ಅದೇನೋ ಚಟಪಡಿಕೆ, ಅರ್ಥವಾಗದ ತಳಮಳ!
ಹೆರಿಗೆಗಾಗಿ ಯತೀಶ್ ತನ್ನ ಹೆಂಡತಿಯನ್ನು ತವರಿಗೆ ಕಳಿಸಿರುತ್ತಾನೆ. ಮನೇಲಿ ಏಕಾಂಗಿ. ವಾರಾಂತ್ಯ ಬಂದಿತೆಂದರೆ ಅದೇನೋ ಒಂದು ರೀತಿಯ, ಹೇಳಿಕೊಳ್ಳಲಾಗದ ಚಟಪಡಿಕೆ, ಅದೇನೋ ತಳಮಳ ಆತನಿಗೆ ಶುರುವಾಗುತ್ತಿರುತ್ತದೆ. ಅದೇನೆಂದು ತಿಳಿಯಲು ಆತ ಎಷ್ಟೇ ಪ್ರಯತ್ನಪಟ್ಟರೂ ಆತನಿಗೆ ಅರ್ಥವಾಗಿರುವುದಿಲ್ಲ.
ಆತನಿದ್ದ ಅಪಾರ್ಟ್‌ಮೆಂಟಿನ ಮೇಲಿನ ಮನೆಗೆ ಒಬ್ಬಳು ಸುಂದರಾತಿ ಸುಂದರಿಯೊಬ್ಬಳು ಬಾಡಿಗೆಗೆ ಬರುತ್ತಾಳೆ. ಆಕೆಯನ್ನು ನೋಡುತ್ತಿದ್ದಂತೆ ಆತ ಅನುಭವಿಸುತ್ತಿದ್ದ ಚಟಪಡಿಕೆಗಳಿಗೆ ಒಂದು ಅರ್ಥ ಸಿಗಲು ಶುರುವಾಗುತ್ತದೆ. ಆದರೆ, ಆ ಚಟಪಡಿಕೆ ತಣ್ಣಗಾಗದೆ ಮತ್ತಷ್ಟು ಕಾವುಪಡೆಯಲು ಆರಂಭವಾಗುತ್ತದೆ.
ಒಂದು ದಿನ ಡಿಂಗ್ ಡಾಂಗ್ ಅಂತ ಕಾಲಿಂಗ್ ಬೆಲ್ ರಾಗ ಹೇಳುತ್ತಿದ್ದಂತೆ ಬಾಗಿಲು ತೆರೆಯುತ್ತಾನೆ. ತನ್ನ ಕಣ್ಣನ್ನು ನಂಬಲು ತನಗೇ ಆಗುವುದಿಲ್ಲ. ಎದುರಿಗೆ ಮೊನ್ನೆತಾನೆ ಬಂದಿದ್ದ ಸೂಪರ್ ಹಾಟ್ ಆಂಟಿ. ಒಳಬರಲು ಹೇಳಿ ಹೆಸರೇನೆಂದು ಕೇಳುತ್ತಾನೆ. ಲವೀನಾ ಎಂದು ರಾಗವಾಗಿ ನುಲಿಯುತ್ತಾ ಉಲಿಯುತ್ತಾಳೆ ಸುಂದರಿ.
ಸೋಫಾದ ಮೇಲೆ ಕುಳಿತುಕೊಳ್ಳುತ್ತಾ, ಸೆರಗನ್ನು ಗಿರಿಗಿರಿ ಬೆರಳಲ್ಲಿ ಸುತ್ತುತ್ತಾ, "ನೋಡಿ ಇವ್ರೆ. ಇಲ್ಲಿ ಬಂದಾಗಿಂತ ದೇಹದಲ್ಲಿ ಏನೋ ಒಂದು ಬಗೆಯ ಚಟಪಡಿಕೆ ಆರಂಭವಾಗಿಬಿಟ್ಟಿದೆ. ಅದೇನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಅದಕ್ಕೆ ತಮ್ಮ ಸಹಾಯ ಪಡೆಯೋಣವೆಂದು ಬಂದೆ. ತಮಗೇನು ಅಭ್ಯಂತರವಿಲ್ಲದಿದ್ದರೆ, ಇಂದು ಸಂಜೆ ತಾವು ಬಿಡುವಾಗಿದ್ದರೆ, ಒಂದೆರಡು ಗಂಟೆ ನನ್ನ ಮನೆಯಲ್ಲಿ ಕಾಲ ಕಳೆಯಲು ಸಾಧ್ಯವೆ?" ಎಂದು ಕೇಳುತ್ತಾಳೆ ಲವೀನಾ.
ಯತೀಶನಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಹ ಅನುಭವ. ಹೊರಗೆ ಮೈಯಲ್ಲಿ ಒಂದು ರೀತಿ ನಡುಕ, ಒಳಗೆ ಇನ್ನೊಂದು ರೀತಿಯ ಪುಳಕ. "ಬಾಬಾಬಾಬಾಬಾ.... ನಾನಾನಾನಾ.... ನನಗೇನು ಅಭ್ಯಂತರವಿಲ್ಲ. ಖಂಡಿತ ಬರುತ್ತೇನೆ. ಎಷ್ಟೊತ್ತಿಗೆ ಬರಬೇಕು?" ಅಂತ ತಡವರಿಸುತ್ತ ಕೇಳುತ್ತಾನೆ. "ಎಂಟು ಗಂಟೆಗೆ" ಅಂತ ಹೇಳಿ ಲವೀನಾ ಜಾರಿಕೊಳ್ಳುತ್ತಾಳೆ.
ಬೆಳಗಿನಿಂದ ಸಂಜೆ 8 ಗಂಟೆಯವರೆಗಿನ ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಯತೀಶನಿಗೆ ಭಾಸವಾಗುತ್ತದೆ. ತಿಂಡಿ ತಿನ್ನಬೇಕೆಂದು ಅನಿಸುವುದಿಲ್ಲ, ಟಿವಿ ನೋಡಬೇಕೆಂದು ಅನಿಸುವುದಿಲ್ಲ, ಸ್ನಾನಕ್ಕೆ ಹೋದರೆ ಮೈಮೈಲೆ ನೀರು ಸುರಿದುಕೊಳ್ಳಬೇಕೆಂದು ಅನಿಸುವುದಿಲ್ಲ. ಒಟ್ಟಿನಲ್ಲಿ ಅವನೇ ಅವನಾಗಿರುವುದಿಲ್ಲ.
ಸಂಜೆ ಲವೀನಾ ಮನೆಗೆ ಹೋಗುತ್ತಾನೆ. ಕಾಲಿಂಗ್ ಬೆಲ್ ಡಿಂಗ್ ಡಾಂಗ್ ಅನ್ನುತ್ತಿದ್ದಂತೆ ಕದ ತೆಗೆದ ಲವೀನಾ, ಯತೀಶನ್ನು ಬರಮಾಡಿಕೊಳ್ಳುತ್ತಾಳೆ. ಆತ ಘಮಘಮ ಅನ್ನುತ್ತಿರುತ್ತಾನೆ. ಆಕೆಯೂ ಈಗ ತಾನೆ ಅರಳಿದ ಮಲ್ಲಿಗೆಯಂತೆ ಸುವಾಸನೆ ಬೀರುತ್ತಿರುತ್ತಾಳೆ. ಆತನ ಎದೆಬಡಿತ ನಿಮಿಷಕ್ಕೆ 150 ದಾಟಿರುತ್ತದೆ.
"ತಾವು ಬರಹೇಳಿದ್ದಿರಲ್ಲ" ಎಂದು ಪೀಠಿಕೆ ಹಾಕುತ್ತಾನೆ.
"ಅದೇ, ನಾನು ಹೇಳಿದೆನಲ್ಲ... ಒಂಥರಾ ಚಟಪಡಿಕೆ ಅಂತ, ಅದೇನೋ ತಳಮಳ..." ಆಕೆ ಮಾತು ಮುಗಿಸುವಷ್ಟರಲ್ಲಿ...
"ನಾನೂ ಅದೇ ಹೇಳಬೇಕೆಂದುಕೊಂಡಿದ್ದೆ. ನನಗೂ ಅದೇ ರೀತಿಯ ಚಟಪಡಿಕೆ..." ಆತ ಮಾತು ಮುಗಿಸುವಷ್ಟರಲ್ಲಿ...
"ನನ್ನ ಚಟಪಡಿಕೆಗೆ ಅರ್ಥ ಕಂಡುಕೊಂಡೆ. ನನ್ನ ಮನೆ ಮೇಲಿನ ಫ್ಲಾಟ್ ನಲ್ಲಿರುವವರ ಜೊತೆ ಎರಡು ಗಂಟೆ ಕೆಲಸವಿದೆ. ಬೇಗನೆ ಹೋಗಿ ಬಂದು ಬಿಡುತ್ತೇನೆ. ದಯವಿಟ್ಟು ಎರಡು ಗಂಟೆ ನನ್ನ ಮಗುವನ್ನು ಸ್ವಲ್ಪ ನೋಡಿಕೊಳ್ಳುತ್ತೀರಾ?" ಅಂತ ಹೇಳಿ ಲವೀನಾ ಜಾಗ ಖಾಲಿ ಮಾಡುತ್ತಾಳೆ, ಯತೀಶ್ ಪೂರ್ತಿ ಖಾಲಿಯಾಗಿರುವವನಂತೆ ನಿಂತಿರುತ್ತಾನೆ. [ಲವೀನಾ ಜೋಕ್ಸ್]












Click it and Unblock the Notifications