ಮೈಸೂರಿನಲ್ಲಿ ಕೆಲಸ ಖಾಲಿ ಇದೆ; 32 ಹುದ್ದೆಗಳು, ವೇತನ ವಿವರ
ಮೈಸೂರು, ಸೆಪ್ಟೆಂಬರ್ 29; ಕರ್ನಾಟಕದ ಅರಣ್ಯ ಇಲಾಖೆ ಅರಣ್ಯ ವೀಕ್ಷಕ ಹುದ್ದೆ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಮಾಡಲು ಅಕ್ಟೋಬರ್ 26 ಕೊನೆಯ ದಿನ. ಮೈಸೂರು ವೃತ್ತದಲ್ಲಿ ಒಟ್ಟು 32 ಅರಣ್ಯ ವೀಕ್ಷಕ ಗ್ರೂಪ್ 'ಡಿ' ಹುದ್ದೆಗಳ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ https://aranya.gov.in/ ಮುಖಪುಟದ ಕೆಳಭಾಗದಲ್ಲಿ ಇರುವ 'ನೇಮಕಾತಿ' ಶೀರ್ಷಿಕೆಯಡಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡುವ ಮೊದಲು ಅಧಿಸೂಚನೆಯಲ್ಲಿನ ಸೂಚನೆ/ ನಿರ್ದೇಶನ ಹಾಗೂ ಷರತ್ತುಗಳನ್ನು ಕೂಲಂಕಷವಾಗಿ ಓದಿ ಸಮರ್ಪಕವಾಗಿ ಅರ್ಥೈಸಿಕೊಂಡು ತಮಗೆ ಅನ್ವಯವಾಗುವ ವಿವರಗಳನ್ನು ಮಾತ್ರ ಭರ್ತಿ ಮಾಡಬೇಕು. ಒಮ್ಮೆ ಅರ್ಜಿ ಸಲ್ಲಿಕೆಯಾದ ಬಳಿಕ ಅರ್ಜಿಯಲ್ಲಿನ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡಲು ಅವಕಾಶವಿಲ್ಲ.
ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರ, ನಿಗದಿತ ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು ಹಾಗೂ ನಿಗದಿತ ಜಾತಿ/ ಪವರ್ಗ/ ಗ್ರಾಮೀಣ/ ಕನ್ನಡ ಮಾಧ್ಯಮ/ ಯೋಜನಾ ನಿರಾಶ್ರಿತ/ ಸೈನಿಕ ಸೇವೆ/ ತೃತೀಯ ಲಿಂಗ ಅಭ್ಯರ್ಥಿಗಳು ಇತ್ಯಾದಿ ದೃಢೀಕರಣ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಅಪ್‌ಲೋಡ್ ಮಾಡತಕ್ಕದ್ದು.
ವೇತನ, ವಿದ್ಯಾರ್ಹತೆ, ಅರ್ಜಿ ಶುಲ್ಕ; ಅರಣ್ಯ ವೀಕ್ಷಕ ವೃಂದದ ಹುದ್ದೆಗಳಿಗೆ 18,600 ರಿಂದ 32,600 ರೂ. ತನಕ ವೇತನ ಶ್ರೇಣಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಹೊಂದಿರಬೇಕು ಎಂದು ನೇಮಕಾತಿ ಅಧಿಸೂಚನೆ ಹೇಳಿದೆ.
ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಆನ್‌ಲೈನ್ ಹೊರತಾಗಿ ಬೇರೆ ಯಾವುದೇ ಮಾರ್ಗದಲ್ಲಿ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವಿಲ್ಲ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 31/10/2023. ಒಂದು ವೇಳೆ ಅರ್ಜಿ ಶುಲ್ಕ ಪಾವತಿ ಮಾಡದಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಪವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದವರು 200 ರೂ. ಮತ್ತು 20 ರೂ. ಸೇವಾ ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂ., ಸೇವಾ ಶುಲ್ಕ 20 ರೂ.ಗಳನ್ನು ಪಾವತಿಸಬೇಕಿದೆ.
ನೇಮಕಗೊಂಡ ಅಭ್ಯರ್ಥಿಗಳು ಆಯಾ ಹುದ್ದೆಗೆ ನಿಗದಿಪಡಿಸಿದ ವೃತ್ತಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಬೇಕು. ಅರಣ್ಯ ವೀಕ್ಷಕ ಹುದ್ದೆಗೆ ವೃತ್ತಿ ಬುನಾದಿ ತರಬೇತಿ ಅವಧಿ 6 ತಿಂಗಳು. ಪರೀಕ್ಷಾರ್ಥ ಅವಧಿ (ತರಬೇತಿ ಸೇರಿ) 36 ತಿಂಗಳು ಆಗಿರುತ್ತದೆ.












Click it and Unblock the Notifications