KPTCL Recruitment: ಕೆಪಿಟಿಸಿಎಲ್ ನೇಮಕಾತಿ, 2,975 ಹುದ್ದೆ 10ನೇ ತರಗತಿ ವಿದ್ಯಾರ್ಹತೆ
ಬೆಂಗಳೂರು, ಅಕ್ಟೋಬರ್ 15: ಸರ್ಕಾರಿ ನೌಕರಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿಯೊಂದಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 21 ರಿಂದ 20/11/2024ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಮತ್ತು ಇತರ ಜಿಲ್ಲೆಗಳಲ್ಲಿಯೂ ನೇಮಕಾತಿ ನಡೆಯುತ್ತಿದ್ದು, ವಿವರವಾದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ನೇಮಕಾತಿ ಅಧಿಸೂಚನೆಯು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ 411 (380 + 31 ಬ್ಯಾಕ್‌ಲಾಗ್) ಕಿರಿಯ ಸ್ಟೇಷನ್ ಪರಿಚಾರಕ ಮತ್ತು 81 (75 + 6 ಬ್ಯಾಕ್‌ಲಾಗ್) ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 2,268 (1818 + 450 ಬ್ಯಾಕ್‌ಲಾಗ್) ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸಂಭಾವನೆ: ಆಯ್ಕೆಯಾಗುವ ಅಭ್ಯರ್ಥಿಗಳನ್ನು ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳ ಅಧ್ಯಾಯ-1 ರ 6(1) (ಇ) ರಂತೆ ಕೆಲವು ಷರತ್ತುಗಳಿಗೊಳಪಟ್ಟು 3 ವರ್ಷಗಳ ಅವಧಿಗೆ ತರಬೇತಿಗೆ ಒಳಪಡಿಸಲಾಗುವುದು. ತರಬೇತಿಯ ಅವಧಿಯಲ್ಲಿ, ಕೆಳಗೆ ತಿಳಿಸಿರುವ ಕ್ರೋಢೀಕೃತ ಸಂಭಾವನೆಯನ್ನು ಹೊರತುಪಡಿಸಿ, ಇನ್ನಿತರ ಯಾವುದೇ ಭತ್ಯೆ ಹಾಗೂ ಸೌಲಭ್ಯಗಳನ್ನು ಪಡೆಯತಕ್ಕದ್ದಲ್ಲ.
ಕ್ರೋಢೀಕೃತ ಸಂಭಾವನೆ (ಮೊದಲ 3 ವರ್ಷಗಳು) 1ನೇ ವರ್ಷ 17,000 ಮಾಸಿಕ, 2ನೇ ವರ್ಷ 19,000 ಮಾಸಿಕ ಮತ್ತು 3ನೇ ವರ್ಷ 21,000 ಮಾಸಿಕ. ಮೂರು ವರ್ಷದ ತರಬೇತಿಯನ್ನು ತೃಪ್ತಿಕರವಾಗಿ ಪೂರೈಸಿದ ನಂತರ ಅಭ್ಯರ್ಥಿಗಳನ್ನು ವೇತನ ಶ್ರೇಣಿ 28550- 600(5)-31550-750(5)-35300-950(5)-40050-1200(5)-46050-1450(6)-54750-1650(5)-63000 ರಲ್ಲಿ ಎರಡು 2 ವರ್ಷಗಳ ಕಾಲ ಪರೀಕ್ಷಾರ್ಥ ಅವಧಿಯಲ್ಲಿ ಇರಿಸಲಾಗುವುದು.
ವಯೋಮಿತಿಯ ವಿವರ: ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಈ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷಗಳು, ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು.
ಅರ್ಹತೆ ಮತ್ತು ಅಗತ್ಯ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯ (ಸಿ.ಬಿ.ಎಸ್.ಇ/ ಐ.ಸಿ.ಎಸ್.ಇ) ಪರೀಕ್ಷೆಯನ್ನು ಕರ್ನಾಟಕ ರಾಜ್ಯದ ವಿದ್ಯಾಸಂಸ್ಥೆಗಳಿಂದ ತೇರ್ಗಡೆ ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
ಮೇಲೆ ತಿಳಿಸಲಾದ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಮನಾಂತರ ವಿದ್ಯಾರ್ಹತೆಯನ್ನು (Equivalent Qualification) ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್.ಎಸ್.ಎಲ್.ಸಿ./ 10ನೇ ತರಗತಿ (ಬ್ರಿಡ್ಜ್ ಕೋರ್ಸ್) ಉತ್ತೀರ್ಣತೆಯನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅಭ್ಯರ್ಥಿಗಳು ಈ ಮೇಲೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಉತ್ತೀರ್ಣಗೊಂಡಿರತಕ್ಕದ್ದು ಹಾಗೂ ಅಂಕಪಟ್ಟಿಯನ್ನು ಹೊಂದಿರತಕ್ಕದ್ದು.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಈ ಅಧಿಸೂಚನೆಯನ್ವಯ ನೇಮಕಾತಿಗೆ ಪರಿಗಣಿಸಬೇಕಾಗುವ ವಿದ್ಯಾರ್ಹತೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಕವಿಪ್ರನಿನಿ/ ಎಸ್ಕಾಂಗಳು ಮಾತ್ರ ಹೊಂದಿರುತ್ತದೆ ಹಾಗೂ ಅಭ್ಯರ್ಥಿಗಳು ಅದಕ್ಕೆ ಬದ್ಧರಾಗಿರತಕ್ಕದ್ದು.
