Meta layoffs: ಮೆಟಾದಿಂದ ಭಾರಿ ಸಂಖ್ಯೆಯ ಉದ್ಯೋಗ ಕಡಿತಕ್ಕೆ ನಿರ್ಧಾರ
ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕಡಿತದ ಹೆಸರಿನಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತಿದೆ. ಈ ಹಿಂದೆ ಆರ್ಥಿಕ ಕಾರಣದಿಂದ ಸಣ್ಣಪುಟ್ದ ಸಂಸ್ಥೆಗಳಲ್ಲಿ ಮಾತ್ರ ನಡೆಯುತ್ತಿದ್ದ ಈ ಲೇಆಫ್ (layoffs) ಪ್ರಕ್ರಿಯೆ ಈಗ ದೊಡ್ಡ ದೊಡ್ಡ ಕಂಪನಿಗಳಿಗೂ ಕಾಲಿಟ್ಟಿದೆ. ಒಂದೇ ಬಾರಿ ಸಾವಿರಾರು ಮಂದಿಯನ್ನು ಉದ್ಯೋಗದಿಂದ ತೆಗೆಯಲಾಗುತ್ತಿದ್ದು, ಇದೀಗ ಸೋಶಿಯಲ್ ಮೀಡಿಯಾದ ದೈತ್ಯ ಮೆಟಾ (Meta) ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ಕಹಿಸುದ್ದಿ ನೀಡಲು ಮುಂದಾಗಿದೆ.
ಫೇಸ್‌ಬುಕ್‌ನ ಮಾಲೀಕ ಮೆಟಾ ಪ್ಲಾಟ್‌ಫಾರ್ಮ್ ಮುಂದಿನ ವಾರ ಭಾರಿ ಸಂಖ್ಯೆಯಲ್ಲಿ ತನ್ನ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಲಿದೆ ಎಂದು ವರದಿಯಾಗಿದೆ. ಅಲ್ಲದೆ ಮೆಷಿನ್ ಲರ್ನಿಂಗ್ ಇಂಜಿನಿಯರ್‌ಗಳ ತ್ವರಿತ ನೇಮಕಾತಿಯೊಂದಿಗೆ ಈ ಉದ್ಯೋಗ ಕಡಿತ ಮುಂದುವರಿಯಲಿದೆ ಎಂದು ತನ್ನ ಸಿಬ್ಬಂದಿಗೆ ತಿಳಿಸಿದೆ ಎನ್ನಲಾಗಿದೆ.

ಮೆಟಾದ ಜನರ ಮುಖ್ಯಸ್ಥ ಜಾನೆಲ್ಲೆ ಗೇಲ್ ಬರೆದಿರುವ ಪೋಸ್ಟ್ ಪ್ರಕಾರ, ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈ ಸೋಮವಾರ (ಫೆಬ್ರವರಿ 10) ಹಲವು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿರುವ ಮೆಟಾ ಉದ್ಯೋಗಿಗಳಿಗೆ ಮಾತ್ರ ಅಲ್ಲಿನ ನಿಯಮಗಳ ಕಾರಣ ಉದ್ಯೋಗ ಕಡಿತದಿಂದ ವಿನಾಯಿತಿ ನೀಡಲಿದ್ದು, ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಸೇರಿ ಹತ್ತಕ್ಕೂ ಹೆಚ್ಚು ದೇಶಗಳಲ್ಲಿನ ಉದ್ಯೋಗಿಗಳಿಗೆ ಫೆಬ್ರವರಿ 11ರಿಂದ 18ರ ನಡುವೆ ಉದ್ಯೋಗ ಕಡಿತವಾಗಲಿದೆ ಎಂದು ವರದಿಯಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಮೆಟಾ ವಕ್ತಾರರು ನಿರಾಕರಿಸಿದ್ದಾರೆ. ಲೋ ಪರ್ಫಾರ್ಮೆನ್ಸ್ ಹೆಸರಿನಲ್ಲಿ ಶೇ 5ರಷ್ಟು ಮಂದಿಯ ಉದ್ಯೋಗ ಕಡಿತವಾಗಲಿದೆ. ಬಳಿಕ ಕೆಲವು ಸ್ಥಾನಗಳನ್ನು ತುಂಬಲು ಯೋಜನೆ ನಡೆಸಿದೆ ಎನ್ನಲಾಗಿದೆ.

ಮೆಟಾ ತನ್ನ ಉದ್ಯೋಗಿಗಳಲ್ಲಿ ಶೇ 5ರಷ್ಟು ಅಥವಾ ಸುಮಾರು 3,600 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಿದೆ. ಈ ಹಿಂದೆಯೇ ಮೆಟಾ ಉದ್ಯೋಗ ಕಡಿತದ ಸುಳಿವು ನೀಡಿತ್ತು. ಜನವರಿಯಲ್ಲಿ ಲೋ ಪರ್ಫಾರ್ಮೆನ್ಸ್ ಅಭ್ಯರ್ಥಿಗಳನ್ನು ಪಟ್ಟಿ ಮಾಡಲಾಗಿದ್ದು, ಇವರನ್ನು ಉದ್ಯೋಗದಿಂದ ತೆಗೆದುಹಾಕಲಿದೆ. ಸದ್ಯ ಟೆಕ್ ಕಂಪನಿಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನದ ಮೇಲೆ ಹೆಚ್ಚು ಖರ್ಚು ಮಾಡುವುದರಿಂದ ಉದ್ಯೋಗ ಕಡಿತಕ್ಕೆ ಮುಂದಾಗಿವೆ ಎಂದು ಹೇಳಲಾಗುತ್ತಿದೆ.
ಮೆಟಾ ಸದ್ಯ ಉದ್ಯೋಗ ಕಡಿತದ ಜೊತೆಗೆ ಮೆಷಿನ್ ಲರ್ನಿಂಗ್ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಮೆಟಾ ತನ್ನ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಇಂಜಿನಿಯರ್‌ಗಳನ್ನು ಶೀಘ್ರವಾಗಿ ನೇಮಕ ಮಾಡುವ ಗುರಿಯನ್ನು ಹೊಂದಿದೆ. ಆದರೆ ಎಷ್ಟು ಮಂದಿಯ ಉದ್ಯೋಗ ಕಡಿತವಾಗಲಿದೆ ಎಂಬ ನಿಖರ ಮಾಹಿತಿ ಸಿಕ್ಕಿಲ್ಲ.

ಕಳೆದ ತಿಂಗಳು ಮೆಟಾ ಹೇಳಿರುವಂತೆ ಕಂಪನಿಯಲ್ಲಿನ ಶೇ 5ರಷ್ಟು ಮಂದಿಯ ಕೆಲಸ ಹೋಗಲಿದೆ. ಪ್ರಸ್ತುತ ಮೆಟಾದಲ್ಲಿ ಅಂದಾಜು 72,000 ಉದ್ಯೋಗಿಗಳಿದ್ದು, ಈ ಪೈಕಿ ಸುಮಾರು 3,000ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲು ಮುಂದಾಗಿದೆ. ಮುಂದಿನ ವಾರದಲ್ಲಿ ಈ ಉದ್ಯೋಗ ಕಡಿತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.












Click it and Unblock the Notifications