Zoom Lay Offs : ಝೂಮ್‌ನಿಂದ 1,300 ಉದ್ಯೋಗಿಗಳು ವಜಾ
ಉದ್ಯೋಗಿಗಳ ವಜಾ ಕಂಪನಿಗಳ ಸಾಲಿಗೆ ಝೂಮ್ ಸೇರಿಕೊಂಡಿದೆ. ಸುಮಾರು 1300 ಉದ್ಯೋಗಿಗಳನ್ನು ವಜಾ ಮಾಡುತ್ತದೆ ಎಂದು ಎರಿಕ್ ಯುವಾನ್ ಹೇಳಿದ್ದಾರೆ.
ನವದೆಹಲಿ, ಫೆಬ್ರವರಿ 08; ಭಾರತದಲ್ಲಿ ವಿವಿಧ ಕಂಪನಿಗಳ ಉದ್ಯೋಗಿಗಳ ವಜಾ ಮುಂದುವರೆದಿದೆ. ಲೇ ಆಫ್ ಪಟ್ಟಿಗೆ ಹೊಸ ಸೇರ್ಪಡೆ ಝೂಮ್. ಸುಮಾರು 1,300 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ಮಂಗಳವಾರ ಝೂಮ್‌ನ ಮುಖ್ಯ ಕಾರ್ಯ ನಿರ್ವಾಹಕ ಎರಿಕ್ ಯುವಾನ್ ಕಂಪನಿಯ ಅಧಿಕೃತ ಬ್ಲಾಗ್‌ನಲ್ಲಿ ಉದ್ಯೋಗಿಗಳ ವಜಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
"ಕಠಿಣ ಪರಿಶ್ರಮದ, ಕೌಶಲ್ಯವುಳ್ಳ ಉದ್ಯೋಗಿಗಳೇ" ಎಂದು ತಮ್ಮ ಬರಹ ಆರಂಭಿಸಿರುವ ಎರಿಕ್ ಯುವಾನ್, ಅಮೆರಿಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಉದ್ಯೋಗಿಗಳಿಗೆ ಇ-ಮೇಲ್ ಬರಲಿದೆ. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಇತರ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

"ನೀವು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರೆ ಪರಿಣಾಮ ಎದುರಿಸುವ ಉದ್ಯೋಗಿಯಾಗಿದ್ದರೆ ಮುಂದಿನ 30 ನಿಮಿಷಗಳಲ್ಲಿ ನಿಮ್ಮ ಝೂಮ್ ಮತ್ತು ವೈಯಕ್ತಿಕ ಇ-ಮೇಲ್ ವಿಳಾಸಕ್ಕೆ ಮೇಲ್ ಬರಲಿದೆ" ಎಂದು ಎರಿಕ್ ಯುವಾನ್ ಬ್ಲಾಗ್‌ನಲ್ಲಿ ಹೇಳಿದ್ದಾರೆ.
ಉದ್ಯೋಗಿಗಳನ್ನು ತಮ್ಮ ಬರಹದಲ್ಲಿ 'ಝೂಮೀಸ್' ಎಂದು ಕರೆದಿರುವ ಎರಿಕ್ ಯುವಾನ್, ಅಮೆರಿಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಉದ್ಯೋಗಿಗಳು ವಜಾಗೊಂಡರೂ 16 ವಾರದ ವೇತನ, ಆರೋಗ್ಯ ವಿಮೆ ಸೌಲಭ್ಯ, 2023ರ ಬೋನಸ್ ಸಿಗಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ಉದ್ಯೋಗಿಗಳಿಗೆ 6 ತಿಂಗಳು, ಇತರ ಕಡೆ ಕೆಲಸ ಮಾಡುವವರಿಗೆ ಆಗಸ್ಟ್ 9, 2023ರ ತನಕ ಸ್ಟಾಕ್ ಆಯ್ಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಅಮೆರಿಕದ ಹೊರಗೆ ಇರುವವರಿಗೆ ಸ್ಥಳೀಯ ಕಾನೂನಿನ ಅನ್ವಯ ಸೌಲಭ್ಯ ದೊರೆಯಲಿದೆ.

ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಕಂಪನಿಗಳ ಪಟ್ಟಿಗೆ ಝೂಮ್ ಹೊಸ ಸೇರ್ಪಡೆಯಾಗಿದೆ. ತಂತ್ರಜ್ಞಾನ ಸಂಸ್ಥೆ ಕೋವಿಡ್ ಅವಧಿಯಲ್ಲಿ ಉತ್ತಮ ಹಂತದಲ್ಲಿತ್ತು. ಜನರು ಮನೆಯಿಂದಲೇ ಕೆಲಸ ಮಾಡಲು ಬಹಳ ಸಹಕಾರಿಯಾಗಿತ್ತು.
ಆ ಸಮಯದಲ್ಲಿ ಸಾಕಷ್ಟು ಜನರನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು. ಈಗ ಕೋವಿಡ್ ಸಾಂಕ್ರಾಮಿಕದ ಭೀತಿ ಕಡಿಮೆಯಾಗಿದ್ದು, ಹಲವಾರು ಕಂಪನಿಗಳು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ರದ್ದುಗೊಳಿಸಿವೆ. ಇಂತಹ ಸಂದರ್ಭದಲ್ಲಿಯೇ ಝೂಮ್ ಉದ್ಯೋಗಿಗಳ ವಜಾ ತೀರ್ಮಾನ ಕೈಗೊಂಡಿದೆ.
ಎರಿಕ್ ಯುವಾನ್ ತಮ್ಮ ಬ್ಲಾಗ್‌ನಲ್ಲಿ, "ವ್ಯವಹಾರಗಳ ಸಹಯೋಗ ಸಮಯದಲ್ಲಿನ ಸಂಘರ್ಷಗಳನ್ನು ತೆಗೆದುಹಾಕಲು ನಾವು ಝೂಮ್ ನಿರ್ಮಾಣ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿ ಜಗತ್ತು ಕಠಿಣ ಸವಾಲು ಎದುರಿಸುತ್ತಿದ್ದಾಗ ನಾವು ಸಹಾಯಕವಾಗಿದ್ದೆವು. ಇದನ್ನು ಸಾಧ್ಯವಾಗುವಂತೆ ಮಾಡಿ, ಜನರನ್ನು ಸಂಪರ್ಕಿಸಲು ಕಾರ್ಯ ನಿರ್ವಹಣೆ ಮಾಡಿದ ರೀತಿಗೆ ನಾನು ಹೆಮ್ಮೆ ಪಡುತ್ತೇನೆ. ಬೇಡಿಕೆ ಮತ್ತು ಬೆಂಬಲದ ಕಾರಣದಿಂದಾಗಿ ಝೂಮ್ ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದೆ" ಎಂದು ಹೇಳಿದ್ದಾರೆ.
"ಈಗ ಜಗತ್ತು ಸಾಂಕ್ರಾಮಿಕ ಪರಿಸ್ಥಿತಿಯಿಂದ ಹೊರ ಬಂದಿದೆ. ಜನರು ಸಾಮಾನ್ಯ ಜನ ಜೀವನ ಆರಂಭಿಸಿದ್ದಾರೆ. ಜಗತ್ತಿನ ಆರ್ಥಿಕತೆಯ ಏರಿಳಿತಗಳು ನಮ್ಮ ಗ್ರಾಹಕರ ಮೇಲೆ ಪರಿಣಾಮ ಬೀರಿವೆ. ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ನಮ್ಮ ಸುತ್ತಿನ ಪರಿಸ್ಥಿತಿ ಅರಿತು ಆರ್ಥಿಕ ಸ್ಥಿತಿಗೆ ಹೊಂದಿಕೊಳ್ಳಬೇಕಿದೆ. ಝೂಮ್‌ನ ದೂರದೃಷ್ಟಿಯ ಕಾರ್ಯ ಯೋಜನೆಗೆ ಇದು ಅಗತ್ಯವೂ ಆಗಿದೆ" ಎಂದು ಬ್ಲಾಗ್‌ನಲ್ಲಿ ಬರೆದಿದ್ದಾರೆ.












Click it and Unblock the Notifications