ಮೋದಿ ಸರ್ಕಾರದಿಂದ ಭರ್ಜರಿ ಆಫರ್!, 2.8 ಲಕ್ಷ ಮಂದಿ ನೇಮಕಾತಿ
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಿದಂತೆ ರಕ್ಷಣಾ ಇಲಾಖೆ ಹೊರತುಪಡಿಸಿ ಪೊಲೀಸ್, ಆದಾಯ ತೆರಿಗೆ, ಸುಂಕ ಹಾಗೂ ಕೇಂದ್ರ ಅಬಕಾರಿ ಇಲಾಖೆಗಳಲ್ಲಿ 2.8 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ನವದೆಹಲಿ, ಮಾರ್ಚ್ 03: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಿದಂತೆ ರಕ್ಷಣಾ ಇಲಾಖೆ ಹೊರತುಪಡಿಸಿ ಪೊಲೀಸ್, ಆದಾಯ ತೆರಿಗೆ, ಸುಂಕ ಹಾಗೂ ಕೇಂದ್ರ ಅಬಕಾರಿ ಇಲಾಖೆಗಳಲ್ಲಿ 2.8 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
2016ರ ಮಾರ್ಚ್ ಪ್ರಕಾರ, ರಕ್ಷಣಾ ಇಲಾಖೆ ಹೊರತುಪಡಿಸಿ, ಉಳಿದ 55 ವಿಭಾಗಗಳು ಹಾಗೂ ಸಚಿವಾಲಯಗಳಲ್ಲಿ 32.84 ಲಕ್ಷ ನೌಕರರಿದ್ದಾರೆ. 2018ರ ಮಾರ್ಚ್ ಒಳಗೆ ಹೊಸ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಈ ಸಂಖ್ಯೆ 35.67 ಲಕ್ಷಕ್ಕೆ ಏರಿಕೆ ಆಗಲಿದೆ.

ದೆಹಲಿ ಪೊಲೀಸ್ ಹಾಗೂ ಅರೆಸೇನಾ ಪಡೆ ಒಳಗೊಂಡಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಸಂಖ್ಯೆ 10.07ರಿಂದ 11.13 ಲಕ್ಷಕ್ಕೇರಲಿದೆ. ಅಪನಗದೀಕರಣ ಜಾರಿಗೆ ಬಂದ ನಂತರ ಕಪ್ಪುಹಣ, ಭ್ರಷ್ಟಾಚಾರ ನಿಯಂತ್ರಣದಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತಿರುವ ಆದಾಯ ತೆರಿಗೆ ಇಲಾಖೆಯ ಸಿಬ್ಬಂದಿ ಸಂಖ್ಯೆಯನ್ನು 46 ಸಾವಿರದಿಂದ 80 ಸಾವಿರಕ್ಕೇರಲಿದೆ.
ಸುಂಕ ಹಾಗೂ ಕೇಂದ್ರ ತೆರಿಗೆ ವಿಭಾಗಗಳಲ್ಲಿ ಸರಕು ಮತ್ತು ಸೇವಾ ತೆರಿಗೆಯ ಸಿಬ್ಬಂದಿಗೆ ಕೂಡ ಹೆಚ್ಚುವರಿಯಾಗಿ 41 ಸಾವಿರ ಸಿಬ್ಬಂದಿ ನೇಮಕವಾಗಲಿದ್ದು, ಒಟ್ಟು ಸಿಬ್ಬಂದಿಗಳ ಸಂಖ್ಯೆ 91,700ಕ್ಕೇರಲಿದೆ. ಬಾಹ್ಯಾಕಾಶ, ಅಣುಶಕ್ತಿ, ಸಂಸತ್ತು, ಮಾಹಿತಿ ಮತ್ತು ಪ್ರಸಾರ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಇತರ ವಿಭಾಗಗಳ ಸಿಬ್ಬಂದಿ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ. 13 ಲಕ್ಷ ಅಧಿಕ ನೌಕರರನ್ನು ಹೊಂದಿರುವ ರೈಲ್ವೆ ಇಲಾಖೆಯಲ್ಲಿ ಭಾರಿ ಪ್ರಮಾಣದ ನೇಮಕಾತಿ ಸದ್ಯಕ್ಕಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications