KPSC Recruitment; ಅಂಗವಿಕಲರ ವಿಶೇಷ ಗುರುತಿನ ಚೀಟಿ ಪರಿಗಣನೆ ಆದೇಶ
ಬೆಂಗಳೂರು, ಜನವರಿ 03; ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಇಲಾಖೆಗಳ ನೇಮಕಾತಿಗಳಲ್ಲಿ ಅಂಗವಿಕಲರ ವಿಶೇಷ ಗುರುತಿನ ಚೀಟಿ ಪರಿಗಣಿಸುವ ಕುರಿತು ಆದೇಶವೊಂದನ್ನು ಹೊರಡಿಸಿದೆ.
ಈ ಕುರಿತು ಆನಂದ ಕುಮಾರ ಎ. ಸಹಾಯಕ ಕಾರ್ಯದರ್ಶಿಗಳು (ಪ್ರಭಾರ) ಪರೀಕ್ಷಾ ಶಾಖೆ-2 ಕರ್ನಾಟಕ ಲೋಕಸೇವಾ ಆಯೋಗ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-7) ಇವರಿಗೆ ಪತ್ರ ಬರೆದಿದ್ದಾರೆ.
ದೃಷ್ಟಿ ವಿಕಲಚೇತನ/ ಅಂಗವಿಕಲ ಅಭ್ಯರ್ಥಿ/ ನೌಕರರ ನೇಮಕಾತಿ/ ವರ್ಗಾವಣೆ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಚಲಿತ ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರದ ಬದಲಾಗಿ ಅಂಗವಿಕಲರ ವಿಶೇಷ ಗುರುತಿನ ಚೀಟಿ (Unique Disability ID) ಪರಿಗಣಿಸುವ ಬಗ್ಗೆ ಆದೇಶಿಸಲಾಗಿದೆ.

ಸತೀಶ ಕುಮಾರ ಜಾಲಿನಗರ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ (ರಿ) ಇವರ ಪತ್ರವನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ. ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರದ ಬದಲಾಗಿ ಅಂಗವಿಕಲರ ವಿಶೇಷ ಗುರುತಿನ ಚೀಟಿ ಪರಿಗಣಿಸುವ ಕುರಿತು ಈ ಆದೇಶ ಹೊರಡಿಸಲಾಗಿದೆ.
ಪತ್ರದಲ್ಲಿ ಸರ್ಕಾರವು ಅಂಗವಿಕಲರಿಗೆ ಅವರ ಅಂಗವೈಕಲ್ಯದ ಪ್ರಮಾಣವನ್ನು ಪರೀಕ್ಷಿಸಿ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ (Unique Disability ID)ಯನ್ನು ವಿತರಿಸಲಾಗುತ್ತಿದೆ. ಆದರೂ 19/11/2005ರಲ್ಲಿ ನಿಗದಿಪಡಿಸಿರುವ ಮಾದರಿಯ ಅಂಗವಿಕಲ ಪ್ರಮಾಣ ಪತ್ರವನ್ನು ನೇಮಕಾತಿ/ ವರ್ಗಾವಣೆಯ ಸಂದರ್ಭದಲ್ಲಿ ಪದೇ ಪದೇ ಅಂಗವಿಕಲ ಪ್ರಮಾಣ ಪತ್ರಗಳನ್ನು ಪಡೆದು ಸಂಬಂಧಿತ ಪ್ರಾಧಿಕಾರಗಳಿಗೆ ಸಲ್ಲಿಸಬೇಕಿದೆ.

