ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಬಾಸ್ ಬೀಳ್ಕೊಡುಗೆ
ಮೂವತ್ತು ವರ್ಷಗಳಿಂದ ಕಂಪನಿಯೊಂದರ ಮುಖ್ಯಸ್ಥನಾಗಿದ್ದ ವ್ಯಕ್ತಿಯೊಬ್ಬ ನಿವೃತ್ತಿಯ ಹೊಸ್ತಿಲಲ್ಲಿ ನಿಂತಿರುತ್ತಾನೆ. ಅಂದು ಕಚೇರಿಯಲ್ಲಿ ಆತನ ಕಡೆಯ ದಿನವಾಗಿರುತ್ತದೆ. ಎಕ್ಸೆಂಟ್ರಿಕ್ ಎಂದು ಎಲ್ಲರಿಂದ ಕರೆಯಿಸಿಕೊಳ್ಳುತ್ತಿದ್ದ ಆತನಿಗೆ ಸಹೋದ್ಯೋಗಿಗಳೆಲ್ಲರೂ ಉಡುಗೊರೆ ನೀಡಿ ಬೀಳ್ಕೊಡಬೇಕಾಗಿರುತ್ತದೆ.
ಆದರೆ, ಎಲ್ಲರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಮುಳುಗಿರುತ್ತಾರೆ. ಕಡೆಗೆ ಸಂಜೆಯ ಹೊತ್ತಿಗೆ ಆ ಮುಖ್ಯಸ್ಥನೇ ಒಂದು ಸಣ್ಣ ಪಾರ್ಟಿಯನ್ನು ಆಯೋಜಿಸಿ, ತನ್ನ ಬೀಳ್ಕೊಡುಗೆ ಸಮಾರಂಭವನ್ನು ತಾನೇ ಇಟ್ಟುಕೊಳ್ಳುತ್ತಾನೆ.
ಎಲ್ಲರೂ ಒಂದು ಹಾಲಿಗೆ ಬಂದು ಸೇರುತ್ತಾರೆ. ಕನಿಷ್ಠಪಕ್ಷ ತನ್ನ ಕಡೆಯ ದಿನವಾದರೂ ತನ್ನ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಆಡಬೇಕೆಂದು ಆತ ಬಯಸಿರುತ್ತಾನೆ. ತನ್ನ ಬಗ್ಗೆ ತಮಗನ್ನಿಸಿದ್ದನ್ನು ಹೇಳಬೇಕೆಂದು ಕೇಳಿಕೊಳ್ಳುತ್ತಾನೆ. ಸಹೋದ್ಯೋಗಿಗಳು ಕೂಡ ಆ ದಿನವಾದರೂ ಯಾಕೆ ಆತನ ಬಗ್ಗೆ ಕೆಟ್ಟದಾಗಿ ಆಡಬೇಕೆಂದು ಅಂದುಕೊಂಡಿರುತ್ತಾರೆ.
ಪ್ರತಿಯೊಬ್ಬರೂ ಒಂದು ಚೀಟಿಯಲ್ಲಿ ತಮಗನ್ನಿಸಿದ್ದನ್ನು ಬರೆದು ಮುಖ್ಯಸ್ಥನಿಗೆ ಕೊಡುತ್ತಾರೆ. ಒಬ್ಬ 'ಇನ್ಮೇಲಿಂದ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ', ಎಂದಿದ್ದರೆ ಮತ್ತೊಬ್ಬ 'ನಿಮ್ಮನ್ನು ಯಾವತ್ತೂ ನೆನಪಿಸಿಕೊಳ್ಳುತ್ತೇವೆ', ಎಂದು ಬರೆದಿರುತ್ತಾನೆ, ಮಗದೊಬ್ಬ 'ನಿಮ್ಮಂಥ ಬಾಸನ್ನು ಪಡೆದ ನಾವೇ ಧನ್ಯರು' ಇತ್ಯಾದಿ ಇತ್ಯಾದಿ ಬರೆದಿರುತ್ತಾರೆ. ಈ ಸ್ಟೇಟ್‌ಮೆಂಟ್‌ಗಳಿಂದ ಬಾಸ್‌ಗೆ ಸ್ವಲ್ಪವೂ ಸಂತಸವಾಗುವುದಿಲ್ಲ.
ಅವರನ್ನುದ್ದೇಶಿಸಿ ಹೀಗೆ ಹೇಳುತ್ತಾನೆ. "ಯಾರಾದರೊಬ್ಬರು ತಮ್ಮ ಹೃದಯಾಂತರಾಳದಿಂದ ತಮ್ಮ ಭಾವನೆ ವ್ಯಕ್ತಪಡಿಸಿದ್ದರೆ ತುಂಬಾ ಸಂತೋಷವಾಗುತ್ತಿತ್ತು. ಮಿಸ್ಟರ್ ಜನಾರ್ದನ್ ನೀವು ನನ್ನ ಜೊತೆ 20 ವರ್ಷಗಳಿಂದ ಕೆಲಸ ಮಾಡಿದ್ದೀರಿ. ನೀವು ನನ್ನ ಅತ್ಯುತ್ತಮ ಉದ್ಯೋಗಿಗಳಲ್ಲಿ ಒಬ್ಬರು. ನಾನೀಗ ನಿವೃತ್ತನಾಗುತ್ತಿದ್ದೇನೆ. ನಿಮಗೇನನ್ನಿಸುತ್ತಿದೆ, ಹೃದಯಾಂತರಾಳದಿಂದ ಹೇಳಿರಿ" ಎಂದು ಆತನಿಗೆ ದುಂಬಾಲು ಬೀಳುತ್ತಾನೆ.
ಜನಾರ್ದನನಿಗೆ ಪೀಕಲಾಟಕ್ಕೆ ಹಿಡಿದುಕೊಳ್ಳುತ್ತದೆ. ಕೊನೆಗೆ ಧೈರ್ಯ ಮಾಡಿ, "ಇದು, ಈ ಇಪ್ಪತ್ತು ವರ್ಷಗಳಲ್ಲಿ ನಾನು ಕೇಳಿದ ಅತ್ಯಂತ ಸಂತೋಷದ ಸುದ್ದಿ" ಎಂದು ಹೇಳಿದ ಕೂಡಲೆ ಕಿವಿಗಡಚಿಕ್ಕುವ ಚಪ್ಪಾಳೆಗಳ ಸುರಿಮಳೆ.












Click it and Unblock the Notifications