ಹೋಳಿಗೆ ಪಾಯಸ ಆಂಬೋಡೆ ಮಾಡಿದ್ದೇನೆ ಬನ್ರಿ!
ಹಬ್ಬದ ದಿನ ರಜಾ. ಗುಂಡ ಸ್ನಾನ ಸಂಧ್ಯವಂದನೆ ಮುಗಿಸಿ ಕೈಯಲ್ಲಿ ಪೇಪರ್ ಹಿಡಿದು ಸುದ್ದಿಲೋಕದಲ್ಲಿ ಮುಳುಗಿದ್ದ. ಹಬ್ಬದ ಪ್ರಯುಕ್ತ ಯಾವ್ಯಾವ ತಿಂಡಿತಿನಿಸುಗಳನ್ನು ಮ್ಯಾಗಜೀನ್‌ನಲ್ಲಿ ಹಾಕಿದ್ದಾರೆ ಎಂದು ಓದುತ್ತಿದ್ದ.
ಇದ್ದಕ್ಕಿದ್ದಂತೆ, ಆತನ ಹೆಂಡತಿ ಗುಂಡಿ 'ರೀರೀ, ಅಡುಗೆ ರೆಡಿ ಆಗಿದೆ ಬನ್ರೀ. ನಿಮಗಿಷ್ಟವಾಗಿರುವ ಶ್ಯಾವಿಗೆ ಪಾಯಸ, ಬೆಲ್ಲ ಕೊಬ್ಬರಿ ಹೋಳಿಗೆ, ಬಟವಿ ಪಾಯಸ, ಆಂಬೋಡೆ, ಅನಾನಸು ಗೊಜ್ಜು, ಬಾಳೆ ದಿಂಡಿನ ಕೋಸಂಬರಿ... ಎಲ್ಲಾ ಮಾಡಿದ್ದೇನೆ ಬನ್ನಿ. ಬೇಗನೆ ಬಂದು ಮೃಷ್ಟಾನ್ನ ಭೋಜನ ಸವಿಯಿರಿ' ಎಂದು ಕೂಗಿಕೊಳ್ಳಲು ಪ್ರಾರಂಭಿಸಿದಳು.
ಗುಂಡನಿಗೆ ಆಶ್ಚರ್ಯವೋ ಆಶ್ಚರ್ಯ. ಇಷ್ಟು ಬೇಗ ಇಷ್ಟೆಲ್ಲ ತರಹೇವಾರಿ ಅಡುಗೆಗಳನ್ನು ಹೇಗೆ ತಯಾರಿಸಿದಳು. ಇಷ್ಟೊಂದು ಬಗೆಯ ಖಾದ್ಯಗಳನ್ನು ಗುಂಡಿ ಒಂದೇ ದಿನ ಮಾಡಿದ್ದು ಕಂಡೇ ಇಲ್ಲ ಎಂದು ಗುನುಗಿಕೊಳ್ಳುತ್ತಲೇ ಗುಂಡ ಅಡುಗೆಮನೆ ಪ್ರವೇಶಿಸಿದ.
ಗುಂಡನಿಗೆ ಇನ್ನೂ ಆಶ್ಚರ್ಯ. ಏಕೆಂದರೆ, ಅಲ್ಲಿ ತಿಳಿ ಸಾರು ಅನ್ನ ಹೊರತುಪಡಿಸಿ ಏನೂ ಮಾಡಿರಲಿಲ್ಲ. ಇನ್ನೇನು ಗುಂಡ ಬಾಯಿ ತೆರೆದು, ಎಲ್ಲಿವೆ ಖಾದ್ಯಗಳೆಲ್ಲ ಎಂದು ಕೇಳುವಷ್ಟರಲ್ಲಿ ಆತನ ಬಾಯಿಮುಚ್ಚಿದ ಗುಂಡಿ, ಶ್..ಶ್... ಎಂದು ಗುಂಡನ ಬಾಯಿಗೆ ಬೀಗ ಹಾಕಿದಳು.
ಆಮೇಲೆ ಮೆತ್ತಗೆ ಪಿಸುಮಾತಿನಲ್ಲಿ, "ಅಯ್ಯೋ, ಇಂತಹ ದುಬಾರಿ ಕಾಲದಲ್ಲಿ ಅಷ್ಟೆಲ್ಲ ಮಾಡಲಿಕ್ಕಾಗತ್ತಾ? ಅದೂ ಅಲ್ದೆ ನಿಮಗೆ ಈ ವರ್ಷ ಇಂಕ್ರಿಮೆಂಟ್ ಬೇರೆ ಸಿಕ್ಕಿಲ್ಲ. ಅಕ್ಕಪಕ್ಕದವರಿಗೆ ನಾವು ಏನೇನು ಮಾಡಿದ್ದೇವೆ ಎಂದು ಕೇಳಿಸಲೆಂದೇ ಹೀಗೆ ಕೂಗಿದೆ" ಎಂದು ಹೇಳಿ ಪಕ್ಕದ ಮನೆಯಿಂದ ಬಂದ ಮೃಷ್ಟಾನ್ನ ಭೋಜನದ ವಾಸನೆಯನ್ನೇ ಸಾಕಷ್ಟು ಹೀರಿ ಹೊಟ್ಟೆ ತುಂಬಿಸಿಕೊಂಡಳು.












Click it and Unblock the Notifications