KPSC Recruitment 2023 : 67 ಕಿರಿಯ ಲೆಕ್ಕ ಸಹಾಯಕ ಹುದ್ದೆ ಭರ್ತಿ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆದಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಬೆಂಗಳೂರು, ಮಾರ್ಚ್ 16; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಕರೆದಿದೆ. ಮಾರ್ಚ್ 25 ರಿಂದ ಏಪ್ರಿಲ್ 25ರ ತನಕ ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ 26/4/2023.
ಕೆಪಿಎಸ್‌ಸಿ ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ನಿಯಮಗಳು ಹಾಗೂ ತಿದ್ದುಪಡಿ ನಿಯಮ 2022ರನ್ವಯ ಉಳಿಕೆ ಮೂ ವೃಂದ ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ. ಒಟ್ಟು ಭರ್ತಿ ಮಾಡಲಾಗುತ್ತಿರುವ ಹುದ್ದೆಗಳ ಸಂಖ್ಯೆ 67. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಕಡ್ಡಾಯವಾಗಿ ವಿವರವಾಗಿ ಓದಿಕೊಳ್ಳಬೇಕು. ಎಲ್ಲಾ ವಿವರಗಳನ್ನು ಅರ್ಥೈಸಿಕೊಂಡು ಆನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದು.

ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ದಾಖಲೆಗಳ ಪರಿಶೀಲನೆ ಮಾಡಲಾಗುವುದರಿಂದ ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ/ ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಪಡೆದಿಟ್ಟುಕೊಂಡು ಅಪ್‌ಲೋಡ್ ಮಾಡುವುದು.
ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಒಟ್ಟು 3 ಹಂತದಲ್ಲಿ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಮೊದಲ ಹಂತದಲ್ಲಿ ಪ್ರೊಫೈಲ್ ಕ್ರಿಯೇಷನ್/ ಅಪ್‌ಡೇಷನ್. ಎರಡನೇ ಹಂತದಲ್ಲಿ ಅರ್ಜಿ ಸಲ್ಲಿಕೆ ಮತ್ತು ಮೂರನೇ ಹಂತದಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡದ, ಅಸ್ಪಷ್ಟ ಮಾಹಿತಿಗಳು ಇರುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಒಮ್ಮೆ ಪಾವತಿ ಮಾಡಿದ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ. ಬೇರೆ ಯಾವುದೇ ಇಲಾಖಾ ಪರೀಕ್ಷೆಗಳಿಗೆ ಸಹ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 600. ಪ್ರವರ್ಗ 2(ಎ), 2 (ಬಿ), 3 (ಎ), 3 (ಬಿ) ಅಭ್ಯರ್ಥಿಗಳಿಗೆ 300 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಆದರೆ ಪರಿಶಿಷ್ಟ ಜಾತಿ, ಪರಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ. ಎಲ್ಲಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 35 ರೂ. ಪ್ರಕ್ರಿಯೆ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಪಾವತಿ ಶುಲ್ಕವನ್ನು ಕಟ್ಟದಿದ್ದರೆ ಆ ಅರ್ಜಿಗಳನ್ನು ಸಹ ತಿರಸ್ಕಾರ ಮಾಡಲಾಗುತ್ತದೆ.
ವಿದ್ಯಾರ್ಹತೆ, ವೇತನದ ವಿವರಗಳು; ಕಿರಿಯ ಲೆಕ್ಕ ಸಹಾಯಕರ ಹುದ್ದೆಗೆ ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸೂಚಿಸಿರುವ ವಿದ್ಯಾರ್ಹತೆಯನ್ನು ಹೊಂದಿರಲೇಬೇಕು. ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಸಹ ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವವರು Must have passed PUC in Commerce with Accountency as Optional Subject. ಆಯ್ಕೆಯಾದ ಅಭ್ಯರ್ಥಿಗಳಿಗೆ 21,400 ರಿಂದ 42,000 ರೂ. ತನಕ ವೇತನವನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ 35 ವರ್ಷಗಳು. ಗರಿಷ್ಠ ವಯೋಮಿತಿ ಪ್ರವರ್ಗ 2(ಎ), 2 (ಬಿ), 3 (ಎ), 3 (ಬಿ) ಅಭ್ಯರ್ಥಿಗಳಿಗೆ 38 ವರ್ಷಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಗಳು.
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022ರ ಉಪನಿಯಮ 6(2)(ಬಿ) ರನ್ವಯ ಪಿಯುಸಿ ವಿದ್ಯಾರ್ಹತೆ ಅಗತ್ಯವಿರುವ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಠ 100 ಅಂಕಗಳೊಂದಿಗೆ ಲಿಖಿತ ಪ್ರಶ್ನೆಗಳನ್ನು ಒಳಗೊಂಡಿದ್ದು ವಸ್ತುನಿಷ್ಠ ಬಹುಆಯ್ಕೆ ಮಾದರಿಯಲ್ಲಿರುತ್ತವೆ. ಈ ಎರಡು ಪತ್ರಿಕೆಗಳಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ (Negative) ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಯು ಗಳಿಸುವ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು ಅಂಕಗಳನ್ನು ಕಡಿತಗೊಳಿಸಲಾಗುವುದು. ಅಭ್ಯರ್ಥಿಗಳು ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.
ಕನ್ನಡ ಪರೀಕ್ಷೆ ಕಡ್ಡಾಯ; ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಉಪನಿಯಮ (7) ರನ್ವಯ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಕಡ್ಡಾಯ. ಸದರಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಹೊರತು, ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು, ಈ ಪ್ರಶ್ನೆ ಪತ್ರಿಕೆಯನ್ನು ಎಸ್‌ಎಸ್‌ಎಲ್‌ಸಿ ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುವುದು.
ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾದ ನಂತರ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022 ರ ಉಪ ನಿಯಮ 5(ಡಿ)ರಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಹೊಂದಲು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಹೊಂದುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಒಟ್ಟು ಅಂಕಗಳಲ್ಲಿ ಕನಿಷ್ಠ ಪಕ್ಷ ಶೇಕಡ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಸಹಾಯವಾಣಿ ಸಂಖ್ಯೆಗಳು ಕೇಂದ್ರ ಕಚೇರಿ 080- 30574957/ 30574901.











Click it and Unblock the Notifications