ಮೈಸೂರು ಮಹಾನಗರ ಪಾಲಿಕೆ ನೇಮಕಾತಿ, ವೇತನ 17 ರಿಂದ 28 ಸಾವಿರ ರೂ.ಗಳು
ಮೈಸೂರು, ಜುಲೈ 04: ಮೈಸೂರು ಮಹಾನಗರ ಪಾಲಿಕೆ ಒಟ್ಟು 252 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ, ಅರ್ಹರು 18/7/2024ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಕರ್ನಾಟಕ ಮಹಾನಗರ ಪಾಲಿಕೆಗಳು (ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಾಮಾನ್ಯ ನೇಮಕಾತಿ) ನಿಯಮಗಳು, 2011ರಂತೆ ಮೈಸೂರು ಮಹಾನಗರ ಪಾಲಿಕೆಗೆ ಮಂಜೂರಾಗಿರುವ ಪೌರ ಕಾರ್ಮಿಕರ ಹುದ್ದೆಗಳ ಪೈಕಿ ನೇರ ನೇಮಕಾತಿಯಡಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ರಾಜ್ಯದ ಪಾಲಿಕೆಗಳ ಪೌರಕಾರ್ಮಿಕರ ನೇಮಕಾತಿ) (ವಿಶೇಷ) ನಿಯಮಗಳು 2022 ರ ರೀತ್ಯಾ ಹಾಗೂ ಸರ್ಕಾರದ ಆದೇಶ ದಿನಾಂಕ 09/03/2023ರಂತೆ ರಾಜ್ಯದ ಮಹಾನಗರ ಪಾಲಿಕೆಗಳಿಗೆ (ಬಿಬಿಎಂಪಿ ಹೊರತುಪಡಿಸಿ) ಸಂಖ್ಯಾರಿಕ್ತ ಹುದ್ದೆಗಳನ್ನು ಹೊಸದಾಗಿ ಸೃಜಿಸಿ ಆದೇಶ ಹೊರಡಿಸಲಾಗಿರುತ್ತದೆ.
ಸರ್ಕಾರದ ಆದೇಶದಂತೆ ಹೊರಡಿಸಿರುವ ತಿದ್ದುಪಡಿ ಆದೇಶದಲ್ಲಿ ಮೈಸೂರು ಮಹಾನಗರಪಾಲಿಕೆಗೆ 252 ಪೌರ ಕಾರ್ಮಿಕರ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಂತೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೇತನದ ವಿವರಗಳು: ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 252. ಆಯ್ಕೆಯಾದ ಅಭ್ಯರ್ಥಿಗಳಿಗೆ 17,000-28,950 ರೂ. ವೇತನವನ್ನು ನಿಗದಿ ಮಾಡಲಾಗಿದೆ. ಹುದ್ದೆಗಳಿಗೆ ವಿದ್ಯಾರ್ಹತೆ ಅನ್ವಯಿಸುವುದಿಲ್ಲ. ಕನ್ನಡ ಮಾತನಾಡಲು ಬಲ್ಲವರಾಗಿರಬೇಕು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಾಲಿ ನೇರಪಾವತಿ/ ದಿನಗೂಲಿ/ ಕ್ಷೇಮಾಭಿವೃದ್ಧಿ ಅಧಿನಿಯಮ/ ಸಮಾನ ಕೆಲಸಕ್ಕೆ ಸಮಾನ ವೇತನದಡಿ ಪೌರಕಾರ್ಮಿಕ ಹುದ್ದೆಯಲ್ಲಿ ಕನಿಷ್ಟ ಎರಡು (2) ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಹಾಗೂ ಈ ನಿಯಮಗಳು ಜಾರಿಗೆ ಬಂದ ದಿನಾಂಕದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಮಾತ್ರ ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ 18 ವರ್ಷ ಪೂರ್ಣಗೊಂಡಿದ್ದು, ಗರಿಷ್ಠ ವಯೋಮಿತಿ 55 ವರ್ಷ.
ಅರ್ಜಿ ಸಲ್ಲಿಸುವ ವಿಧಾನ: ಅಧಿಸೂಚನೆಯ ಪ್ರತಿಯನ್ನು ಹಾಗೂ ನಿಗದಿತ ಅರ್ಜಿ ನಮೂನೆಯನ್ನು ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಿಂದ ಪಡೆದು, ತಮಗೆ ಅನ್ವಯಿಸುವ ಎಲ್ಲಾ ಅಂಕಣಗಳನ್ನು ಭರ್ತಿ ಮಾಡುವುದು. ಅಭ್ಯರ್ಥಿಯು ತನ್ನ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸಿ, ಅದರ ಮೇಲೆ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತು ಮಾಡುವುದು ಹಾಗೂ ಅರ್ಜಿಯ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ/ ಹೆಬ್ಬೆಟ್ಟಿನ ಗುರುತು ಮಾಡುವುದು.
ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ವಯಸ್ಸು ಮತ್ತು ಕೋರಿರುವ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರಿಗಳಿಂದ ಪಡೆದು, ಅವುಗಳ ನಕಲು ಪ್ರತಿಗಳನ್ನು ಸಂಬಂಧಪಟ್ಟ ಶಾಖಾ ಮುಖ್ಯಸ್ಥರಿಂದ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಅರ್ಜಿಯನ್ನು ಅಧ್ಯಕ್ಷರು, ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರ ಹಾಗೂ ಆಯುಕ್ತರು ಮೈಸೂರು ಮಹಾನಗರ ಪಾಲಿಕೆ ಮೈಸೂರು ಇವರಿಗೆ ದಿನಾಂಕ 18/07/2024ರ ಸಂಜೆ 5.30ಗಂಟೆಯೊಳಗೆ ನೇರವಾಗಿ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು. ಅಂಚೆ ಮೂಲಕ ಅಥವಾ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಯನ್ನು http://www.mysurucity.mrc.gov.in ಅಥವಾ ಮೈಸೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಿಂದ ಪಡೆಯಬಹುದಾಗಿದೆ.












Click it and Unblock the Notifications