ರಾಜಕೀಯ ಪಕ್ಷಗಳ ಒಕ್ಕೊರಲಿನ ಮಹತ್ವದ ನಿರ್ಧಾರ
ಮನುಷ್ಯ ಅಂದ ಮೇಲೆ ಮಂಡೆ ಬಿಸಿ ಇದ್ದಿದ್ದೇ. ಹಾಸ್ಯ ಹೇಗೆ, ಎಲ್ಲಿ ಹುಟ್ಟಿಕೊಳ್ಳುತ್ತವೆ ಎನ್ನುವುದಕ್ಕಿಂತ ನಕ್ಕರೆ ಆಯುಸ್ಸು ಜಾಸ್ತಿ ಎನ್ನುತ್ತಾರೆ ತಿಳಿದವರು. ಈ ಲೇಖನ ಓದಿ ರಾಜಕೀಯದವರಿಗೆ ಬೇಸರವಾಗಿದ್ದರೆ ಕ್ಷಮೆ ಇರಲಿ. ನಮ್ಮ ಓದುಗರಿಗೆ ಈ ಲೇಖನದಿಂದ ತುಸು ನಗು ಬಂದಿದ್ದರೆ ನಮಗದುವೇ ಸಂತೋಷ. ಕಳೆದ ಕೆಲವು ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ನಡೆದ ವಿದ್ಯಮಾನಗಳನ್ನು ಆದರಿಸಿ ಈ ಹಾಸ್ಯ ಲೇಖನ.
ಚುನಾವಣೆ ಘೋಷಣೆಯಾಗಿರುವುದರಿಂದ, ಮತದಾರರ ದೃಷ್ಟಿಯಲ್ಲಿ ಗೌರವ ಕಾಪಾಡಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ವಿಧಾನಸೌಧದಲ್ಲಿ ತುರ್ತಾಗಿ ಸಭೆ ಸೇರಿ ಕೆಲ ನಿರ್ಣಯವನ್ನು ತೆಗೆದುಕೊಂಡಿವೆ.
1. ಅಸೆಂಬ್ಲಿಯಲ್ಲಿ ಸೆಕ್ಸ್ ವಿಡಿಯೋ ಘಟನೆ ಸಾರ್ವಜನಿಕವಾಗಿದ್ದು ಮಾಧ್ಯಮ ಮತ್ತು ಪತ್ರಿಕೆಗಳಿಂದ. ಹಾಗಾಗಿ ಮುಂದೆ ಈ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಿ ಸಮಿತಿಗೆ ಲಕ್ಷಣ್ ಸವದಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿಲು ನಿರ್ಧರಿಸಿದೆ.
2. ಅಸೆಂಬ್ಲಿಯಲ್ಲಿ ಅಂಗಿ ಹರಿದುಕೊಳ್ಳುವ ಘಟನೆ ಮುಂದೆ ನಡೆಯಬಾರದು. ಹಾಗಾಗಿ ಗುಣಮಟ್ಟದ ಖಾದಿ ಬಟ್ಟೆಯನ್ನು ಎಲ್ಲಾ ಶಾಸಕರಿಗೂ ನೀಡಲು ನಿರ್ಧರಿಸಿದ್ದು, ಈ ಸಂಬಂಧ ಮ್ಯಾಚೆಂಸ್ಟರ್ ನಿಂದ ಹೈ ಕ್ವಾಲಿಟಿ ಶರ್ಟನ್ನು ಸ್ಯಾಂಪಲಿಗಾಗಿ ತರಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ಈ ಸ್ಯಾಂಪಲ್ ಶರ್ಟನ್ನು ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ನೀಡಿ ಅವರ ಅಭಿಪ್ರಾಯ ತಿಳಿದುಕೊಳ್ಳಲು ಸಭೆಯಲ್ಲಿ ಒಕ್ಕೂರಿಲಿನಿಂದ ನಿರ್ಧರಿಸಲಾಗಿದೆ.
3.ಅಸೆಂಬ್ಲಿಯಲ್ಲಿ ಸದಸ್ಯರು ಮಾಂಸದೂಟ ತಿನ್ನುತ್ತಿರುವುದರಿಂದ ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದ ಪಾವಿತ್ರತೆ ಕಾಪಾಡಿಕೊಳ್ಳಲು ಪ್ರತಿ ವರ್ಷ ಬಜೆಟ್ ಅಧಿವೇಶನದ ಮೊದಲ ದಿನ ಪುಣ್ಯಾರ್ಚನೆ ಮತ್ತು ಸುದರ್ಶನ ಹೋಮ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಲೆನಾಡು, ಚಿಂತಾಮಣಿ, ಚಿಕ್ಕಬಳ್ಳಾಪುರ, ಬೆಳಗಾವಿ, ಚಿತ್ರದುರ್ಗ, ಉಡುಪಿಯಿಂದ 101 ಖುತ್ವಿಕರನ್ನು ಕರೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
4.ಸೆಲ್ವಿ ಜಯಲಲಿತಾ ಅಧಿಕಾರಕ್ಕೆ ಬಂದರೆ ಕಾವೇರಿ ವಿವಾದ ಕಟ್ಟಿಟ್ಟಬುತ್ತಿ. ಹಾಗಾಗಿ ಸುಪ್ರೀಂಕೋರ್ಟಿನಿಂದ ಮುಖಭಂಗ ತಪ್ಪಿಸಿಕೊಳ್ಳಲು ಇನ್ನು ಮುಂದೆ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಬದಲು ಚೆನ್ನೈಗೆ ಕರೆದುಕೊಂಡು ಹೋಗಿ ವಸ್ತುಸ್ಥಿತಿಯನ್ನು ತಮಿಳುನಾಡು ಸಿಎಂಗೆ ವಿವರಿಸಲು ನಿರ್ಧರಿಸಲಾಗಿದೆ.
5.ಅಸೆಂಬ್ಲಿ ಮತ್ತು ಪಂಚಾಯತಿ ಸಭೆಯಲ್ಲಿ ಕೈಕೈ ಮಿಲಾಯಿಸುವ ಘಟನೆ ಹೆಚ್ಚಾಗುತ್ತಿರುವುದರಿಂದ ಎಲ್ಲಾ ಪಕ್ಷಗಳು 20% ಟಿಕೆಟನ್ನು ಕುಸ್ತಿಪಟು, ಕರಾಟೆ ವಿದ್ಯೆ ನುರಿತವರಿಗೆ ನೀಡಲು ನಿರ್ಧರಿಸಿದೆ.
6. ಪ್ರಮುಖ ಚರ್ಚೆಯ ಸಮಯದಲ್ಲಿ ಸದಸ್ಯರು ನಿದ್ರೆಗೆ ಜಾರುವುದು ಎಲ್ಲಾ ಪಕ್ಷಗಳಿಗೆ ಮುಜುಗರ ತಂದಿದ್ದು, ಮುಂದಿನ ಅಧಿವೇಶನದಿಂದ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಮಿನಿ ಸ್ಕರ್ಟ್ ಧರಿಸಿದ ಯುವತಿಯರಿಂದ ಲೆಮನ್ ಟೀ ಸಪ್ಲೈ ಮಾಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಸಭೆ ತೆಗೆದುಕೊಂಡ ಎಲ್ಲಾ ಆರು ನಿರ್ಣಗಳನ್ನು ಎರಡೂ ಸದನದ ಸಭಾಪತಿಗಳಿಗೆ approval ಗೆ ಕಳುಹಿಸಿಕೊಡಲಾಯಿತು.












Click it and Unblock the Notifications