ಬಿಬಿಎಂಪಿಯಲ್ಲಿ ಕೆಲಸ ಖಾಲಿ ಇದೆ; ನವೆಂಬರ್ 10ರಂದು ನೇರ ಸಂದರ್ಶನ
ಬೆಂಗಳೂರು, ನವೆಂಬರ್ 07; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತರು ನವೆಂಬರ್ 10ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಬಿಬಿಎಂಪಿಯಲ್ಲಿ ಖಾಲಿ ಇರುವ 63 ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ 47,250 ರೂ. ವೇತನ ನಿಗದಿ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ಮತ್ತು ಅಗತ್ಯ ದಾಖಲಾತಿಗಳ ಜೊತೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸಂದರ್ಶನ ನಡೆಯುವ ಸ್ಥಳ; ನೌಕರರ ಭವನ, ಬಿಬಿಎಂಪಿ ಮುಖ್ಯ ಕಚೇರಿ, ಎನ್. ಆರ್. ಚೌಕ, ಬೆಂಗಳೂರು.
ಅಪ್ರೆಂಟಿಸ್ ತರಬೇತಿಗೆ ಅರ್ಜಿ ಹಾಕಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಲು 12 ತಿಂಗಳ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದೆ.
ಪತ್ರಿಕೋದ್ಯಮ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಉಡುಪಿ ಜಿಲ್ಲಾ ಕಚೇರಿಗೆ 2022-23 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಅಪ್ರೆಂಟಿಸ್ ತರಬೇತಿ ಅವಧಿಯಲ್ಲಿ ತಿಂಗಳಿಗೆ 15 ಸಾವಿರ ರೂ. ಸ್ಟೈಪಂಡ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
ಕನ್ನಡ ಭಾಷೆ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು. ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಂದು 35 ವರ್ಷದೊಳಗಿರಬೇಕು. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನ.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ನಾಯರ್ ಕೆರೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications