ಕೊಂಡ್ಕೋಬೇಡಿ!
ಶ್ರೀಮಂತರ ಶ್ರೀಮಂತನೊಬ್ಬ ತನ್ನ ಮಗಳ ಹದಿನೆಂಟನೇ ಹುಟ್ಟುಹಬ್ಬಕ್ಕೆ ವಿಶಿಷ್ಟವಾದ ಉಡುಗೊರೆ ನೀಡಬೇಕೆಂದು ತೀರ್ಮಾನಿಸುತ್ತಾನೆ. ಏನು ಕೊಡಬೇಕೆಂದು ಆತನಿಗೆ ಹೊಳೆಯುವುದಿಲ್ಲ. ಹೀಗೇ ಮಾರುಕಟ್ಟೆಯಲ್ಲಿ ಅಡ್ಡಾಡುತ್ತಿದ್ದಾಗ ಆತನ ಕಣ್ಣಿಗೆ ಕೆನೆಯುತ್ತ ನಿಂತಿದ್ದ ಹಂಸಬಿಳುಪಿನ ಕುದುರೆಯೊಂದು ಕಾಣಿಸುತ್ತದೆ.
ಕುದುರೆಯ ಆಕಾರ, ಎತ್ತರ, ಬಣ್ಣ ನೋಡಿ ಮರುಳಾದ ಶ್ರೀಮಂತ ಅದನ್ನೇ ಮಗಳಿಗೆ ಉಡುಗೊರೆಯಾಗಿ ನೀಡಬೇಕೆಂದು ನಿಶ್ಚಯಿಸಿ ಮಾರುವವನ ಬಳಿ ಹೋಗಿ ಕೇಳುತ್ತಾನೆ. ಆದರೆ, ಆ ಮಾರಾಟಗಾರ ಕುದುರೆಯನ್ನು ನೀಡಲು ನಿರಾಕರಿಸುತ್ತಾನೆ. ಕುದುರೆಗೆ 1 ಲಕ್ಷ ರು. ಕೊಡುವುದಾಗಿ ಹೇಳಿದಾಗ, "ಚೆನ್ನಾಗಿ ಕಾಣಲ್ಲ ಸಾರ್, ಬೇಡ" ಎಂಬ ಉತ್ತರ ಬರುತ್ತದೆ. ಶ್ರೀಮಂತನಿಗೋ ಅಚ್ಚರಿ. ಕುದುರೆ ನೋಡಲು ಚೆನ್ನಾಗಿದ್ದರೂ ಯಾಕೆ ಹೀಗೆ ಹೇಳುತ್ತಿದ್ದಾನೆ ಎಂದು.
ಆತನ ಮಾತಿನ ಮರ್ಮ ಅರಿಯದೆ ಶ್ರೀಮಂತ ಮನೆಗೆ ಮರಳಿ ಬರುತ್ತಾನೆ. ಮಗಳಿಗೆ ಈ ವಿಷಯ ತಿಳಿಸುತ್ತಾನೆ. ಮಗಳಿಗೂ ಆ ಕುದುರೆಯನ್ನೇ ಉಡುಗೊರೆಯಾಗಿ ಪಡೆಯಬೇಕೆಂದು ಆಸೆಯಾಗುತ್ತದೆ. ಶ್ರೀಮಂತ ಮಾರಾಟಗಾರನ ಬಳಿ ಬಂದು ಮತ್ತೆ ಕೇಳುತ್ತಾನೆ. ಈ ಬಾರಿ 2 ಲಕ್ಷ ರು. ನೀಡುವುದಾಗಿ ಹೇಳಿದಾಗ, "ಚೆನ್ನಾಗಿ ಕಾಣಲ್ಲ ಸಾರ್, ಬೇಡ" ಎಂಬ ಉತ್ತರವೇ ದೊರೆಯುತ್ತದೆ.
ಶ್ರೀಮಂತನಿಗೆ ಆಶ್ಚರ್ಯ. ಇಷ್ಟೊಂದು ದೊಡ್ಡ ಮೊತ್ತ ನೀಡುವುದಾಗಿ ಹೇಳಿದರೂ ನೀಡುತ್ತಿಲ್ಲ. ಬಹುಶಃ ತನ್ನ ಶ್ರೀಮಂತಿಕೆ ನೋಡಿ ಇನ್ನೂ ದೊಡ್ಡ ಮೊತ್ತ ಬಯಸುತ್ತಿರಬಹುದು ಎಂದುಕೊಂಡು, 10 ಲಕ್ಷ ರು. ನೀಡುವುದಾಗಿ ಮಾರಾಟಗಾರನಿಗೆ ಹೇಳುತ್ತಾನೆ. ಮಾರಾಟಗಾರ ಶ್ರೀಮಂತನ ಒತ್ತಾಯಕ್ಕೆ ಮಣಿದು ಹಣ ಇಸಿದುಕೊಂಡು ಕುದುರೆಯನ್ನು ಕೊಟ್ಟು ಕಳಿಸುತ್ತಾನೆ.
ಮಗಳಿಗಂತೂ ಖುಷಿಯೋ ಖುಷಿ. ಗಿಫ್ಟ್ ಪಡೆದಿದ್ದೇ ತಡ ಅದರ ಮೇಲೆ ಹತ್ತಿ ಕಾಲಿನಿಂದ ತಟ್ಟಿದ ತಕ್ಷಣ ಕುದುರೆ ದಿಕ್ಕುದೆಸೆ ನೋಡದೆ ಯರ್ರಾಬಿರ್ರಿ ಓಡಿ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆಯುತ್ತದೆ, ಮಗಳು ಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಾಳೆ. ಕೆಂಡಾಮಂಡಲ ಕೋಪಗೊಂಡ ಶ್ರೀಮಂತ ಕುದುರೆ ಮಾರಾಟಗಾರನ ಬಳಿ ಬರುತ್ತಾನೆ.
"ಯೋ, ಕುದುರೆಗೆ ಕಣ್ಣು ಕಾಣಲ್ಲ ಅಂತ ಮೊದಲೇ ಯಾಕೆ ಹೇಳಲಿಲ್ಲ? ಅಷ್ಟು ದೊಡ್ಡ ಮೊತ್ತ ನೀಡಿದ್ದಲ್ಲದೆ ನನ್ನ ಮಗಳು ಕಾಲು ಮುರಿದುಕೊಂಡು ಆಸ್ಪತ್ರೆ ಸೇರುವಂತಾಯಿತು" ಎಂದು ಮಾರಾಟಗಾರನನ್ನು ಜಾಡಿಸಲು ಮುಂದೆ ಬರುತ್ತಾನೆ.
ಮಾರಾಟಗಾರ, "ಸಾರ್, ಆವಾಗ್ಲೇ ಹೇಳಿದೆ ಚೆನ್ನಾಗಿ ಕಾಣಲ್ಲ ಅಂತ, ನೀವು ಕೇಳಿದ್ರಾ?" ಎಂದು ಶ್ರೀಮಂತನ ಮೇಲೇ ಪ್ಲೇಟು ತಿರುಗಿಸುತ್ತಾನೆ.
"ಯೋ, ಬರೀ ಚೆನ್ನಾಗಿ ಕಾಣಲ್ಲ ಅಂದೆ. ಕಣ್ಣು ಕಾಣಲ್ಲ ಅಂತ ಯಾಕೆ ಹೇಳಲಿಲ್ಲ?" ಎಂದು ಮತ್ತೆ ಬಾರಿಸಲು ಮುಂದೆ ಬರುತ್ತಾನೆ.
"ಸಾರ್, ನೀವೇ ಅದನ್ನು ಅರ್ಥ ಮಾಡ್ಕೋಬೇಕು ಸಾರ್. ಎಲ್ಲ ಬಿಡಿಸಿ ಹೇಳೋಕಾಗುತ್ತಾ?"












Click it and Unblock the Notifications