KPSC Recruitment; 2024ರಲ್ಲಿ 3 ಸಾವಿರ ಹುದ್ದೆಗಳು ಭರ್ತಿ
ಬೆಂಗಳೂರು, ನವೆಂಬರ್ 08; ಸರ್ಕಾರಿ ಉದ್ಯೋಗಕ್ಕೆ ಸೇರಲು ತಯಾರಿ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿಯೊಂದಿದೆ. 2024ರಲ್ಲಿ ವಿವಿಧ ಇಲಾಖೆಗಳ, ವಿವಿಧ ವೃಂದದ 3 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಸರ್ಕಾರ ನೇಮಕಾತಿಯನ್ನು ಮಾಡಿಕೊಳ್ಳಲಿದೆ.
ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮೂಲಕ ಭರ್ತಿ ಮಾಡುತ್ತದೆ. 2024ರಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲು ಕೆಪಿಎಸ್‌ಸಿ ಈಗಾಗಲೇ ಸಿದ್ಧತೆಯನ್ನು ಆರಂಭಿಸಿದೆ.

ಕೆಪಿಎಸ್‌ಸಿಗೆ ವಿವಿಧ ಹಂತದ ಹುದ್ದೆಗಳನ್ನು ಭರ್ತಿ ಮಾಡಲು 30 ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದರಲ್ಲಿ ಸುಮಾರು 3 ಸಾವಿರ ಹುದ್ದೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಹುದ್ದೆಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.
ಅಂದಾಜು ಪಟ್ಟಿ ತಯಾರಿಕೆ; ವರ್ಷದ ಕೊನೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಮುಂದಿನ ವರ್ಷ ಕೈಗೊಳ್ಳಬೇಕಾದ ನೇಮಕಾತಿಗಳ ಅಂದಾಜು ಪಟ್ಟಿಯನ್ನು ತಯಾರು ಮಾಡುತ್ತದೆ. ಈಗ 2023ರ ಅಂತ್ಯದಲ್ಲಿ 2024ರ ನೇಮಕಾತಿ ಕುರಿತು ಅಂದಾಜು ಪಟ್ಟಿಯನ್ನು ತಯಾರು ಮಾಡಲಾಗುತ್ತಿದೆ.
ವಿವಿಧ ಇಲಾಖೆಗಳಿಂದ ಬಂದಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಯಾವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ತುರ್ತಾಗಿ ನೇಮಕಾತಿ ಅಗತ್ಯ ಇರುವ ಇಲಾಖೆಗಳು, ನೇಮಕಾತಿ ವಿಧಾನ, ಹೊಸ ನೇಮಕಾತಿಯಿಂದ ಸರ್ಕಾರಕ್ಕೆ ಆಗುವ ಅನುದಾನದ ಖರ್ಚು ಮುಂತಾದ ಮಾಹಿತಿಗಳನ್ನು ಒಳಗೊಂಡ ಅಂದಾಜು ಪಟ್ಟಿಯನ್ನು ತಯಾರು ಮಾಡಲಾಗುತ್ತದೆ.
ಕೆಪಿಎಸ್‌ಸಿ ಸಲ್ಲಿಕೆ ಮಾಡಿದ ಅಂದಾಜು ಪಟ್ಟಿಯನ್ನು ಪರಿಶೀಲಿಸುವ ಸರ್ಕಾರ ಆರ್ಥಿಕ ಇಲಾಖೆ ಮೂಲಕ ನೇಮಕಾತಿಗೆ ಒಪ್ಪಿಗೆ ನೀಡುತ್ತದೆ. ಬಳಿಕ ವಿವಿಧ ಇಲಾಖೆಗಳು ಕೆಪಿಎಸ್‌ಸಿಯ ಮೂಲಕವೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸುತ್ತವೆ.
2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಲು ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆಯನ್ನು ನಡೆಸಿದೆ. 2024ರಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
ನೇಮಕಾತಿಯ ಕುರಿತು ಕೆಪಿಎಸ್‌ಸಿಯ ಕಾರ್ಯದರ್ಶಿ ಕೆ. ಎಸ್. ಲತಾ ಕುಮಾರಿ ಮಾತನಾಡಿ, "ನೇಮಕಾತಿಗಳ ಕುರಿತು ಮಾಹಿತಿ ತಿಳಿದರೆ ಅರ್ಹತೆಗಳ ಅನುಸಾರ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.
"ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ಬಳಿಕ ಅರ್ಜಿ ಆಹ್ವಾನ, ಲಿಖಿತ ಪರೀಕ್ಷೆ, ಮುಖ್ಯ ಪರೀಕ್ಷೆ, ಆಯ್ಕೆ ಪಟ್ಟಿ ಹೀಗೆ ವಿವಿಧ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಡಿ ಸುಮಾರು 2,58,709 ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಸರ್ಕಾರಿ ನೌಕರರ ಮೇಲೆ ಅಧಿಕ ಕೆಲಸದ ಹೊರೆ ಬಿದ್ದಿದ್ದೆ. ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದೆ.
ಸರ್ಕಾರದ ಕೆಲಸಗಳು ಚುರುಕಾಗಿ ನಡೆಯಲು ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿ ತುರ್ತಾಗಿ ಆಗಬೇಕು. ಅಲ್ಲದೇ ಆರೋಗ್ಯ, ಶಿಕ್ಷಣ ಇಲಾಖೆಗಳಲ್ಲಿನ ನೇಮಕಾತಿ ಅಗತ್ಯವಾಗಿ ಆಗಬೇಕಿದೆ. ಆದ್ದರಿಂದ ಇಲಾಖೆಗಳು ಈಗಾಗಲೇ ಕೆಪಿಎಸ್‌ಸಿಗೆ ನೇಮಕಾತಿ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿವೆ.
ವಿವಿಧ ಇಲಾಖೆಗಳು, ಸಂಸ್ಥೆಗಳು, ನಿಗಮ/ ಮಂಡಳಿ ಸೇರಿದಂತೆ ಒಟ್ಟು ಮಂಜೂರಾಗಿರುವ ಸರ್ಕಾರಿ ಹುದ್ದೆಗಳ ಸಂಖ್ಯೆ 7,69,981. ಈ ಪೈಕಿ 5,11,272 ನೌಕರರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಸರ್ಕಾರದ ಖಾಲಿ ಹುದ್ದೆಗಳ ಭರ್ತಿಯ ಬಗ್ಗೆ ಸಹ ಭರವಸೆಯನ್ನು ನೀಡಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ.












Click it and Unblock the Notifications