KEONICS ನೇಮಕಾತಿ; ಅಭ್ಯರ್ಥಿಗಳ ವಯೋಮಿತಿ ಹೆಚ್ಚಳ
ಬೆಂಗಳೂರು, ಜುಲೈ 14; ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ವಿವಿಧ ಹುದ್ದೆಗಳ ಭರ್ತಿಗೆ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆದಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕಾಗಿದೆ. ಈಗ ಅಭ್ಯರ್ಥಿಗಳ ವಯೋಮಿತಿ ಸಡಿಲಿಸಿ ಆದೇಶವನ್ನು ಹೊರಡಿಸಿದೆ.
ಕಿಯೋನಿಕ್ಸ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ 10 ಹುದ್ದೆಗಳು, ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ 6 ವಿವಿಧ ಹುದ್ದೆಗಳಿಗೆ ಮತ್ತು ಉಳಿಕೆ ಮೂಲ ವೃಂದದ 10 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲಾಗುತ್ತಿದೆ.

ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಮಾಡಲು ದಿನಾಂಕ 22/7/2023ರ ತನಕ ಅವಕಾಶವಿದೆ. ಕಿಯೋನಿಕ್ಸ್ ನಿಗಮದ ಪತ್ರ ದಿನಾಂಕ 4/7/2023ರಲ್ಲಿ ತಿಳಿಸಿರುವಂತೆ, ದಿನಾಂಕ 23/6/2023ರ ಅಧಿಸೂಚನೆಯಲ್ಲಿ ಸೂಚಿಸಿರುವ ವಯೋಮಿತಿಯನ್ನು ಈ ಕೆಳಗಿನಂತೆ ಸಡಿಲಿಕೆ ಮಾಡಲಾಗಿದೆ.
ವಯೋಮಿತಿ ಎಷ್ಟು?; ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು. ಮೇಲಿನ ವಯೋಮಿತಿಯ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಉಳಿದಂತೆ ಪ್ರಸ್ತುತ ನೇಮಕಾತಿ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅಭ್ಯರ್ಥಿಗಳಿಗೆ ಈ ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ. ನೇಮಕಾತಿಯು ಸರ್ಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ.
ಯಾವುದೇ ನಿಯಮಗಳು/ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸ ಅಥವಾ ಅಸ್ಪಷ್ಟತೆ ಕಂಡು ಬಂದಲ್ಲಿ, ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 (ತಿದ್ದುಪಡಿಗಳು), ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ ನಿಯಮಗಳು) 2021 ಹಾಗು ಕರಾವಿನಿನಿ ದ ವೃಂದ ಮತ್ತು ನೇಮಕಾತಿ ಇತರೆ ನಿಯಮಗಳಲ್ಲಿರುವಂತೆ ಅನ್ವಯಿಸುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ತಿಳಿಸಿದ್ದಾರೆ.
ಹಿಂದೆ ವಯೋಮಿತಿ ಎಷ್ಟಿತ್ತು?; ಈ ಹಿಂದೆ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯಲ್ಲಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 33 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 35 ವರ್ಷಗಳು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 38 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿತ್ತು.
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) ಗ್ರೂಪ್-ಬಿ 4, ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ) ಗ್ರೂಪ್-ಬಿ 2, ಆಪ್ತ ಕಾರ್ಯದರ್ಶಿ ಗ್ರೂಪ್-ಸಿ 1, ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್-ಸಿ 4, ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್-ಸಿ 3, ಸಹಾಯಕರು (ತಾಂತ್ರಿಕ) ಗ್ರೂಪ್-ಸಿ 6, ಸಹಾಯಕರು (ತಾಂತ್ರಿಕೇತರ) ಗ್ರೂಪ್-ಸಿ 4 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) ಗ್ರೂಪ್-ಬಿ ವೇತನ ಶ್ರೇಣಿ 52,650-97,100. ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ) ಗ್ರೂಪ್-ಬಿ 52,650-97,100, ಆಪ್ತ ಕಾರ್ಯದರ್ಶಿ ಗ್ರೂಪ್-ಸಿ 27,650-52,650, ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್-ಸಿ 33,450-62,600, ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್-ಸಿ 33,450-62,600, ಸಹಾಯಕರು (ತಾಂತ್ರಿಕ) ಗ್ರೂಪ್-ಸಿ 30,350-58,250, ಸಹಾಯಕರು (ತಾಂತ್ರಿಕೇತರ) ಗ್ರೂಪ್-ಸಿ 30,350-58,250 ರೂ.ಗಳಿವೆ.












Click it and Unblock the Notifications