ಕೆಲವು ಸಲ ನೇಮಕಾತಿ ಪ್ರಾಧಿಕಾರಗಳು ಅಧಿಸೂಚನೆಯ ಪ್ರಾರಂಭಿಕ ದಿನಾಂಕದಿಂದ ಕೊನೆಯ ದಿನಾಂಕದೊಳಗೆ ಪಡೆದಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಸೂಚಿಸುತ್ತಿರುವುದರಿಂದ ದೃಷ್ಟಿ ವಿಕಲಚೇತನ/ ಅಂಗವಿಕಲ ಅಭ್ಯರ್ಥಿ/ ನೌಕರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಇದರಿಂದಾಗಿ ಅಂಗವಿಕಲರ ಹಕ್ಕುಗಳ ಕಾಯ್ದೆಗಳ ಆಶಯಗಳನ್ನೇ ಕಡೆಗಣಿಸಿದಂತಾಗಿದ್ದು, ಅಂಗವೈಕಲ್ಯದ ಪ್ರಮಾಣವನ್ನು ಪರೀಕ್ಷಿಸಿ ಶಾಶ್ವತ ಅಂಗವಿಕಲರೆಂದು ನಮೂದಿಸಲು ವೈದ್ಯರಿಗೆ ಅವಕಾಶ ಕಲ್ಪಿಸಿರುವುದರಿಂದ ಸರ್ಕಾರವು 19/11/2005ರ ಮಾದರಿಯ ಅಂಗವಿಕಲ ಪ್ರಮಾಣ ಪತ್ರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಸಾರ್ವತ್ರಿಕವಾಗಿ ಪ್ರಚಲಿತವಿರುವ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿಯನ್ನು ಎಲ್ಲ ವಿಧದ ನೇಮಕಾತಿ/ ವರ್ಗಾವಣೆಗಳಿಗೆ ಪರಿಗಣಿಸುವಂತೆ ಒಂದು ವೇಳೆ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ ಪಡೆದಿಲ್ಲವಾದಲ್ಲಿ ಎರಡೂ ವಿಧದ ಪ್ರಮಾಣ ಪತ್ರಗಳನ್ನು ರಾಜ್ಯದಲ್ಲಿರುವ ಎಲ್ಲ ಅಂಗವಿಕಲರಿಗೂ ನೀಡುವವರೆಗೆ ಪರಿಗಣಿಸುವಂತೆ ಕೋರಲಾಗಿತ್ತು.
ಕರ್ನಾಟಕ ಲೋಕಸೇವಾ ಆಯೋಗವು ಕೇವಲ ಆಯ್ಕೆ ಪ್ರಾಧಿಕಾರವಾಗಿದ್ದು, ಆಯೋಗದ ನೇಮಕಾತಿಗಳಲ್ಲಿ ಸರ್ಕಾರವು ಅಂಗವಿಕಲ ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ಅಂಗವಿಕಲ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುತ್ತಿತ್ತು.
ಇತ್ತೀಚಿಗೆ ಕೆಲವು ಅಂಗವಿಕಲ ಅಭ್ಯರ್ಥಿಗಳು ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿಗಳನ್ನು ಆಯೋಗದಿಂದ ನಡೆಸುವ ನೇಮಕಾತಿಗಳಲ್ಲಿ ಸಲ್ಲಿಸಿ ಅವುಗಳನ್ನು ಪರಿಗಣಿಸುವಂತೆ ಕೋರುತ್ತಿದ್ದಾರೆ. ಅದ್ದರಿಂದ ಈ ಆದೇಶವನ್ನು ಹೊರಡಿಸಲಾಗಿದೆ.
ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿಗಳನ್ನು ಪರಿಗಣಿಸುವ ಬಗ್ಗೆ ಮತ್ತು ಎಲ್ಲ ಅಂಗವಿಕಲ ಅಭ್ಯರ್ಥಿಗಳೂ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ (Unique Disability ID) ಪಡೆಯುವವರೆಗೆ ಅಂಗವಿಕಲ ಪ್ರಮಾಣ ಪತ್ರಗಳನ್ನು ಪಡೆದ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸುವ ಬಗ್ಗೆ ಸೂಕ್ತ ಆದೇಶ ಹೊರಡಿಸಿ, ಆದೇಶದ ಪ್ರತಿಯನ್ನು ಆಯೋಗಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ.












Click it and Unblock the Notifications