ಇತರ ಅರ್ಹತೆಗಳು
* ಕನ್ನಡದಲ್ಲಿ ಓದುವ ಮತ್ತು ಬರೆಯುವ ಜ್ಞಾನ ಹೊಂದಿರತಕ್ಕದ್ದು.
* ತೃಪ್ತಿಕರವಾದ ನೇತ್ರದೃಷ್ಟಿಯನ್ನು ಹೊಂದಿರತಕ್ಕದ್ದು.
* ತೃಪ್ತಿಕರ ದೇಹದಾರ್ಡ್ಯವನ್ನು ಹೊಂದಿರತಕ್ಕದ್ದು. ಕಠಿಣ ಕೆಲಸಗಳಾದ ಗುಂಡಿ ತೆಗೆಯುವುದು, ಗೋಪುರ ಅಥವಾ ಕಂಬ ಹತ್ತುವುದು, ಭಾರವಾದ ವಸ್ತುಗಳನ್ನು ಸಾಗಿಸುವುದು, ತಂತಿಗಳನ್ನು ಅಳವಡಿಸುವುದು, ಕಂಬಗಳನ್ನು ಬದಲಾಯಿಸುವುದು, ಇತ್ಯಾದಿ ಕೆಲಸಕಾರ್ಯಗಳನ್ನು ನಿರ್ವಹಿಸಲು ಶಕ್ತರಿರಬೇಕು ಮತ್ತು ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸಬೇಕು. ಈ ಮೇಲೆ ತಿಳಿಸಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಎಲ್ಲಾ ರೀತಿಯಲ್ಲಿಯೂ ದೈಹಿಕವಾಗಿ ಸಾಮರ್ಥ್ಯ ಹೊಂದಿರತಕ್ಕದ್ದು.
ಹುದ್ದೆಗಳ ಭರ್ತಿ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕವಿಪ್ರನಿನಿ ಅಥವಾ ವಿದ್ಯುತ್ ಸರಬರಾಜು ಕಂಪನಿಗಳು, ಇವುಗಳಲ್ಲಿ ಯಾವುದಾದರೂ ಒಂದು ಕಂಪನಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿದ್ದಲ್ಲಿ, ಕೊನೆಯದಾಗಿ ಸಲ್ಲಿಸಿರುವ ಅರ್ಹ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು. ಇನ್ನುಳಿದ ಅರ್ಜಿಗಳೊಂದಿಗೆ ಸಲ್ಲಿಸಿರುವ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂಪಾವತಿಸಲಾಗುವುದಿಲ್ಲ. ಕಿರಿಯ ಸ್ಟೇಷನ್ ಪರಿಚಾರಕ ಅಥವಾ ಕಿರಿಯ ಪವರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವಾಗ, 'ಬ್ಯಾಕ್‌ಲಾಗ್ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಅರ್ಜಿ ಶುಲ್ಕಗಳು: ಸಾಮಾನ್ಯ ವರ್ಗದ ಅಭ್ಯರ್ಥಿಗಳು 590 ರೂ. (ಜಿಎಸ್‌ಟಿ ಸೇರಿ), ಪ್ರವರ್ಗ -1, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 614 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಭ್ಯರ್ಥಿಗಳು 378 ರೂ. ಶುಲ್ಕ ಪಾವತಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಒಂದು ವೇಳೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಶುಲ್ಕದ ಚಲನ್ ಅನ್ನು ಕವಿಪ್ರನಿನಿ ಮತ್ತು ಆಯಾ ಕಂಪನಿಯ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು, ಅರ್ಜಿ ಶುಲ್ಕವನ್ನು ಕರ್ನಾಟಕ ರಾಜ್ಯದ ಯಾವುದಾದರೂ ಅಂಚೆ ಕಚೇರಿಯ ಮುಖಾಂತರ ಪಾವತಿಸಬೇಕಿರುತ್ತದೆ. ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ, ಅದನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ ಅಥವಾ ಯಾವುದೇ ನೇಮಕಾತಿಗೆ ಹೊಂದಾಣಿಕೆ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.
ಅರ್ಜಿಯನ್ನು ಕಡ್ಡಾಯವಾಗಿ ಕವಿಪ್ರನಿನಿ ಅಥವಾ ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಗೆ ತಿಳಿಸಿರುವ ಯಾವುದಾದರೊಂದು ವೆಬ್-ಸೈಟ್ ಮೂಲಕ ಸಲ್ಲಿಸಬಹುದಾಗಿರುತ್ತದೆ. ಇತರೆ ಯಾವುದೇ ವಿಧಾನದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
https://kptcl.karnataka.gov.in
https://bescom.karnataka.gov.in
https://cescmysore.karnataka.gov.in
https://mescom.karnataka.gov.in
https://hescom.karnataka.gov.in
https://gescom.karnataka.gov.in
ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮುಖಾಂತರ ದಿನಾಂಕ 21.10.2024 ರಿಂದ 20.11.2024 ರವರೆಗೆ ಸಲ್ಲಿಸಬಹುದಾಗಿರುತ್ತದೆ. ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡುವ ಮುನ್ನ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಲ್ಲಾ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು. ಅಭ್ಯರ್ಥಿಗಳು ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾಶವಿರುವುದಿಲ್ಲ.












Click it and Unblock the Notifications