ರೀ, ಒಂದು ಸಂತಸದ ಸುದ್ದಿಯಿದೆ, ಸದ್ಯದಲ್ಲೇ..
ಮದುವೆಯಾಗಿ ಇನ್ನೂ ಮೂರು ತಿಂಗಳು ಕೂಡ ಕಳೆದಿರುವುದಿಲ್ಲ. ಒಂದು ದಿನ ಗಂಡ ಕಚೇರಿ ಮುಗಿಸಿ ಮನೆಯೊಳಗೆ ಪ್ರವೇಶಿಸಿ ಇನ್ನೂ ಶೂಸ್, ಟೈ ಬಿಚ್ಚಿರುವುದಿಲ್ಲ, ಹೆಂಡತಿ ಆನಂದತುಂದಿಲಳಾಗಿ ಬಂದು ಗಂಡನ ಕೊರಳಿಗೆ ಜೋತುಬಿದ್ದು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾಳೆ. ಕಣ್ಣುಗಳು ಗಂಡನನ್ನೇ ನೋಡುತ್ತಿದ್ದರೂ, ಏನೋ ಒಂದು ಬಗೆಯ ತುಂಟತನ.
ತುಟಿಯನ್ನು ಬದಿಯಲ್ಲಿ ಕಚ್ಚಿ ಸಂತಸದ ಸುದ್ದಿ ಹೇಳಲು ಹೆಂಡತಿ ಅನುವಾಗುತ್ತಾಳೆ. "ರೀ, ಒಂದು ಸಂತಸದ ಸುದ್ದಿಯಿದೆ. ಸದ್ಯದಲ್ಲಿಯೇ ಈ ಮನೆಯಲ್ಲಿ ನಾವು ಇಬ್ಬರಲ್ಲ ಮೂರು ಜನರಾಗಲಿದ್ದೇವೆ" ಎಂದು ಹೇಳಿ ಗಂಡನ ಪ್ರತಿಕ್ರಿಯೆಗಾಗಿ ಕಾಯುತ್ತಾಳೆ.
ಗಂಡನಿಗೆ ಖುಷಿಯಿಂದ ಹುಚ್ಚುಹಿಡಿಯುವುದೊಂದು ಬಾಕಿ. ಸೀರೆಯುಟ್ಟು ನವನವೋನ್ಮೇಷಶಾಲಿನಿಯಂತೆ ಕಂಗೊಳಿಸುತ್ತಿದ್ದ ಆಕೆಯನ್ನು ಸೊಂಟದಿಂದ ಹಿಡಿದೆತ್ತಿ ಗಿರಿಗಿರಿ ತಿರುಗಿಸುತ್ತಾನೆ. ತೊಂಡೆಯಂತಹ ತುಟಿಗಳ ಮೇಲೆ, ಹಾಲುಗಲ್ಲಗಳ ಮೇಲೆ ಚುಂಬನದ ಮಳೆಗರೆಯುತ್ತಾನೆ. ಬಾಚಿ ತಬ್ಬಿಕೊಂಡು ಸಂತೋಷದ ಕಡಲಲ್ಲಿ ತೇಲಾಡುತ್ತಾನೆ. ತಮ್ಮಿಬ್ಬರ ಪ್ರಯತ್ನ ಫಲಿಸಿತೆಂದು ಆತನ ಬಾಯಿಯಿಂದ ಮಾತೇ ಹೊರಡುವುದಿಲ್ಲ.
ಆತನ ಹಿಡಿತದಿಂದ ಬಿಡಿಸಿಕೊಂಡ ಹೆಂಡತಿ, "ನೀವು ಈ ಸುದ್ದಿ ಕೇಳಿ ಖುಷಿಪಡುತ್ತೀರೆಂದು ಮೊದಲೇ ಗೊತ್ತಿತ್ತು. ನಿಮ್ಮ ಕಂಗಳಲ್ಲಿನ ಸಂತಸವೇ ಎಲ್ಲವನ್ನೂ ಹೇಳುತ್ತಿದೆ. ನಿಮ್ಮಂಥ ಗಂಡನನ್ನು ಪಡೆದ ನಾನೇ ಭಾಗ್ಯವತಿ. ಅಂದ ಹಾಗೆ, ಸುದ್ದಿಯೇನೆಂದರೆ, ನಾಳೆಯೇ ನನ್ನ ಅಮ್ಮ ಪರ್ಮನಂಟಾಗಿ ನಮ್ಮ ಜೊತೆಯಿರಲು ಬರುತ್ತಿದ್ದಾರೆ!" [ಗಂಡ ಹೆಂಡತಿ ಜೋಕ್ಸ್]












Click it and Unblock the Notifications