ಕುದುರೆ ಕೊಳ್ಳಲು ಬಂದ ಪೀಟರ್ ಮಂಕಾಗಿದ್ದೇಕೆ?
ಪುಟಾಣಿ ಪೀಟರ್ ತನ್ನ ಅಪ್ಪ ರಿಚರ್ಡ್ ಜೊತೆ ಕುದುರೆ ಹರಾಜು ಮಾಡುವ ಸ್ಥಳಕ್ಕೆ ಹೋಗುತ್ತಾನೆ. ಕೆನೆಯುತ್ತಿರುವ ವಿಧವಿಧವಾದ ಕುದುರೆಗಳನ್ನು ನೋಡಿ ಅವನಿಗೆ ಆಶ್ಚರ್ಯವೋ ಆಶ್ಚರ್ಯ. ರಿಚರ್ಡ್ ಮಾತ್ರ ಪೀಟರ್ ಕೈ ಹಿಡಿದುಕೊಂಡು ಒಂದೊಂದು ಕುದುರೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ.
ಕುದುರೆಯ ಬೆನ್ನಿನ ಮೇಲೆ, ಕಾಲುಗಳ ಮೇಲೆ, ಬಾಲದ ಮೇಲೆಲ್ಲ ಕೈಯಾಡಿಸುತ್ತ ಕುದುರೆಯನ್ನು ಪರೀಕ್ಷಿಸುತ್ತಿದ್ದ. ಸುಮಾರು ಹತ್ತು ಕುದುರೆಗಳನ್ನು ಪರಿಶೀಲಿಸಿದೆ ಮೇಲೆ ಪುಟಾಣಿ ಪೀಟರ್‌ಗೆ ಅನುಮಾನ ಕಾಡಲಾರಂಭಿಸಿತು. ಕೇಳಲೋ ಬೇಡವೋ ಕೇಳಲೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದ ಪೀಟರ್‌ಗೆ ಕಡೆಗೆ ತಡೆದುಕೊಳ್ಳಲು ಆಗಲೇ ಇಲ್ಲ.
ಇನ್ನೇನು ರಿಚರ್ಡ್ ಹನ್ನೊಂದನೇ ಕುದುರೆಯ ಬೆನ್ನಿನ ಮೇಲೆ ಕೈ ಇಡಬೇಕು, ಅಪ್ಪನ ಕೈಹಿಡಿದೆಳೆದ ಪೀಟರ್, "ಯಪ್ಪೋಯ್, ಇಷ್ಟೊತ್ತಿನ ತನಕ ನೀನು ಏನು ಮಾಡ್ತಿದ್ದೀಯಾ?" ಅಂತ ಕೇಳಿದ.
"ಮಗನೆ, ಕುದುರೆಯನ್ನು ಹಾಗೆಯೇ ನೋಡಿದ ಕೂಡಲೆ ಕೊಳ್ಳಲು ಆಗುವುದಿಲ್ಲ. ನೋಡಲು ಸುಂದರವಾಗಿರುವುದು ಮಾತ್ರವಲ್ಲ, ಅದು ಆರೋಗ್ಯದಿಂದಿದ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು. ಎಲ್ಲ ಅವಯವಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಂಡ ಮೇಲೆ ಕುದುರೆ ಕೊಳ್ಳಬೇಕು" ಎಂದು ರಿಚರ್ಡ್ ವಿವರಿಸಿದ.
ಪೀಟರ್ ಇದ್ದಕ್ಕಿದ್ದಂತೆ ಚಿಂತಾಕ್ರಾಂತನಾಗಿಬಿಟ್ಟ. ಅವನ ಗಂಟುಮುಖ ನೋಡಿ ರಿಚರ್ಡ್, "ಯಾಕೆ ಪುಟ್ಟಾ ಏನಾಯಿತು, ಇದ್ದಕ್ಕಿದ್ದಂತೆ ಯಾಕೆ ಮಂಕಾದೆ?" ಎಂದು ಪ್ರಶ್ನಿಸಿದ.
"ಡ್ಯಾಡ್, ನನಗನಿಸತ್ತೆ, ಪಕ್ಕದ್ಮನೆ ಮೈಕಲ್ ಅವರ ಪಕ್ಕದ್ಮನೆ ರೋಸಿ ಆಂಟಿಯನ್ನು ಕೊಳ್ಳಬೇಕೆಂದು ಪ್ಲಾನ್ ಹಾಕಿದ್ದಾನೆ ಅಂತ ಕಾಣತ್ತೆ" ಎಂದು ಉತ್ತರಿಸಿದ.












Click it and Unblock the Notifications