ಕಲಬುರಗಿ ಕೆಲಸ ಖಾಲಿ ಇದೆ; ಫೆ.28ರೊಳಗೆ ಅರ್ಜಿ ಹಾಕಿ
ಕಲಬುರಗಿ, ಜನವರಿ 30; ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಖಾಲಿಯಿರುವ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಫೆಬ್ರವರಿ 28ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.
ಗೌರವ ಸಂಭಾವನೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಮೇಲ್ವಿಚಾರಕರಿಗೆ ಪ್ರತಿ ತಿಂಗಳು 12,000 ರೂ.ಗಳ ಗೌರವ ಸಂಭಾವನೆ ನೀಡಲಾಗುತ್ತದೆ.
ಜೇವರ್ಗಿ ತಾಲೂಕಿನ ಹರವಾಳ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ 3(ಬಿ) ಸಾಮಾನ್ಯ, ಆಳಂದ ತಾಲೂಕಿನ ಹೊದಲೂರ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ ಸಾಮಾನ್ಯ (ಮಾ.ಸೈ), ಚಿತ್ತಾಪೂರ ತಾಲೂಕಿನ ಕೊಲ್ಲೂರ ಗ್ರಾಮ ಪಂಚಾಯಿತಿಯ ಗ್ರಂಥಾಲಯದ ಮೇಲ್ವಿಚಾರಕರ ಹುದ್ದೆ 2(ಎ) ಸಾಮಾನ್ಯ (ಗ್ರಾಮೀಣ) ಹಾಗೂ ಆಳಂದ ತಾಲೂಕಿನ ಪಡಸಾವಳಗಿ ಗ್ರಾಮ ಪಂಚಾಯಿತಿಯ ಗ್ರಂಥಾಲಯದ ಮೇಲ್ವಿಚಾರಕರ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ (ಸರ್ಟಿಫಿಕೇಟ್ ಕೋರ್ಸ್) ಪಡೆದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಯು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರಬೇಕು. (ಆರ್.ಡಿ. ನಂಬರ್ ಹೊಂದಿದ ದೃಢೀಕರಣ ಪತ್ರ ಲಗತ್ತಿಸಿರಬೇಕು).
ನಿಗದಿಪಡಿಸಲಾದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ವಯಸ್ಕರ ಶಿಕ್ಷಣದಡಿ ನಡೆಯುತ್ತಿರುವ ಮುಂದುವರಿಕಾ ಕಲಿಕಾ ಕೇಂದ್ರಗಳ ಪ್ರೇರಕ/ ಉಪ ಪ್ರೇರಕರೆಂದು ಸೇವೆ ಸಲ್ಲಿಸಿದ್ದಲ್ಲಿ ಅಂತಹವರಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ. (ಜಿಲ್ಲಾ ಮತ್ತು ತಾಲೂಕು ಸಂಯೋಜಕರಿಂದ ಪಡೆದ ಪ್ರಮಾಣಪತ್ರ ಸಲ್ಲಿಸಬೇಕು).
ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳಾದ ಎಸ್. ಎಸ್. ಎಲ್. ಸಿ. ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ, ಆರ್. ಡಿ. ನಂಬರ್ ಹೊಂದಿರುವ ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ನಿವಾಸಿ ದೃಢೀಕರಣ ಪತ್ರ, ಅಂಗವಿಕಲತೆ (ಇದ್ದಲ್ಲಿ) ದೃಢೀಕರಣ ಪತ್ರ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಹಾಗೂ ಓಟರ್ ಐಡಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
ಅರ್ಜಿಗಳನ್ನು ಕಲಬುರಗಿ ಮಿನಿ ವಿಧಾನ ಸೌಧದ 3ನೇ ಮಹಡಿಯಲ್ಲಿನ ರೂಂ ನಂ. 26 ರಲ್ಲಿನ ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಗೆ ಖುದ್ದಾಗಿ ಬಂದು ಫೆಬ್ರವರಿ 28ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆ, ವಯೋಮಿತಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಕಚೇರಿ ದೂರವಾಣಿ ಸಂಖ್ಯೆ 08472-221069.
ಸಮುದಾಯ ಸಂಪನ್ಮೂಲ ವ್ಯಕ್ತಿ; ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಒಂದು ಸಮುದಾಯ ಸಂಪನ್ಮೂಲ ವ್ಯಕ್ತಿಯ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.
ಗೌರವಧನದ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ನೋಂದಾಯಿತ ಅರ್ಹ ಸ್ವ-ಸಹಾಯ ಸಂಘ ಹಾಗೂ ಒಕ್ಕೂಟ ಸಂಘಗಳ ಸದಸ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು (ಈ ಕುರಿತು ಪ್ರಮಾಣಪತ್ರ ಹೊಂದಿರಬೇಕು).
ಪಟ್ಟಣ ಪಂಚಾಯಿತಿ ಕಾಳಗಿ ವ್ಯಾಪ್ತಿಯಲ್ಲಿ ಖಾಯಂ ನಿವಾಸಿಯಾಗಿದ್ದು, ಕನಿಷ್ಠ ವರ್ಷಗಳಿಂದ ಸ್ವಸಹಾಯ ಸಂಘದಲ್ಲಿ ಸದಸ್ಯರಾಗಿರಬೇಕು. ಸರ್ಕಾರಿ, ಅರೆ ಸರ್ಕಾರಿ, ಎನ್.ಜಿ.ಓ ಗಳಲ್ಲಿ ಉದ್ಯೋಗಸ್ಥರಾಗಿರಬಾರದು. (ಈ ಕುರಿತು ಪ್ರಮಾಣಪತ್ರ ಲಗತ್ತಿಸಬೇಕು). ವಯೋಮಿತಿ 18 ರಿಂದ 45 ವರ್ಷಗಳು.
ಆಸಕ್ತ ಮಹಿಳಾ ಅಭ್ಯರ್ಥಿಗಳು ಕಾಳಗಿ ಪಟ್ಟಣ ಪಂಚಾಯತಿ ಕಾರ್ಯಾಲಯವನ್ನು ಸಂಪರ್ಕಿಸಿ ನಿಗದಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳನ್ನು ಎರಡು ಪ್ರತಿಯಲ್ಲಿ ದೃಢೀಕರಿಸಿ 2022ರ ಫೆಬ್ರವರಿ 14 ರೊಳಗೆ ಕಾಳಗಿ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಸಲ್ಲಿಸಬೇಕು.












Click it and Unblock the Notifications