KPSC: 384 ಹುದ್ದೆಗಳ ನೇಮಕಾತಿಗೆ ಪರೀಕ್ಷೆ, ಹಾಲ್ ಟಿಕೆಟ್ ಕುರಿತು ಮಹತ್ವದ ಮಾಹಿತಿ
ಬೆಂಗಳೂರು, ನವೆಂಬರ್ 30: ವಿವಿಧ ಕಾರಣಕ್ಕೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಬೇಕಿರುವ ಗೆಜೆಟೆಡ್ ಪ್ರೊಬೆಷನರಿ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಮರುಪರೀಕ್ಷೆ ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಡಿಸೆಂಬರ್ 29ಕ್ಕೆ ಮರು ಪರೀಕ್ಷೆಯನ್ನು ನಿಗದಿ ಮಾಡಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಆದರೆ ಈಗ ಹಾಲ್ ಟಿಕೆಟ್ ಕುರಿತು ಗೊಂದಲಗಳು ಉಂಟಾಗಿದೆ.
ಆದ್ದರಿಂದ ಕೆಪಿಎಸ್‌ಸಿ ಕಾರ್ಯದರ್ಶಿಯವರ ಆದೇಶದ ಮೇರೆಗೆ, ಕೆ. ಎಸ್. ಕುಬೇರಯ್ಯ ಸಹಾಯಕ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಹಾಲ್ ಟಿಕೆಟ್ ಗೊಂದಲಗಳ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.

ಪ್ರಕಟಣೆಯ ವಿವರಗಳು: ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಖ್ಯೆಪಿಎಸ್‌ಸಿ 509 ಇ(1)/2023-24, ದಿನಾಂಕ 26-02-2024ರ ಅಧಿಸೂಚನೆ ಹೊರಡಿಸಿದ್ದು, ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ 29-12-2024ರಂದು ನಡೆಸಲು ನಿಗದಿಪಡಿಸಿರುತ್ತದೆ.
ಸದರಿ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್ Applicant Login ನಿಂದ ದಿನಾಂಕ 26-11-2024ರಂದು ತಂತ್ರಾಂಶದಲ್ಲಿನ ದೋಷದಿಂದಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿರುತ್ತಾರೆಂದು ತಿಳಿದುಬಂದಿರುತ್ತದೆ.
ಆಯೋಗವು ದಿನಾಂಕ 29-12-2024ರ ಪೂರ್ವಭಾವಿ ಮರುಪರೀಕ್ಷೆಯ ಸಂಬಂಧ ಯಾವುದೇ ಪ್ರವೇಶ ಪತ್ರವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿರುವುದಿಲ್ಲವಾದ ಕಾರಣ ತಾಂತ್ರಿಕ ದೋಷದಿಂದಾಗಿ ಪ್ರಸ್ತುತ ಡೌನ್‌ಲೋಡ್ ಮಾಡಿಕೊಂಡಿರುವ ಪ್ರವೇಶ ಪತ್ರಗಳನ್ನು ಅಸಿಂಧುಗೊಳಿಸಿದೆ.
ಮುಂದುವರೆದು, ಎಲ್ಲಾ ಅಭ್ಯರ್ಥಿಗಳಿಗೆ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಕುರಿತು ಮುಂದಿನ ಆದೇಶದಲ್ಲಿ ತಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಮರು ಪರೀಕ್ಷೆ ಏಕೆ?; ಕೆಪಿಎಸ್‌ಸಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸಿತ್ತು. ಆದರೆ ಪ್ರಶ್ನೆ ಪತ್ರಿಕೆ -1 ಮತ್ತು 2ರಲ್ಲಿನ ಕನ್ನಡ ಅನುವಾದದಲ್ಲಿ ಹಲವು ತಪ್ಪುಗಳಿದ್ದು, ಅಭ್ಯರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಪರೀಕ್ಷೆ ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೂ ಬಂದಿತ್ತು. ಅವರು ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲು ಸೂಚನೆ ನೀಡಿದ್ದರು. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ಕೊಟ್ಟಿದ್ದರು.
ಮರು ಪರೀಕ್ಷೆ ಕುರಿತು ಕೆಪಿಎಸ್‌ಸಿ ಮಾಹಿತಿ ನೀಡಿ, 2023-24ನೇ ಸಾಲಿನ ಗೆಜ಼ೆಟೆಡ್ ಪ್ರೊಬೆಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿ:29.12.2024ರಂದು ನಡೆಸಲು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಹೇಳಿತ್ತು.
ಆದರೆ ಈಗ ಮರು ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕುರಿತು ಗೊಂದಲ ಉಂಟಾಗಿದೆ. ಕೆಲವು ಅಭ್ಯರ್ಥಿಗಳು ದಿನಾಂಕ 26-11-2024ರಂದು ತಂತ್ರಾಂಶದಲ್ಲಿನ ದೋಷದಿಂದಾಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈಗ ಕೆಪಿಎಸ್‌ಸಿ ಈ ಹಾಲ್ ಟಿಕೆಟ್ ಅನ್ನು ಸಂಪೂರ್ಣವಾಗಿ ಅಸಿಂಧು ಎಂದು ಘೋಷಣೆ ಮಾಡಿದೆ.












Click it and Unblock the Notifications