ಅಭ್ಯರ್ಥಿಗಳ ಗಮನಕ್ಕೆ; KEA recruitment ತಾತ್ಕಾಲಿಕ ಮುಂದೂಡಿಕೆ
ಬೆಂಗಳೂರು, ಏಪ್ರಿಲ್ 27; ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. 17/4/2023 ರಿಂದ 17/5/2023ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು ಎಂದು ಹೇಳಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅರ್ಜಿ ಸಲ್ಲಿಕೆ ಮಾಡುವ ಪ್ರಕ್ರಿಯೆ ಮುಂದೂಡಿಕೆ ಮಾಡಲಾಗಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಕುರಿತು ಮಾಹಿತಿ ನೀಡಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 17/4/2023ರಂದು ಪ್ರಾರಂಭಿಸಲಾಗುವುದೆಂದು ತಿಳಿಸಲಾಗಿತ್ತು. ಆದರೆ ತಾಂತ್ರಿಕ ಸಿದ್ಧತೆಯಿಂದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗಿದೆ, ಸದ್ಯದಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದೆ.

ಕೆಇಎ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿತ್ತು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಬೆಂಗಳೂರು ಸಂಸ್ಥೆಗಳಲ್ಲಿನ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು.

ಮಾರ್ಚ್ 24ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ವಿವರಗಳನ್ನು ನೀಡಿತ್ತು. ವಿವರವಾದ ಅಧಿಸೂಚನೆ 15/4/2023ರಂದು ಪ್ರಕಟವಾಗಿತ್ತು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ 17/4/2023 ರಿಂದ 17/5/2023ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ ಎಂದು ಅಧಿಸೂಚನೆ ತಿಳಿಸಿತ್ತು.
ಹುದ್ದೆಗಳ ವಿವರ; ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಲ್ಯಾಣ ಅಧಿಕಾರಿ, ಕ್ಷೇತ್ರ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಆಪ್ತ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿತ್ತು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಸಹಾಯಕ ವ್ಯವಸ್ಥಾಪಕರು, ಗುಣಮಟ್ಟ ನಿರೀಕ್ಷಕರು, ಹಿರಿಯ ಸಹಾಯಕರು (ಲೆಕ್ಕ), ಹಿರಿಯ ಸಹಾಯಕರು, ಕಿರಿಯ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಇಲ್ಲಿ ಜ್ಯೂನಿಯರ್ ಪ್ರೊಗ್ರಾಮರ್ (ಗ್ರೂಪ್-ಬಿ), ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್-ಬಿ), ಸಹಾಯಕ ಗ್ರಂಥಪಾಲಕ (ಗ್ರೂಪ್-ಸಿ), ಸಹಾಯಕ (ಗ್ರೂಪ್-ಸಿ), ಕಿರಿಯ ಸಹಾಯಕ (ಗ್ರೂಪ್-ಸಿ) ಹುದ್ದೆಗೆ ಅರ್ಜಿ ಕರೆಯಲಾಗಿತ್ತು.
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇಲ್ಲಿ ಸಹಾಯಕ ವ್ಯವಸ್ಥಾಪಕರು (ತಾಂತ್ರಿ) ಗ್ರೂಪ್ -ಬಿ, ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ) ಗ್ರೂಪ್-ಬಿ, ಆಪ್ತ ಕಾರ್ಯದರ್ಶಿ ಗ್ರೂಪ್-ಸಿ, ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್-ಸಿ, ಹಿರಿಯ ಸಹಾಯಕರಯ (ತಾಂತ್ರಿಕೇತರ) ಗ್ರೂಪ್-ಸಿ, ಸಹಾಯಕರು (ತಾಂತ್ರಿಕ) ಗ್ರೂಪ್-ಸಿ, ಸಹಾಯಕರು (ತಾಂತ್ರಿಕೇತರ) ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಬೆಂಗಳೂರು ಇಲ್ಲಿ ಸಹಾಯಕ ವ್ಯವಸ್ಥಾಪಕರು, ಮೇಲ್ವಿಚಾರಕರು, ಪದವೀಧರ ಗುಮಾಸ್ತರು, ಗುಮಾಸ್ತರು, ಮಾರಾಟ ಪ್ರತಿನಿಧಿ/ ಪ್ರೊಗ್ರಾಮರ್ ಹುದ್ದೆಗೆ ಅರ್ಜಿ ಕರೆಯಲಾಗಿತ್ತು.
ಕೆಇಎ ಪ್ರಕಟಣೆಯಂತೆ ಮುಂದಿನ ದಿನಗಳಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೆಇಎ ವೆಬ್ ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications