ಡಾರ್ಲಿಂಗ್, ಇವತ್ತೇನು ವಿಶೇಷ ತಿನಿಸು ಮಾಡಲಿ?
ಗಂಡ ಹೆಂಡತಿ ನಡುವೆ ಅದೇನು ಅನ್ಯೋನ್ಯ ಸಂಬಂಧ ಅಂತೀರಾ? ಆಹಾಹಾ ರಾಮ ಸೀತೆಯ ತರಹ ಅಂತೆಲ್ಲ ಕೊಂಡಾಡುತ್ತಿದ್ದರು. ಗಂಡ ಕೂಡ ಸಮಾರಂಭದಲ್ಲಿ ಸಾಕಷ್ಟು ಜನ ನೆರೆದಿದ್ದಾಗಲೆಲ್ಲ ಹೆಂಡತಿಯನ್ನು ಹೊಗಳಿದ್ದೇ ಹೊಗಳಿದ್ದು. ಅಡುಗೆ ಚೆನ್ನಾಗಿಲ್ಲ ಅಂತ ಒಂದು ಸತಿಯೂ ಹೇಳಿಲ್ಲ ಅನ್ನುತ್ತಿದ್ದ. ಈ ಮಾತನ್ನು ಕೇಳಿದವರೆಲ್ಲ, ಇವರ ಅನ್ಯೋನ್ಯತೆ ಗುಟ್ಟೇ ಇದು ಎಂದೆಲ್ಲ ಕೊಂಡಾಡುತ್ತಿದ್ದರು.
ಅಂದು ಅಂತಾರಾಷ್ಟ್ರೀಯ ಗಂಡನ ದಿನ, ಇಬ್ಬರಿಗೂ ರಜಾ. ಸ್ನಾನ ಕರ್ಮಾದಿಗಳನ್ನು ಮುಗಿಸಿಕೊಂಡು ಬಂದ ಹೆಂಡತಿ ಅಡುಗೆಮನೆ ಹೊಕ್ಕಳು. ಸೀರೆಯ ಸೆರಗು ಮತ್ತು ನೆರಿಗೆಯ ಚುಂಗನ್ನು ಸೊಂಟಕ್ಕೆ ಸಿಕ್ಕಿಸಿ ಇಂದೇನು ಮಾಡಲಿ ಎಂಬ ಜಿಜ್ಞಾಸೆಯಲ್ಲಿ ಮುಳುಗಿದಳು. ಆಜ್ಞಾಧಾರಕ ಗಂಡನನ್ನು ಒಂದು ಮಾತು ಕೇಳಿಯೇಬಿಡೋಣವೆಂದು ಚಪ್ಪಾಳೆ ಹೊಡೆದು, ಗಂಡನ ಹೆಸರು ಹಿಡಿದು ಅಡುಗೆಮನೆಗೆ ಬರಹೇಳಿದಳು. ಮುಂದಿನ ಅವರ ಸಂವಾದ ಓದಿರಿ.
ಹೆಂಡತಿ : ಡಾರ್ಲಿಂಗ್, ಇವತ್ತೇನು ವಿಶೇಷ ತಿನಿಸು ಮಾಡಲಿ?
ಗಂಡ : ಏನಾದ್ರೂ ಮಾಡು ಪರವಾಗಿಲ್ಲ. ಏನು ಮಾಡಿದ್ರೂ ತಿಂತೀನಿ. ಏನು ಮಾಡ್ತೀಯಾ?
ಹೆಂಡತಿ : ಛೆಛೆ ಹಾಗೆ ಹೇಳಿದ್ರೆ ಹೇಗೆ? ಏನು ವಿಶೇಷ ತಿನಿಸು ಬೇಕು ಹೇಳಿ ಪರವಾಗಿಲ್ಲ.
ಗಂಡ : ಸೋ, ಬಿಸಿಬಿಸಿ ಅನ್ನ ತಿಳಿ ಸಾರು ಮಾಡಿಬಿಡು, ಜಮಾಯಿಸಿಬಿಡೋಣ.
ಹೆಂಡತಿ : ಅಯ್ಯ, ಬೆಳಿಗ್ಗೆ ಬೆಳಿಗ್ಗೆ ಯಾರಾದ್ರೂ ಊಟ ಮಾಡ್ತಾರಾ?
ಗಂಡ : ಹಾಗಿದ್ರೆ, ಚಪಾತಿ ಬದನೆಕಾಯಿ ಪಲ್ಯ ಮಾಡಿಬಿಡು.
ಹೆಂಡತಿ : ಬೆಳಿಗ್ಗೆ ಮಕ್ಕಳಿಗೆ ಅದು ಇಷ್ಟವಾಗಲ್ಲ ಅಂತ ನಿಮಗೆ ಗೊತ್ತಿಲ್ಲ?
ಗಂಡ : ಹಿಟ್ಟು ಈಗಾಗಲೆ ಕಲಿಸಿಟ್ಟಿದ್ರೆ ಪೂರಿ ಸಾಗು ಮಾಡು ಚೆನ್ನಾಗಿರುತ್ತದೆ.
ಹೆಂಡತಿ : ರೀ, ನನಗೆ ಕರಿದ ತಿನಿಸುಗಳೆಂದರೆ ಅಲರ್ಜಿ ಅಂತ ನಿಮಗೆ ತಿಳಿದಿಲ್ಲವಾ?
ಗಂಡ : ಹ್ಯಾಗಿದ್ರೂ ಮೊಟ್ಟೆ ಇವೆಯಲ್ಲ, ಆಮ್ಲೇಟ್ ಮಾಡಿಬಿಡು, ಮಕ್ಕಳಿಗೂ ಇಷ್ಟ.
ಹೆಂಡತಿ : ಎಂಥವ್ರಿ ನೀವು, ಇವತ್ತು ಗುರುವಾರ ಅಲ್ಲವಾ? ಅಷ್ಟೂ ಗೊತ್ತಾಗಲ್ಲ?
ಗಂಡ : ಒಂದು ಕೆಲಸ ಮಾಡು, ಅಕ್ಕಿ ರೊಟ್ಟಿ ತಟ್ಟಿಬಿಡು.
ಹೆಂಡತಿ : ನಿನ್ನೆ ರಾತ್ರೀನೆ ತಿಂದೀವಲ್ಲ, ಮತ್ತೆ ಅದೇನಾ?
ಗಂಡ : ಬೆಸ್ಟ್ ಅಂದ್ರೆ ಇಡ್ಲಿ ಚಟ್ನಿ ಮಾಡಿಬಿಡು.
ಹೆಂಡತಿ : ಆಗಲ್ಲ, ಸಿಕ್ಕಾಪಟ್ಟೆ ಟೈಂ ಹಿಡಿಯತ್ತೆ.
ಗಂಡ : ಅದೆಲ್ಲ ಬೇಡವಾ? ಸೋ, ಹೋಟೆಲಿನಿಂದ ಏನಾದ್ರೂ ತಂದುಬಿಡ್ಲಾ?
ಹೆಂಡತಿ : ರೀ, ದಿನಾದಿನಾ ಹೋಟೆಲಿಂದ ತಿಂದ್ರೆ ಹೊಟ್ಟೆ ಏನಾಗಬೇಡ, ನೋ?
ಗಂಡ : ಹಾಗಾದ್ರೆ ಏನು ಮಾಡಬೇಕೆಂತ ಅಂದ್ಕೊಂಡಿದ್ದಿಯಾ?
ಹೆಂಡತಿ : (ಪ್ರೀತಿಯಿಂದ) ಇಷ್ಟು ವರ್ಷಗಳಿಂದ ನೋಡ್ತಿದ್ದೀರಾ, ನಾನ್ಯಾವತ್ತಾದರೂ ನಿಮ್ಮನ್ನು ಕೇಳದೆ ಅಡುಗೆ ಮಾಡಿದ್ದೀನಾ? ನೀವು ಏನು ಹೇಳ್ತೀರೋ ಅದನ್ನೇ ಮಾಡ್ತೀನಿ! [ಗಂಡ ಹೆಂಡತಿ ಜೋಕ್ಸ್]












Click it and Unblock the Notifications