ಅಯ್ಯೋ, ನಿಮ್ಮ ಡಯಟ್ಟಿಗಷ್ಟು ಬೆಂಕಿ ಹಾಕಾ!
ಅಡುಗೆ ಮತ್ತು ಉಳಿದ ಹೆಚ್ಚಿನ ಮನೆಗೆಲಸಗಳನ್ನೆಲ್ಲ ಸುಬ್ಬುನೇ ಮಾಡುತ್ತಿದ್ದರಿಂದ ಮಾಡಲು ಏನೂ ಕೆಲಸವಿಲ್ಲದೆ ಸಿಕ್ಕಿದ್ದನ್ನೆಲ್ಲ ತಿಂದು ತಿಂದು ತಿಂದು ಅವನ ಮುದ್ದಿನ ಮಡದಿ ಸುಬ್ಬಿ ಬುರುಬುರಿಯಂತೆ ಉಬ್ಬಿದ್ದಳು. ಕೊನೆಕೊನೆಗೆ ಪ್ರೀತಿ ಏಕೆ ಭೂಮಿ ಮೇಲಿದೆ ಎನ್ನುವ ಬದಲು ಸುಬ್ಬಿ ಏಕೆ ಭೂಮಿ ಮೇಲಿದ್ದಾಳೆ ಎಂದುಕೊಳ್ಳುವಷ್ಟು ಸುಬ್ಬುವಿಗೆ ಬೇಜಾರಾಗಿಬಿಟ್ಟಿತ್ತು.
ಮದುವೆಯಾಗುವಾಗ 48 ಕೆ.ಜಿ. ತೂಗುತ್ತಿದ್ದ ಸುಬ್ಬಿ ಒಂದೇ ವರ್ಷದಲ್ಲಿ 99ರ ಆಸುಪಾಸು ಬಂದಿದ್ದಳು. ಹೀಗೇ ಬಿಟ್ಟರೆ ಸೆಂಚುರಿ ಬಾರಿಸಿಯೇಬಿಡುತ್ತಾ ಎಂದು ಗಾಬರಿಗೆ ಬಿದ್ದ ಸುಬ್ಬು ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಡಾಕ್ಟರ್ ಡಿಬ್ಬಿಯ ಬಳಿ ತನ್ನ ಮಡದಿಯನ್ನು ಕರೆತರುತ್ತಾನೆ.
ಕೈಯಲ್ಲಿ ಆಲೂ ಚಿಪ್ಸ್ ಪ್ಯಾಕೆಟ್ ಹಿಡಿದು ಬಂದಿದ್ದ ಸುಬ್ಬಿಯನ್ನು ನೋಡುತ್ತಿದ್ದಂತೆ ಇನ್ನು ಮೂರು ದಿನ ಬಿಟ್ಟರೆ ನೂರು ದಾಟೇ ದಾಟುತ್ತಾಳೆಂದು ಬಗೆದ ಡಾಕ್ಟರ್ ಡಿಬ್ಬಿ, "ನೋಡಿ ಸುಬ್ಬಿಯವರೆ, ನಾನು ಹೇಳಿದಂತೆ ಡಯಟ್ ಮಾಡಿರಿ. ಎರಡು ದಿನ ಎಂದಿನಂತೆ ಊಟ ಮಾಡಿರಿ ಮೂರನೇ ದಿನ ಸ್ಕಿಪ್ ಮಾಡಿರಿ, ಮತ್ತೆರಡು ದಿನ ಊಟ ಮಾಡಿರಿ ಮರುದಿನ ಸ್ಕಿಪ್ ಮಾಡಿರಿ. ಇನ್ನೆರಡು ವಾರದಲ್ಲಿ ನಿಮ್ಮ ತೂಕ 10 ಕೆಜಿಯಷ್ಟು ಇಳಿಯದಿದ್ದರೆ ಕೇಳಿ" ಎಂದು ಹೇಳಿದ.
ವೈದ್ಯರ ಮಾತನ್ನು ಶಿರಸಾವಹಿಸಿ ಪಾಲಿಸುವುದಾಗಿ ಪ್ರಾಮಿಸ್ ಮಾಡಿ ಸುಬ್ಬಿ, ತೂಕವಿಳಿಸಿಕೊಳ್ಳುವ ಸಂಕಲ್ಪ ಮಾಡಿ ಮನೆಗೆ ಮರಳಿದಳು. ಡಾಕ್ಟರ್ ಡಿಬ್ಬಿ ಹೇಳಿದಂತೆ ಎರಡು ದಿನ ಊಟ ಮಾಡಿದಳು, ಮರುದಿನ 'ಸ್ಕಿಪ್' ಮಾಡಿದಳು... ಎರಡು ದಿನ ಊಟ ಮಾಡಿದಳು, ಮರುದಿನ 'ಸ್ಕಿಪ್' ಮಾಡಿದಳು... ಹೀಗೆ ಎರಡು ವಾರವಾಗುವಷ್ಟರಲ್ಲಿ ಸುಬ್ಬಿಯ ತೂಕ ಹತ್ತಲ್ಲ ಇಪ್ಪತ್ತು ಇಳಿದು ಸುಬ್ಬಿ ಗುಬ್ಬಿಯಂತಾಗಿಬಿಟ್ಟಿದ್ದಳು.
ವೈದ್ಯರು ಆಕೆಯನ್ನು ನೋಡಿ ಹೌಹಾರಿಬಿಟ್ಟರು. ಏನು ಮಾಡಿದೆಯಮ್ಮಾ ಎಂದು ಡಿಬ್ಬಿ ಗಾಬರಿಬಿದ್ದು ಕೇಳಿದ. ಸುಬ್ಬಿ ನಿತ್ರಾಣವಾಗಿದ್ದರೂ ಕೆರಳಿದ ದನಿಯಲ್ಲಿ, "ನೀವೇ ಹೇಳಿದಂತೆ ಎರಡು ದಿನ ಊಟ ಮಾಡಿದ ಮರುದಿನ ಇಡೀದಿನ ಸ್ಕಿಪ್ಪಿಂಗ್ ಮಾಡುತ್ತಿದ್ದೆ. ಅಯ್ಯೋ, ನಿಮ್ಮ ಡಯಟ್ಟಿಗಷ್ಟು ಬೆಂಕಿ ಹಾಕಾ" ಎಂದು ಬಿಲ್ ಕೂಡ ನೀಡದೆ ಧಡಾರ್ ಅಂತ ಎದ್ದು ನಡೆದುಬಿಟ್ಟಳು. ಕಾರಣ ಏನಿರಬಹುದೆಂದು ತಲೆ ಕೆಡಿಸಿಕೊಂಡ ಡಿಬ್ಬಿಗೆ ಮರುದಿನ, ಸುಬ್ಬಿಯ ವಿಪರೀತ ತೂಕವಿಳಿತದ ನಿಜವಾದ ಕಾರಣ ತಿಳಿದು ಬೆವತುಬಿಟ್ಟಿದ್ದ.












Click it and Unblock the Notifications