ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ: ಫೆಬ್ರವರಿ 29ಕ್ಕೆ ನೇರ ಸಂದರ್ಶನ
ಕೊಪ್ಪಳ, ಫೆಬ್ರವರಿ 22; 10ನೇ ತರಗತಿ ಪಾಸ್ ಆದವರಿಗೆ ಕೊಪ್ಫಳದಲ್ಲಿ ಕೆಲಸ ಖಾಲಿ ಇದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 29ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು ಇವರ ಅಡಿಯಲ್ಲಿ ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಂಚಾರಿ ಐಸಿಟಿಸಿ ವಾಹನಕ್ಕೆ ಒಂದು ವಾಹನ ಚಾಲಕರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.

ಈ ಹುದ್ದೆಯ ನೇಮಕಾತಿಗಾಗಿ ನೇರ ಸಂದರ್ಶನವನ್ನು ಫೆಬ್ರವರಿ 29ರಂದು ಬೆಳಗ್ಗೆ 10 ಗಂಟೆಗೆ ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು 45 ವರ್ಷದೊಳಗಿರಬೇಕು. 10ನೇ ತರಗತಿ ಪಾಸ್ ಮತ್ತು ಮಾನ್ಯತಾ ಚಾಲನಾ ಪರವಾನಿಗೆ ಹೊಂದಿರಬೇಕು.
ಎರಡು ವರ್ಷಗಳ ಲಘುವಾಹನ ಚಾಲನಾ ಅನುಭವವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಹೆಚ್.ಐ.ವಿ ಸೋಂಕಿತ ಮತ್ತು ಪೀಡಿತ ಸಮುದಾಯದ ಅಭ್ಯರ್ಥಿಗಳು ಹಾಗೂ ಪ್ರಮುಖ ಸಮುದಾಯದವರು ಸಹ ಭಾಗವಹಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಸ್ವ ವಿವರ, ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ವೇತನ, ಅರ್ಜಿ ನಮೂನೆ ಹಾಗೂ ಅವಶ್ಯಕ ದಾಖಲೆಗಳ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಕೊಪ್ಪಳ ಜಿಲ್ಲಾ ಕ್ಷಯರೋಗ ನಿರ್ಮೂಲನ ಕಚೇರಿ, ಹಳೆಯ ಜಿಲ್ಲಾ ಆಸ್ಪತ್ರೆ ಆವರಣ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9449843232/ 9449846981.
ಗೃಹ ರಕ್ಷಕರ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ; ಪೊಲೀಸ್ ಅಧೀಕ್ಷಕರು ಹಾಗೂ ಗೃಹ ರಕ್ಷಕ ದಳದ ಆಯ್ಕೆ ಸಮಿತಿಯ ಅಧ್ಯಕ್ಷಕರು, ಕೊಪ್ಪಳ ಇವರ ಆದೇಶದಂತೆ ಕೊಪ್ಪಳ ಜಿಲ್ಲೆಯ ವಿವಿಧ ನಗರ ಮತ್ತು ತಾಲೂಕು ಘಟಕಗಳಲ್ಲಿ ಖಾಲಿ ಇರುವ 128 ಸ್ಥಾನಗಳಿಗೆ ಹೊಸದಾಗಿ ಗೃಹ ರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಕೊಪ್ಪಳ ಪುರುಷ ಘಟಕದಲ್ಲಿ 29, ಕೊಪ್ಪಳ ಮಹಿಳಾ ಘಟಕ 6, ಮುನಿರಬಾದ್ ಘಟಕ 11, ಅಳವಂಡಿ ಘಟಕ 6, ಕನಕಗಿರಿ ಘಟಕ 8, ಕಾರಟಗಿ ಘಟಕ 12, ಕುಷ್ಟಗಿ ಘಟಕ 10, ಹನುಮಸಾಗರ ಘಟಕ 15, ತಾವರಗೇರಾ ಘಟಕ 11, ಯಲಬುರ್ಗಾ ಘಟಕ 5, ಕುಕನೂರ ಘಟಕ 2, ಬೇವೂರ ಘಟಕ 13 ಸೇರಿದಂತೆ ಒಟ್ಟು 128 ಸ್ಥಾನಗಳು ಖಾಲಿಯಿವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 19 ರಿಂದ 40 ವರ್ಷ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. 10ನೇ ತರಗತಿ ಉತ್ತಿರ್ಣರಾಗಿರಬೇಕು. ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಬಾರದು ಮತ್ತು ಇಲಾಖೆಯ ಘಟಕಗಳಿಂದ 8 ಕಿ.ಮೀ. ಒಳಗಡೆ ಇರುವಂತವರಾಗಿರಬೇಕು.
ಗೃಹ ರಕ್ಷಕರಾಗಿ ನಿಷ್ಕಾಮ ಸೇವೆ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅರ್ಜಿಗಳೊಂದಿಗೆ ಕಡ್ಡಾಯವಾಗಿ ಶಾಲಾ ವರ್ಗಾವಣೆ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಖಾಯಂ ವಿಳಾಸಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ, ಆಧಾರ ಕಾರ್ಡ್, ಇತ್ತೀಚಿನ 4 ಪಾಸ್‌ಪೋರ್ಟ್ ಅಳತೆಯ ಅರ್ಜಿದಾರರ ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಫೆ.29 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಸಮಾದೇಷ್ಟರ ಕಚೇರಿ ಗೃಹ ರಕ್ಷಕ ದಳ, ಹೊಸಪೇಟ್ ರಸ್ತೆ, ಅಗ್ನಿ ಶಾಮಕ ಠಾಣೆಯ ಎಡಭಾಗ, ಕೊಪ್ಪಳ ಇಲ್ಲಿ ಅಥವಾ ದೂರವಾಣಿ ಸಂಖ್ಯೆ 08539-225533ಗೆ ಸಂಪರ್ಕಿಸಬಹುದಾಗಿದೆ.











Click it and Unblock the Notifications