Ola Layoffs: ದಿಢೀರನೆ 1,000 ಉದ್ಯೋಗ ಕಡಿತಕ್ಕೆ ಮುಂದಾದ ಓಲಾ
ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola electric) ಮೊಬಿಲಿಟಿ ಕಂಪನಿಯು ಈ ತಿಂಗಳೊಳಗೆ ತನ್ನ ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ 1,000ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಿದೆ ಎಂದು ವರದಿಯಾಗಿದೆ. ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್ ಬೆಂಬಲದಲ್ಲಿರುವ ಈ ಕಂಪನಿಯು ತನ್ನ ನಷ್ಟವನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಸಂಗ್ರಹಣೆ, ಪೂರೈಸುವಿಕೆ, ಗ್ರಾಹಕ ಸಂಬಂಧಗಳು ಮತ್ತು ಚಾರ್ಜ್ ಮಾಡುವ ಮೂಲಸೌಕರ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ಉದ್ಯೋಗ ಕಡಿತ ನಡೆಯಲಿದೆ.
ಐದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಇದು ಎರಡನೇ ಸುತ್ತಿನ ಉದ್ಯೋಗ ಕಡಿತ ನಡೆಯುತ್ತಿದೆ. ಕಳೆದ ನವೆಂಬರ್‌ನಲ್ಲಿ ಈ ಕಂಪನಿಯು ಸುಮಾರು 500 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಈಗ ಓಲಾದ ಒಟ್ಟು ಉದ್ಯೋಗಿಗಳ ಕಾಲು ಭಾಗಕ್ಕಿಂತ ಹೆಚ್ಚಿನ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಇದು ಮಾರ್ಚ್ 2024ರ ಅಂತ್ಯದ ಓಲಾದಲ್ಲಿ 4,000 ಉದ್ಯೋಗಿಗಳಿದ್ದರು. ಈಗ ಗುತ್ತಿಗೆ ಕಾರ್ಮಿಕರನ್ನು ಸಹ ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ. ಅಲ್ಲದೆ ಈ ನಿರ್ಧಾರದ ಭಾಗವಾಗಿ ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕ ಸಂಬಂಧ ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸಲಿದೆ ಎನ್ನಲಾಗಿದೆ.

ವ್ಯಾಪಾರದ ಅಗತ್ಯಗಳಿಗೆ ಅನುಗುಣವಾಗಿ ವಜಾಗೊಳಿಸುವ ಪ್ರಕ್ರಿಯೆ ಬದಲಾಗಬಹುದು. ಉತ್ತಮ ಉತ್ಪಾದಕತೆಗಾಗಿ ಅನಗತ್ಯ ಹುದ್ದೆಗಳನ್ನು ತೆಗೆದು ಹಾಕುತ್ತಿದ್ದೇವೆ. ಕಡಿಮೆ ವೆಚ್ಚ ಮತ್ತು ಗ್ರಾಹಕರ ಅನುಭವವನ್ನು ನೀಡುವ ನಮ್ಮ ಮುಂಭಾಗದ ಕಾರ್ಯಾಚರಣೆಗಳನ್ನು ನಾವು ಮತ್ತೆ ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಓಲಾ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮೂಲದ ಈ ಕಂಪನಿಯು ಸಂಸ್ಥೆಯು ವೆಚ್ಚವನ್ನು ಕಡಿಮೆ ಮಾಡಲು ತನ್ನ ಲಾಜಿಸ್ಟಿಕ್ಸ್ ಮತ್ತು ವಿತರಣಾ ಕಾರ್ಯತಂತ್ರವನ್ನು ಪರಿಷ್ಕರಿಸಿದ ಕಾರಣ ಓಲಾ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳಲ್ಲಿನ ಮಾರಾಟ, ಸೇವೆ ಮತ್ತು ಗೋದಾಮಿನ ಸಿಬ್ಬಂದಿಯನ್ನು ಕೂಡ ಮನೆಗೆ ಕಳಿಸಲು ಮುಂದಾಗಿದೆ.
ಆಗಸ್ಟ್‌ನಲ್ಲಿ ಐಪಿಒ ಪ್ರವೇಶಿಸಿದ ನಂತರ ಓಲಾ ಎಲೆಕ್ಟ್ರಿಕ್ ಷೇರುಗಳು ಅದರ ಗರಿಷ್ಠ ಮಟ್ಟದಿಂದ ಶೇ 60ಕ್ಕಿಂತ ಹೆಚ್ಚು ಕುಸಿತ ಕಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಕಂಪನಿಯು ಖರೀದಿದಾರರ ದೂರುಗಳು, ಸಾಮಾಜಿಕ ಮಾಧ್ಯಮದ ಹಿನ್ನಡೆ ಮತ್ತು ಮಾರುಕಟ್ಟೆಯ ಷೇರು ನಷ್ಟಕ್ಕೆ ಗುರಿಯಾಗಿದೆ. ಅಲ್ಲದೆ ಪ್ರತಿಸ್ಪರ್ಧಿಗಳು ಕೂಡ ಪ್ರಬಲ ಪೈಪೋಟಿ ನೀಡಿದ್ದಾರೆ. ಓಲಾ ಎಲೆಕ್ಟ್ರಿಕ್ ಭಾರತೀಯ ವಿನಿಮಯ ಕೇಂದ್ರಗಳಿಗೆ ಶೇ 28ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಫೆಬ್ರವರಿಯಲ್ಲಿ 25,000 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕಳೆದ ತಿಂಗಳು ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೋಡ್‌ಸ್ಟರ್ ಎಕ್ಸ್ ಅನ್ನು 74,999 ರೂಪಾಯಿಗೆ ಬಿಡುಗಡೆ ಮಾಡಿತ್ತು. ಬೆಂಗಳೂರು ಮೂಲದ ಇವಿ ತಯಾರಿಕಾ ಸ್ಟಾರ್ಟಪ್ ಇದೇ ಮಾರ್ಚ್‌ನಿಂದ ವಿತರಣೆ ಶುರು ಮಾಡುವುದಾಗಿ ತಿಳಿಸಿದೆ. ರೋಡ್‌ಸ್ಟರ್ ಎಕ್ಸ್ ಸರಣಿಯು ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಈಗ ದಿಢೀರ್ ಉದ್ಯೋಗ ಕಡಿತವು ಎಲ್ಲರಿಗೂ ಶಾಕ್ ನೀಡಿದೆ.












Click it and Unblock the Notifications