ಕೊಪ್ಪಳದಲ್ಲಿ ಡಿಸೆಂಬರ್ 26ಕ್ಕೆ ವಾಕ್ ಇನ್ ಸಂದರ್ಶನ
ಕೊಪ್ಪಳ, ಡಿಸೆಂಬರ್ 23; ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ವಾಕ್ ಇನ್ ಸಂದರ್ಶನ ಆಯೋಜನೆ ಮಾಡಲಾಗಿದೆ. 18 ರಿಂದ 30 ವರ್ಷದ ವಯೋಮಿತಿಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಡಿಸೆಂಬರ್ 26ರ ಬೆಳಗ್ಗೆ 10.30 ರಿಂದ 2.30ರ ವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಾಕ್ ಇನ್ ಸಂದರ್ಶನ ನಡೆಯಲಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಗಿದೆ.
ಈ ವಾಕ್ ಇನ್ ಸಂದರ್ಶನದಲ್ಲಿ ಎಲ್ & ಟಿ ಫೈನಾನ್ಸ್ ಕೊಪ್ಪಳ ಇವರು ತಮ್ಮಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ವಾಕ್ ಇನ್ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಪದವಿ ಪಡೆದ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 30 ವರ್ಷ. ಆಸಕ್ತಿಯುಳ್ಳ ಯುವಕ ಮತ್ತು ಯುವತಿಯರು ತಮ್ಮ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್ ಪ್ರತಿ, ರೆಸ್ಯೂಮ್ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಪಾಲ್ಗೊಳ್ಳಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇಲ್ಲಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 08539-220859, 8073681873.
ಅಧಿಸೂಚನೆ ರದ್ದು; ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದ್ದ ಅಧಿಸೂಚನೆಯನ್ನು ರದ್ದು ಪಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊರಡಿಸಲಾದ ಅಧಿಸೂಚನೆಯಂತೆ ಕೊಪ್ಪಳ ಜಿಲ್ಲೆಯ 5 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇದ್ದ 12 ಅಂಗನವಾಡಿ ಕಾರ್ಯಕರ್ತೆ ಹಾಗೂ 60 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿತ್ತು.
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಪ್ರಸ್ತುತ ಈ ಅಧಿಸೂಚನೆಯನ್ನು ಕಾರಣಾಂತರಗಳಿಂದ ರದ್ದು ಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಉದ್ಯಮ ಶೀಲತಾ ತರಬೇತಿ; ಜಿಲ್ಲಾ ಕೈಗಾರಿಕಾ ಕೇಂದ್ರ (ಸಿಡಾಕ್)ದಿಂದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸ್ವಯಂ ಉದ್ಯೋಗ ಪ್ರಾರಂಭಿಸಲು ಆಸಕ್ತರಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು 18 ವರ್ಷ ದಿಂದ 40 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಓದಲು, ಬರೆಯಲು ಬರುತ್ತಿರಬೇಕು. ಮಹಿಳೆಯರಿಗೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿಸೆಂಬರ್ 28 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 6362557332, 6362681190 ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications